Donald Trump: ಕಮ್ಯುನಿಸ್ಟ್ ಪಕ್ಷದ ಮಮ್ದಾನಿ ಗೆದ್ದರೆ ಅದು ಸಂಪೂರ್ಣ ಸೋಲು: ಟ್ರಂಪ್
New York Mayor Election: ನ್ಯೂಯಾರ್ಕ್ ನಗರದ ಮೇಯರ್ ಸ್ಥಾನದ ಚುನಾವಣೆಗೂ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಎಡಪಂಥೀಯ ಡೆಮಾಕ್ರಟಿಕ್ ಪಕ್ಷದ ಸ್ಪರ್ಧಿ ಜೋಹ್ರಾನ್ ಮಮ್ದಾನಿ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಅವರು ಗೆದ್ದರೆ ಅದು ನ್ಯೂಯಾರ್ಕ್ ನಿವಾಸಿಗಳ ಸಂಪೂರ್ಣ ಸೋಲು ಎಂದು ಕರೆದಿರುವ ಟ್ರಂಪ್, ಚುನಾವಣಾ ಕಣದಲ್ಲಿರುವ ಸ್ವತಂತ್ರ ಅಭ್ಯರ್ಥಿ ಮಾಜಿ ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ಅವರಿಗೆ ಬೆಂಬಲವನ್ನು ಸೂಚಿಸಿದ್ದಾರೆ. ಅಲ್ಲದೇ ಈ ಚುನಾವಣೆಯಲ್ಲಿ ಮಮ್ದಾನಿ ಗೆದ್ದರೆ ಅದು ಸಂಪೂರ್ಣ ಆರ್ಥಿಕ ಮತ್ತು ಸಾಮಾಜಿಕ ವೈಫಲ್ಯವಾಗಲಿದೆ ಎಂದು ಹೇಳಿರುವ ಅವರು ಮಮ್ದಾನಿಗೆ ಮತ ಹಾಕದಂತೆ ಮತದಾರರನ್ನು ಒತ್ತಾಯಿಸಿದ್ದಾರೆ.
-
ವಿದ್ಯಾ ಇರ್ವತ್ತೂರು
Nov 4, 2025 3:31 PM
ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ಮೇಯರ್ (New York Mayor Election ) ಸ್ಥಾನಕ್ಕೆ ಮಂಗಳವಾರ ಮತದಾನ ಆರಂಭವಾಗಿದೆ. ಇದಕ್ಕೂ ಮೊದಲು ನ್ಯೂಯಾರ್ಕ್ ನಗರದ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಎಡಪಂಥೀಯ ಡೆಮಾಕ್ರಟಿಕ್ ಪಕ್ಷದ ಸ್ಪರ್ಧಿ ಜೋಹ್ರಾನ್ ಮಮ್ದಾನಿ (Zohran Mamdani) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಒಂದು ವೇಳೆ ಮಮ್ದಾನಿ ಗೆದ್ದರೆ ಅದು ಸಂಪೂರ್ಣ ಆರ್ಥಿಕ ಮತ್ತು ಸಾಮಾಜಿಕ ವೈಫಲ್ಯವಾಗಲಿದೆ ಎಂದು ಹೇಳಿದ್ದಾರೆ.
ಚುನಾವಣಾ ಕಣದಲ್ಲಿರುವ ಸ್ವತಂತ್ರ ಅಭ್ಯರ್ಥಿ ಮಾಜಿ ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ಅವರಿಗೆ ಬೆಂಬಲವನ್ನು ಸೂಚಿಸಿರುವ ಟ್ರಂಪ್ ಮೂರು ಅಧ್ಯಕ್ಷೀಯ ಚುನಾವಣೆಗಳಲ್ಲಿ ತಮ್ಮ ತವರೂರಿನಲ್ಲಿ ಭಾರಿ ಅಂತರದಿಂದ ಸೋತಿದ್ದರು. ಇದರ ಪ್ರಭಾವ ನ್ಯೂಯಾರ್ಕ್ ಚುನಾವಣೆ ಮೇಲೆ ಬಿರುವುದೇ ಎನ್ನುವ ಆತಂಕ ಉಂಟಾಗಿದೆ.
Remember to vote tomorrow in New York!
— Elon Musk (@elonmusk) November 3, 2025
Bear in mind that a vote for Curtis is really a vote for Mumdumi or whatever his name is.
VOTE CUOMO!
ಇದನ್ನೂ ಓದಿ: Mehul Choksi: ಭಾರತಕ್ಕೆ ಹಸ್ತಾಂತರ ಪ್ರಶ್ನಿಸಿ ಬೆಲ್ಜಿಯಂ ಸುಪ್ರೀಂ ಕೋರ್ಟ್ ಮೊರೆ ಹೋದ ಮೆಹುಲ್ ಚೋಕ್ಸಿ
ಎಡಪಂಥೀಯ ಡೆಮಾಕ್ರಟಿಕ್ ಪಕ್ಷದ ಜೋಹ್ರಾನ್ ಮಮ್ದಾನಿ ಅವರಿಗೆ ಮತ ಹಾಕದಂತೆ ಒತ್ತಾಯಿಸಿರುವ ಟ್ರಂಪ್, ನ್ಯೂಯಾರ್ಕ್ ತಮ್ಮ ಮೊದಲ ಮನೆ ಎಂದು ಹೇಳಿದ್ದಾರೆ. ಈ ಕುರಿತು ಟ್ರೂತ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಕಮ್ಯುನಿಸ್ಟ್ ಪಕ್ಷದ ಮಮ್ದಾನಿ ಒಬ್ಬ ಪ್ರಜಾಸತ್ತಾತ್ಮಕ ಸಮಾಜವಾದಿ. ಅವರಿಗೆ ನ್ಯೂಯಾರ್ಕ್ ನಿವಾಸಿಗಳು ಮತ ಹಾಕಿದರೆ ಅದು ನ್ಯೂಯಾರ್ಕ್ ನಗರಕ್ಕೆ ಫೆಡರಲ್ ನಿಧಿಯನ್ನು ಕನಿಷ್ಠಕ್ಕೆ ಕೊಂಡೊಯ್ಯುತ್ತದೆ ಎಂದು ಎಚ್ಚರಿಸಿದ್ದಾರೆ.
ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಕಮ್ಯುನಿಸ್ಟ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ ಗೆದ್ದರೆ ನನ್ನ ಪ್ರೀತಿಯ ಮೊದಲ ಮನೆಗೆ ಕನಿಷ್ಠ ಮೊತ್ತವನ್ನು ಮಾತ್ರ ನಾನು ಕೊಡಬಹುದು. ಆಗ ಈ ಮಹಾನ್ ನಗರವು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಅವರು ತಿಳಿಸಿದ್ದಾರೆ.
ಕಮ್ಯುನಿಸ್ಟ್ ವೊಬ್ಬ ಅಧಿಕಾರದ ಚುಕ್ಕಾಣಿ ಹಿಡಿದರೆ ರಾಷ್ಟ್ರಧ್ಯಕ್ಷನಾಗಿ ನಾನು ಸೋತರೆ ಇಲ್ಲಿಗೆ ಹಣವನ್ನು ಕಳುಹಿಸಲು ನಾನು ಬಯಸುವುದಿಲ್ಲ. ರಾಷ್ಟ್ರವನ್ನು ನಡೆಸುವುದು ನನ್ನ ಬಾಧ್ಯತೆಯಾಗಿದೆ. ಹೀಗಾಗಿ ನ್ಯೂಯಾರ್ಕ್ ನಗರವು ಸಂಪೂರ್ಣವಾಗಿ ಆರ್ಥಿಕ ಮತ್ತು ಸಾಮಾಜಿಕ ವೈಫಲ್ಯ ಅನುಭವಿಸಬೇಕಾಗಬಹುದು. ಅವರ ತತ್ವಗಳನ್ನು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಪರೀಕ್ಷಿಸಲಾಗಿದೆ. ಆದರೆ ಅದು ಎಂದಿಗೂ ಯಶಸ್ವಿಯಾಗಿಲ್ಲ ಎಂದರು.
ನ್ಯೂಯಾರ್ಕ್ ನಗರದ ಮೇಯರ್ ಸ್ಥಾನಕ್ಕೆ ಚುನಾವಣೆ ಮಂಗಳವಾರ ನಡೆಯಲಿದೆ. ಒಂದು ಸಮಯದಲ್ಲಿ ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ಟ್ರಂಪ್ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆದರೆ ಈಗ ಟ್ರಂಪ್ ಅವರಿಗೆ ಬೆಂಬಲ ನೀಡುವಂತೆ ನ್ಯೂಯಾರ್ಕ್ ಜನರಲ್ಲಿ ಒತ್ತಾಯಿಸಿದ್ದಾರೆ.
ಅನುಭವವಿಲ್ಲದ ಕಮ್ಯುನಿಸ್ಟ್ ಅಭ್ಯರ್ಥಿಗಿಂತ ಯಶಸ್ಸಿನ ದಾಖಲೆ ಹೊಂದಿರುವ ಡೆಮೋಕ್ರಾಟ್ ಗೆಲ್ಲುವುದನ್ನು ನಾನು ಹೆಚ್ಚು ಇಷ್ಟಪಡುತ್ತೇನೆ ಎಂದ ಟ್ರಂಪ್, ವಿಶ್ವದ ಶ್ರೇಷ್ಠ ನಗರದ ಮೇಯರ್ ಆಗಿ ಕಮ್ಯುನಿಸ್ಟ್ ಅಭ್ಯರ್ಥಿಗೆ ಅದನ್ನು ಅದರ ಹಿಂದಿನ ವೈಭವಕ್ಕೆ ಮರಳಿ ತರಲು ಸಾಧ್ಯವಿಲ್ಲ ಎಂದರು.
ಇನ್ನು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಅವರಿಗೆ ಮತ ಹಾಕಿದರೆ ಅದು ಮಮ್ದಾನಿಗೆ ಮತ ಹಾಕಿದಂತೆ ಎಂದು ಹೇಳಿದ ಟ್ರಂಪ್, ವೈಯಕ್ತಿಕವಾಗಿ ಆಂಡ್ರ್ಯೂ ಕ್ಯುಮೊ ಅವರನ್ನು ನೀವು ಇಷ್ಟಪಡುತ್ತೀರೋ ಇಲ್ಲವೋ ಆದರೆ ನಿಮಗೆ ಬೇರೆ ಆಯ್ಕೆಯಿಲ್ಲ ಎಂದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಟ್ರಂಪ್, ನಾನು ಕ್ಯುಮೊ ಅವರ ಅಭಿಮಾನಿಯಲ್ಲ. ಆದರೆ ಅವರು ಪ್ರಜಾಪ್ರಭುತ್ವವಾದಿ. ಅವರ ಎದುರು ಕಮ್ಯುನಿಸ್ಟ್ ಇರುವಾಗ ನಾನು ಅವರನ್ನೇ ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ: Road Accident: ಕೆಟ್ಟು ನಿಂತ ಕಾರಿಗೆ ಬಂದು ಬಡಿದ ಕ್ಯಾಂಟರ್, ಡ್ಯಾನ್ಸರ್ ಸುಧೀಂದ್ರ ಸಾವು
ಟ್ರಂಪ್ ಅವರ ಮಾಜಿ ಸಲಹೆಗಾರ, ಬಿಲಿಯನೇರ್ ಎಲೋನ್ ಮಸ್ಕ್ ಕೂಡ ಕ್ಯುಮೊಗೆ ಬೆಂಬಲ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಬರೆದಿರುವ ಅವರು, ನಾಳೆ ನ್ಯೂಯಾರ್ಕ್‌ನಲ್ಲಿ ಮತ ಚಲಾಯಿಸಲು ಮರೆಯದಿರಿ. ನೆನಪಿನಲ್ಲಿಡಿ ಕ್ಯುಮೊಗೆ ಮತ ಹಾಕಿ ಎಂದು ತಿಳಿಸಿದ್ದಾರೆ.