Nobel Peace Prize 2025: ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಾರಿಯಾ ಕೊರಿನಾ ಮಚಾದೊ ಫುಲ್ ಟ್ರೋಲ್; ಕಾರಣವೇನು?
ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಾರಿಯಾ ಕೊರಿನಾ ಮಚಾದೊ ವಿರುದ್ಧ ಭಾರಿ ಟೀಕೆಗಳು ಕೇಳಿ ಬರುತ್ತಿವೆ. ಮಚಾದೊ ಇಸ್ರೇಲ್ ಮತ್ತು ಅದು ಗಾಜಾ ಮೇಲೆ ನಡೆಸಿದ ಬಾಂಬ್ ದಾಳಿಯನ್ನು ಬೆಂಬಲಿಸಿದ್ದು, ಸರ್ಕಾರವನ್ನು ಉರುಳಿಸಲು ವಿದೇಶಿ ಹಸ್ತಕ್ಷೇಪಕ್ಕೂ ಕರೆ ನೀಡಿದ್ದಾರೆ ಎಂದು ಅನೇಕ ವಿಮರ್ಶಕರು ಹೇಳಿದ್ದಾರೆ.

-

ಕ್ಯಾರಕಾಸ್: 2025ರ ನೊಬೆಲ್ ಶಾಂತಿ ಪ್ರಶಸ್ತಿ (Nobel Peace Prize 2025) ವಿಜೇತರಾದ ವೆನೆಜುವೆಲಾದ ಪ್ರಜಾಪ್ರಭುತ್ವ ಕಾರ್ಯಕರ್ತೆ (Venezuelan democracy activist) ಮಾರಿಯಾ ಕೊರಿನಾ ಮಚಾದೊ (Maria Corina Machado) ಅವರ ವಿರುದ್ಧ ಈಗ ಭಾರಿ ಟೀಕೆಗಳು ಕೇಳಿ ಬರುತ್ತಿವೆ. ಅವರು ಇಸ್ರೇಲ್ (Israel) ಮತ್ತು ಅದು ಗಾಜಾ (Gaza) ಮೇಲೆ ನಡೆಸಿದ ಬಾಂಬ್ ದಾಳಿಯನ್ನು ಬೆಂಬಲಿಸಿದ್ದಾರೆ. ಅವರ ದೇಶದಲ್ಲಿ ಸರ್ಕಾರವನ್ನು ಉರುಳಿಸಲು ವಿದೇಶಿ ಹಸ್ತಕ್ಷೇಪಕ್ಕೂ ಕರೆ ನೀಡಿದ್ದಾರೆ ಎಂದು ಅನೇಕ ವಿಮರ್ಶಕರು ಹೇಳಿದ್ದು, ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಚಳುವಳಿಯಲ್ಲಿ ಪ್ರಮುಖರಾಗಿದ್ದ ಮಚಾದೊ ಇತ್ತೀಚಿನ ವರ್ಷಗಳಲ್ಲಿ ನಾಗರಿಕ ಧೈರ್ಯದ ಪ್ರಬಲ ಸಂಕೇತವಾಗಿ ಗುರುತಿಸಿಕೊಂಡಿದ್ದರು. ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವವನ್ನು ಉತ್ತೇಜಿಸುವಲ್ಲಿ ಮತ್ತು ಸರ್ವಾಧಿಕಾರದ ವಿರುದ್ಧದ ಅವರ ಹೋರಾಟಕ್ಕಾಗಿ ಶುಕ್ರವಾರ ನೊಬೆಲ್ ಪ್ರಶಸ್ತಿ ಸಮಿತಿಯು ಅವರನ್ನು ಶಾಂತಿ ಪ್ರಶಸ್ತಿ ವಿಜೇತರನ್ನಾಗಿ ಘೋಷಿಸಿತು.
ಮಾರಿಯಾ ಕೊರಿನಾ ಮಚಾದೊ ವಿರುದ್ಧ ಕೇಳಿ ಬಂದ ಟೀಕೆ:
The Norwegian Nobel Committee must revoke the Nobel Peace Prize for 2025 to Maria Corina Machado immediately for her support of Apartheid Zionists Israeli genocide in Palestine ! #RevokeNow pic.twitter.com/Gm5iVPmirT
— Dr. Rais Hussin (@raishussin) October 11, 2025
ವಿಶ್ವದಾದ್ಯಂತ ಸಂಘರ್ಷಗಳನ್ನು ನಿಲ್ಲಿಸಿದ ಜಾಗತಿಕ ಶಾಂತಿಪ್ರಿಯ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂದು ಬಿಂಬಿಸುವ ಪ್ರಯತ್ನ ವಿಫಲವಾದ ಬಳಿಕ ಇದೀಗ ಮಚಾದೊ ವಿರುದ್ಧ ಟೀಕೆಗಳು ಕೇಳಿ ಬಂದಿವೆ.
ನೊಬೆಲ್ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಜೋರ್ಗೆನ್ ವ್ಯಾಟ್ನೆ ಫ್ರೈಡ್ನೆಸ್ ಅವರು ಮಚಾದೊ ಅವರನ್ನು ಶಾಂತಿಯ ಚಾಂಪಿಯನ್ ಎಂದು ಕರೆದಿದ್ದಾರೆ. ವೆನೆಜುವೆಲಾದಲ್ಲಿ ಕತ್ತಲೆಯ ನಡುವೆಯೂ ಅವರು ಪ್ರಜಾಪ್ರಭುತ್ವದ ಜ್ವಾಲೆ ಉರಿಯುವಂತೆ ಮಾಡಿದ್ದಾರೆ. ಒಂದು ಕಾಲದಲ್ಲಿ ವಿಭಜನೆಯಾಗಿದ್ದ ವೆನೆಜುವೆಲಾವನ್ನು ರಾಜಕೀಯ ವಿರೋಧದ ನಡುವೆಯೂ ಒಗ್ಗೂಡಿಸಿದ ವ್ಯಕ್ತಿ ಎಂದು ಹೇಳಿದ್ದಾರೆ.
ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಮತ್ತು ಅವರ ಧ್ವನಿಯನ್ನು ಕೇಳುವ ವಿಭಿನ್ನ ಭವಿಷ್ಯದ ಭರವಸೆಯನ್ನು ಸಾಕಾರಗೊಳಿಸಿರುವುದಕ್ಕಾಗಿ ಮಚಾದೊ ಅವರನ್ನು ನೊಬೆಲ್ ಪ್ರಶಸ್ತಿ ಸಮಿತಿಯ ಶ್ಲಾಘಿಸಿತ್ತು.
ಅವರ ಜೀವಕ್ಕೆ ಬೆದರಿಕೆ ಇದ್ದರೂ ಅವರು ಇನ್ನೂ ದೇಶದಲ್ಲಿಯೇ ಇದ್ದಾರೆ. ಇದು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ. ಸರ್ವಾಧಿಕಾರಿಗಳು ಅಧಿಕಾರವನ್ನು ವಶಪಡಿಸಿಕೊಂಡಾಗ ಎದ್ದು ನಿಲ್ಲುವ ಮತ್ತು ವಿರೋಧಿಸುವ ಸ್ವಾತಂತ್ರ್ಯದ ಧೈರ್ಯಶಾಲಿ ರಕ್ಷಕರನ್ನು ಗುರುತಿಸುವುದು ಬಹಳ ಮುಖ್ಯ ಎಂದು ಫ್ರೈಡ್ನೆಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟೀಕೆ ಏನು?
ಗಾಜಾದ ಮೇಲೆ ನಡೆದ ದಾಳಿಯನ್ನು ಬೆಂಬಲಿಸಿರುವ ಮಚಾದೊ ಇಸ್ರೇಲ್ ಮತ್ತು ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನುವ ಅವರ ಹಳೆಯ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿವೆ. ಇದಕ್ಕೆ ಈಗ ಭಾರಿ ಟೀಕೆಗಳು ಕೇಳಿ ಬರುತ್ತಿವೆ.
ಮಚಾದೊ ವೆನೆಜುವೆಲಾದ ಹೋರಾಟವು ಇಸ್ರೇಲ್‌ನ ಹೋರಾಟ ಎಂದು ಹೇಳಿದ್ದರು. ಬಳಿಕ ಅವರು ಇಸ್ರೇಲ್ ಅನ್ನು ಸ್ವಾತಂತ್ರ್ಯದ ನಿಜವಾದ ಮಿತ್ರ ಎಂದು ಕರೆದಿದ್ದರು. ತಾವು ಅಧಿಕಾರಕ್ಕೆ ಬಂದರೆ ವೆನೆಜುವೆಲಾದ ರಾಯಭಾರ ಕಚೇರಿಯನ್ನು ಟೆಲ್ ಅವಿವ್‌ನಿಂದ ಜೆರುಸಲೆಮ್‌ಗೆ ಸ್ಥಳಾಂತರಿಸುವುದಾಗಿಯೂ ಭರವಸೆ ನೀಡಿದ್ದರು.

ಇದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಅನೇಕರು ಅವರಿಗೆ ನೀಡಿರುವ ಪ್ರಶಸ್ತಿಯು ನೊಬೆಲ್‌ನ ಉದ್ದೇಶಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: IND vs AUS: ಭಾರತ ಏಕದಿನ ತಂಡದಿಂದ ಕೈಬಿಟ್ಟ ಬಗ್ಗೆ ರವೀಂದ್ರ ಜಡೇಜಾ ಪ್ರತಿಕ್ರಿಯೆ!
ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಮೂಲದ ಮುಸ್ಲಿಂ ನಾಗರಿಕ ಹಕ್ಕುಗಳ ಸಂಘಟನೆ ಕೌನ್ಸಿಲ್ ಆನ್ ಅಮೇರಿಕನ್-ಇಸ್ಲಾಮಿಕ್ ರಿಲೇಶನ್ಸ್, ನೊಬೆಲ್ ಸಮಿತಿಯು ತನ್ನ ಖ್ಯಾತಿಯನ್ನು ಕುಗ್ಗಿಸಿಕೊಂಡಿದೆ. ಅದು ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಹೇಳಿದೆ.
ಇದರೊಂದಿಗೆ ಮಚಾದೊ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಆಡಳಿತದ ವಿರುದ್ಧದ ಅಭಿಯಾನದಲ್ಲಿ ವಿದೇಶಿ ಹಸ್ತಕ್ಷೇಪಕ್ಕೆ ಕರೆ ನೀಡಿದ್ದರು. ಈ ಕುರಿತು 2018ರಲ್ಲಿ ಅವರು ಇಸ್ರೇಲ್ ಮತ್ತು ಅರ್ಜೆಂಟೀನಾದಿಂದ ಬೆಂಬಲ ಕೋರಿ ಪತ್ರ ಬರೆದಿದ್ದರು. ಇದನ್ನು ಕೂಡ ಈಗ ಅವರ ವಿರುದ್ಧ ಟೀಕೆಗೆ ಅಸ್ತ್ರವಾಗಿ ಬಳಸಲಾಗುತ್ತಿದೆ.