ಹೊರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ: 24 ಭಾರತೀಯ ನಾವಿಕರು ಸೇಫ್
Hormuz Strait: ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ 24 ಭಾರತೀಯ ನಾವಿಕರಿದ್ದ ಎಲ್ಪಿಜಿ ಟ್ಯಾಂಕರ್ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಅದೃಷ್ಟವಶಾತ್ ಹಡಗಿನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ. 'ತಾರಾ ಗ್ಯಾಸ್' ಹೆಸರಿನ ಪನಾಮ ಧ್ವಜ ಹೊಂದಿರುವ ಈ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಎಂಜಿನ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಸ್ಪಷ್ಟಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ನ.17: ಪಶ್ಚಿಮ ಏಷ್ಯಾದ ಆಯಕಟ್ಟಿನ ಜಲಮಾರ್ಗವಾದ ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಸಂಚರಿಸುತ್ತಿದ್ದ ಎಲ್ಪಿಜಿ ಟ್ಯಾಂಕರ್ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಸೋಮವಾರ ನಡೆದ ಈ ದಾಳಿಯ ವೇಳೆ ಹಡಗಿನಲ್ಲಿ 24 ಮಂದಿ ಭಾರತೀಯ ನಾವಿಕರು ಸೇರಿ ಒಟ್ಟು 25 ಸಿಬ್ಬಂದಿ ಇದ್ದರು. ಈ ಘಟನೆಯಲ್ಲಿ ಹಡಗಿನಲ್ಲಿದ್ದ ಎಲ್ಲ ಭಾರತೀಯ ನಾವಿಕರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ (Sarbananda Sonowal) ಮಂಗಳವಾರ ತಿಳಿಸಿದ್ದಾರೆ.
ಪನಾಮ ದೇಶದ ಧ್ವಜ ಹೊಂದಿರುವ 'ತಾರಾ ಗ್ಯಾಸ್' ಎಂಬ ಎಲ್ಪಿಜಿ ಟ್ಯಾಂಕರ್ ಹಡಗು ಒಮಾನ್ನ ಖಾಸಬ್ನಿಂದ ಸುಮಾರು ಏಳು ನಾಟಿಕಲ್ ಮೈಲಿ ಉತ್ತರಕ್ಕೆ ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದಾಗ ಈ ದಾಳಿ ನಡೆದಿದೆ. ಕ್ಷಿಪಣಿ ದಾಳಿಯ ತೀವ್ರತೆಗೆ ಹಡಗಿನ ಎಂಜಿನ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡು ಹಡಗು ಸ್ಥಗಿತಗೊಂಡಿದೆ ಎಂದು ಯುನೈಟೆಡ್ ಕಿಂಗ್ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ವರದಿ ಮಾಡಿದೆ.
ಪೋಸ್ಟ್ ನೋಡಿ:
⚠️ IMPORTANT UPDATE ⚠️ On Nov 16, Panama-flagged LPG tanker TARA GAS, carrying 24 Indian seafarers, was targeted in a missile attack in the Strait of Hormuz. All 24 Indian nationals, along with the entire 25-member crew, are completely safe with no injuries. We are continuously monitoring the situation and remain in close contact with the ship management company to ensure the ongoing security and wellbeing of our seafarers.
— Sarbananda Sonowal (@sarbanandsonwal) November 17, 2026
ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಸ್ಪಷ್ಟನೆ
ಘಟನೆಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್, "ನವೆಂಬರ್ 16ರಂದು ಹೊರ್ಮುಜ್ ಜಲಸಂಧಿಯಲ್ಲಿ 24 ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ ಪನಾಮ ಧ್ವಜದ ಎಲ್ಪಿಜಿ ಟ್ಯಾಂಕರ್ 'ತಾರಾ ಗ್ಯಾಸ್' ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಹಡಗಿನಲ್ಲಿದ್ದ ಎಲ್ಲ 24 ಭಾರತೀಯ ಪ್ರಜೆಗಳು ಸೇರಿ 25 ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಸಂಪೂರ್ಣ ಸುರಕ್ಷಿತವಾಗಿದ್ದಾರೆ. ನಮ್ಮ ನಾವಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ನಾವು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ಹಡಗು ನಿರ್ವಹಣಾ ಕಂಪನಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ" ಎಂದು ಭರವಸೆ ನೀಡಿದ್ದಾರೆ.
ಹಾರ್ಮೊಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಮುಕ್ತ ಸಂಚಾರಕ್ಕೆ ಇರಾನ್ ವಿನಾಯಿತಿ
ಜಲಮಾರ್ಗದಲ್ಲಿ ಹೆಚ್ಚಿದ ಆತಂಕ
ವಿಶ್ವದ ಸುಮಾರು ಶೇ. 20ರಷ್ಟು ಕಚ್ಚಾ ತೈಲ ಮತ್ತು ಇಂಧನ ಸಾಗಣೆಯು ಇದೇ ಹೊರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತದೆ. ಕಳೆದ ಒಂದು ವಾರದಲ್ಲಿ ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ. ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳ ಹಿನ್ನೆಲೆಯಲ್ಲಿ, ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳು ತೀವ್ರ ಎಚ್ಚರಿಕೆ ವಹಿಸುವಂತೆ UKMTO ಸೂಚಿಸಿದೆ.