ಪ್ರತಿಭಟನೆ ಪೀಡಿತ ಇರಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯ ನಾಳೆ ಪ್ರಾರಂಭ
India evacuation from Iran: ಪ್ರತಿಭಟನೆಯಿಂದ ನಲುಗಿ ಹೋಗಿರುವ ಇರಾನ್‌ನಲ್ಲಿ ವಾಸಿಸುತ್ತಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯ ನಾಳೆ ಪ್ರಾರಂಭವಾಗಲಿದೆ. ಭಾರತೀಯರಿಗೆ ಸುರಕ್ಷಿತವಾಗಿ ದೇಶಕ್ಕೆ ಮರಳಲು ಭಾರತೀಯ ವಿದೇಶಾಂಗ ಇಲಾಖೆ ಮತ್ತು ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಚಿತ್ರಣ -
ನವದೆಹಲಿ, ಜ. 15: ಇರಾನ್‌ನಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಅಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಕಳವಳ ಹೆಚ್ಚುತ್ತಿದೆ. ಇದರಿಂದ ಭಾರತ ಸರ್ಕಾರವು (Indian Government) ಇರಾನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ತುರ್ತು ಯೋಜನೆಗಳನ್ನು ಸಿದ್ಧಪಡಿಸುತ್ತಿದೆ. ಸ್ಥಳಾಂತರಗೊಳ್ಳುವವರ ಮೊದಲ ಬ್ಯಾಚ್ ನಾಳೆ ಹೊರಡುವ ಸಾಧ್ಯತೆಯಿದೆ (India evacuation from Iran) ಎಂದು ಮೂಲಗಳು ತಿಳಿಸಿವೆ.
ಇರಾನ್‌ನಲ್ಲಿ ಉಂಟಾಗುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಅನುಕೂಲವಾಗುವಂತೆ ವಿದೇಶಾಂಗ ಸಚಿವಾಲಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಆ ದೇಶದ ವಿವಿಧ ಭಾಗಗಳಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಯಾರು ಭಾರತಕ್ಕೆ ಮರಳಲು ಇಚ್ಛಿಸುತ್ತಿದ್ದಾರೆ ಎಂಬುದನ್ನು ಅಂದಾಜಿಸುವ ಕಾರ್ಯವನ್ನು ಆರಂಭಿಸಿದೆ.
ಇರಾನ್ ಬಿಕ್ಕಟ್ಟಿಂದ ಅಮೆರಿಕಕ್ಕೇನು ಲಾಭ?
ಹಲವಾರು ಪ್ರದೇಶಗಳಲ್ಲಿ ಇಂಟರ್‌ನೆಟ್ ಸೇವೆಗಳು ಸ್ಥಗಿತಗೊಂಡಿರುವುದರಿಂದ ಮತ್ತು ದೂರವಾಣಿ ಸಂಪರ್ಕಗಳು ಮಧ್ಯಂತರವಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ, ಈ ಪ್ರಕ್ರಿಯೆಯನ್ನು ಭೌತಿಕವಾಗಿ (ನೇರ ಸಂಪರ್ಕದ ಮೂಲಕ) ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇಂಟರ್‌ನೆಟ್ ಸಂಪರ್ಕ ಲಭ್ಯವಿಲ್ಲದ ಕಾರಣ ಮತ್ತು ದೂರಸಂಪರ್ಕ ವಿಶ್ವಾಸಾರ್ಹವಲ್ಲದ ಕಾರಣ ವಿದ್ಯಾರ್ಥಿಗಳನ್ನು ಗುರುತಿಸಲು ಮತ್ತು ವಿವರಗಳನ್ನು ಸಂಗ್ರಹಿಸಲು ರಾಯಭಾರ ಕಚೇರಿಯ ಅಧಿಕಾರಿಗಳು ಸ್ಥಳದಲ್ಲೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭಾರತೀಯ ಪ್ರಜೆಗಳು ಭಾರತಕ್ಕೆ ಸುರಕ್ಷಿತವಾಗಿ ಮರಳಲು ಅನುಕೂಲವಾಗುವಂತೆ ಭದ್ರತಾ ಪರಿಸ್ಥಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಕಳವಳ
ಇರಾನ್‌ನಾದ್ಯಂತ ವ್ಯಾಪಕ ಪ್ರತಿಭಟನೆಗಳ ನಡುವೆ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಕಳವಳಗಳು ಹೆಚ್ಚಿವೆ. ಇರಾನಿನ ರಿಯಾಲ್‌ನ ಮೌಲ್ಯ ತೀವ್ರ ಕುಸಿತದ ನಂತರ ಕಳೆದ ತಿಂಗಳ ಕೊನೆಯಲ್ಲಿ ಅಸಮಾಧಾನ ಸ್ಫೋಟಗೊಳ್ಳಲು ಪ್ರಾರಂಭವಾಯಿತು. ಬಳಿಕ ಈ ಪ್ರತಿಭಟನೆ ದೇಶದ ಎಲ್ಲ 31 ಪ್ರಾಂತ್ಯಗಳಿಗೆ ವ್ಯಾಪಿಸಿದೆ. ಇದೀಗ ಈ ಪ್ರತಿಭಟನೆಗಳು ವ್ಯಾಪಕ ರಾಜಕೀಯ ಆಂದೋಲನದ ರೂಪವನ್ನು ಪಡೆದಿವೆ. ಮಾನವ ಹಕ್ಕುಗಳ ಸಂಘಟನೆಗಳ ಪ್ರಕಾರ, ದೇಶವ್ಯಾಪಿ ಪ್ರತಿಭಟನೆಗಳ ಮೇಲೆ ನಡೆದ ದಮನ ಕ್ರಮಗಳಲ್ಲಿ ಕನಿಷ್ಠ 3,428 ಜನರು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ತೀವ್ರವಾಗಿ ಹದಗೆಟ್ಟಿದೆ ಎಂದು ವರದಿಯಾಗಿದೆ.
ಅಧಿಕೃತ ಅಂದಾಜಿನ ಪ್ರಕಾರ, ವಿದ್ಯಾರ್ಥಿಗಳು ಸೇರಿದಂತೆ 10,000ಕ್ಕೂ ಹೆಚ್ಚು ಭಾರತೀಯರು ಪ್ರಸ್ತುತ ಇರಾನ್‌ನಲ್ಲಿ ವಾಸಿಸುತ್ತಿದ್ದಾರೆ. ಭಾರತವು ದೇಶದಲ್ಲಿರುವ ತನ್ನ ಎಲ್ಲ ಪ್ರಜೆಗಳಿಗೆ ಲಭ್ಯವಿರುವ ಮಾರ್ಗಗಳ ಮೂಲಕ ಹೊರಹೋಗುವಂತೆ ಮತ್ತು ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣವನ್ನು ಮಾಡದಂತೆ ಸೂಚಿಸಿದೆ.
ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿದ್ಯಾರ್ಥಿಗಳು, ಯಾತ್ರಿಕರು, ಉದ್ಯಮಿಗಳು ಮತ್ತು ಪ್ರವಾಸಿಗರು ವಾಣಿಜ್ಯ ವಿಮಾನಗಳು ಅಥವಾ ಲಭ್ಯವಿರುವ ಯಾವುದೇ ಸಾರಿಗೆ ಆಯ್ಕೆಗಳನ್ನು ಬಳಸಿಕೊಂಡು ಇರಾನ್‌ನಿಂದ ನಿರ್ಗಮಿಸಲು ಆಗ್ರಹಿಸಿದೆ.
ಇರಾನ್‌ನಲ್ಲಿ ಇರುವ ಎಲ್ಲ ಭಾರತೀಯ ನಾಗರಿಕರು ತಮ್ಮ ಪ್ರಯಾಣ ಮತ್ತು ವಲಸೆ ಸಂಬಂಧ ದಾಖಲೆಗಳನ್ನು, ಪಾದ್‌ಪೋರ್ಟ್ ಮತ್ತು ಗುರುತಿನ ಚೀಟಿಗಳು ಸೇರಿ ದಾಖಲೆಗಳನ್ನು ಸಿದ್ಧವಾಗಿರಿಸಿಕೊಂಡಿರಬೇಕು ಎಂದು ಸೂಚಿಸಲಾಗಿದೆ. ಈ ಸಂಬಂಧ ಯಾವುದೇ ಸಹಾಯಕ್ಕಾಗಿ ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಲು ಸಲಹೆ ನೀಡಲಾಗಿದೆ ಎಂದು ಸೂಚನೆಯ್ಯಲಿ ಹೇಳಿದೆ.