Israel-Iran conflict: ಇರಾನ್-ಇಸ್ರೇಲ್ ಸಂಘರ್ಷ: ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಬೆಂಬಲ ಯಾರಿಗೆ?
ಇರಾರ್‌ನ ಪರಮಾಣು ಕೇಂದ್ರಗಳ ಮೇಲೆ ಜೂನ್16ರಂದು ಇಸ್ರೇಲ್ ದಾಳಿ ನಡೆಸಿದ ಬಳಿಕ 2023ರ ಅಕ್ಟೋಬರ್ 7ರಿಂದ ಪ್ರಾರಂಭವಾಗಿರುವ ಈ ದೇಶಗಳ ನಡುವಿನ ಸಂಘರ್ಷ ಈಗ ಉಲ್ಭಣವಾಗುವ ಹಂತದಲ್ಲಿದೆ. ಇಸ್ರೇಲ್- ಇರಾನ್ ನಡುವೆ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡರೆ ಯಾವ ದೇಶದ ಜತೆಗೆ ಯಾರು ನಿಲ್ಲುತ್ತಾರೆ ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ. ಅದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.


ಹೊಸದಿಲ್ಲಿ: ಇರಾನ್‌ನ (Iran) ಪರಮಾಣು ಕೇಂದ್ರಗಳ (Nuclear power plant) ಮೇಲೆ ಜೂನ್16ರಂದು ಇಸ್ರೇಲ್ (Israel) ದಾಳಿ ನಡೆಸಿದ ಬಳಿಕ 2023ರ ಅಕ್ಟೋಬರ್ 7ರಿಂದ ನಡೆಯುತ್ತಿರುವ ಈ ದೇಶಗಳ ನಡುವಿನ ಸಂಘರ್ಷ (Israel-Iran war) ಸಂಘರ್ಷ ಈಗ ಉಲ್ಭಣವಾಗುವ ಹಂತದಲ್ಲಿದೆ. ಒಂದು ವೇಳೆ ಇಸ್ರೇಲ್- ಇರಾನ್ ಸಂಘರ್ಷ ಉಂಟಾದರೆ ಯಾವ ದೇಶದ ಜತೆ ಯಾರು ನಿಲ್ಲುತ್ತಾರೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುವುದು ಸಹಜ. ಯಾಕೆಂದರೆ ಅಮೆರಿಕ ಇಸ್ರೇಲ್ ಜತೆಗಿರುವುದು ವಿಶ್ವಕ್ಕೇ ಗೊತ್ತಿದೆ. ಹೀಗಾಗಿ ಅಮೆರಿಕ ವಿರೋಧಿಗಳು ಇರಾನ್‌ಗೆ ಬಂಬಲವಾಗಿ ನಿಲ್ಲುವ ಸಾಧ್ಯತೆಗಳಿವೆ.
ಇರಾನ್‌ನ ಮೂರು ಪ್ರಮುಖ ಪರಮಾಣು ತಾಣಗಳ ಮೇಲೆ ಭಾನುವಾರ ಇಸ್ರೇಲ್ ನೆಲದಲ್ಲಿರುವ ಅಮೆರಿಕ ಸೇನೆಯು ದಾಳಿ ನಡೆಸಿದ ಬಳಿಕ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಅಲ್ಲದೇ ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ಇಸ್ರೇಲ್ ದಾಳಿ ನಡೆಸಿರುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದು, ಇದು ಇರಾನ್‌ನಲ್ಲಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಹೀಗಾಗಿ ಇರಾನ್ ಕೂಡ ಇಸ್ರೇಲ್ ವಿರುದ್ಧ ದಾಳಿ ತೀವ್ರಗೊಳಿಸುವುದಾಗಿ ಪ್ರತಿಜ್ಞೆ ಮಾಡಿದೆ. ಇದೇ ಕಾರಣಕ್ಕೆ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರುವ ಸಾಧ್ಯತೆ ಇದೆ. ಒಂದು ವೇಳೆ ಸಂಘರ್ಷ ಹೆಚ್ಚಾದರೆ ಇಸ್ರೇಲ್ ಮತ್ತು ಅಮೆರಿಕ ವಿರೋಧಿಗಳು ಇರಾನ್ ಗೆ ಬೆಂಬಲ ನೀಡುವ ಸಾಧ್ಯತೆ ಇದೆ.
ಎರಡು ರಾಷ್ಟ್ರಗಳ ನಡುವಿನ ಸಂಘರ್ಷದ ವಾತಾವರಣವು ವಿಶ್ವದ ಗಮನ ಸೆಳೆದಿದೆ. ಹಲವು ನಾಯಕರು ಎರಡು ರಾಷ್ಟ್ರಗಳು ಸಂಯಮ ಕಾಯ್ದುಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಆದರೆ ಈ ರಾಷ್ಟ್ರಗಳ ನಡುವಿನ ಸಂಘರ್ಷ ಹೆಚ್ಚಾದರೆ ಇಸ್ರೇಲ್ ಮತ್ತು ಇರಾನ್ ಜತೆಗೆ ಯಾರೆಲ್ಲ ನಿಲ್ಲಬಹುದು ಎಂಬುದು ಕೂಡ ಮುಖ್ಯವಾಗುತ್ತದೆ.
ಇರಾನ್‌ನಲ್ಲಿ ಅನೇಕ ಮಿತ್ರರಾಷ್ಟ್ರಗಳ ಅರೆಸೈನಿಕ ಗುಂಪುಗಳಿವೆ. ಇವುಗಳೇ ಸಾಮಾನ್ಯವಾಗಿ ಇಸ್ರೇಲ್ ಮತ್ತು ಅಮೆರಿಕದಿಂದ ಆಗುತ್ತಿರುವ ನೇರ ದಾಳಿಗಳನ್ನು ತಡೆಯುತ್ತಿವೆ. ಲೆಬನಾನ್‌ನ ಹೆಜ್ಬೊಲ್ಲಾ, ಗಾಜಾದ ಹಮಾಸ್, ಇರಾಕ್‌ನ ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸ್ (PMF) ಮತ್ತು ಯೆಮೆನ್‌ನ ಹೌತಿ ಉಗ್ರಗಾಮಿಗಳನ್ನು ಒಟ್ಟಾಗಿ ಇಲ್ಲಿ ಆಕ್ಸಿಸ್ ಆಫ್ ರೆಸಿಸ್ಟೆನ್ಸ್ ಎಂದು ಕರೆಯಲಾಗುತ್ತದೆ.
ಯುದ್ಧದ ಆರಂಭದಿಂದಲೂ ಇರಾನ್‌ನಲ್ಲಿರುವ ಈ ಗುಂಪುಗಳು ಇಸ್ರೇಲ್‌ಗೆ ಭಾರಿ ಹೊಡೆತವನ್ನು ನೀಡಿದೆ. ಯುದ್ಧ ಆರಂಭವಾದಾಗಿನಿಂದ ಇಸ್ರೇಲ್ ಹೆಜ್ಬೊಲ್ಲಾ ಮತ್ತು ಹಮಾಸ್ ಅನ್ನು ದುರ್ಬಲಗೊಳಿಸಿದರೂ ಈ ಸಂಘಟನೆಗಳು ಇಸ್ರೇಲ್ ವಿರುದ್ಧ ಹಲವು ತಿಂಗಳ ಕಾಲ ಹೋರಾಟ ನಡೆಸಿದ್ದವು.
ಸಿರಿಯಾ ಕೂಡ ಇರಾನ್ ಬೆಂಬಲಕ್ಕೆ ನಿಂತಿದೆ. ಆದರೆ ಸಿರಿಯಾದಲ್ಲಿ ಬಶರ್ ಅಲ್-ಅಸ್ಸಾದ್ ಪದಚ್ಯುತಗೊಂಡ ಬಳಿಕ ಅಲ್ಲಿದ್ದ ತನ್ನ ಸೇನಾ ತುಕಡಿಯನ್ನು ಇರಾನ್ ತೆಗೆದುಹಾಕಿದೆ. ಆದರೂ ಇರಾಕ್‌ನಲ್ಲಿ ಇರಾನ್ ತನ್ನ ಪ್ರಭಾವವನ್ನು ಕಾಯ್ದುಕೊಂಡಿದೆ. ಇಲ್ಲಿ ಸುಮಾರು 2,00,000 ಪಿಎಂಎಫ್ ಹೋರಾಟಗಾರರು ಮತ್ತು ಯೆಮೆನ್‌ನಲ್ಲಿ ಹೌತಿಗಳ ತುಕಡಿಯನ್ನು ಇರಾನ್ ಹೊಂದಿದೆ.
ಇಷ್ಟೇ ಅಲ್ಲದೇ ಇರಾನ್ ಗೆ ಜಾಗತಿಕವಾಗಿ ರಷ್ಯಾ ಮತ್ತು ಚೀನಾ ಮಿತ್ರರಾಷ್ಟ್ರಗಳಾಗಿವೆ. ಇವುಗಳು ಅಮೆರಿಕ ವಿರೋಧಿಗಳಾಗಿವೆ. ಭಾನುವಾರ ಇರಾನ್‌ನಲ್ಲಿನ ಪ್ರಮುಖ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದ ಬಳಿಕ ಇದನ್ನು ಚೀನಾ ಖಂಡಿಸಿತ್ತು. ಅಲ್ಲದೇ ರಷ್ಯಾ ಕೂಡ ಮಾನವೀಯ ಸುರಕ್ಷತೆ ಮತ್ತು ಯೋಗಕ್ಷೇಮದೊಂದಿಗೆ ಅಮೆರಿಕ ಆಟವಾಡುತ್ತಿದೆ ಎಂದು ಆರೋಪಿಸಿದೆ.
ಚೀನಾ ಮತ್ತು ರಷ್ಯಾ ನೇರವಾಗಿ ಇರಾನ್ ಮತ್ತು ಇಸ್ರೇಲ್ ಯುದ್ಧದಲ್ಲಿ ಭಾಗಿಯಾಗುವ ಸಾಧ್ಯತೆ ಇಲ್ಲ. ಯಾಕೆಂದರೆ ಟ್ರಂಪ್ ಆಡಳಿತದಲ್ಲಿ ಅಮೆರಿಕದೊಂದಿಗಿನ ಸಂಬಂಧಕ್ಕೆ ಅಪಾಯವಾಗಲು ರಷ್ಯಾ ಬಯಸುವುದಿಲ್ಲ ಹಾಗೂ ಮಧ್ಯಪ್ರಾಚ್ಯ ಸಂಘರ್ಷಗಳಲ್ಲಿ ನೇರವಾಗಿ ಭಾಗಿಯಾಗಲು ಚೀನಾಕ್ಕೂ ಕೂಡ ಆಸಕ್ತಿ ಇಲ್ಲ ಎನ್ನುತ್ತಾರೆ ವಿಮರ್ಶಕರು.
ಇದನ್ನೂ ಓದಿ: Israel-Iran Conflict: ಇರಾನಿನ 6 ವಾಯು ನೆಲೆಗಳ ಮೇಲೆ ಇಸ್ರೇಲ್ ದಾಳಿ; 15 ಯುದ್ಧ ವಿಮಾನಗಳು ಧ್ವಂಸ, ವಿಡಿಯೋ ನೋಡಿ
ಇನ್ನು ಇಸ್ರೇಲ್ ಜತೆಗೆ ಅಮೆರಿಕ ನಿಂತಿರುವುದು ಮಾತ್ರವಲ್ಲ ಜಿ7ನ ಎಲ್ಲ ಏಳು ರಾಷ್ಟ್ರಗಳು ಕೂಡ ತನ್ನ ಬೆಂಬಲಕ್ಕೆ ಇದೆ ಎಂದಿದೆ. ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಉಂಟಾಗುತ್ತಿರುವುದು ಇರಾನ್ ನಿಂದಲೇ ಎನ್ನುವ ಆರೋಪವಿದೆ. ಹೀಗಾಗಿ ಜಿ7 ರಾಷ್ಟ್ರಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್ ಮತ್ತು ಅಮೆರಿಕ ಇಸ್ರೇಲ್ ಜತೆಗೆ ನಿಲ್ಲುವುದು ಬಹುತೇಕ ಖಚಿತ.