ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೆರಿಕದ ಮ್ಯೂಸಿಯಂನಲ್ಲಿ ಭಾರತೀಯ ವಿಜ್ಞಾನಿ ನಂದಿನಿ ಹರಿನಾಥ್‌ ಸೀರೆ ಪ್ರದರ್ಶನ; ಯಾರಿವರು? ಬಾಹ್ಯಾಕಾಶ ಸಂಶೋಧನೆಯಲ್ಲಿ ಇವರ ಪಾತ್ರವೇನು?

ಭಾರತೀಯ ಬಾಹ್ಯಾಕಾಶ ವಿಜ್ಞಾನಿ ನಂದಿನಿ ಹರಿನಾಥ್ ಧರಿಸಿದ್ದ ಸೀರೆ ಅಮೆರಿಕದ ಸ್ಮಿತ್ಸೋನಿಯನ್ ನ್ಯಾಷನಲ್ ಏರ್ ಆ್ಯಂಡ್‌ ಸ್ಪೇಸ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಮಂಗಳಯಾನ ಮಿಷನ್‌ನ ಐತಿಹಾಸಿಕ ಕ್ಷಣದಲ್ಲಿ ಧರಿಸಿದ್ದ ಈ ಸೀರೆ, ಭಾರತದ ಬಾಹ್ಯಾಕಾಶ ಸಾಧನೆ ಮತ್ತು ಮಹಿಳಾ ವಿಜ್ಞಾನಿಗಳ ಸಾಮರ್ಥ್ಯದ ಪ್ರತೀಕವಾಗಿ ಗುರುತಿಸಿಕೊಂಡಿದೆ.

ಅಮೆರಿಕ ಮ್ಯೂಸಿಯಂನಲ್ಲಿ ರಾರಾಜಿಸುತ್ತಿದೆ ಭಾರತೀಯ ವಿಜ್ಞಾನಿಯ ಸೀರೆ

ಅಮೆರಿಕ ಮ್ಯೂಸಿಯಂನಲ್ಲಿ ಭಾರತೀಯ ವಿಜ್ಞಾನಿಯ ಸೀರೆ -

Profile
Sushmitha Jain May 12, 2026 3:27 PM

ವಾಷಿಂಗ್ಟನ್‌, ಮೇ 12: ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ವಿಶ್ವಪ್ರಸಿದ್ಧ ಸ್ಮಿತ್ಸೋನಿಯನ್ ನ್ಯಾಷನಲ್ ಏರ್ ಆ್ಯಂಡ್‌ ಸ್ಪೇಸ್ ಮ್ಯೂಸಿಯಂ (Smithsonian’s National Air and Space Museum) ಅತ್ಯಾಧುನಿಕ ವಿಮಾನಗಳು ಮತ್ತು ಬಾಹ್ಯಾಕಾಶ ನೌಕೆಗಳಿಗೆ ಹೆಸರುವಾಸಿ. ಆದರೆ ಇಂದು ಅಲ್ಲಿನ ಹೈಟೆಕ್ ಯಂತ್ರಗಳ ನಡುವೆ ಒಂದು ಸುಂದರವಾದ ಭಾರತೀಯ ಸೀರೆಯು ಪ್ರದರ್ಶನಕ್ಕಿಡಲಾಗಿದ್ದು, ಇದು ಜಗತ್ತಿನ ಗಮನ ಸೆಳೆಯುತ್ತಿದೆ. ಈ ಸೀರೆಯು ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿ ನಂದಿನಿ ಹರಿನಾಥ್ (Nandini Harinath) ಅವರದ್ದಾಗಿದ್ದು, ಇದು ಭಾರತದ ವೈಜ್ಞಾನಿಕ ಸಾಧನೆಯ ಸಂಕೇತವಾಗಿ ಅಲ್ಲಿ ರಾರಾಜಿಸುತ್ತಿದೆ.

ನಂದಿನಿ ಹರಿನಾಥ್ ಯಾರು?

ನಂದಿನಿ ಹರಿನಾಥ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಮತ್ತು 'ರಾಕೆಟ್ ವುಮೆನ್ ಆಫ್ ಇಂಡಿಯಾ' ಎಂದು ಕರೆಯಲ್ಪಡುವ ಪ್ರಮುಖರಲ್ಲಿ ಒಬ್ಬರು. ಗಣಿತ ಶಿಕ್ಷಕಿ ಮತ್ತು ಎಂಜಿನಿಯರ್ ದಂಪತಿಯ ಮಗಳಾಗಿ ಬೆಳೆದ ನಂದಿನಿ ಅವರಿಗೆ ಬಾಲ್ಯದಿಂದಲೇ ವಿಜ್ಞಾನದ ಬಗ್ಗೆ ಅಪಾರ ಕುತೂಹಲವಿತ್ತು. ಕಳೆದ 20 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಅವರು 14ಕ್ಕೂ ಹೆಚ್ಚು ಪ್ರಮುಖ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಸಕ್ರಿಯ ಪಾತ್ರವಹಿಸಿದ್ದಾರೆ. ಭಾರತದ ಮಹತ್ವಾಕಾಂಕ್ಷೆಯ ಮಂಗಳಯಾನ ಅಥವಾ ಮಾರ್ಸ್ ಆರ್ಬಿಟರ್ ಮಿಷನ್‌ನಲ್ಲಿ ಅವರು ಉಪ ಕಾರ್ಯಾಚರಣೆ ನಿರ್ದೇಶಕಿಯಾಗಿ ಅತ್ಯಂತ ಜವಾಬ್ದಾರಿಯುತ ಕಾರ್ಯ ನಿರ್ವಹಿಸಿದ್ದರು.

ಬಾಹ್ಯಾಕಾಶದ ಮೇಲಿನ ಆಸಕ್ತಿ ಮತ್ತು ಪ್ರೇರಣೆ

ಬಾಲ್ಯದಲ್ಲಿ 'ಸ್ಟಾರ್ ಟ್ರೆಕ್' ಟಿವಿ ಸರಣಿ ಮತ್ತು 'ಅಪೋಲೋ 13'ನಂತಹ ಸಿನಿಮಾಗಳನ್ನು ನೋಡಿದ್ದರಿಂದ ನಂದಿನಿ ಅವರಿಗೆ ಬಾಹ್ಯಾಕಾಶ ಅನ್ವೇಷಣೆಯ ಬಗ್ಗೆ ಆಸಕ್ತಿ ಮೂಡಿತು. 2025ರ ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ತಮ್ಮ ಇಡೀ ಕುಟುಂಬವು ಈ ವಿಜ್ಞಾನ ಆಧಾರಿತ ಕಥೆಗಳ ದೊಡ್ಡ ಅಭಿಮಾನಿಯಾಗಿತ್ತು ಮತ್ತು ಅದೇ ತಾವು ಈ ಮಟ್ಟಕ್ಕೆ ಬೆಳೆಯಲು ಪ್ರೇರಣೆ ಎಂದು ಹಂಚಿಕೊಂಡಿದ್ದರು.

ಗಡಿ ದಾಟಿ ಭಾರತದೊಳಗೆ ಸುಲಭವಾಗಿ ಕಾಲಿಡಬಹುದು ಎಂದ ಪಾಕಿಸ್ತಾನ ಪತ್ರಕರ್ತೆಗೆ ತರಾಟೆ

ಮ್ಯೂಸಿಯಂನಲ್ಲಿ ಸೀರೆಯ ಮಹತ್ವ

ಮಂಗಳಯಾನದ ನೌಕೆಯು ಭೂಮಿಯ ಕಕ್ಷೆಯನ್ನು ಯಶಸ್ವಿಯಾಗಿ ದಾಟಿ ಮಂಗಳನತ್ತ ತನ್ನ 300 ದಿನಗಳ ಐತಿಹಾಸಿಕ ಪ್ರಯಾಣ ಆರಂಭಿಸಿದ ದಿನದಂದು ನಂದಿನಿ ಈ ಕೆಂಪು ಮತ್ತು ನೀಲಿ ಬಣ್ಣದ ಸೀರೆಯನ್ನು ಧರಿಸಿದ್ದರು. ಕೇವಲ ಆರು ತಿಂಗಳ ಕಾಲ ಕಾರ್ಯನಿರ್ವಹಿಸಬೇಕಿದ್ದ ಮಂಗಳಯಾನ ನೌಕೆಯು ಬರೊಬ್ಬರಿ ಎಂಟು ವರ್ಷಗಳ ಕಾಲ ಮಂಗಳನ ವಾತಾವರಣವನ್ನು ಅಭ್ಯಾಸ ನಡೆಸಿ ದಾಖಲೆ ನಿರ್ಮಿಸಿತು. ಭಾರತವು ಮಂಗಳ ಗ್ರಹವನ್ನು ತಲುಪಿದ ಏಷ್ಯಾದ ಮೊದಲ ದೇಶ ಮತ್ತು ವಿಶ್ವದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಇವರ ಶ್ರಮ ಅಪಾರ.

ಈ ಸೀರೆಯು ಕೇವಲ ಒಂದು ಉಡುಪಲ್ಲ, ಅದು ಭಾರತೀಯ ಮಹಿಳಾ ವಿಜ್ಞಾನಿಗಳ ಸಾಮರ್ಥ್ಯ, ರಾಷ್ಟ್ರೀಯ ಗುರುತು ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಬಾಹ್ಯಾಕಾಶ ವಿಜ್ಞಾನ ಸಾಧನೆಯ ಪ್ರತೀಕವಾಗಿದೆ ಎಂದು ಸ್ಮಿತ್ಸೋನಿಯನ್ ಮ್ಯೂಸಿಯಂ ಗೌರವದಿಂದ ಉಲ್ಲೇಖಿಸಿದೆ. ಇದು ಇಂದಿನ ಪೀಳಿಗೆಯ ಯುವತಿಯರಿಗೆ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಒಂದು ದೊಡ್ಡ ಸ್ಪೂರ್ತಿಯಾಗಿದೆ.