Asim Munir: ʼಮತಾಂಧʼ ಅಸಿಮ್ ಮುನೀರ್‌ಗೆ ಬಡ್ತಿ ನೀಡಿದ ಪಾಕ್ ಸರ್ಕಾರ; ಫೀಲ್ಡ್ ಮಾರ್ಷಲ್ ಆಗಿ ಪ್ರಮೋಷನ್
ಭಾರತದ ಮೇಲಿನ ದಾಳಿ ವೇಳೆ ಪಾಕಿಸ್ತಾನದ ಸಶಸ್ತ್ರ ಪಡೆಗಳನ್ನು ಮುನ್ನಡೆಸಿದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್‌ಗೆ ಮಂಗಳವಾರ (ಮೇ 20) ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ನೀಡಲು ಅಲ್ಲಿನ ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಅಸಿಮ್ ಮುನೀರ್.

ಇಸ್ಲಾಮಾಬಾದ್: ಏ. 22ರ ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಂಡ ಭಾರತ ಮೇ 7ರಂದು ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ಮೂಲಕ ಸೇಡು ತೀರಿಸಿಕೊಂಡಿದೆ. ಈ ವೇಳೆ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಹಲವು ಉಗ್ರ ನೆಲೆ ಮೇಲೆ ದಾಳಿ ನಡೆಸಿ ಅವುಗಳನ್ನು ಧ್ವಂಸಗೊಳಿಸಲಾಗಿದ್ದು, ಹಲವು ಉಗ್ರ ಮುಖಂಡರು ಹತರಾಗಿದ್ದಾರೆ. ಇದರಿಂದ ಉರಿದುಬಿದ್ದ ಪಾಕ್ ಭಾರತದ ವಿರುದ್ಧ ದಾಳಿ ನಡೆಸಿತ್ತಾದರೂ ನಮ್ಮ ಸೇನೆ ಅದನ್ನು ಹಿಮ್ಮೆಟಿಸುವಲ್ಲಿ ಯಶಸ್ವಿಯಾಗಿದೆ. ಅದಾಗ್ಯೂ ಪಾಕಿಸ್ತಾನ ಸರ್ಕಾರವು ಈ ದಾಳಿ ವೇಳೆ ಅವರ ಸಶಸ್ತ್ರ ಪಡೆಗಳನ್ನು ಮುನ್ನಡೆಸಿದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್‌ಗೆ (Asim Munir) ಮಂಗಳವಾರ (ಮೇ 20) ದೇಶದ ಅತ್ಯುನ್ನತ ಮಿಲಿಟರಿ ಶ್ರೇಣಿಯಾದ ಫೀಲ್ಡ್ ಮಾರ್ಷಲ್ (Field Marshal) ಆಗಿ ಬಡ್ತಿ ನೀಡಿದೆ ಎಂದು ಸರ್ಕಾರಿ ಸ್ವಾಮ್ಯದ ಪಿಟಿವಿ ವರದಿ ಮಾಡಿದೆ.
ʼʼಜನರಲ್ ಅಸಿಮ್ ಮುನೀರ್ ದೇಶದ ಮುಂದಿನ ಫೀಲ್ಡ್ ಮಾರ್ಷಲ್ ಆಗಲಿದ್ದಾರೆ. ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆʼʼ ಎಂದು ಸರ್ಕಾರಿ ಸ್ವಾಮ್ಯದ ಪಿಟಿವಿ ತಿಳಿಸಿದೆ.
ಅಸಿಮ್ ಮುನೀರ್‌ಗೆ ಬಡ್ತಿ ಒದಗಿಸಿದ ಕುರಿತಾದ ವರದಿ:
Pakistan Army chief General Asim Munir promoted to the rank of Field Marshal, reports Geo News. pic.twitter.com/FaCEDT2lgZ
— ANI (@ANI) May 20, 2025
ಪಾಕ್ ಸರ್ಕಾರದ ಅಧಿಕೃತ ಹೇಳಿಕೆಯ ಪ್ರಕಾರ, ಭಾರತದ ವಿರುದ್ಧದ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಜನರಲ್ ಅಸಿಮ್ ಮುನೀರ್ ಅವರ ನಾಯಕತ್ವವನ್ನು ಗುರುತಿಸಿ ಬಡ್ತಿ ನೀಡಲಾಗಿದೆ. ಜತೆಗೆ ಅಧಿಕಾರಾವಧಿ ಪೂರ್ಣಗೊಂಡ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಜಹೀರ್ ಬಾಬರ್ ಸಿಧು ಅವರನ್ನು ಸೇವೆಯಲ್ಲಿ ಮುಂದುವರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಗುಪ್ತಚರ ಅಂದಾಜಿನ ಪ್ರಕಾರ ಜನರಲ್ ಅಸಿಮ್ ಮುನೀರ್ ಪಾಕಿಸ್ತಾನದಲ್ಲಿ ತಲೆ ಎತ್ತಿರುವ 'ಮೂರನೇ ತಲೆಮಾರಿನ ಜಿಹಾದ್' ಗುಂಪನ್ನು ಮುನ್ನಡೆಸುತ್ತಿದ್ದಾರೆ. 'ಮೂರನೇ ತಲೆಮಾರಿನ ಜಿಹಾದ್' ಗುಂಪು ಧಾರ್ಮಿಕ ಗ್ರಂಥಗಳನ್ನು ಶಸ್ತ್ರಾಸ್ತ್ರಗಳಾಗಿ ಬಳಸುತ್ತಿದೆ ಮತ್ತು ಜಿಹಾದಿ ಕಾರ್ಯಸೂಚಿಯನ್ನು ಉತ್ತೇಜಿಸಲು ರಾಜ್ಯ ಸಂಸ್ಥೆಗಳ ಸಹಾಯ ಪಡೆಯುತ್ತಿದೆ ಎನ್ನಲಾಗಿದೆ. ಮುನೀರ್ ಅವರ ತಂತ್ರವು ಮಿಲಿಟರಿ ಶಕ್ತಿ, ಧಾರ್ಮಿಕ ಅಧಿಕಾರ ಮತ್ತು ಉಗ್ರಗಾಮಿ ಸಿದ್ಧಾಂತದ ಅಪಾಯಕಾರಿ ಅಂಶಗಳ ಒಟ್ಟು ರೂಪ ಎಂದು ಮೂಲಗಳು ತಿಳಿಸಿವೆ. ಈ ಆಡಳಿತ ರೀತಿಯು ರಾಷ್ಟ್ರೀಯ ನೀತಿಯ ಸೋಗಿನಲ್ಲಿ ಜಿಹಾದಿಸಂನ ವ್ಯವಸ್ಥಿತ ಬೆಳವಣಿಗೆಗೆ ಅವಕಾಶ ನೀಡಲಿದೆ ಎಂಬ ಆತಂಕವೂ ಇದೀಗ ವ್ಯಕ್ತವಾಗುತ್ತಿದೆ.
ಭಾರತದ ಮೇಲೇನು ಪರಿಣಾಮ?
ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ನೀಡಿದ್ದರಿಂದ ಪಾಕಿಸ್ತಾನದ ಮಿಲಿಟರಿ ಬೆಂಬಲಿತ ಉಗ್ರಗಾಮಿ ಜಾಲಗಳು ಮತ್ತಷ್ಟು ಬಲಗೊಳ್ಳಬಹುದು ಎಂದು ಜಾಗತಿಕ ಭದ್ರತಾ ವಿಶ್ಲೇಷಕರು ಎಚ್ಚರಿಸಿದ್ದಾರೆ. ಆಡಳಿತದ ಬೆಂಬಲದೊಂದಿಗೆ ಉಗ್ರ ಆಕ್ರಮಣಕಾರಿ ನಿಲುವುಗಳು ಗಡಿಯಾಚೆಗಿನ ಉದ್ವಿಗ್ನತೆಯನ್ನು ಹೆಚ್ಚಿಸಬಹುದು ಎನ್ನಲಾಗಿದೆ. ವಿಶೇಷವಾಗಿ ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ವೃದ್ಧಿಸುವ ಸಾಧ್ಯತೆ ಇದೆ. ಭಾರತವು ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.
ಅಸಿಮ್ ಮುನೀರ್ ಓರ್ವ ಮತಾಂಧ ಎನ್ನುವುದು ಅವರ ಹೇಳಿಕೆಗಳಿಂದಲೇ ದೃಢಪಟ್ಟಿದೆ. ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ ಮೂಲ ಕಾರಣ ಆಸಿಮ್ ಮುನಿರ್ ಎಂದು ಹೇಳಲಾಗುತ್ತದೆ. ಇದೀಗ ಅವರಿಗೆ ಸಿಕ್ಕ ಮುಂಬಡ್ತಿ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.