ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯಾಕಾಂಡಕ್ಕೆ ಭಾರತ ಖಂಡನೆ ; ವಿದೇಶಾಂಗ ಸಚಿವಾಲಯ ಹೇಳಿದ್ದೇನು?
India condemns massacre: ಪಾಕಿಸ್ತಾನದಿಂದ ಬರುತ್ತಿರುವ ನಕಲಿ ಸುದ್ದಿ ಮತ್ತು ವಿಡಿಯೊಗಳನ್ನು ಭಾರತವು ಗಮನಿಸಿದೆ. ಇದು ತನ್ನದೇ ವೈಫಲ್ಯಗಳು ಮತ್ತು ಸಮಸ್ಯೆಗಳನ್ನು ಮುಚ್ಚಿಹಾಕಲು ಪಾಕಿಸ್ತಾನ ನಡೆಸುತ್ತಿರುವ ಹತಾಶ ಪ್ರಯತ್ನ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಟೀಕಿಸಿದರು.
ಪಿಒಕೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ದೃಶ್ಯ -
ನವದೆಹಲಿ, ಜೂ.9: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (Pakistan-Occupied Kashmir) ನಡೆದಿರುವ ಮಾನವ ಹಕ್ಕುಗಳ ಉಲ್ಲಂಘನೆಗಳ ಆರೋಪಗಳಿಂದ ಗಮನ ಬೇರೆಡೆ ಸೆಳೆಯಲು ಪಾಕಿಸ್ತಾನವು ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಭಾರತ (India) ಆರೋಪಿಸಿದೆ. ರಾವಲ್‌ಕೋಟ್‌ನಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ಹಿಂಸಾತ್ಮಕ ದಮನದ ಕೆಲವು ದಿನಗಳ ಬಳಿಕವೂ ಅಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ ಎಂದು ಭಾರತ ಹೇಳಿದೆ.
ಈ ಪ್ರದೇಶದಿಂದ ಹೊರಬರುತ್ತಿರುವ ವರದಿಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪಾಕಿಸ್ತಾನದಿಂದ ಬರುತ್ತಿರುವ ನಕಲಿ ಸುದ್ದಿ ಮತ್ತು ವಿಡಿಯೊಗಳನ್ನು ಭಾರತವು ಗಮನಿಸಿದೆ. ಇದು ತನ್ನದೇ ವೈಫಲ್ಯಗಳು ಮತ್ತು ಸಮಸ್ಯೆಗಳನ್ನು ಮುಚ್ಚಿಹಾಕಲು ಪಾಕಿಸ್ತಾನ ನಡೆಸುತ್ತಿರುವ ಹತಾಶ ಪ್ರಯತ್ನ ಎಂದು ಅವರು ಟೀಕಿಸಿದರು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪೊಲೀಸ್ ದೌರ್ಜನ್ಯ ನಡೆದಿದೆ ಎನ್ನಲಾದ ವರದಿಗಳನ್ನು ಉಲ್ಲೇಖಿಸಿದ ವಿದೇಶಾಂಗ ಸಚಿವಾಲಯದ ವಕ್ತಾರರು, ಇತ್ತೀಚಿನ ಪ್ರತಿಭಟನೆಗಳಲ್ಲಿ ಹಲವಾರು ಪ್ರತಿಭಟನಾಕಾರರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಪ್ರತಿಭಟನೆ ವಿಡಿಯೊ ಇಲ್ಲಿದೆ:
#WATCH | Anti-Pakistan protestors gather in large numbers in Mirpur of Pakistan-occupied Jammu and Kashmir pic.twitter.com/JK8qnFkUb8
— ANI (@ANI) June 9, 2026
ಕೆಲವು ದಿನಗಳ ಹಿಂದಷ್ಟೇ ರಾವಲಕೋಟ್‌ನಲ್ಲಿ ಜಂಟಿ ಅವಾಮಿ ಕ್ರಿಯಾ ಸಮಿತಿಗೆ ಸೇರಿದ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಕನಿಷ್ಠ 27 ಜನರು ಮೃತಪಟ್ಟಿದ್ದರು. ಅಧಿಕೃತ ಅಂಕಿಅಂಶಗಳು ಸಾವಿನ ಸಂಖ್ಯೆಯನ್ನು 27 ಎಂದು ಹೇಳಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೊಗಳಲ್ಲಿ ಸಾವುನೋವುಗಳ ಸಂಖ್ಯೆ ಹೆಚ್ಚಿರಬಹುದು ಎಂದು ಹೇಳಲಾಗಿದೆ.
ಜಂಟಿ ಅವಾಮಿ ಕ್ರಿಯಾ ಸಮಿತಿ ಸದಸ್ಯರು ಗೆರಿಲ್ಲಾ ಶೈಲಿಯ ದಾಳಿ ನಡೆಸಿ, ಬಂದೂಕುಗಳು ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕಾರಣದಿಂದಲೇ ಭದ್ರತಾ ಪಡೆಗಳು ದಮನ ಕಾರ್ಯಾಚರಣೆಯನ್ನು ಕೈಗೊಂಡವು ಎಂದು ಪಾಕಿಸ್ತಾನಿ ಭದ್ರತಾ ಪಡೆ ಹೇಳಿದೆ.
ಅಶಾಂತಿಯನ್ನು ನಿಯಂತ್ರಿಸುವ ಉದ್ದೇಶದಿಂದ ಪಾಕಿಸ್ತಾನ ಅಧಿಕಾರಿಗಳು ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದರೂ, ಮಿರ್ಪುರ್, ಮುಜಫರಾಬಾದ್, ಗಿಲ್ಗಿಟ್-ಬಾಲ್ಟಿಸ್ತಾನ್, ದಡಿಯಾಲ್, ರಾವಲಕೋಟ್, ಸುಧ್ನೋಟಿ ಮತ್ತು ತಟ್ಟಪಾನಿಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.
ಪಾಕ್ ಆಕ್ರಮಿತ ಕಾಶ್ಮೀರವನ್ನು ಮೀರಿ ಯುಕೆಯತ್ತ ಪ್ರತಿಭಟನೆ ತಲುಪಿವೆ. ಕಾಶ್ಮೀರಿ ವಲಸಿಗರು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟಿಸಿದರು.
ಇದೇ ವೇಳೆ, ಪ್ರತಿಭಟನಾ ಸಂಘಟನೆಗಳು ಪಾಕಿಸ್ತಾನದ ಆಡಳಿತ ವ್ಯವಸ್ಥೆಯ ವಿರುದ್ಧ ತಮ್ಮ ಹೋರಾಟವನ್ನು ಮುಂದುವರಿಸುತ್ತಿರುವುದರಿಂದ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಪ್ರತಿಭಟನಾಕಾರರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಾದ್ಯಂತ ನಡೆಸಲು ಉದ್ದೇಶಿಸಿರುವ ದೀರ್ಘ ಮೆರವಣಿಗೆಯನ್ನು ತಡೆಯುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಆದರೆ, ಸಂಘಟಕರು ತಮ್ಮ ಯೋಜನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಎಲ್ಲ ಅಡೆತಡೆಗಳ ನಡುವೆಯೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.