ಇಸ್ರೇಲ್–ಇರಾನ್ ಯುದ್ಧ ಭೀತಿ; ಭಾರತೀಯ ನಾಗರಿಕರಿಗೆ ತುರ್ತು ಎಚ್ಚರಿಕೆ ರವಾನಿಸಿದ ಕೇಂದ್ರ
ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಯುದ್ಧ ಪರಿಸ್ಥಿತಿಗೆ ತಿರುಗಿದೆ. ಇಸ್ರೇಲ್ ಮತ್ತು ಅಮೆರಿಕ ಸೇನೆ ಇರಾನ್ ರಾಜಧಾನಿ ಟೆಹರಾನ್‌ನ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಸರಣಿ ಸ್ಫೋಟಗಳಿಂದ ಮಧ್ಯ ಪ್ರಾಚ್ಯದಲ್ಲಿ ಭದ್ರತಾ ಪರಿಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ನಾಗರಿಕರಿಗೆ ಸಲಹೆ ನೀಡಿದೆ. ಇರಾನ್‌ನಲ್ಲಿರುವ ಭಾರತೀಯರು ಟೆಹರಾನ್ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಿದೆ. ಇದರ ಜತೆಗೆ ಇರಾನ್ ಅಮೆರಿಕಾ ಸೇನಾ ನೆಲೆಗಳ ಮೇಲೂ ದಾಳಿ ನಡೆಸಿದ ವರದಿಗಳು ಲಭ್ಯವಾಗಿದ್ದು, ಗಲ್ಫ್ ರಾಷ್ಟ್ರಗಳು ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ವಾಯುಗಡಿಯನ್ನು ತಾತ್ಕಾಲಿಕವಾಗಿ ಮುಚ್ಚಿವೆ.
ಇರಾನ್ ಯುದ್ಧ -
ನವದೆಹಲಿ, ಫೆ. 28: ಇಸ್ರೇಲ್ (Israel) ಮತ್ತು ಇರಾನ್ (Iran) ಮಧ್ಯೆ ಯುದ್ಧ ಕಾರ್ಮೋಡ ಕವಿದಿದೆ. ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಸೇನಾ ಶನಿವಾರ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ರಾಜಧಾನಿ ಟೆಹರಾನ್ ನಗರದಲ್ಲಿ ಹಲವು ಸ್ಥಳಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿರುವ ವರದಿಗಳು ಲಭ್ಯವಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹಾಗೂ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಭವನಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಟೆಹರಾನ್ ನಗರದ ವಿವಿಧ ಭಾಗಗಳಲ್ಲಿ ಭಾರಿ ಸದ್ದಿನೊಂದಿಗೆ ಸ್ಫೋಟಗಳು ಕೇಳಿ ಬಂದಿದ್ದು, ಕ್ಷಿಪಣಿ ದಾಳಿಯಿಂದ ಜನರಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಯುದ್ಧ ಪರಿಸ್ಥಿತಿಗೆ ತಿರುಗಿರುವ ಹಿನ್ನೆಲೆಯಲ್ಲಿ ಮಧ್ಯ ಪ್ರಾಚ್ಯದಲ್ಲಿ ಭದ್ರತಾ ಪರಿಸ್ಥಿತಿ ಗಂಭೀರವಾಗಿದೆ.
ಇರಾನ್ ಸೇನೆ ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಸ್ರೇಲ್ ಸ್ಪಷ್ಟನೆ ನೀಡಿದೆ. ಈ ಮಧ್ಯೆ ಇಸ್ರೇಲ್‌ನಲ್ಲಿರುವ ಭಾರತೀಯ ನಾಗರಿಕರಿಗೆ ಭಾರತೀಯ ರಾಯಭಾರ ಕಚೇರಿಯ ಗಂಭೀರ ಎಚ್ಚರಿಕೆಯನ್ನು ನೀಡಿದೆ. ಇರಾನ್‌ಗೆ ಪ್ರಯಾಣಿಸದಂತೆ ಸರ್ಕಾರವು ಭಾರತೀಯ ನಾಗರಿಕರಿಗೆ ಸಲಹೆ ನೀಡಿದ್ದು, ಅಧಿಕಾರಿಗಳು ಇರಾನ್‌ನಲ್ಲಿರುವ ಭಾರತೀಯರಿಗೆ ಜಾಗರೂಕರಾಗಿರಲು ಮತ್ತು ಟೆಹರಾನ್‌ನಲ್ಲಿರುವ ರಾಯಭಾರ ಕಚೇರಿಯೊಂದಿಗೆ (Embassy) ಸಂಪರ್ಕದಲ್ಲಿರಲು ಸೂಚಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ಮೂಲಕ ತಿಳಿಸಿದೆ.
ತುರ್ತು ಸಂಪರ್ಕಕ್ಕೆ ಸಹಾಯವಾಣಿ
ಭಾರತೀಯ ರಾಯಭಾರ ಕಚೇರಿ ಇರಾನ್ ನಲ್ಲಿರುವ ಭಾರತೀಯ ನಾಗರಿಕರಿಗೆ ತುರ್ತು ಸಂಪರ್ಕ ಸಂಖ್ಯೆಗಳನ್ನೂ ನೀಡಿದ್ದು, ಯಾವುದೇ ತರಹದ ಸಮಸ್ಯೆ ಎದುರಾದಲ್ಲಿ ದೂರವಾಣಿ: +972-54-7520711 ಹಾಗೂ ಇಮೇಲ್: cons1.telaviv@mea.gov.in ಸಂಪರ್ಕಿಸಬಹುದಾಗಿದೆ.
ತುರ್ತು ಸಂದೇಶದ ಎಕ್ಸ್ ಪೋಸ್ಟ್:
ADVISORY
— India in Israel (@indemtel) February 28, 2026
In view of the prevailing security situation in the region, all Indian nationals in Israel are advised to exercise utmost caution and remain vigilant at all times.
2. Indian nationals are strongly advised to strictly adhere to the safety guidelines and instructions… pic.twitter.com/SOvzAdLMwn
ಇರಾನ್‌ಗೆ ಪ್ರಯಾಣಿಸದಂತೆ ಕಟ್ಟು ನಿಟ್ಟಿನ ಸೂಚನೆ
ಸದ್ಯದ ಬೆಳವಣಿಗೆಯ ಗಮನದಲ್ಲಿಟ್ಟುಕೊಂಡು ಯಾರೂ ಇರಾನ್ ಪ್ರವಾಸ ಮಾಡದಂತೆ ವಿದೇಶಾಂಗ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮುಂದಿನ ಸೂಚನೆ ಬರುವವರೆಗೂ ಯಾರೂ ಇರಾನ್ ದೇಶನಕ್ಕೆ ಪ್ರಯಾಣ ಮಾಡದಂತೆ ಸೂಚನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಅನಿವಾರ್ಯ ಅಲ್ಲದ ಪ್ರಯಾಣ ಮಾಡಬೇಡಿ ಎಂದು ಸಲಹೆಯಲ್ಲಿ ಉಲ್ಲೇಖ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಸೂಚನೆ ನೀಡಲಾಗಿದೆ.
ಟೆಹ್ರಾನ್ ಮೇಲಿನ ದಾಳಿಯ ನಂತರ ಇಸ್ರೇಲ್ ಕಡೆಗೆ ಹಾರಿದ ಇರಾನ್‍ನ ಕ್ಷಿಪಣಿಗಳು
ಇನ್ನೂ ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತಾರಕಕ್ಕೇರಿರುವ ನಡುವೆಯೇ, ಇರಾನ್ ಅಮೆರಿಕದ ಹಲವು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದ ಘಟನೆ ನಡೆದಿದೆ. ಕತಾರ್‌ನ ಅಲ್-ಉದೈದ್ ವಾಯುನೆಲೆ, ಕುವೈತ್‌ನ ಅಲ್-ಸೇಲಂ ವಾಯುನೆಲೆ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಲ್-ದಫ್ರಾ ವಾಯುನೆಲೆ ಹಾಗೂ ಬಹ್ರೇನ್‌ನ ನೌಕಾನೆಲೆ ಮೇಲೆ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಇದೇ ವೇಳೆ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಸ್ಫೋಟಗಳು ಸಂಭವಿಸಿದ ಮಾಹಿತಿ ಲಭ್ಯವಾಗಿದೆ. ಇರಾನ್ ಕ್ಷಿಪಣಿ ದಾಳಿಯ ಬೆನ್ನಲ್ಲೇ ಗಲ್ಫ್ ರಾಷ್ಟ್ರಗಳು ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ವಾಯುಗಡಿಯನ್ನು ತಾತ್ಕಾಲಿಕವಾಗಿ ಮುಚ್ಚಿವೆ.