ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Military Operation: ಪಾಕಿಸ್ತಾನದಲ್ಲಿ ಬೃಹತ್‌ ಸೇನಾ ಕಾರ್ಯಾಚರಣೆ; 11 ಸೈನಿಕರು, 19 ಭಯೋತ್ಪಾದಕರು ಬಲಿ

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಪಾಕ್ ತಾಲಿಬಾನ್ (ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ) ಉಗ್ರ ಸಂಘಟನೆಯ ವಿರುದ್ಧ ನಡೆದ ಸೇನಾ ಕಾರ್ಯಾಚರಣೆಯಲ್ಲಿ 11 ಪಾಕಿಸ್ತಾನಿ ಸೈನಿಕರು ಮತ್ತು 19 ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದು ಅಧಿಕೃತ ವರದಿ ತಿಳಿಸಿದೆ.

ಪಾಕಿಸ್ತಾನದಲ್ಲಿ 11 ಸೈನಿಕರು, 19 ಭಯೋತ್ಪಾದಕರು ಬಲಿ

-

Ramesh B Ramesh B Oct 8, 2025 2:58 PM

ಇಸ್ಲಾಮಾಬಾದ್‌: ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ (Khyber Pakhtunkhwa) ಪ್ರಾಂತ್ಯದಲ್ಲಿ ಪಾಕ್ ತಾಲಿಬಾನ್ (ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ) ಉಗ್ರ ಸಂಘಟನೆಯ ವಿರುದ್ಧ ನಡೆದ ಸೇನಾ ಕಾರ್ಯಾಚರಣೆಯಲ್ಲಿ (Military Operation) 11 ಪಾಕಿಸ್ತಾನಿ ಸೈನಿಕರು ಮತ್ತು 19 ಭಯೋತ್ಪಾದಕರು ಮೃತಪಟ್ಟಿದ್ದಾರೆ. ಈ ಬಗ್ಗೆ ಪಾಕಿಸ್ತಾನ ಸೇನೆ ಬುಧವಾರ (ಅಕ್ಟೋಬರ್‌ 8) ಅಧಿಕೃತ ಮಾಹಿತಿ ನೀಡಿದೆ. ಮೃತರಲ್ಲಿ ಓರ್ವ ಲೆಫ್ಟಿನೆಂಟ್ ಕರ್ನಲ್ ಮತ್ತು ಓರ್ವ ಮೇಜರ್ ಸೇರಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಒರಾಕ್ಜೈ (Orakzai) ಜಿಲ್ಲೆಯಲ್ಲಿ ನಡೆದ ದಾಳಿಯ ವೇಳೆ ಈ ಸಾವು ಸಂಭವಿಸಿದೆ ಎಂದು ವರದಿ ತಿಳಿಸಿದೆ.

ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (TTP)ದಂತಹ ಸ್ಥಳೀಯ ಉಗ್ರಗಾಮಿ ಗುಂಪು ಕಾರ್ಯಾಚರಿಸುತ್ತಿರುವ ಬಗ್ಗೆ ಮಂಗಳವಾರ ತಡರಾತ್ರಿ ಪಾಕ್ ಸೈನಿಕರಿಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈ ಪ್ರದೇಶದಲ್ಲಿನ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಖೈಬರ್ ಪಖ್ತುನ್ಖ್ವಾದಲ್ಲಿ ನಡೆದ ಕಾರ್ಯಾಚರಣೆಯ ಬಗ್ಗೆ ಎಕ್ಸ್‌ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Bomb Blast: ಜಾಫರ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಭೀಕರ ದಾಳಿ; ಹೊಣೆ ಹೊತ್ತ ಬಿಎಲ್‌ಎ

ಕಳೆದ ತಿಂಗಳು ಹಿಂಸಾಚಾರ ಪೀಡಿತ ಖೈಬರ್ ಪಖ್ತುನ್ಖ್ವಾದ ಮತ್ತೊಂದು ಜಿಲ್ಲೆಯಾದ ಕರಕ್‌ನ ಅಡಗುತಾಣವೊಂದರ ಮೇಲೆ ನಡೆಸಿದ ದಾಳಿಯಲ್ಲಿ 17 ಟಿಟಿಪಿ ಭಯೋತ್ಪಾದಕರು ಸಾವನ್ನಪ್ಪಿದ್ದರು. ಆ ಗುಂಡಿನ ದಾಳಿಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು. ಅದಕ್ಕೂ ಮೊದಲು ವಾಯುವ್ಯ ಪ್ರಾಂತ್ಯದ ಮತ್ತೊಂದು ಜಿಲ್ಲೆಯಾದ ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ13 ಪಾಕಿಸ್ತಾನಿ ತಾಲಿಬಾನ್ ಹೋರಾಟಗಾರರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಸಂಬಂಧಿತ ಹಿಂಸಾಚಾರ ಹೆಚ್ಚಾಗಿದೆ. ಈ ಪೈಕಿ ಟಿಟಿಪಿಯದ್ದೇ ಸಿಂಹಪಾಲು ಎನ್ನಲಾಗಿದೆ. 2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಟಿಟಿಪಿ ಚಟುವಟಿಕೆಗಳನ್ನು ಹೆಚ್ಚಿಸಿದೆ. ಅಲ್ಲದೆ ಸಂಘಟನೆಯ ಅನೇಕ ನಾಯಕರು ಅಫ್ಘಾನಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.

ಕಳೆದ ತಿಂಗಳು ಪಾಕಿಸ್ತಾನ ಸರ್ಕಾರವು ಭಯೋತ್ಪಾದಕರು ಅಡಗಿದ್ದ ತಿರಾ ಕಣಿವೆಯ ಹಳ್ಳಿಯ ಮೇಲೆ ಬಾಂಬ್ ದಾಳಿ ಮಾಡುವ ಮೂಲಕ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಟಿಟಿಪಿಯ ಬಾಂಬ್ ತಯಾರಿಕಾ ಘಟಕವನ್ನು ಗುರಿಯಾಗಿಸಿಕೊಂಡು ನಡೆಸಲಾದ ಕಾರ್ಯಾಚರಣೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30 ನಾಗರಿಕರು ಸಾವನ್ನಪ್ಪಿದ್ದಾರೆ. ಈ ಕಾರ್ಯಾಚರಣೆಯ ವೇಳೆ ಭಯೋತ್ಪಾದಕರು ತಮ್ಮ ರಕ್ಷಣೆಗೆ ನಾರಿಕರನ್ನು ಬಳಸಿಕೊಂಡಿದ್ದರು ಎನ್ನಲಾಗಿದೆ.

3 ತಿಂಗಳಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನೆ-ಸಂಬಂಧಿತ ಹಿಂಸಾಚಾರವು ಅಂದಾಜು ಶೇ. 46ರಷ್ಟು ಹೆಚ್ಚಾಗಿದೆ. ಒಟ್ಟು 329 ಭಯೋತ್ಪಾದಕ ದಾಳಿ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಂದ ಕನಿಷ್ಠ 901 ಸಾವು ಸಂಭವಿಸಿದೆ ಎಂದು ವರದಿಯಾಗಿದೆ. ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ - ಎರಡೂ ಅಫ್ಘಾನಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ಹಿಂಸಾಚಾರ-ಸಂಬಂಧಿತ ಸಾವುಗಳಲ್ಲಿ ಸುಮಾರು ಶೇ. 71ರಷ್ಟು ಇಲ್ಲೇ ನಡೆದಿದೆ.

ʼʼನಿಷೇಧಿತ ಟಿಟಿಪಿ 2022ರ ನವೆಂಬರ್‌ನಲ್ಲಿ ಕದನ ವಿರಾಮವನ್ನು ಹಿಂತೆಗೆದುಕೊಂಡಿತ್ತು. ಅಲ್ಲದೆ ಭದ್ರತಾ ಪಡೆಗಳು, ಪೊಲೀಸರು ಮತ್ತು ಕಾನೂನು ಜಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಾಗಿ ಪ್ರತಿಜ್ಞೆ ಕೈಗೊಂಡಿತ್ತು. ಅದಾದ ಬಳಿಕ ಪಾಕಿಸ್ತಾನವು ವಿಶೇಷವಾಗಿ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಉಗ್ರರ ದಾಳಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆʼʼ ಎಂದು ಅಧಿಕಾರಿಗಳು ವಿವರಿಸಿದ್ದಾರೆ.