Mass Shooting: ಆಸ್ಟ್ರಿಯನ್ ಶಾಲೆಯಲ್ಲಿ ಸಾಮೂಹಿಕ ಗುಂಡಿನ ದಾಳಿ: 10 ಮಂದಿ ಸಾವು, ಶೂಟರ್ ಆತ್ಮಹತ್ಯೆ
ಆಸ್ಟ್ರಿಯಾದ ಗ್ರಾಜ್‌ನಲ್ಲಿರುವ ಬೋರ್ಗ್ ಡ್ರೈಯರ್‌ಶ್ಟ್‌ಜೆಂಗಾಸ್ಸೆ ಪ್ರೌಢಶಾಲೆಯಲ್ಲಿ ಮಂಗಳವಾರ ಶಾಲಾ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿದಂತೆ ಹತ್ತು ಮಂದಿಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಬಳಿಕ ಶೂಟರ್ ತಾನು ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಗರದ ಮೇಯರ್ ಎಲ್ಕೆ ಕಹ್ರ್ ತಿಳಿಸಿದ್ದು, ಇದೊಂದು ಭಯಾನಕ ದುರಂತ ಎಂದಿದ್ದಾರೆ.
 
                                -
 ವಿದ್ಯಾ ಇರ್ವತ್ತೂರು
                            
                                Jun 10, 2025 7:22 PM
                                
                                ವಿದ್ಯಾ ಇರ್ವತ್ತೂರು
                            
                                Jun 10, 2025 7:22 PM
                            ವಿಯೆನ್ನಾ: ಗುಂಡಿನ ದಾಳಿ (Mass Shooting) ನಡೆಸಿದ ಬಳಿಕ ಶೂಟರ್ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಸ್ಟ್ರಿಯನ್ ಶಾಲೆಯಲ್ಲಿ (Austrian School) ನಡೆದಿದೆ. ಸಾಮೂಹಿಕ ಗುಂಡಿನ ದಾಳಿಯಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದಾರೆ. ಆಸ್ಟ್ರಿಯಾದ ಬೋರ್ಗ್ ಡ್ರೈಯರ್‌ಶ್ಟ್‌ಜೆಂಗಾಸ್ಸೆ ಪ್ರೌಢಶಾಲೆಯಲ್ಲಿ (BORG Dreierschtzengasse high school) ಈ ಘಟನೆ ನಡೆದಿದೆ. ಶಾಲೆಯಲ್ಲಿ ಹಲವಾರು ಗುಂಡಿನ ಶಬ್ದಗಳು ಕೇಳಿ ಬರುತ್ತಿವೆ ಎನ್ನುವ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಮೃತರಲ್ಲಿ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಕೂಡ ಸೇರಿದ್ದಾರೆ ಎನ್ನಲಾಗಿದೆ.
ಆಸ್ಟ್ರಿಯಾದ ಗ್ರಾಜ್‌ನಲ್ಲಿರುವ ಬೋರ್ಗ್ ಡ್ರೈಯರ್‌ಶ್ಟ್‌ಜೆಂಗಾಸ್ಸೆ ಪ್ರೌಢಶಾಲೆಯಲ್ಲಿ ಮಂಗಳವಾರ ಶಾಲಾ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿದಂತೆ ಹತ್ತು ಮಂದಿಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಬಳಿಕ ಶೂಟರ್ ತಾನು ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಗರದ ಮೇಯರ್ ಎಲ್ಕೆ ಕಹ್ರ್ ತಿಳಿಸಿದ್ದು, ಇದೊಂದು ಭಯಾನಕ ದುರಂತ ಎಂದಿದ್ದಾರೆ.
ಬೋರ್ಗ್ ಡ್ರೈಯರ್‌ಶ್ಟ್‌ಜೆಂಗಾಸ್ಸೆ ಪ್ರೌಢಶಾಲೆಯಲ್ಲಿ ನಡೆದ ದುರಂತಕ್ಕೆ ಕಾರಣನಾದ ಶೂಟರ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಶವ ಶಾಲೆಯ ಶೌಚಾಲಯದಲ್ಲಿ ಪತ್ತೆಯಾಗಿದೆ. ಶೂಟರ್ ಹೆಸರು ಮತ್ತು ಇತರ ವಿವರಗಳು ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ತಿಳಿದ ಆಸ್ಟ್ರಿಯಾದ ಆಂತರಿಕ ಸಚಿವ ಗೆರ್ಹಾರ್ಡ್ ಕಾರ್ನರ್ ಗ್ರಾಜ್‌ಗೆ ತೆರಳಿದ್ದಾರೆ ಎನ್ನಲಾಗಿದೆ. ಪ್ರೌಢಶಾಲೆಯಲ್ಲಿ ಹಲವಾರು ಗುಂಡು ಹಾರಿಸಿದ ಶಬ್ದಗಳು ಕೇಳಿಬರುತ್ತಿವೆ ಎಂದು ಸ್ಥಳೀಯರು ಮಂಗಳವಾರ ಬೆಳಗ್ಗೆ ಸುಮಾರು 10 ಗಂಟೆಗೆ ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ವಿಶೇಷ ಪಡೆಗಳೊಂದಿಗೆ ನಾವು ಸ್ಥಳಕ್ಕೆ ಧಾವಿಸಿದೆವು ಎಂದು ಪೊಲೀಸ್ ವಕ್ತಾರ ಸಬ್ರಿ ಯೋರ್ಗುನ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಗ್ರಾಜ್ ಪೊಲೀಸರು, ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳದಲ್ಲಿ ಯಾವುದೇ ಅಪಾಯವಿಲ್ಲ ಎಂದು ದೃಢಪಡಿಸಿದ್ದಾರೆ.
ಈ ಘಟನೆಯಲ್ಲಿ ಒಂಬತ್ತು ವಿದ್ಯಾರ್ಥಿಗಳು ಮತ್ತು ಒಬ್ಬ ಅಧ್ಯಾಪಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಸುಮಾರು ಹತ್ತು ಮಂದಿ ಗಾಯಗೊಂಡಿದ್ದಾರೆ . ಎಲ್ಲರನ್ನೂ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಾರಣಾಂತಿಕ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 3 ವರ್ಷದ ಮಗುವಿಗೆ ಯಶಸ್ವಿ ಚಿಕಿತ್ಸೆ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಯುರೋಪಿಯನ್ ಒಕ್ಕೂಟದ ವಕ್ತಾರೆ ಪೌಲಾ ಪಿನ್ಹೋ ಸಂತಾಪವನ್ನು ಸೂಚಿಸಿದ್ದಾರೆ. ಸುಮಾರು 3,00,000ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಗ್ರಾಜ್ ನಗರವು ದೇಶದ ರಾಜಧಾನಿ ವಿಯೆನ್ನಾದಿಂದ ಸುಮಾರು 200 ಕಿ.ಮೀ. ದೂರದ ನೈಋತ್ಯ ಭಾಗದಲ್ಲಿದೆ. ಇದು ಆಸ್ಟ್ರಿಯಾದ ಎರಡನೇ ಅತಿದೊಡ್ಡ ನಗರ. ಇಲ್ಲಿ ಕಟ್ಟುನಿಟ್ಟಾದ ಬಂದೂಕು ನಿಯಂತ್ರಣ ಕಾನೂನುಗಳು ಜಾರಿಯಲ್ಲಿವೆ. ಅಪ್ರಾಪ್ತ ವಯಸ್ಕರು ಬಂದೂಕು ಹೊಂದಲು ಅನುಮತಿ ಇಲ್ಲ.
 
            