IND vs AUS: ಭಾರತ ಏಕದಿನ ತಂಡದಿಂದ ಕೈಬಿಟ್ಟ ಬಗ್ಗೆ ರವೀಂದ್ರ ಜಡೇಜಾ ಪ್ರತಿಕ್ರಿಯೆ!
Ravindra Jadeja on Australia ODI Snud: ಆಸ್ಟ್ರೇಲಿಯಾ ಏಕದಿನ ಸರಣಿಯ ಭಾರತ ತಂಡದಿಂದ ರವೀಂದ್ರ ಜಡೇಜಾ ಅವರನ್ನು ಅನಿರೀಕ್ಷಿತವಾಗಿ ಕೈ ಬಿಡಲಾಗಿದೆ. ವೆಸ್ಟ್ ಇಂಡೀಸ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದ ವೇಳೆ ಜಡೇಜಾ ಈ ಬಗ್ಗೆ ಪ್ರತಿಕಿಯೆ ನೀಡಿದ್ದಾರೆ. 2027ರ ಐಸಿಸಿ ಏಕದಿನ ವಿಶ್ವಕಪ್ ಆಡುವ ಗುರಿಯನ್ನು ಹೊಂದಿದ್ದೇನೆಂದು ಅವರು ತಿಳಿಸಿದ್ದಾರೆ.

ಭಾರತ ಏಕದಿನ ತಂಡದಲ್ಲಿ ಸ್ಥಾನ ಸಿಗದ ಬಗ್ಗೆ ರವೀಂದ್ರ ಜಡೇಜಾ ಪ್ರತಿಕ್ರಿಯೆ. -

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯ (IND vs AUS) ಭಾರತ ತಂಡದಲ್ಲಿ (India's ODI Squad) ಈ ಬಾರಿ ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಸ್ಥಾನವನ್ನು ನೀಡಲಾಗಿಲ್ಲ. ಆದರೂ 2027ರ ಐಸಿಸಿ ಏಕದಿನ ವಿಶ್ವಕಪ್ ಭಾರತ ತಂಡದಲ್ಲಿ ಆಡುವ ವಿಶ್ವಾಸವನ್ನು ರವೀಂದ್ರ ಜಡೇಜಾ (Ravindra jadeja) ವ್ಯಕ್ತಪಡಿಸಿದ್ದಾರೆ. ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುತ್ತಿರುವ ಜಡೇಜಾ, ಈ ವರ್ಷದ ಆರಂಭದಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದ ಭಾರತ ತಂಡದಲ್ಲಿಯೂ ಇದ್ದರು. ಇದರ ಹೊರತಾಗಿಯೂ ಅವರಿಗೆ ಆಸ್ಟ್ರೇಲಿಯಾ ಏಕದಿನ ಸರಣಿಯಿಂದ ಕೈ ಬಿಡಲಾಗಿದೆ.
ಮುಂದಿನ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡಕ್ಕೆ ಕೆಲವೇ ಏಕದಿನ ಪಂದ್ಯಗಳು ಮಾತ್ರ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ರವೀಂದ್ರ ಜಡೇಜಾ ಅವರ ಏಕದಿನ ವಿಶ್ವಕಪ್ ಹಾದಿ ಬಹುತೇಕ ಮುಗಿದಿದೆ ಎಂದು ಹಲವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಡೆಲ್ಲಿ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವೀಂದ್ರ ಜಡೇಜಾಗೆ ಇದೇ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಅವರು, ಇದರ ಹಿಂದೆ ಟೀಮ್ ಮ್ಯಾನೇಜ್‌ಮೆಂಟ್ ಹಾಗೂ ಆಯ್ಕೆದಾರರ ಯೋಜನೆ ಬೇರೆ ಇದೆ. ಈ ಬಗ್ಗೆ ಅವರು ನನ್ನ ಬಳಿಕ ಸಂವಹನ ನಡೆಸಿದ್ದಾರೆಂದು ತಿಳಿಸಿದ್ದಾರೆ.
IND vs AUS: ಕುಮಾರ ಸಂಗಕ್ಕಾರ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ!
"ನೋಡಿ, ಆಯ್ಕೆ ಮಾಡುವುದು ಅಥವಾ ಬಿಡುವುದು ನನ್ನ ಕೈಯಲ್ಲಿ ಇಲ್ಲ, ಹೌದು ಮುಂದಿನ ಏಕದಿನ ವಿಶ್ವಕಪ್ ಆಡಬೇಕೆಂದು ಬಯಸುತ್ತಿದ್ದೇನೆ. ದಿನದಾಂತ್ಯದಲ್ಲಿ ಆಯ್ಕೆದಾರರು, ಟೀಮ್ ಮ್ಯಾನೇಜ್‌ಮೆಂಟ್, ನಾಯಕ ಹಾಗೂ ಕೋಚ್ ನನ್ನನ್ನು ಈ ಸರಣಿಗೆ ಏಕೆ ಮಾಡಿಲ್ಲ ಎಂಬುದರ ಹಿಂದೆ ಕೆಲವು ಸಂಗತಿಗಳು ಇರಬಹುದು. ಇದರ ಹಿಂದೆ ಕೆಲ ಕಾರಣಗಳು ಖಂಡಿತಾ ಇವೆ," ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ.
"ತಂಡವನ್ನು ಪ್ರಕಟಿಸಿದಾಗ ನನ್ನ ಹೆಸರು ಇಲ್ಲದಿರುವಾಗ ನನಗೆ ಯಾವುದೇ ರೀತಿಯ ಅಚ್ಚರಿ ಇಲ್ಲ, ಏಕೆಂದರೆ ಅವರು ನನ್ನ ಬಳಿ ಮೊದಲೇ ಮಾತನಾಡಿದ್ದರು. ಹಾಗಾಗಿ ಅದು ಒಳ್ಳೆಯ ವಿಷಯ. ನಾಯಕ, ಆಯ್ಕೆದಾರ ಮತ್ತು ತರಬೇತುದಾರರು ಏನು ಯೋಚಿಸುತ್ತಿದ್ದಾರೆ ಮತ್ತು ಅದರ ಹಿಂದಿನ ಕಾರಣದ ಬಗ್ಗೆ ನನ್ನೊಂದಿಗೆ ಮಾತನಾಡಿದ್ದಾರೆ. ಆದ್ದರಿಂದ ನನಗೆ ಅದರ ಬಗ್ಗೆ ಸಂತೋಷವಾಗಿದೆ," ಎಂದು ತಿಳಿಸಿದ್ದಾರೆ.
IND vs AUS: ರವೀಂದ್ರ ಜಡೇಜಾರ ಏಕದಿನ ವೃತ್ತಿ ಜೀವನ ಅಂತ್ಯ? ಎಬಿಡಿ ಹೇಳಿದ್ದಿದು!
ಅವಕಾಶ ಸಿಕ್ಕರೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತೇನೆ: ಜಡೇಜಾ
ಮುಂದಿನ ಬಾರಿ ಅವಕಾಶ ಸಿಕ್ಕರೆ ಎರಡೂ ಕೈಗಳಿಂದ ಅಪ್ಪಿಕೊಳ್ಳುತ್ತೇನೆ. ಭಾರತ ತಂಡಕ್ಕೆ ಏಕದಿನ ವಿಶ್ವಕಪ್ ಗೆಲ್ಲುವುದು ನನ್ನ ಮುಂದಿನ ಗುರಿ. ಏಕೆಂದರೆ 2023ರ ಏಕದಿನ ವಿಶ್ವಕಪ್‌ನಲ್ಲಿ ನಾವು ಕೆಲವೊಂದು ಸಂಗತಿಗಳನ್ನುಕಳೆದುಕೊಂಡಿದ್ದೇವೆಂದು ತಿಳಿಸಿದ್ದಾರೆ ರವೀಂದ್ರ ಜಡೇಜಾ.
"ಆದರೆ ಮುಂದಿನ ಅವಕಾಶ ಬಂದಾಗಲೆಲ್ಲಾ, ಸ್ಪಷ್ಟವಾಗಿಯೂ, ನಾನು ಈ ಎಲ್ಲಾ ವರ್ಷಗಳಿಂದ ಮಾಡುತ್ತಿರುವುದನ್ನು ಮಾಡಲು ಪ್ರಯತ್ನಿಸುತ್ತೇನೆ ಮತ್ತು ನೀವು ಹೇಳಿದ ವಿಶ್ವಕಪ್ ಟೂರ್ನಿಯಲ್ಲಿ ನನಗೆ ಅವಕಾಶ ಸಿಕ್ಕರೆ, ಅದಕ್ಕೂ ಮೊದಲು ಕೆಲವು ಏಕದಿನ ಪಂದ್ಯಗಳಿವೆ. ನಾನು ಅವುಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಮತ್ತು ಅವಕಾಶ ಸಿಕ್ಕರೆ, ಅದು ಭಾರತೀಯ ಕ್ರಿಕೆಟ್‌ಗೆ ಒಳ್ಳೆಯದು," ಎಂದು ಹೇಳಿದ್ದಾರೆ.
"ಮತ್ತು ಹೌದು, ವಿಶ್ವಕಪ್ ಗೆಲ್ಲುವುದು ಎಲ್ಲರ ಕನಸು. ಕಳೆದ ಬಾರಿ 50 ಓವರ್‌ಗಳ ವಿಶ್ವಕಪ್‌ನಲ್ಲಿ ನಾವು ಸ್ವಲ್ಪ ಎಡವಿದ್ದೇವೆ. ಆದ್ದರಿಂದ ಈ ಬಾರಿ ಸಾಧ್ಯವಾದರೆ, ಅಪೂರ್ಣವಾಗಿ ಉಳಿದಿದ್ದನ್ನು ಪೂರ್ಣಗೊಳಿಸಲು ನಾವು ಪ್ರಯತ್ನಿಸುತ್ತೇವೆ," ಎಂದು ಜಡೇಜಾ ಭರವಸೆ ನೀಡಿದ್ದಾರೆ.