ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ಬಿಂಬಿಸಿದ ನಾರ್ವೆ ಪತ್ರಿಕೆ: ಜನಾಂಗೀಯ ನಿಂದನೆಗೆ ತೀವ್ರ ಆಕ್ರೋಶ
ನಾರ್ವೆಯ ಪ್ರಮುಖ ಪತ್ರಿಕೆ ‘ಆಫ್ಟೆನ್‌ಪೋಸ್ಟನ್’ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾವಾಡಿಗನಂತೆ ಚಿತ್ರಿಸಿರುವ ಕಾರ್ಟೂನ್ ಪ್ರಕಟಿಸಿದ್ದು, ಇದಕ್ಕೆ ವಿಶ್ವದಾದ್ಯಂತ ಭಾರತೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಚಿತ್ರಣವನ್ನು ಜನಾಂಗೀಯ ನಿಂದನೆ ಹಾಗೂ ಪಾಶ್ಚಿಮಾತ್ಯ ಮಾಧ್ಯಮಗಳ ವಸಾಹತುಶಾಹಿ ಮನೋಭಾವದ ಉದಾಹರಣೆ ಎಂದು ಟೀಕಿಸಲಾಗಿದೆ. ಇದೇ ವೇಳೆ, ಭಾರತದ ಪ್ರಜಾಪ್ರಭುತ್ವ ಮತ್ತು ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಭಾರತದ ವಿದೇಶಾಂಗ ಇಲಾಖೆ ಕಠಿಣ ಪ್ರತಿಕ್ರಿಯೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ -
ನವದೆಹಲಿ: ನಾರ್ವೆ (Norwe)ಯ ಪ್ರಮುಖ ದಿನಪತ್ರಿಕೆಯೊಂದು ಭಾರತದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)ಯವರನ್ನು ಹಾವಾಡಿಗನಂತೆ ಚಿತ್ರಿಸುವ ಜನಾಂಗೀಯ ನಿಂದನೆಯ ಕಾರ್ಟೂನ್ ಒಂದನ್ನು ಪ್ರಕಟಿಸಿದ್ದು, ಇದು ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿಯವರ ನಾರ್ವೆ ಪ್ರವಾಸದ ವೇಳೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯ ವಿವಾದದ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಇದು ಪಾಶ್ಚಿಮಾತ್ಯ ಮಾಧ್ಯಮಗಳ ಹಳೆಯ ವಸಾಹತುಶಾಹಿ ಮನಸ್ಥಿತಿ ಮತ್ತು ಪೂರ್ವಾಗ್ರಹ ಪೀಡಿತ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎನ್ನಲಾಗಿದ್ದು, ತೀವ್ರ ಖಂಡನೆ ವ್ಯಕ್ತವಾಗಿದೆ.
'ಆಫ್ಟೆನ್‌ಪೋಸ್ಟನ್' ಎಂಬ ನಾರ್ವೆ ಪತ್ರಿಕೆಯು "ಒಬ್ಬ ಚಾಣಾಕ್ಷ ಮತ್ತು ಕೊಂಚ ಕಿರಿಕಿರಿ ಉಂಟುಮಾಡುವ ವ್ಯಕ್ತಿ" ಎಂಬ ಶೀರ್ಷಿಕೆಯ ಲೇಖನದಲ್ಲಿ ಈ ವಿವಾದಾತ್ಮಕ ಕಾರ್ಟೂನ್ ಪ್ರಕಟಿಸಿದೆ. ಇದರಲ್ಲಿ ಪ್ರಧಾನಿ ಮೋದಿಯವರು ಹಾವಿನ ಆಕಾರದ ಇಂಧನ ತುಂಬುವ ಪೈಪ್ ಹಿಡಿದಿರುವುದನ್ನು ತೋರಿಸಲಾಗಿದೆ. ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವದಾದ್ಯಂತ ಇರುವ ಭಾರತೀಯರು ತೀವ್ರವಾಗಿ ವಿರೋಧಿಸಿದ್ದು, ಇದನ್ನು ಜನಾಂಗೀಯ ದ್ವೇಷದ ಪರಮಾವಧಿ ಎಂದು ಕರೆದಿದ್ದಾರೆ.
2014ರಲ್ಲೇ ಮೋದಿಯವರು ಹೇಳಿದಂತೆ, ಭಾರತ ಇಂದು ಹಾವಾಡಿಗರ ದೇಶವಾಗಿರದೆ ಕಂಪ್ಯೂಟರ್ ಮೌಸ್ ಬಳಸುವ ತಂತ್ರಜ್ಞಾನದ ಮುಂಚೂಣಿಯ ದೇಶವಾಗಿದೆ. ಆದರೂ ಪಾಶ್ಚಿಮಾತ್ಯ ಮಾಧ್ಯಮಗಳು ಇನ್ನೂ ತಮ್ಮ ಹಳೆಯ ಭ್ರಮೆಯಿಂದ ಹೊರಬಂದಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಈ ಹಿಂದೆ 2022ರಲ್ಲೂ ಸ್ಪ್ಯಾನಿಷ್ ಪತ್ರಿಕೆಯೊಂದು ಭಾರತದ ಆರ್ಥಿಕ ಪ್ರಗತಿಯನ್ನು ಇದೇ ರೀತಿ ವ್ಯಂಗ್ಯವಾಡಿ ಅಪಹಾಸ್ಯ ಮಾಡಿತ್ತು.
ಇದಕ್ಕೂ ಮುನ್ನ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ಅವರು, ಪ್ರಧಾನಿ ಮೋದಿ ಮಾಧ್ಯಮಗಳ ಪ್ರಶ್ನೆಗಳಿಗೆ ಏಕೆ ಉತ್ತರಿಸುತ್ತಿಲ್ಲ ಎಂದು ಪ್ರಶ್ನಿಸಿ, ಭಾರತದ ಪತ್ರಿಕಾ ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳ ಬಗ್ಗೆ ಮಾತನಾಡಿದ್ದರು. ಈ ವಿಡಿಯೋ ವೈರಲ್ ಆದ ನಂತರ ಭಾರತದ ವಿದೇಶಾಂಗ ಸಚಿವಾಲಯದ ಹಿರಿಯ ರಾಜತಾಂತ್ರಿಕ ಅಧಿಕಾರಿ ಸಿಬಿ ಜಾರ್ಜ್ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. "ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಅಗಾಧತೆಯ ಬಗ್ಗೆ ಅರಿವಿಲ್ಲದ ಕೆಲವು ಅಜ್ಞಾತ ಎನ್‌ಜಿಒಗಳ ವರದಿಗಳನ್ನು ನೋಡಿ ಇಂತಹ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.
ದೆಹಲಿಯೊಂದರಲ್ಲೇ ನೂರಾರು ಸುದ್ದಿ ವಾಹಿನಿಗಳಿದ್ದು, ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಕಾನೂನಾತ್ಮಕ ಮೂಲಭೂತ ಹಕ್ಕುಗಳ ಗ್ಯಾರಂಟಿ ನೀಡಿದೆ" ಎಂದು ಹೇಳುವ ಮೂಲಕ ಪಾಶ್ಚಿಮಾತ್ಯ ವಿಮರ್ಶಕರ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಈ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ರಾಜತಾಂತ್ರಿಕ ಗೌರವದ ಕುರಿತು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಭಾರತದ ಸಾರ್ವಭೌಮತ್ವ ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಕೀಳಾಗಿ ಕಾಣುವ ಇಂತಹ ಪ್ರಯತ್ನಗಳನ್ನು ಜಾಗತಿಕ ವೇದಿಕೆಗಳಲ್ಲಿ ತೀವ್ರವಾಗಿ ವಿರೋಧಿಸಬೇಕಾದ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.