ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಾಯುಪ್ರದೇಶ ಮುಚ್ಚಿದ ಇರಾನ್: ಇಂಡಿಗೊ, ಏರ್ ಇಂಡಿಯಾ ಸೇರಿ ಹಲವು ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅಡ್ಡಿ

Iran shuts airspace: ಇರಾನ್ ತನ್ನ ವಾಯುಪ್ರದೇಶವನ್ನು ಅಚಾನಕ್ ಮುಚ್ಚಿದ ಹಿನ್ನೆಲೆಯಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳಾದ ಇಂಡಿಗೊ, ಏರ್ ಇಂಡಿಯಾ ಮತ್ತು ಸ್ಪೈಸ್‍ಜೆಟ್‍ಗಳ ಕೆಲವು ಅಂತಾರಾಷ್ಟ್ರೀಯ ವಿಮಾನ ಹಾರಾಟಗಳಿಗೆ ಅಡ್ಡಿ ಉಂಟಾಗಿದೆ. ಇರಾನ್‌ನಲ್ಲಿ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳು ಹಾಗೂ ಅಮೆರಿಕದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ವಾಯುಪ್ರದೇಶ ಮುಚ್ಚಿದ ಇರಾನ್: ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅಡ್ಡಿ

ಇಂಡಿಗೊ, ಏರ್ ಇಂಡಿಯಾ, ಸ್ಪೈಸ್‍ಜೆಟ್ ವಿಮಾನ ಹಾರಾಟಕ್ಕೆ ಅಡ್ಡಿ -

Priyanka P
Priyanka P Jan 15, 2026 12:10 PM

ನವದೆಹಲಿ: ಇರಾನ್ ದೇಶವು ತನ್ನ ವಾಯುಪ್ರದೇಶವನ್ನು ಮುಚ್ಚಿದ ಪರಿಣಾಮ (Iran shuts airspace) ಏರ್ ಇಂಡಿಯಾ (Air India), ಇಂಡಿಗೊ (IndiGo) ಮತ್ತು ಸ್ಪೈಸ್‌ಜೆಟ್‍ನ (SpiceJet) ಕೆಲವು ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಪರಿಣಾಮ ಬೀರಿದೆ ಎಂದು ತಿಳಿಸಿವೆ. ಇರಾನ್‌ನಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು, ಜೊತೆಗೆ ಅಮೆರಿಕದೊಂದಿಗೆ (America) ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ಏರ್ ಇಂಡಿಯಾ, ತನ್ನ ಪ್ರಯಾಣಿಕರಿಗೆ ಈ ಪ್ರದೇಶದಲ್ಲಿ ಹಾರಾಟ ವಿಳಂಬವಾಗುವ ಸಾಧ್ಯತೆ ಮತ್ತು ಮಾರ್ಗ ಬದಲಾವಣೆ ಸಾಧ್ಯವಾಗದ ಕಡೆ ವಿಮಾನ ರದ್ದತಿ ಬಗ್ಗೆ ತಿಳಿಸಿದೆ.

ಪ್ರತಿಭಟನೆಯಿಂದ ಕಂಗೆಟ್ಟ ಇರಾನ್‌ಗೆ ಮತ್ತೊಂದು ಸವಾಲು, ಅಮೆರಿಕದಿಂದ ಸುಂಕದ ಬರೆ, ಭಾರತಕ್ಕೂ ಬೀಳಲಿದೆ ಭಾರಿ ಹೊರೆ

ಏರ್ ಇಂಡಿಯಾ ಹೇಳಿಕೆಯಂತೆ, ಇರಾನ್‌ನಲ್ಲಿ ಉದ್ಭವಿಸಿರುವ ಪರಿಸ್ಥಿತಿ ಮತ್ತು ಅದರ ಪರಿಣಾಮವಾಗಿ ವಾಯುಪ್ರದೇಶವನ್ನು ಮುಚ್ಚಿರುವ ಹಿನ್ನೆಲೆಯಲ್ಲಿ, ನಮ್ಮ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆ ಪ್ರದೇಶದ ಮೇಲೆ ಸಂಚರಿಸುವ ಏರ್ ಇಂಡಿಯಾ ವಿಮಾನಗಳು ಇದೀಗ ಪರ್ಯಾಯ ಮಾರ್ಗಗಳನ್ನು ಬಳಸುತ್ತಿವೆ. ಇದರಿಂದ ಕೆಲ ವಿಮಾನಗಳಿಗೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಏರ್ ಇಂಡಿಯಾ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ತಮ್ಮ ವಿಮಾನಗಳ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವಂತೆ ಸಲಹೆ ನೀಡಿದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಸುರಕ್ಷತೆಯು ಮೊದಲ ಆದ್ಯತೆಯಾಗಿದೆ ಎಂದು ಅದು ಹೇಳಿದೆ.

ಏರ್ ಇಂಡಿಯಾ ಟ್ವೀಟ್:



ಗುರುವಾರ ಬೆಳಗ್ಗೆ ಪ್ರಕಟಿಸಿದ ಹೇಳಿಕೆಯಲ್ಲಿ, ಇರಾನ್ ದೇಶವು ಅಚಾನಕ್ ಆಗಿ ತನ್ನ ವಾಯುಪ್ರದೇಶವನ್ನು ಮುಚ್ಚಿದ ಕಾರಣ ತನ್ನ ಕೆಲವು ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಪರಿಣಾಮ ಬೀರಿದೆ ಎಂದು ಇಂಡಿಗೋ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.

ನಮ್ಮ ತಂಡಗಳು ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಗ್ರಾಹಕರಿಗೆ ಸಾಧ್ಯವಾದಷ್ಟು ಉತ್ತಮ ಪರ್ಯಾಯಗಳನ್ನು ನೀಡುವ ಮೂಲಕ ಬೆಂಬಲ ಒದಗಿಸಲು ನಮ್ಮ ತಂಡಗಳು ಸಾಕಷ್ಟು ಶ್ರಮಪಟ್ಟು ಕಾರ್ಯನಿರ್ವಹಿಸುತ್ತಿವೆ ಎಂದು ಅದು ಹೇಳಿದೆ.

ಏರ್ ಇಂಡಿಯಾ ಟ್ವೀಟ್:



ಈ ಬೆಳವಣಿಗೆ ನಮ್ಮ ನಿಯಂತ್ರಣಕ್ಕೆ ಮೀರಿದ್ದಾಗಿದ್ದು, ಇದರಿಂದ ಪ್ರಯಾಣ ಯೋಜನೆಗಳಿಗೆ ಉಂಟಾಗಿರುವ ಅಡಚಣೆಗೆ ನಾವು ವಿಷಾದಿಸುತ್ತೇವೆ. ನಿಮ್ಮ ವಿಮಾನ ಪ್ರಯಾಣದ ಮೇಲೆ ಪರಿಣಾಮ ಬೀರಿದರೆ, ನಿಮ್ಮ ಆದ್ಯತೆಯ ಪ್ರಕಾರ- ಪರಿಶೀಲಿಸಲು ಅಥವಾ ಮರುಪಾವತಿ (ರಿಫಂಡ್) ಪಡೆಯಲು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ನಾವು ನಿಮಗೆ ವಿನಂತಿಸುತ್ತೇವೆ, ಎಂದು ಇಂಡಿಗೋ ತಿಳಿಸಿದೆ.

ಸ್ಪೈಸ್‌ಜೆಟ್ ಕೂಡ ಇದೇ ರೀತಿಯ ಪ್ರಯಾಣ ನವೀಕರಣವನ್ನು ಹಂಚಿಕೊಂಡಿದ್ದು, ಇರಾನ್‌ನಲ್ಲಿ ವಾಯುಪ್ರದೇಶ ಮುಚ್ಚಿರುವುದು ವಿಮಾನಗಳ ಹಾರಾಟಕ್ಕೆ ಪರಿಣಾಮ ಬೀರಿದೆ ಎಂದು ಹೇಳಿದೆ.

ಸ್ಪೈಸ್‌ಜೆಟ್ ಟ್ವೀಟ್:



ವಾಯುಪ್ರದೇಶವನ್ನು ಮುಚ್ಚಿದ ಇರಾನ್

ಯಾವುದೇ ಸ್ಪಷ್ಟನೆ ನೀಡದೆ ವಾಣಿಜ್ಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವಂತೆ ಇರಾನ್ ಆದೇಶಿಸಿದೆ. ದೇಶವ್ಯಾಪಿ ಪ್ರತಿಭಟನೆಗಳ ಮೇಲೆ ಟೆಹ್ರಾನ್ ನಡೆಸುತ್ತಿರುವ ಕಠಿಣ ಕ್ರಮದ ಹಿನ್ನೆಲೆಯಲ್ಲಿ ಅಮೆರಿಕದ ಜೊತೆ ಉದ್ವಿಗ್ನತೆ ಹೆಚ್ಚಾಗಿ ಮುಂದುವರಿದಿರುವ ಸಂದರ್ಭದಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಪೈಲಟ್‌ಗಳಿಗೆ ನೀಡಿದ ಸೂಚನೆಯಲ್ಲಿ, ವಾಯುಪ್ರದೇಶ ಮುಚ್ಚುವಿಕೆಯು ಸ್ಥಳೀಯ ಸಮಯ ಬೆಳಗ್ಗೆ 7:30ರ ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಈ ಹಿಂದೆ ಜೂನ್‌ನಲ್ಲಿ ಇಸ್ರೇಲ್ ವಿರುದ್ಧದ 12 ದಿನಗಳ ಯುದ್ಧದ ಸಮಯದಲ್ಲಿ ಮತ್ತು ಇಸ್ರೇಲ್-ಹಮಾಸ್ ಯುದ್ಧದ ಸಮಯದಲ್ಲಿ ಇಸ್ರೇಲ್ ಜೊತೆ ಗುಂಡಿನ ಚಕಮಕಿ ನಡೆದಾಗ ಇರಾನ್ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು.

ಹಲವಾರು ವಿಮಾನಯಾನ ಸಂಸ್ಥೆಗಳು ಈಗಾಗಲೇ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಇರಾನಿನ ವಾಯುಪ್ರದೇಶವನ್ನು ತಪ್ಪಿಸುತ್ತಿವೆ ಎಂದು ಸಂಘರ್ಷ ಪ್ರದೇಶಗಳು ಮತ್ತು ವಾಯು ಪ್ರಯಾಣದ ಕುರಿತು ಮಾಹಿತಿಯನ್ನು ಒದಗಿಸುವ ಸೇಫ್‌ಏರ್‌ಸ್ಪೇಸ್ ವೆಬ್‌ಸೈಟ್ ಹೇಳಿದೆ.