ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ; 10 ದಿನಗಳ ಅಂತರದಲ್ಲಿ 3ನೇ ಪ್ರಕರಣ

Bangladesh Hindu murder: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಕೊಲೆ ನಡೆದಿದೆ. ಸಹೋದ್ಯೋಗಿಯ ಗುಂಡೇಟಿಗೆ ಹಿಂದೂ ವ್ಯಕ್ತಿ ಬಲಿಯಾಗಿದ್ದಾರೆ. ಈ ಘಟನೆ ನೆರೆಯ ದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಭದ್ರತೆ ಮತ್ತು ಸುರಕ್ಷತೆಯ ಕುರಿತು ಗಂಭೀರ ಚಿಂತೆಗೆ ಕಾರಣವಾಗಿದೆ.

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಕೊಲೆ

ಸಾಂದರ್ಭಿಕ ಚಿತ್ರ -

Priyanka P
Priyanka P Dec 30, 2025 5:53 PM

ಢಾಕಾ, ಡಿ. 30: ಗಾರ್ಮೆಂಟ್ ಕಾರ್ಖಾನೆಯೊಂದರಲ್ಲಿ ಸಹೋದ್ಯೋಗಿಯ ಗುಂಡಿನ ದಾಳಿಗೆ 40 ವರ್ಷದ ಹಿಂದೂ ವ್ಯಕ್ತಿಯೊಬ್ಬರು (Hindu murder) ಮೃತಪಟ್ಟಿರುವ ಘಟನೆ ಸೋಮವಾರ (ಡಿಸೆಂಬರ್‌ 29) ಸಂಜೆ ಬಾಂಗ್ಲಾದೇಶದಲ್ಲಿ (Bangladesh) ನಡೆದಿದೆ. ಪೊಲೀಸರು ಇದನ್ನು ಆಕಸ್ಮಿಕ ಗುಂಡಿನ ದಾಳಿ ಎಂದು ಕರೆದಿದ್ದಾರೆ. ಮೈಮೆನ್ಸಿಂಗ್‌ನ ಭಾಲುಕಾ ಉಪಝಿಲಾದ ಮೆಹ್ರಾಬರಿ ಪ್ರದೇಶದಲ್ಲಿರುವ ಸುಲ್ತಾನ ಸ್ವೆಟರ್ಸ್ ಲಿಮಿಟೆಡ್‌ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ.

ಬಜೇಂದ್ರ ಬಿಸ್ವಾಸ್ ಮೃತ ದುರ್ದೈವಿ. ಅವರು ಕಾರ್ಖಾನೆಯ ಭದ್ರತೆಗಾಗಿ ನಿಯೋಜಿಸಲಾದ ಅನ್ಸಾರ್ ಗುಂಪಿನ ಸದಸ್ಯರಾಗಿದ್ದರು. ಅವರು ಪೊಬಿತ್ರ ಬಿಸ್ವಾಸ್ ಅವರ ಪುತ್ರರಾಗಿದ್ದು, ಸಿಲ್ಹೆಟ್ ಸದರ್‌ನ ಕದಿರ್‌ಪುರ ಗ್ರಾಮದವರು. ಗುಂಡು ಹಾರಿಸಿದ ಆರೋಪಿ ಮತ್ತೊಬ್ಬ ಅನ್ಸಾರ್ ಸದಸ್ಯ ನೋಮನ್ ಮಿಯಾ(22)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಲುಟ್ಫರ್ ರೆಹಮಾನ್ ಎಂಬುವವರ ಪುತ್ರನಾಗಿದ್ದು, ಸುನಮ್‌ಗಂಜ್‌ನ ತಾಹೆರ್‌ಪುರ ಪ್ರದೇಶದ ಬಲುತುರಿ ಬಜಾರ್‌ನಲ್ಲಿ ವಾಸಿಸುತ್ತಿದ್ದಾನೆ.

ಹಿಂದೂ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಜೀವಂತವಾಗಿ ಸುಟ್ಟಿರುವುದಕ್ಕೆ ತಸ್ಲೀಮಾ ನಸ್ರೀನ್ ಖಂಡನೆ

ಬಜೇಂದ್ರ ಬಿಸ್ವಾಸ್ ಅನ್ಸಾರ್ ಗ್ರಾಮ ರಕ್ಷಣಾ ಸಮಿತಿಯ ಸದಸ್ಯರಾಗಿದ್ದರು. ದುಷ್ಕರ್ಮಿಗಳಿಂದ ಗ್ರಾಮಗಳನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿರುವ ಅರೆಸೈನಿಕ ಸಂಘಟನೆಯೇ ಅನ್ಸಾರ್ ಗ್ರಾಮ ರಕ್ಷಣಾ ಸಮಿತಿ. ಅನ್ಸಾರ್ ಸಿಬ್ಬಂದಿಯನ್ನು ಸಾಮಾನ್ಯವಾಗಿ ಕಾರ್ಖಾನೆಗಳು, ಬ್ಯಾಂಕ್‍ಗಳು, ಚುನಾವಣೆಗಳು ಮತ್ತು ಸರ್ಕಾರದ ಸಂಸ್ಥೆಗಳಲ್ಲಿ ಭದ್ರತೆ ಒದಗಿಸಲು ನಿಯೋಜಿಸಲಾಗುತ್ತದೆ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಶಸ್ತ್ರಸಜ್ಜಿತರಾಗಿರುತ್ತಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಕಾರ್ಖಾನೆಯಲ್ಲಿ ಸುಮಾರು 20 ಅನ್ಸಾರ್ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಬಜೇಂದ್ರ ಬಿಸ್ವಾಸ್ ಮತ್ತು ನೋಮನ್ ಮಿಯಾ ಆವರಣದೊಳಗೆ ಒಟ್ಟಿಗೆ ಕುಳಿತಿದ್ದಾಗ ನೋಮನ್ ಬಳಿಯಿದ್ದ ಶಾಟ್‌ಗನ್ ಆಕಸ್ಮಿಕವಾಗಿ ಸಿಡಿದಿದೆ ಎಂದು ವರದಿಯಾಗಿದೆ. ಗುಂಡು ಬಿಸ್ವಾಸ್ ಅವರ ಎಡ ತೊಡೆಗೆ ತಗುಲಿ ತೀವ್ರ ಗಾಯಗಳು ಮತ್ತು ಭಾರಿ ರಕ್ತಸ್ರಾವವಾಯಿತು.

ಕಾರ್ಖಾನೆಯ ಸಹೋದ್ಯೋಗಿಗಳು ತಕ್ಷಣ ಬಜೇಂದ್ರ ಬಿಸ್ವಾಸ್ ಅವರನ್ನು ಭಾಲುಕಾ ಉಪಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಘಟನೆಯನ್ನು ದೃಢಪಡಿಸಿದ ಭಾಲುಕಾ ಮಾದರಿ ಪೊಲೀಸ್ ಠಾಣೆಯ ಅಧಿಕಾರಿ-ಇನ್-ಚಾರ್ಜ್ ಜಹಿದುಲ್ ಇಸ್ಲಾಂ, ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹೇಳಿದರು. ಮೃತನ ಶವವನ್ನು ಶವಪರೀಕ್ಷೆಗಾಗಿ ಮೈಮೆನ್ಸಿಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ.

ಪ್ರಕರಣ ಸಂಬಂಧ ಕಾನೂನು ಕ್ರಮಗಳು ನಡೆಯುತ್ತಿದ್ದು, ಗುಂಡಿನ ದಾಳಿ ಸಂಪೂರ್ಣವಾಗಿ ಆಕಸ್ಮಿಕವೇ ಅಥವಾ ಘಟನೆಗೆ ಬೇರೆ ಯಾವುದೇ ಅಂಶಗಳು ಕಾರಣವಾಗಿವೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅಲ್ಲಗೆ ಸಾಕ್ಷಿಗಳು ತನಿಖೆಗೆ ಸಹಕರಿಸುವಂತೆ ಒತ್ತಾಯಿಸಿದ್ದಾರೆ.

10 ದಿನಗಳ ಅಂತರದಲ್ಲಿ 3ನೇ ಹಿಂದೂ ವ್ಯಕ್ತಿಯ ಹತ್ಯೆ

ಈ ಘಟನೆಯೊಂದಿಗೆ ಬಾಂಗ್ಲಾದೇಶದಲ್ಲಿ 10 ದಿನಗಳ ಅಂತರದಲ್ಲಿ ಮೂವರು ಹಿಂದೂಗಳ ಹತ್ಯೆಯಾಗಿದೆ. ದೀಪು ಚಂದ್ರ ದಾಸ್ ಅವರನ್ನು ಒಂದು ವಾರದ ಹಿಂದೆ ಇದೇ ಮೈಮೆನ್ಸಿಂಗ್‌ನಲ್ಲಿ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಅದಾದ ಬಳಿಕ ಅಮೃತ್ ಮೊಂಡಲ್ ಅವರನ್ನು ಉದ್ರಿಕ್ತ ಜನರ ಗುಂಪು ಕೊಲೆ ಮಾಡಿತ್ತು. ಅಚ್ಚರಿಯ ಅಂಶ ಎಂದರೆ ದೀಪು ಚಂದ್ರ ದಾಸ್ ಅವರಂತೆಯೇ ಬಜೇಂದ್ರ ಬಿಸ್ವಾಸ್ ಕೂಡ ಮೈಮೆನ್ಸಿಂಗ್‌ನ ಬಟ್ಟೆ ಕಾರ್ಖಾನೆಯಲ್ಲಿ ಉದ್ಯೋಗದಲ್ಲಿದ್ದರು.