ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೃತಕ ಕಾಲು, ಸುಟ್ಟ ಮುಖ, ತುಟಿ: ಮೊಜ್ತಾಬಾ ಖಮೇನಿಗೆ ಶೀಘ್ರವೇ ಪ್ಲಾಸ್ಟಿಕ್ ಸರ್ಜರಿ?

Mojtaba Khamenei: ಇರಾನ್‌ ನಲ್ಲಿ ಸುಪ್ರೀಂ ನಾಯಕತ್ವದ ಪರಿಸ್ಥಿತಿ ಗಂಭೀರವಾಗಿದ್ದು, ಮೊಜ್ತಾಬಾ ಖಮೇನಿ ಅವರು ಗಂಭೀರ ಗಾಯಗಳಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ದೇಶದ ಆಡಳಿತವು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ ಜನರಲ್‌ಗಳು ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಖಮೇನಿ ಪುತ್ರ ಅಸ್ವಸ್ಥ; ಇರಾನ್ ಆಡಳಿತ ಮಿಲಿಟರಿ ಕೈಗೆ

ಮೊಜ್ತಾಬಾ ಖಮೇನಿ -

Profile
Sushmitha Jain Apr 24, 2026 3:29 PM

ಟೆಹರಾನ್‌: ಇರಾನ್‌ನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ (Mojtaba Khamenei) ಅವರು ದೇಶವನ್ನು ಮುನ್ನಡೆಸಲು ಸಂಪೂರ್ಣವಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (Islamic Revolutionary Guards Corps) ಜನರಲ್‌ಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದು 'ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಮೊಜ್ತಾಬಾ ಅವರು ಕೇವಲ ಕಂಪನಿಯ ಮಂಡಳಿಯ ನಿರ್ದೇಶಕರಂತೆ ಕೆಲಸ ಮಾಡುತ್ತಿದ್ದು, ಮಿಲಿಟರಿ ಜನರಲ್‌ಗಳೇ ಮಂಡಳಿಯ ಸದಸ್ಯರಂತೆ ದೇಶದ ಪ್ರತಿಯೊಂದು ಪ್ರಮುಖ ನಿರ್ಧಾರಗಳನ್ನು ಜಂಟಿಯಾಗಿ ಕೈಗೊಳ್ಳುತ್ತಿದ್ದಾರೆ ಎಂದು ಮಾಜಿ ಅಧ್ಯಕ್ಷ ಅಹ್ಮದಿನೆಜಾದ್ ಅವರ ನಿಕಟವರ್ತಿ ಅಬ್ದುಲ್ರೆಜಾ ದಾವರಿ ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಮುಜ್ತಾಬಾ

ಫೆಬ್ರವರಿ 28 ರಂದು ನಡೆದ ಅಮೆರಿಕ-ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ತಂದೆ ಅಯತೊಲ್ಲಾ ಅಲಿ ಖಮೇನಿ ಅವರನ್ನು ಕಳೆದುಕೊಂಡ ನಂತರ ಮೊಜ್ತಾಬಾ ರಹಸ್ಯ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದಾರೆ. ಈ ಭೀಕರ ದಾಳಿಯಲ್ಲಿ ಅವರ ಪತ್ನಿ ಮತ್ತು ಮಗ ಸಾವನ್ನಪ್ಪಿದ್ದು, ಮೊಜ್ತಾಬಾ ಅವರು ಗಂಭೀರವಾಗಿ ಗಾಯಗೊಂಡು ಬದುಕುಳಿದಿದ್ದಾರೆ. ಸದ್ಯ ಅವರು ವೈದ್ಯಕೀಯ ಸಿಬ್ಬಂದಿಯ ಕಟ್ಟುನಿಟ್ಟಿನ ಕಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಸ್ರೇಲ್‌ನ ನಿರಂತರ ಟ್ರ್ಯಾಕಿಂಗ್ ಭೀತಿಯಿಂದಾಗಿ ಹಿರಿಯ ಮಿಲಿಟರಿ ಅಥವಾ ರಾಜಕೀಯ ನಾಯಕರು ಅವರನ್ನು ಭೇಟಿ ಮಾಡುತ್ತಿಲ್ಲ. ಸ್ವತಃ ಹೃದಯ ಶಸ್ತ್ರಚಿಕಿತ್ಸಕರೂ ಆಗಿರುವ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಮೇಲ್ವಿಚಾರಣೆಯಲ್ಲಿ ಮುಜ್ತಾಬಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡಗು ಹೊಡೆದುರುಳಿಸಲು ಡೊನಾಲ್ಡ್‌ ಟ್ರಂಪ್ ಆದೇಶ

ವರದಿಯ ಪ್ರಕಾರ, ಮೊಜ್ತಾಬಾ ಅವರ ಒಂದು ಕಾಲಿಗೆ ಈಗಾಗಲೇ ಮೂರು ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅವರು ಇನ್ನು ಮುಂದೆ ಕೃತಕ ಕಾಲು ಬಳಸಬೇಕಾದ ಅನಿವಾರ್ಯತೆ ಇದೆ. ಅವರ ಮುಖ ಮತ್ತು ತುಟಿಗಳು ಬೆಂಕಿಯಿಂದ ತೀವ್ರವಾಗಿ ಸುಟ್ಟುಹೋಗಿದ್ದು, ಮಾತನಾಡಲು ತುಂಬಾ ಕಷ್ಟಪಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರು ತಾವು ದುರ್ಬಲರಾಗಿ ಕಾಣಬಾರದು ಎಂಬ ಉದ್ದೇಶದಿಂದ ಯಾವುದೇ ವಿಡಿಯೋ ಅಥವಾ ಮೌಖಿಕ ಹೇಳಿಕೆಗಳನ್ನು ನೀಡುತ್ತಿಲ್ಲ, ಬದಲಾಗಿ ಕೇವಲ ಲಿಖಿತ ಆದೇಶಗಳನ್ನು ಹೊರಡಿಸುತ್ತಿದ್ದಾರೆ. ಸುಟ್ಟ ಗಾಯಗಳನ್ನು ಸರಿಪಡಿಸಲು ಅವರಿಗೆ ಶೀಘ್ರದಲ್ಲೇ ಪ್ಲಾಸ್ಟಿಕ್ ಸರ್ಜರಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಮಿಲಿಟರಿ ಜನರಲ್‌ಗಳ ಹಿಡಿತದಲ್ಲಿ ಇರಾನ್

ಮೊಜ್ತಾಬಾ ಅವರ ಅನಾರೋಗ್ಯ ಮತ್ತು ಭದ್ರತಾ ಸವಾಲುಗಳ ಹಿನ್ನೆಲೆಯಲ್ಲಿ ಇರಾನ್‌ನ ಸಂಪೂರ್ಣ ಅಧಿಕಾರ ಕೇಂದ್ರ ಈಗ ರೆವಲ್ಯೂಷನರಿ ಗಾರ್ಡ್ಸ್ ಕೈ ಸೇರಿದೆ. ಅಹ್ಮದ್ ವಾಹಿದಿ ಮತ್ತು ಯಾಹ್ಯಾ ರಹೀಮ್ ಸಫಾವಿ ಅವರಂತಹ ಹಿರಿಯ ಅಧಿಕಾರಿಗಳು ಈಗ ದೇಶದ ಆಂತರಿಕ ಮತ್ತು ಬಾಹ್ಯ ಭದ್ರತಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಚುನಾಯಿತ ಸರ್ಕಾರವು ಕೇವಲ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಯಂತಹ ಆಡಳಿತಾತ್ಮಕ ಕೆಲಸಗಳಿಗೆ ಸೀಮಿತವಾಗಿದ್ದರೆ, ಇಸ್ರೇಲ್ ವಿರುದ್ಧದ ಸೇನಾ ಕಾರ್ಯಾಚರಣೆ ಮತ್ತು ಅಮೆರಿಕದೊಂದಿಗಿನ ರಾಜತಾಂತ್ರಿಕ ಮಾತುಕತೆಗಳನ್ನು ಮಿಲಿಟರಿ ಜನರಲ್‌ಗಳೇ ಮುನ್ನಡೆಸುತ್ತಿದ್ದಾರೆ. ಇರಾನ್‌ನ ಅಧಿಕಾರ ವ್ಯವಸ್ಥೆಯಲ್ಲಿ ಈಗ ಧರ್ಮಗುರುಗಳ ಪ್ರಭಾವ ಕ್ಷೀಣಿಸುತ್ತಿದ್ದು, ಮಿಲಿಟರಿ ಶಕ್ತಿ ಪ್ರಬಲವಾಗುತ್ತಿದೆ.