ಬ್ರಿಟಿಷ್ ಏರ್ವೇಸ್ ವಿಮಾನದಲ್ಲಿ ತುರ್ತು ಪರಿಸ್ಥಿತಿ; ಏಕಾಏಕಿ 28,000 Ft ಕುಸಿದ ವಿಮಾನ
ಲಂಡನ್‌ನಿಂದ ಅಮೆರಿಕದ ಚಿಕಾಗೋಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ನ BA295 ವಿಮಾನವು ಐರ್ಲೆಂಡ್ ವಾಯುಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದಾಗ ಭೀತಿ ಎದುರಿಸಿದ್ದು ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಬೋಯಿಂಗ್ 777 (Boeing 777) ಮಾದರಿಯ ವಿಮಾನವು ಐರ್ಲೆಂಡ್ ಮೇಲೆ ಸುಮಾರು 37,000 ಅಡಿ ಎತ್ತರದಲ್ಲಿ ಸಾಮಾನ್ಯ ಹಾರಾಟ ನಡೆಸುತ್ತಿತ್ತು.
ಸಂಗ್ರಹ ಚಿತ್ರ -
ರೇಕ್ಜಾವಿಕ್: ಲಂಡನ್‌ನಿಂದ ಅಮೆರಿಕದ ಚಿಕಾಗೋಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ನ BA295 (British Airways Flight) ವಿಮಾನವು ಐರ್ಲೆಂಡ್ ವಾಯುಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದಾಗ ಭೀತಿ ಎದುರಿಸಿದ್ದು ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಬೋಯಿಂಗ್ 777 (Boeing 777) ಮಾದರಿಯ ವಿಮಾನವು ಐರ್ಲೆಂಡ್ ಮೇಲೆ ಸುಮಾರು 37,000 ಅಡಿ ಎತ್ತರದಲ್ಲಿ ಸಾಮಾನ್ಯ ಹಾರಾಟ ನಡೆಸುತ್ತಿತ್ತು. ಆದರೆ ದಿಢೀರನೆ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನವು ಕೇವಲ ಕೆಲವೇ ನಿಮಿಷಗಳಲ್ಲಿ 28,000 ಅಡಿಗಳಷ್ಟು ಕೆಳಕ್ಕೆ ಕುಸಿದಿದೆ.
ತುರ್ತು ಪರಿಸ್ಥಿತಿಗೆ ಕಾರಣವನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಲಾಗಿಲ್ಲ. ತುರ್ತು ಸಂಕೇತ ರವಾನಿಸಿದ ಬೆನ್ನಲ್ಲೇ ಪೈಲಟ್‌ಗಳು ಚಿಕಾಗೋ ಕಡೆಗೆ ಸಾಗುತ್ತಿದ್ದ ವಿಮಾನವನ್ನು ಐರ್ಲೆಂಡ್ ಆಕಾಶದಲ್ಲೇ ಯು-ಟರ್ನ್ ಮಾಡಿಸಿ, ವಾಪಸ್ ಲಂಡನ್‌ನ ಹೀಥ್ರೂ (London Heathrow) ವಿಮಾನ ನಿಲ್ದಾಣದ ಕಡೆಗೆ ಮುಖ ಮಾಡಿದರು. ಲಂಡನ್‌ನಲ್ಲಿ ವಿಮಾನ ಲ್ಯಾಂಡ್ ಆಗುವ ಮುನ್ನವೇ ರನ್‌ವೇ ಪಕ್ಕದಲ್ಲಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿತ್ತು.
ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿಗಳು ದೃಢಪಡಿಸಿವೆ. ಕೆಲವೇ ದಿನಗಳ ಹಿಂದಷ್ಟೇ ಫ್ಲೈದುಬೈ ವಿಮಾನದಲ್ಲಿ ನಡೆದ ಆತಂಕಕಾರಿ ಘಟನೆಯ ಬೆನ್ನಲ್ಲೇ ಬ್ರಿಟಿಷ್ ಏರ್‌ವೇಸ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಜಾಗತಿಕ ವಿಮಾನಯಾನ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ತಪ್ಪಿದ ಫೈದುಬೈ ದುರಂತ
ಸೆಪ್ಟೆಂಬರ್ 30, 2026 ರಂದು ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ 174 ಪ್ರಯಾಣಿಕರೊಂದಿಗೆ ಹೊರಟಿದ್ದ FZ1073 ವಿಮಾನದಲ್ಲಿ ಓಮನ್ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಎಂಬಾತ ವಿಮಾನವನ್ನೇ ಆಯುಧವನ್ನಾಗಿ ಬಳಸಿ ವಿಮಾನ ಪತನಕ್ಕೆ ಯತ್ನಿಸಿದ ಘಟನೆ ನಡೆದಿದೆ. ವಿಮಾನವು ಸೌದಿ ಅರೇಬಿಯಾದ ವಾಯುಪ್ರದೇಶದಲ್ಲಿ ಹಾರುತ್ತಿದ್ದಾಗ, ಸಹ-ಪೈಲಟ್ ಹಮ್ಮಾಮಿ ಇದ್ದಕ್ಕಿದ್ದಂತೆ ತುರ್ತು ಕ್ರ್ಯಾಶ್ ಕೊಡಲಿಯಿಂದ ಮುಖ್ಯ ಪೈಲಟ್ ಆದ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಅವರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ.
ವಿಮಾನದಲ್ಲೇ ಪ್ರಯಾಣಿಸುತ್ತಿದ್ದ ಫ್ಲೈದುಬೈ ಸಂಸ್ಥೆಯ ಮತ್ತೊಂದು 'ರಿಸರ್ವ್ ಪೈಲಟ್' ತಂಡ ತಕ್ಷಣವೇ ನಿಯಂತ್ರಣವನ್ನು ಕೈಗೆ ತೆಗೆದುಕೊಂಡು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದು, ಭೀಕರ ದುರಂತ ತಪ್ಪಿದೆ.