Rangaswamy Mookanahalli Column: ಬೆಂಬಲಿಸುವುದು ಎಂದರೆ ಕಷ್ಟವಿಲ್ಲದಂತೆ ಮಾಡುವುದಲ್ಲ!
ನೀಟ್ ಪರೀಕ್ಷೆಯಲ್ಲಿ ಆದ ಅಕ್ರಮ ಖಂಡಿತ ಒಪ್ಪುವಂತಹದ್ದು, ಒಪ್ಪಕ್ಕೆ ಇಟ್ಟುಕೊಳ್ಳುವಂತದ್ದು ಅಲ್ಲ. ಯಾವ ಪಕ್ಷವಾದರೂ ತಪ್ಪನ್ನು ತಪ್ಪು ಎನ್ನಬೇಕು. ಆದರೆ ಅದನ್ನು ವಿರೋಧಿಸುವರ ಮನಸ್ಥಿತಿ ನೋಡಿ. ಅದು ಆಶ್ಚರ್ಯ ಮತ್ತು ಭಯ ಎರಡನ್ನೂ ಉಂಟು ಮಾಡಿತು. ವ್ಯವಸ್ಥೆಯಲ್ಲಿ ತಪ್ಪಾದಾಗ ಅದರ ವಿರುದ್ಧ ಹೋರಾಟ ಮಾಡುವುದು ತಪ್ಪಲ್ಲ.
-
ವಿಶ್ವರಂಗ
ನಾವು ನಮ್ಮ ಮಕ್ಕಳಿಗೆ ಬಿಟ್ಟು ಹೋಗುವ ಅತ್ಯಂತ ಬೆಲೆ ಬಾಳುವ ಆಸ್ತಿ ಮನೆಯಲ್ಲ, ಬ್ಯಾಂಕ್ ಬ್ಯಾಲೆ ಕೂಡ ಅಲ್ಲ. ಅದು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳುವ ಮನಸ್ಥಿತಿ. ಹೌದು, ಈ ಮನಸ್ಥಿತಿಯನ್ನು ಮಕ್ಕಳಿಗೆ ಹೇಗೆ ಕಲಿಸುವುದು? ಇವತ್ತಿನ ಮಕ್ಕಳು ತಮಗೆ ಸಿಕ್ಕಿರುವ ಎಲ್ಲಾ ಸವಲತ್ತುಗಳಿಗೆ ನಾವು ಹಕ್ಕುದಾರರು ಎನ್ನುವಂತೆ ವರ್ತಿಸುತ್ತಿದ್ದಾರೆ.
ನಮ್ಮ ತಲೆಮಾರಿನ ಜನ ಈ ಭೂಮಿಗೆ ಬಂದಾಗ ಇದ್ದದ್ದು ಪಾವರ್ಟಿ, ಅಂದರೆ ಬಡತನ. ಆಗ ಹಣವಿಲ್ಲ ಎನ್ನುವ ಒಂದು ಸಮಸ್ಯೆ ಬಹಳ ದೊಡ್ಡದಾಗಿತ್ತು. ಆ ಕೊರತೆಯನ್ನು ನೀಗಿಸಿಕೊಳ್ಳಲು ನಾವೆ ಶ್ರಮ ಪಟ್ಟೆವು. ನಮ್ಮ ಮುಂದೆ ಒಂದು ಗುರಿಯಿತ್ತು. ಹೆತ್ತವರನ್ನು ಚನ್ನಾಗಿ ನೋಡಿಕೊಳ್ಳ ಬೇಕು, ನಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು, ಸಮಾಜದಲ್ಲಿ ನಮ್ಮ ಗುರುತು ಉಳಿದುಕೊಳ್ಳಬೇಕು, ಹೀಗೆ ಹಲವಾರು ಆಸೆಗಳು ಇದ್ದವು. ಅದಕ್ಕಾಗಿ ದುಡಿದೆವು. ದುಡಿಯುತ್ತಿದ್ದೇವೆ.
ಇವತ್ತಿನ ಮಕ್ಕಳು ಹುಟ್ಟಿರುವ ಸಮಯ ಪ್ರಾಸ್ಪೆರಿಟಿಯದ್ದು, ಕೊರತೆಯಿಲ್ಲದ ಸಮಯದಲ್ಲಿ ಹುಟ್ಟಿದ್ದಾರೆ! ಇಲ್ಲಿರುವುದೆ ನಮಗಾಗೇ ಇರುವುದು, ಮಜಾ ಮಾಡಲೇ ನಾವು ಬಂದವರು ಎನ್ನುವ ಮನೋಭಾವ ಅವರದು. ಹೀಗಾಗಿ ಅವರಿಗೆ ಕೊರತೆ ಎಂದರೇನು ಎನ್ನುವುದೇ ಗೊತ್ತಿಲ್ಲ. ಕೊರತೆ ಯಿಲ್ಲದ ಮೇಲೆ ಬದುಕಿಗೊಂದು ಉದ್ದೇಶವಿರಬೇಕು. ಇವತ್ತಿಗೆ ಅದು ಕೂಡ ಇಲ್ಲ.
ಇದನ್ನೂ ಓದಿ: Rangaswamy Mookanahally Column: ಒಡೆದು ಆಳುವ ಮಂತ್ರಕ್ಕೆ ಎಂದಿಗೂ ಸೋಲಿಲ್ಲ!
ಅವರ ಮುಂದೆ ಏನನ್ನಾದರೂ ಮಾಡಿ ಮುಗಿಸಬೇಕು ಎನ್ನುವ ಸೆನ್ಸ್ ಆಫ್ ಅರ್ಜೆನ್ಸಿ ಇಲ್ಲ. ಮಾಡಬೇಕೆನ್ನುವ ಹಸಿವು, ಹಂಗರ್ ಕೂಡ ಇಲ್ಲ. ಬದುಕಿಗೊಂದು ಗುರಿಯಿಲ್ಲ, ಮೋಟಿವ್ ಇಲ್ಲದ ಮೇಲೆ ಬೇಸರ ಎನ್ನುವುದು ಕಟ್ಟಿಟ್ಟ ಬುತ್ತಿ. ಕಣ್ಣು ಬಿಟ್ಟಾಗಿನಿಂದ ಕಾಣುತ್ತಿರುವ, ಅನುಭವಿಸು ತ್ತಿರುವ ಸವಲತ್ತು ಅವರಿಗೆ ನಾರ್ಮಲ್ ಆಗಿ ಹೋಗಿದೆ. ಹೀಗಾಗಿ ಅವರಿಗೆ ಹೊಸ ಕಿಕ್ ಬೇಕು.
ಅವರನ್ನು ಉದ್ರೇಕಿಸುವ, ಪ್ರೇರೇಪಿಸುವ, ಜೋಷ್ ಹೆಚ್ಚಿಸುವ ಏನಾದರೂ ವಿಚಾರ ಬೇಕು. ಸಮಸ್ಯೆ ಇಲ್ಲದ ಬದುಕಿನಲ್ಲಿ ಹೊಸತನ ಬೇಕು. ಅದು ಸಮಸ್ಯೆಯಾದರೂ ಸರಿಯೇ, ಅದರಿಂದ ಬದುಕು ಕಮರಿದರು ಸರಿಯೇ, ಅದರ ಬಗ್ಗೆ ಅವರಿಗೆ ಯೋಚನೆಯಿಲ್ಲ. ಅವರಿಗೆ ಬೇಕಿರುವುದು ಅಡ್ರಿನಲ್ ರಶ್ ಅಷ್ಟೇ. ಇವತ್ತಿನ ರಾಜಕೀಯ ಪರಿಸ್ಥಿತಿ ಹೇಗಿದೆಯೆಂದರೆ, ಹೇಗಾದರೂ ಸರಿಯೇ ಅಧಿಕಾರ ದಲ್ಲಿರುವುದು ಮುಖ್ಯ ಎನ್ನುವಂತಾಗಿದೆ. ಹೀಗಿರುವಾಗ ಸುಲಭವಾಗಿ ಅವರ ಕಣ್ಣಿಗೆ ಬಿದ್ದಿರುವುದು ಇದೇ ಯುವ ಜನತೆ! ಈ ಮಕ್ಕಳಿಗೆ ಬೇಕಿರುವುದು ಅಡ್ರಿನಲ್ ರಶ್ ಮಾತ್ರ. ಮಿಕ್ಕೆಲ್ಲವೂ ಅವರಿಗೆ ಅವರ ಪರಿಶ್ರಮವಿಲ್ಲದೆ ಸಿಕ್ಕಿದೆ ಎನ್ನುವುದು ಕೂಡ ಅವರಿಗೆ ಗೊತ್ತಿದೆ.
ನೀಟ್ ಪರೀಕ್ಷೆಯಲ್ಲಿ ಆದ ಅಕ್ರಮ ಖಂಡಿತ ಒಪ್ಪುವಂತಹದ್ದು, ಒಪ್ಪಕ್ಕೆ ಇಟ್ಟುಕೊಳ್ಳುವಂತದ್ದು ಅಲ್ಲ. ಯಾವ ಪಕ್ಷವಾದರೂ ತಪ್ಪನ್ನು ತಪ್ಪು ಎನ್ನಬೇಕು. ಆದರೆ ಅದನ್ನು ವಿರೋಧಿಸುವರ ಮನಸ್ಥಿತಿ ನೋಡಿ. ಅದು ಆಶ್ಚರ್ಯ ಮತ್ತು ಭಯ ಎರಡನ್ನೂ ಉಂಟು ಮಾಡಿತು. ವ್ಯವಸ್ಥೆಯಲ್ಲಿ ತಪ್ಪಾದಾಗ ಅದರ ವಿರುದ್ಧ ಹೋರಾಟ ಮಾಡುವುದು ತಪ್ಪಲ್ಲ.
ಇನ್ ಫ್ಯಾಕ್ಟ್ ಅದು ಉತ್ತಮ ಪ್ರಜಾಪ್ರಭುತ್ವದ ಉತ್ತಮ ಲಕ್ಷಣ. ಆದರೆ ಹೋರಾಟದ ಹೆಸರಿನಲ್ಲಿ ವಿಕೃತ ಕಿರುಚಾಟ, ಕೂಗಾಟ, ರಾಜಕೀಯದ ಮಾತುಗಳನ್ನು ಕಂಡಾಗ ಮತ್ತೊಮ್ಮೆ ಈ ದೇಶದ ಯುವ ಜನತೆ, ಜಗತ್ತಿನ ಬಹುತೇಕ ದೇಶದ ಯುವ ಜನತೆಯಂತೆ ಗುರಿಯಿಲ್ಲದವರಿ ದ್ದಾರೆ ಎನ್ನುವುದು ಅರಿವಾಗುತ್ತದೆ. ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಅರಿವು ಕೂಡ ಅವರಿಗಿಲ್ಲ. ಇವತ್ತಿನ ಕೂಗಾಟ, ಕಿರುಚಾಟದಲ್ಲಿ ಗೆದ್ದ ಭಾವನೆಯಲ್ಲಿ ಅವರು ಸಂತೃಪ್ತರು.
ಯಾವುದನ್ನು ನಾವು ಕಷ್ಟಪಟ್ಟು ಗಳಿಸಿಕೊಳ್ಳುವುದಿಲ್ಲ ಅದಕ್ಕೆ ನಾವು ಬೆಲೆ ಕೊಡುವುದಿಲ್ಲ. ಅದು ನಮಗೆ ಸುಲಭವಾಗಿ ಸಿಕ್ಕರೆ ಅದು ನಮ್ಮ ಮನಸ್ಸಿನಲ್ಲಿ ಸ್ಥಿರವಾಗಿ ನೋಂದಣಿ ಆಗುವುದಿಲ್ಲ. ಉದಾಹರಣೆಗೆ ಪ್ರಕೃತಿ ನಮಗೆ ನೀಡಿರುವ ಗಾಳಿ, ಬೆಳಕಿಗೆ ಇನ್ನೂ ಹಣಪಟ್ಟಿ ಹಾಕಿಲ್ಲ. ಹೀಗಾಗಿ ಅವುಗಳನ್ನು ಉಳಿಸಿಕೊಳ್ಳುವ ಬಗ್ಗೆ ಮಾತಾಡಿದರೆ ನಾಲ್ಕು ಜನ ಸೇರುವುದಿಲ್ಲ. ನೀರಿಗೆ ಈಗಾಗಲೇ ನಾವು ಹಣ ಕೊಡುತ್ತಿದ್ದೇವೆ. ಆದರೂ ಅದರ ಬೆಲೆ ಹೆಚ್ಚಿಲ್ಲ.
ಹೀಗಾಗಿ ಅದರ ಬಗ್ಗೆಯೂ ನಮಗೆ ಒಲವಿಲ್ಲ. ಅದೇ ನೆಲದ ವಿಚಾರಕ್ಕೆ ಬನ್ನಿ. ತುಂಡು ಭೂಮಿಗೆ ಚಿನ್ನಕ್ಕಿಂತ ಹೆಚ್ಚಿನ ಬೆಲೆ ಬಂದಿದೆ. ನಾವು ಅದನ್ನು ಹೂಡಿಕೆಯನ್ನಾಗಿ ನೋಡುತ್ತಿದ್ದೇವೆ. ಒಂದು ಸಣ್ಣ ಸೈಟು ಮಾಡಿಕೊಳ್ಳುವುದು ಕಷ್ಟ. ಹೀಗಾಗಿ ಅದು ನಮ್ಮ ಮನಸ್ಸಿನಲ್ಲಿ ನೋಂದಣಿ ಯಾಗುತ್ತದೆ. ಯಾವುದಕ್ಕೆ ದೊಡ್ಡ ಪ್ರಮಾಣದ ಬೆಲೆ ತೆರುತ್ತೇವೆ ಅದನ್ನು ಮನಸ್ಸು ರೆಜಿಸ್ಟರ್ ಮಾಡಿಕೊಳ್ಳುತ್ತದೆ. ಉಳಿದವೆ ಬ್ಯಾಕ್‌ಗ್ರೌಂಡ್ ಮ್ಯೂಸಿಕ್, ಕೇವಲ ಗದ್ದಲ ಅಷ್ಟೇ.
ಇವತ್ತಿನ ಮಕ್ಕಳಿಗೆ ಆಗಿರುವುದು ಕೂಡ ಇದೇ. ನನ್ನ ಗ್ರಾಹಕರೊಬ್ಬರು ತಮ್ಮ ಮಕ್ಕಳಿಗೆ ಮನೆಯನ್ನು ಕಟ್ಟಿಸಿಕೊಟ್ಟಿದ್ದಾರೆ. ಮಕ್ಕಳಿಗೆ ಅದು ಗಿಫ್ಟ್ ರೂಪದಲ್ಲಿ ಬಂದಿದೆ. ಅವಕ್ಕೆ ಸೈಟಿನ ಬೆಲೆ ಗೊತ್ತಿಲ್ಲ, ಮನೆ ಕಟ್ಟಿಸುವಾಗಿನ ಗದ್ದಲ, ಗೋಜಲು ತಿಳಿದಿಲ್ಲ. ಉಡುಗೊರೆ ರೂಪದಲ್ಲಿ ಸಿದ್ಧರೂಪ ದಲ್ಲಿ ಸಿಕ್ಕಿದೆ. ಆ ಮನೆಯಲ್ಲಿ ಎರಡು ತಿಂಗಳೂ ಕೂಡ ಅವರ ಮಗ ವಾಸ ಮಾಡಲಿಲ್ಲ. ನಗರದ ಹೃದಯ ಭಾಗದಿಂದ ದೂರವಿದೆ ಎನ್ನುವುದು ಆತ ಕೊಟ್ಟ ಕಾರಣ!
ಇಲ್ಲಿ ನಾವು ಗಮನಿಸಬೇಕಾದದ್ದು ಎರಡು ಅಂಶ. ನಾವು ಮಕ್ಕಳಿಗೆ ಆಸ್ತಿಯನ್ನು ಉಡುಗೊರೆ ಯನ್ನಾಗಿ ಕೊಟ್ಟಿದ್ದು, ಆ ಮೂಲಕ ಅವರ ಬದುಕಿನ 20 ವರ್ಷದ ಕಂತಿನ ಜೀವನದಿಂದ ಅವರನ್ನು ವಿಮುಕ್ತಿ ಗೊಳಿಸಿದ್ದು. ಇದು ಹೆತ್ತವರ ದೃಷ್ಟಿಯಲ್ಲಿ ಕಾಣುವುದು. ಎರಡನೆಯದು ಹೆತ್ತವರಿಗೆ ಕಾಣದ್ದು. ಹೌದು ನಾವೇನೋ ಮಕ್ಕಳಿಗೆ 20 ವರ್ಷದ ಕಂತಿನ ಜೀವನದಿಂದ ಮುಕ್ತರನ್ನಾಗಿ ಮಾಡಿದೆವು. ಆದರೆ ಅವರಿಗೆ ಸಿಗಬಹುದಾಗಿದ್ದ ಅನುಭವ, ಸೋಲು, ಹತಾಶೆ, ನೋವು ಇವುಗಳಿಂದ ಕೂಡ ಅವರನ್ನು ವಂಚಿತರನ್ನಾಗಿಸಿದೆವು.
ಗಮನಿಸಿ ಈ ಫೀಲಿಂಗ್ ಅವರಿಗೆ ಗೊತ್ತೇ ಇಲ್ಲ. ನೋವು, ಹತಾಶೆ, ಲೋನ್ ಸಿಗದಿzಗ ಆಗುವ ಬೇಸರ, ಕಂತು ಕಟ್ಟುವಾಗ ಉಂಟಾಗುವ ಹಣದ ಕೊರತೆ ಇವುಗಳನ್ನು ಅನುಭವಿಸದೇ ಇರುವ ಕಾರಣ ಅವರಿಗೆ, ಅವರ ಪೋಷಕರು ನೀಡಿದ ಉಡುಗೊರೆಯ ಬೆಲೆಯೇ ಗೊತ್ತಾಗುವುದಿಲ್ಲ. ಅದು ಅವರಿಗೆ ಸಹಜ ಎನ್ನಿಸುತ್ತೆ. ಮನುಷ್ಯನಿಗೆ ಸಹಜತೆಯಲ್ಲಿ ಬಹಳ ಬೇಗ ಬೋರ್‌ಡಂ ಉಂಟಾಗುತ್ತದೆ. ಮನೆ ಕೊಳ್ಳಲು 20 ಅಥವಾ 30 ಪ್ರತಿಶತ ಹಣವನ್ನು ಉಡುಗೊರೆಯನ್ನಾಗಿ ನೀಡಿ, ಉಳಿದ ಹಣವನ್ನು ನೀವೇ ತೀರಿಸಿಕೊಳ್ಳಿ ಎಂದಿದ್ದರೆ ಆಗ ಅದು ಅವರ ಮನಸ್ಸಿನಲ್ಲಿ ನನ್ನದು ಎಂದು ರಿಜಿಸ್ಟರ್ ಆಗುತ್ತದೆ. ಬೆಂಬಲ ಕೊಡುವುದು, ಸಪೋರ್ಟ್ ಮಾಡುವುದು ಎಂದರೆ ಸಂಘರ್ಷ, ಸ್ಟ್ರಗಲ್ ಇಲ್ಲವಾಗಿಸುವುದು ಎಂದಲ್ಲ. ಸಂಘರ್ಷ ಅವರಿಗೆ ನಡೆಸಲು ಬಿಟ್ಟು, ಪಕ್ಕದಲ್ಲಿ ನಿಂತು ನಾನಿದ್ದೇನೆ ಎಂದು ಹೇಳುವುದು ಎನ್ನುವುದನ್ನು ಇವತ್ತಿನ ಪೋಷಕರು ಕಲಿಯಬೇಕಿದೆ.
ಇವತ್ತಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತಾಡುವುದು, ಮಾತಾಡದೆ ಇರುವುದು ಎರಡೂ ಒಂದೇ ಎನ್ನುವಂತಾಗಿದೆ. ಏಕೆಂದರೆ ನಮ್ಮ ಶಿಕ್ಷಣ ವ್ಯವಸ್ಥೆ ಪಾಯಿಂಟ್ ಆಫ್ ನೋ ರಿಟರ್ನ್ ತಲುಪಿ ದಶಕಗಳ ಮೇಲಾಗಿದೆ. ಪ್ರತಿಯೊಂದು ಹಂತದಲ್ಲೂ ಶಿಕ್ಷಣ ಸಂಸ್ಥೆಗಳು ಇನ್ನೊಂದು ಹಂತದ ಶಿಕ್ಷಣಕ್ಕೆ ಫೀಡರ್ ಸಂಸ್ಥೆಗಳಾಗಿ ಕೆಲಸವನ್ನು ನಿರ್ವಹಿಸುತ್ತಿವೆ. ನೀಟ್, ಜೆಇಇ ವಿಚಾರದಲ್ಲಿ ಕೋಚಿಂಗ್ ಮಾಫಿಯಾ ಬಹು ದೊಡ್ಡ ಮಟ್ಟದಲ್ಲಿದೆ.
ಇಲ್ಲಿ ಕೂಡ ನಾವು ಗಮನಿಸಬೇಕಾದ ಅಂಶ ಒಂದಿದೆ. ಬಹುಪಾಲು ತಪ್ಪು ನಮ್ಮದು ಎನ್ನುವುದು ಆ ಅಂಶ. ಕೋಚಿಂಗ್ ಮಾಫಿಯಾ ಎನ್ನುತ್ತೇವೆ. ಅವರೇನೂ ನಮ್ಮ ಕುತ್ತಿಗೆಗೆ ಬಂದೂಕು ಹಿಡಿದು ಮಕ್ಕಳನ್ನು ಸೇರಿಸಿ ಎಂದಿಲ್ಲವಲ್ಲ? ನಾವು ಸಮಾಜದಲ್ಲಿನ ಹುಚ್ಚು ಸ್ಪರ್ಧೆಯಲ್ಲಿ ಅರ್ಥವಿಲ್ಲದೆ ಬಿದ್ದಿದೇವೆ. ಜಗತ್ತಿನ ಯಾವ ಭಾಗದಿಂದ ಯಾವ ಭಾಗಕ್ಕೇ ಹೋಗಿ ಸರಿಸುಮಾರು 3 ರಿಂದ 5 ಪ್ರತಿಶತ ಮಾತ್ರ ನಿಷ್ಠೆಯಿಂದ ಓದುತ್ತಾರೆ. ಮಿಕ್ಕ 95 ಪ್ರತಿಶತ ಟೈಮ್‌ಪಾಸ್ ಮಾಡುತ್ತಿರುತ್ತಾರೆ.
ಆದರೆ ಇದ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದಾಕ್ಷಣ, ವ್ಯವಸ್ಥೆಯ ಅವ್ಯವಸ್ಥೆಯ ಹಿಂದೆ ತಮ್ಮ ಮಕ್ಕಳ ಸೋಲನ್ನು ಅಡಗಿಸುವ ಪ್ರಯತ್ನ ಪೋಷಕರು ಶುರು ಮಾಡುತ್ತಾರೆ. ಒಂದೆರಡು ಪ್ರತಿಶತ ವಿದ್ಯಾರ್ಥಿಗಳಿಗೆ ತಾವು ಹಾಕಿದ ಪರಿಶ್ರಮ ಸಾಲದು ಎನ್ನುವುದು ಗೊತ್ತಿರುತ್ತದೆ. ಇಂತಹ ಸಮಯದಲ್ಲಿ ಅವರು ವ್ಯವಸ್ಥೆಯ ಹೆಸರಿನಲ್ಲಿ ಬಿಲ್ ಹರಿಯಲು ಸಿದ್ಧರಾ ಗಿರುತ್ತಾರೆ.
ನಿಜವಾಗಿ ನೊಂದವರ ಸಂಖ್ಯೆ ಕೂಡ ಇದ್ದೇ ಇರುತ್ತದೆ. ಇದೊಂಥರ ಕೊಲ್ಯಾಟರಲ್ ಡ್ಯಾಮೇಜ್ ಇದ್ದಹಾಗೆ. ನಿಷ್ಠೆಯಿಂದ ಓದಿ, ಪರಿಶ್ರಮ ಹಾಕಿದವರಿಗೆ ಇಂತಹ ಸೋರಿಕೆ ನಿಜಕ್ಕೂ ಆಘಾತ ಉಂಟು ಮಾಡುತ್ತದೆ. ಅಂತಹ ನಿಜವಾಗಿ ನೊಂದವರ ಹೆಸರಿನಲ್ಲೂ ರಾಜಕೀಯ ಶುರುವಾಗುತ್ತದೆ. ಯಾವಾಗ ನಿಜವಾದ ಕಾರಣದ ಹಿಂದೆ ರಾಜಕೀಯದ ಕರಿನರೆಳು ಬೀಳುತ್ತದೆ, ಆಗ ನಿಧಾನವಾಗಿ ಹೋರಾಟ ಹಳ್ಳ ಹಿಡಿಯುತ್ತದೆ.
ಮೊದಲೇ ಒಡೆದ ಮನೆಯಾಗಿರುವ ನಮ್ಮ ಸಮಾಜ ಈ ವಿಷಯದಲ್ಲೂ ನಾಲ್ಕು ದಿನ ಡಿಬೇಟ್ ಮಾಡುತ್ತದೆ. ಆ ಚರ್ಚೆಯಲ್ಲಿ ಜಾತಿ, ಉಪಜಾತಿ, ರಾಜಕೀಯ, ಸಿದ್ಧಾಂತಗಳು ನುಸುಳುತ್ತವೆ. ಮತ್ತದೇ ಕಚ್ಚಾಟ, ರಂಪಾಟ, ಹಾರಾಟಗಳಲ್ಲಿ ಕೊನೆಯಾಗುತ್ತದೆ. ನಿಜಕ್ಕೂ ನೊಂದವರಿಗೆ ಇಲ್ಲಿ ನ್ಯಾಯ ವಂತೂ ಸಿಗುವುದಿಲ್ಲ ಎನ್ನುವುದೊಂದೇ ಕಟು ವಾಸ್ತವ.
ಎಲಾನ್ ಮಸ್ಕ್‌ನನ್ನು ನೀವು ಫಾಲೋ ಮಾಡುತ್ತಿದ್ದರೆ, ಆತ ಹೇಳುವ ಮಾತುಗಳನ್ನು ನೀವು ಕೇಳುತ್ತಿದ್ದರೆ, ಮತ್ತು ಅದನ್ನು ಊಹಿಸಕೊಳ್ಳುವ ಶಕ್ತಿ ನಿಮಗಿದ್ದರೆ ಆಗ ವಿದ್ಯಾಭ್ಯಾಸ ಎನ್ನುವುದು ಅದೆಷ್ಟು ದೊಡ್ಡ ಮೋಸ, ಮಾಫಿಯಾ ಎನ್ನುವುದರ ಅರಿವಾಗುತ್ತದೆ. ಆತ ಹೇಳುವ ಪ್ರಕಾರ 2030ರ ವೇಳೆಗೆ ಬಹುತೇಕ ಕೆಲಸಗಳನ್ನು ಎಐ ಮಾಡುತ್ತದೆ. ಹೀಗಾಗಿ ಜಗತ್ತು ಕೆಲಸವಿಲ್ಲದ ಜಗತ್ತಾಗಿ ಬದಲಾಗುತ್ತದೆ. 2036ರ ವೇಳೆಗೆ ಹಣವೇ ಇರುವುದಿಲ್ಲ ಎನ್ನುತ್ತಾನೀತ!
ಹಣವೇಕೆ ಬೇಕು? ಬಯಸಿದ್ದ ಕೊಳ್ಳಲು, ಖರ್ಚು ಮಾಡಲು, ಬದುಕು ಕಟ್ಟಿಕೊಳ್ಳಲು ಅಲ್ಲವೇ? ಹಣ ಒಂದು ವಿನಿಮಯ ಮಾಧ್ಯಮ ಅಲ್ಲವೇ? ಹಣ ನೀಡುವುದರಿಂದ ನಮಗೆ ಬೇಕಾದದ್ದು ಸಿಗುತ್ತಿದೆ. ಹಣವನ್ನು ನೀಡದೆ ಬಯಸಿದ್ದೇ ನಿಮಗೆ ಸಿಗುವಂತಾದರೆ? ಹಣವೇಕೆ ಬೇಕು? ಎನ್ನುತ್ತಾರೆ ಎಲಾನ್ ಮ. ಈತನ ಮಾತುಗಳು ಇವತ್ತಿಗೆ ಹುಚ್ಚುತನ ಎನ್ನಿಸುತ್ತದೆ. ಆದರೆ ಹೆಚ್ಚು ಬೇಡ ಮುಂದಿನ ಹತ್ತು ಅಥವಾ ಹದಿನೈದು ವರ್ಷದಲ್ಲಿ ಇದು ನಿಜವಾಗಿರುತ್ತದೆ.
ಹಣವಿಲ್ಲದ ಬದುಕು, ಕೆಲಸವಿಲ್ಲದ ಬದುಕು ವಾಹ್ ಅದೆಷ್ಟು ಸುಂದರವಾಗಿರಬಹುದು ಎನ್ನುವ ಚಿಂತನೆ ನಿಮ್ಮದಾಗಿದ್ದರೆ ನಿಧಾನಿಸಿ. ಕೆಲಸ, ಹಣ ಇವರೆಡರ ನಡುವೆ ನಾವು ನಮ್ಮ ಬದುಕನ್ನು ಕಟ್ಟಿಕೊಂಡಿದ್ದೇವೆ. ಹಣಕ್ಕಾಗಿ, ಬಯಸಿದ ಬದುಕು ಕಟ್ಟಿಕೊಳ್ಳುವುದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ ನಮಗೆ ನೋವು, ಹತಾಶೆ, ಸೋಲು, ಗೆಲವು ಉಂಟಾಗುತ್ತಿದೆ. ನಮ್ಮಲ್ಲಿ ಭಾವನೆಗಳು ಇನ್ನೂ ಉಳಿದುಕೊಂಡಿವೆ.
ಇದನ್ನು ನಮ್ಮಿಂದ ಕಿತ್ತುಕೊಂಡು ಬಿಟ್ಟರೆ? ಬದುಕಿನ ಉದ್ದೇಶವೇನು? ಪ್ರಥಮ ಆರು ತಿಂಗಳು ನಾವು ಖುಶಿಯಾಗಿರುತ್ತೇವೆ ಅಷ್ಟೇ! ಆಮೇಲೆ ಬೇಸರ, ಏಕತಾನತೆ ಕಾಡಲು ಶುರುವಾಗುತ್ತದೆ. ಇವತ್ತಿನ ಮಕ್ಕಳಿಗೆ ಆಗುತ್ತಿರುವುದು ಇದೇ. ಪೋಷಕರು ಆಗಲೇ ನಿರ್ಮಿಸಿರುವ ಸಾಮ್ರಾಜ್ಯ ಅವಕ್ಕೆ ಕಿಕ್ ಕೊಡುವುದಿಲ್ಲ. ಥೇಟ್ ಹಾಗೆ ಇಡೀ ಜಗತ್ತು ಬದಲಾಗಲಿದೆ. ಯಾರಿಗೂ ಬದುಕಿಗಾಗಿ ಕೆಲಸ ಮಾಡಬೇಕು, ಹಣಕ್ಕಾಗಿ ಕೆಲಸ ಮಾಡಬೇಕು ಎನ್ನುವ ದರ್ದು ಇರುವುದಿಲ್ಲ. ಆತ್ಮ ಸಂತೋಷಕ್ಕೆ, ಖುಷಿಗಾಗಿ, ಏನನ್ನಾದರೂ ಮಾಡಿದ ಸಂತೃಪ್ತಿಗಾಗಿ ಕೆಲಸ ಮಾಡಬೇಕು ಎನ್ನುವ ಪರಿಸ್ಥಿತಿಗೆ ನಾವು ಅತ್ಯಂತ ಸನಿಹದಲ್ಲಿದ್ದೇವೆ. ಹೀಗಾಗಿ ಇವತ್ತಿನಿಂದಲೇ ನಮ್ಮ ಬದುಕಿಗೆ ಒಂದು ಉದ್ದೇಶ, ಗುರಿ ಹುಡುಕಿಕೊಳ್ಳಬೇಕಿದೆ. ಇದೇ ಮಂತ್ರವನ್ನು ನಮ್ಮ ಮಕ್ಕಳಿಗೂ ಬೋಧಿಸಬೇಕಿದೆ.