‘ಉಗ್ರವಾದದ ಬೆಂಕಿ ಪಾಕಿಸ್ತಾನವನ್ನೇ ಸುಡುತ್ತಿದೆ’: ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಭಾರತ ವಾಗ್ದಾಳಿ
ಪಾಕಿಸ್ತಾನವೇ ಸೃಷ್ಟಿಸಿ ಬೆಳೆಸಿದ ಭಯೋತ್ಪಾದನೆಯ ಜಾಲ ಈಗ ಆ ದೇಶದ ನಿಯಂತ್ರಣವನ್ನೇ ಮೀರಿ ಪಾಕಿಸ್ತಾನವನ್ನೇ ಕಾಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಆರೋಪಿಸಿದೆ. ಭಯೋತ್ಪಾದನೆ ವಿರುದ್ಧ ದ್ವಂದ್ವ ನೀತಿ ಅನುಸರಿಸುವುದನ್ನು ನಿಲ್ಲಿಸಿ, ಉಗ್ರರಿಗೆ ಆಶ್ರಯ ಮತ್ತು ಬೆಂಬಲ ನೀಡುವವರ ವಿರುದ್ಧ ಜಾಗತಿಕ ಮಟ್ಟದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತದ ಚಾಟಿ -
ಜಿನಿವಾ: ಪಾಕಿಸ್ತಾನವೇ ಬೆಳೆಸಿದ ಭಯೋತ್ಪಾದನೆಯ ಜಾಲ ಈಗ ಆ ದೇಶದ ನಿಯಂತ್ರಣವನ್ನೇ ಮೀರಿ, ಅದನ್ನೇ ಕಾಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರ ವಾಗ್ದಾಳಿ ನಡೆಸಿದೆ. ಭಯೋತ್ಪಾದನೆ ವಿರುದ್ಧ ಹೋರಾಡುವ ಮುಂಚೂಣಿ ರಾಷ್ಟ್ರ ಹಾಗೂ ಅದರ ಬಲಿಪಶು ಎಂಬಂತೆ ಪಾಕಿಸ್ತಾನ ತನ್ನನ್ನು ಬಿಂಬಿಸಿಕೊಳ್ಳುತ್ತಿದೆ. ಆದರೆ, ಅದು ಸೃಷ್ಟಿಸಿದ ಉಗ್ರ ಸಂಘಟನೆಗಳು ಈಗ ನೆರೆಯ ರಾಷ್ಟ್ರಗಳ ಜೊತೆಗೆ (Neighbouring Countries) ಪಾಕಿಸ್ತಾನದಲ್ಲೂ ಹಿಂಸಾಚಾರ ನಡೆಸುತ್ತಿವೆ ಎಂದು ಭಾರತ (India) ಆರೋಪಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಆರನೇ ಸಮಿತಿಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಭಾರತದ ವಿರುದ್ಧ ಆರೋಪಗಳನ್ನು ಮಾಡಿದ ಬಳಿಕ ಭಾರತದ ಪರವಾಗಿ ಉತ್ತರ ನೀಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರಥಮ ಕಾರ್ಯದರ್ಶಿ ರಘು ಪುರಿ, ಪಾಕಿಸ್ತಾನದ ದ್ವಂದ್ವ ನಿಲುವನ್ನು ಪ್ರಶ್ನಿಸಿದ್ದಾರೆ. “ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಡುವ ಮುಂಚೂಣಿ ರಾಷ್ಟ್ರ ಹಾಗೂ ಅದರ ಬಲಿಪಶು ಎಂಬಂತೆ ತನ್ನನ್ನು ಬಿಂಬಿಸಿಕೊಳ್ಳುತ್ತಿದೆ. ಆದರೆ, ಪಾಕಿಸ್ತಾನವೇ ಸೃಷ್ಟಿಸಿ ನಿಯಂತ್ರಣ ಕಳೆದುಕೊಂಡಿರುವ ಭಯೋತ್ಪಾದನೆಯ ‘ಫ್ರಾಂಕೆನ್‌ಸ್ಟೈನ್’ ಈಗ ನೆರೆಯ ದೇಶಗಳಲ್ಲಿ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಹಾನಿ ಉಂಟುಮಾಡುತ್ತಿದೆ” ಎಂದು ಪುರಿ ಹೇಳಿದ್ದಾರೆ.
‘ಒಂದೇ ಸಮಯದಲ್ಲಿ ಎರಡು ದೋಣಿಗಳಲ್ಲಿ ಕಾಲಿಡಲು ಸಾಧ್ಯವಿಲ್ಲ’ ಎಂಬ ಅರ್ಥದಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಅವರು, ಭಯೋತ್ಪಾದನೆ ವಿಚಾರದಲ್ಲಿ ದ್ವಂದ್ವ ನೀತಿಯ ಧೋರಣೆ ಸರಿಯಲ್ಲ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಪಾಕಿಸ್ತಾನದ ನಾಯಕತ್ವದ ಹೇಳಿಕೆಗಳನ್ನ ಉಲ್ಲೇಖಿಸಿದ ಭಾರತ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಂ ನವಾಜ್ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನು ಭಾರತ ಉಲ್ಲೇಖಿಸಿ ಪಾಕಿಸ್ತಾನಕ್ಕೆ ತಿವಿದಿದ್ದು, 13 ಕೋಟಿ ಜನಸಂಖ್ಯೆ ಇರುವ ಪಂಜಾಬ್‌ಗೆ ನೆರೆಯ ರಾಷ್ಟ್ರಗಳಿಂದ ಬರುವ ಬೆದರಿಕೆಕ್ಕಿಂತ ನೆರೆಯ ಪ್ರಾಂತ್ಯಗಳಿಂದಲೇ ಹೆಚ್ಚು ಅಪಾಯ ಎಂದು ಅವರು ಲಾಹೋರ್‌ನಲ್ಲಿ ಹೇಳಿದ್ದರು. ಇದಕ್ಕೆ ಪರೋಕ್ಷವಾಗಿ ಪಾಕಿಸ್ತಾನದ ನಿಲುವೇ ಕಾರಣ ಎಂದಿದ್ದಾರೆ.
ಇದೇ ವೇಳೆ, ಭಯೋತ್ಪಾದಕರನ್ನು ‘ಸ್ವಾತಂತ್ರ್ಯ ಹೋರಾಟಗಾರರು’ ಎಂದು ವರ್ಗೀಕರಿಸುವ ಪ್ರಯತ್ನಕ್ಕೂ ಮರಿಯಂ ನವಾಜ್ ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜಕೀಯ ಉದ್ದೇಶ ಏನೇ ಇರಲಿ, ಉಗ್ರ ಹಿಂಸಾಚಾರದಲ್ಲಿ ಭಾಗಿಯಾಗುವವರು ಭಯೋತ್ಪಾದಕರೇ ಎಂದು ಅವರು ಹೇಳಿದ್ದರು ಎಂಬುದನ್ನು ಪುರಿ ಸ್ಮರಿಸಿದ್ದಾರೆ.
ಅಲ್ಲದೇ 2018ರಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ನೀಡಿದ್ದ ಸಂದರ್ಶನವನ್ನೂ ಭಾರತ ಉಲ್ಲೇಖ ಮಾಡಿದ್ದು, ಮುಂಬೈ ಮೇಲಿನ 26/11 ದಾಳಿಯ ಹಿನ್ನೆಲೆಯಲ್ಲಿ, ಗಡಿಯಾಚೆಯಿಂದ ಉಗ್ರ ಸಂಘಟನೆಗಳು ಬಂದು ದಾಳಿ ನಡೆಸಲು ಅವಕಾಶ ನೀಡುವುದನ್ನು ಪ್ರಶ್ನಿಸುವ ರೀತಿಯಲ್ಲಿ ನವಾಜ್ ಷರೀಫ್ ಮಾತನಾಡಿದ್ದರು ಎಂದು ಹೇಳುವ ಮೂಲಕ ಪಾಕಿಸ್ತಾನದ ದ್ವಂದ್ವ ನಿಲುವನ್ನು ಬಯಲಿಗೆಲೆದಿದ್ದಾರೆ.
#IndiaAtUN First Secretary, Raghoo Puri delivered 🇮🇳’s Right of Reply in response to Pakistan representative’s statement in the sixth committee on the Agenda Item: Measures to Eliminate International Terrorism. ➡️ The real question: what happens when terrorists are financed, facilitated, trained, sheltered or supported from a State's territory? Terrorism can't be defeated by declarations. It needs action against perpetrators, organizers, financiers and sponsors. ➡️ Pakistan casts itself as a frontline state and a victim, masking the fact that the Frankensteins it created and lost control over have moved from wreaking havoc in neighbouring countries to doing the same at home. Pakistan's own leaders have exposed this. You can't run with the hares and hunt with the hounds. ➡️ Announcing a higher reward for UN-listed Masood Azhar, JeM chief and mastermind of attacks on India is an eyewash. Pakistan’s financial support to terrorism is well known. And just months ago, Pakistani representatives called JeM "defunct." And if the media can reach Azhar and get his confirmation on Operation Sindoor, the Pakistani State surely knows his whereabouts. ➡️ When terror groups operate under state political cover, international commitments become meaningless, and victims are denied justice. ➡️ The world hasn't forgotten 9/11 and where bin Laden was found. Nor 26/11. Nor Pahalgam. Many families are still denied closure while perpetrators roam free. ➡️ Pahalgam's victims were asked their religion, not their politics. It is deeply ironic that Pakistan speaks of combating religious hatred while fomenting cross-border terrorism. ➡️ Pakistan is desperate to tout its military’s narrative on Operation Sindoor and continues narrative building, misinformation and disinformation. They are welcome to enjoy a victory of bombed out airfields and cratered runways. @PMOIndia @MEAIndia @IndianDiplomacy @airnewsalerts @DDNewslive @PIB_India
— India at UN, NY (@IndiaUNNewYork) October 8, 2026
‘ಆಪರೇಷನ್ ಸಿಂಧೂರ್’ ಗೆಲುವಿನ ಬಗ್ಗೆ ಪಾಕಿಸ್ತಾನದ ಹೇಳಿಕೆಯನ್ನು ತಳ್ಳಿಹಾಕಿದ ಭಾರತ..
ಪಾಕಿಸ್ತಾನವು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಫಲಿತಾಂಶದ ಕುರಿತು ನೀಡುತ್ತಿರುವ ಹೇಳಿಕೆಗಳನ್ನೂ ಭಾರತ ತಳ್ಳಿಹಾಕಿದ್ದು, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನದ ವಾಯುನೆಲೆಗಳು ಹಾಗೂ ರನ್‌ವೇಗಳಿಗೆ ಹಾನಿಯಾಗಿರುವುದನ್ನು ಪುರಿ ಉಲ್ಲೇಖಿಸಿದ್ದಾರೆ. ಅಲ್ಲದೇ “ಬಾಂಬ್ ದಾಳಿಯಿಂದ ಹಾನಿಗೊಳಗಾದ ವಾಯುನೆಲೆಗಳು ಮತ್ತು ರನ್‌ವೇಗಳನ್ನು ಗೆಲುವು ಎಂದು ಪಾಕಿಸ್ತಾನ ಭಾವಿಸಿದರೆ, ಅದನ್ನು ಅವರು ಆನಂದಿಸಬಹುದು” ಎಂದು ವ್ಯಂಗ್ಯವಾಡಿದ್ದಾರೆ.
‘ಸಮಂಜಾಯಿಸಿ ನೀಡುವದರಲ್ಲಿಯೇ ಕಾಲ ಕಳೆಯುತ್ತಿರುವ ಪಾಕಿಸ್ತಾನ’
ಭಾರತದ ಹೇಳಿಕೆಗೆ ಪ್ರತಿಯಾಗಿ ಪಾಕಿಸ್ತಾನದ ನಿಯೋಗ ಉತ್ತರಿಸಿದಾಗ, ಹಳೆಯ ಆರೋಪಗಳನ್ನೇ ಪುನರಾವರ್ತಿಸಿದೆ ಎಂದು ಪುರಿ ಟೀಕಿಸಿದ್ದು, “ಪಾಕಿಸ್ತಾನ ಹೇಳಿಕೆಗಳು ಮತ್ತು ಸಮಂಜಾಯಿಸಿ ನೀಡುವದರಲ್ಲಿಯೇ ನಂಬಿಕೆ ಇಟ್ಟಿದೆ” ಎಂದು ಅವರು ವ್ಯಂಗ್ಯವಾಡಿದರು. ಭಯೋತ್ಪಾದನೆ ವಿರುದ್ಧ ಹೋರಾಡುವುದಕ್ಕಿಂತ ತಪ್ಪು ಮಾಹಿತಿ ಹಾಗೂ ಅಪಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಪಹಲ್ಗಾಮ್ ದಾಳಿಯಲ್ಲಿ ಧರ್ಮ ಕೇಳಿ ಹತ್ಯೆ: ಭಾರತ
ಇನ್ನು ಇದೇ ವೇಳೆ ಪಾಕಿಸ್ತಾನ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಧಾರ್ಮಿಕ ದ್ವೇಷದ ವಿರುದ್ಧ ಮಾತನಾಡುತ್ತಿರುವುದನ್ನೂ ಭಾರತ ಪ್ರಶ್ನಿಸಿದ್ದು, ಪಹಲ್ಗಾಮ್‌ನಲ್ಲಿ ಬಲಿಯಾದವರನ್ನು ಅವರ ರಾಜಕೀಯ ನಿಲುವಿನ ಬಗ್ಗೆ ಕೇಳಲಿಲ್ಲ; ಅವರ ಧರ್ಮವನ್ನು ಕೇಳಿ ಹತ್ಯೆ ಮಾಡಿದ್ದರು... ಅಂತವರಿಗೆ ಬೆಂಬಲ ನೀಡುವವರು ಇಂದು ಧಾರ್ಮಿಕ ದ್ವೇಷದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇಷ್ಟೇ ಅಲ್ಲದೇ ಗಡಿಯಾಚೆಗಿನ ಭಯೋತ್ಪಾದನೆಯನ್ನು ಉತ್ತೇಜಿಸುವ ಮೂಲಕ ಧಾರ್ಮಿಕ ದ್ವೇಷ ಮುಂದುವರಿಯಲು ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿದೆ ಎಂದು ಅವರು ಆರೋಪಿಸಿದ್ದು, ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ವಿರುದ್ಧ ಪಾಕಿಸ್ತಾನ ಘೋಷಿಸಿರುವ ಬಹುಮಾನ ಹೆಚ್ಚಳವನ್ನೂ ಭಾರತ ಪ್ರಶ್ನಿಸಿದೆ. ಆತನ ಬಂಧನಕ್ಕೆ ಬಹುಮಾನವಾಗಿ 50 ಲಕ್ಷ ದಿಂದ 70 ಲಕ್ಷ ರೂ.ಗೆ ಹೆಚ್ಚಿಸಿರುವುದನ್ನು ಉಲ್ಲೇಖಿಸಿದ ಪುರಿ, ಇದು ಪರೋಕ್ಷವಾಗಿ ಭಯೋತ್ಪಾದನೆಗೆ ಬೆಂಬಲವನ್ನು ನೀಡುವ ಪಾಕಿಸ್ತಾನ ಬಹುಮಾನ ಮೊತ್ತವನ್ನು ಹೆಚ್ಚಿಸಿ ತನ್ನ ನಡೆಯನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.
ಪಾಕಿಸ್ಥಾನಕ್ಕೆ ಖಡಕ್ ಎಚ್ಚರಿಕೆ
ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ನೀಡಿದರೆ ಅಂತರರಾಷ್ಟ್ರೀಯ ಬದ್ಧತೆಗಳಿಗೆ ಅರ್ಥವಿಲ್ಲ ಎಂದು ಭಾರತ ಎಚ್ಚರಿಸಿದ್ದು, 9/11 ಹಾಗೂ 26/11 ಘಟನೆಯನ್ನು ಇನ್ನು ಯಾರು ಮರೆತಿಲ್ಲ ಎಂದು ಪುರಿ ಹೇಳಿದರು.
ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಅಬ್ಬೊಟ್ಟಾಬಾದ್‌ನಲ್ಲಿರುವ ಪಾಕಿಸ್ತಾನ ಮಿಲಿಟರಿ ಅಕಾಡೆಮಿಯ ಸಮೀಪದ ಕಟ್ಟಡದಲ್ಲಿ ಪತ್ತೆಯಾಗಿದ್ದ ವಿಚಾರವನ್ನೂ ಅವರು ಉಲ್ಲೇಖಿಸಿದ್ದು, 2008ರ ಮುಂಬೈ 26/11 ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದನ್ನು ಸ್ಮರಿಸಿರುವ ಭಾರತ, ಪಾಕಿಸ್ತಾನದ ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿರುವ ವಿಚಾರ ಜಗತ್ತಿಗೆ ತಿಳಿದಿದೆ ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ರಾಷ್ಟ್ರಗಳ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾರತ ಒತ್ತಾಯಿಸಿದ್ದು, ಭಯೋತ್ಪಾದನೆಗೆ ಹಣಕಾಸು ಹರಿವನ್ನು ಮೇಲ್ವಿಚಾರಣೆ ಮಾಡುವ ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್)ಯ ಮುಂದಿನ ಸಭೆ ಅಕ್ಟೋಬರ್ 26ರಿಂದ 30ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿದೆ.