ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Attack: ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಕೈವಾಡ ಮತ್ತೊಮ್ಮೆ ಸಾಬೀತು...ವೈರಲ್ ವಿಡಿಯೊದಲ್ಲಿ ಏನಿದೆ?

ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ಭಯೋತ್ಪಾದಕರು ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಈ ದಾಳಿಯ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ ಹಬೀಬ್ ತಾಹಿರ್ ನನ್ನು ಶ್ರೀನಗರದ (Srinagar) ಹರ್ವಾನ್‌ನಲ್ಲಿ ಭದ್ರತಾ ಪಡೆಗಳು ಎನ್‌ಕೌಂಟರ್‌ ಮಾಡಿತ್ತು. ಆತನ ಅಂತ್ಯಕ್ರಿಯೆಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕುಯಿಯಾನ್ ಗ್ರಾಮದಲ್ಲಿ ಇತ್ತೀಚೆಗೆ ನಡೆಸಲಾಗಿದೆ. ಇದರಲ್ಲಿ ಪಾಕ್ ಸೈನಿಕರು ಪಾಲ್ಗೊಂಡಿದ್ದು, ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಕೈವಾಡವನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ.

ಭಯೋತ್ಪಾದಕನ ಅಂತ್ಯಕ್ರಿಯೆಯಲ್ಲಿ ಪಾಕ್ ಸೈನಿಕರು ಭಾಗಿ

ಶ್ರೀನಗರ: ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿ (Pahalgam Attack) ನಡೆಸಿದ ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನೆಯ (Pakistan army) ಸದಸ್ಯರು ಭಾಗವಹಿಸಿರುವ ಫೋಟೊ, ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಪಾಕ್ ಆಕ್ರಮಿತ ಕಾಶ್ಮೀರದ (Pakistan-Occupied Kashmir) ಕುಯಿಯಾನ್ ಗ್ರಾಮದವನಾದ ಭಯೋತ್ಪಾದಕ ಹಬೀಬ್ ತಾಹಿರ್ ಜುಲೈ 28ರಂದು ಶ್ರೀನಗರದ (Srinagar) ಹರ್ವಾನ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ. ಈತನ ಅಂತ್ಯಕ್ರಿಯೆ ಜುಲೈ 30ರಂದು ಪಿಒಕೆಯ ಕುಯಿಯಾನ್ ಗ್ರಾಮದಲ್ಲಿ ನಡೆದಿದ್ದು ಇದರಲ್ಲಿ ಪಾಕಿಸ್ತಾನ ಸೇನೆಯ ಸದಸ್ಯರು ಭಾಗವಹಿಸಿದ್ದಾರೆ ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಾಲ್ಕರಿಂದ ಐದು ಮಂದಿ ಭಯೋತ್ಪಾದಕರು ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಈ ದಾಳಿಯ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ ಹಬೀಬ್ ತಾಹಿರ್ ನ ಅಂತ್ಯಕ್ರಿಯೆಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕುಯಿಯಾನ್ ಗ್ರಾಮದಲ್ಲಿ ಇತ್ತೀಚೆಗೆ ನಡೆಸಲಾಗಿದೆ. ಇದರಲ್ಲಿ ಪಾಕ್ ಸೈನಿಕರು ಪಾಲ್ಗೊಂಡಿದ್ದು, ಇದು ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಕೈವಾಡವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.



ಪಹಲ್ಗಾಮ್ ದಾಳಿಯ ಬಳಿಕ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್‌ನಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನೆಯ ಸದಸ್ಯರು ಭಾಗವಹಿಸಿದ್ದರು. ಇದು ಪಹಲ್ಗಾಮ್ ದಾಳಿಯಲ್ಲಿ ಪಾಕ್ ಸೇನೆಯ ಕೈವಾಡವನ್ನು ಜಗಜ್ಜಾಹಿರಗೊಳಿಸಿತು. ಅಧಿಕೃತ ಮೂಲಗಳ ಪ್ರಕಾರ ತಾಹಿರ್‌ನನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್‌ಇಟಿ) ನೇಮಕ ಮಾಡಿಕೊಂಡು ತರಬೇತಿ ನೀಡಿತ್ತು.

ಪಹಲ್ಗಾಮ್ ದಾಳಿಯ ಹೊಣೆಯನ್ನು ಎಲ್‌ಇಟಿಯ ಒಂದು ಭಾಗವಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಹೊತ್ತುಕೊಂಡಿತ್ತು. ಇತ್ತೀಚೆಗೆ ಅಮೆರಿಕವು ಇದನ್ನು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿದೆ. ಶ್ರೀನಗರದ ಹರ್ವಾನ್‌ನಲ್ಲಿ ಜುಲೈ 28ರಂದು ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹತರಾದ ಮೂವರು ಭಯೋತ್ಪಾದಕರಲ್ಲಿ ತಾಹಿರ್ ಕೂಡ ಒಬ್ಬ. ಆತ ಭಯೋತ್ಪಾದಕ ಮತ್ತು ಎಲ್‌ಇಟಿಗೆ ಸೇರಿದವನು ಎಂದು ಶ್ರೀನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಿ.ವಿ. ಸುಂದೀಪ್ ಚಕ್ರವರ್ತಿ ಗುರುತಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಾಗಿರುವ ವಿಡಿಯೊ ಮತ್ತು ಫೋಟೊಗಳಲ್ಲಿ ಜುಲೈ 30ರಂದು ನಡೆದ ತಾಹಿರ್ ಅಂತ್ಯಕ್ರಿಯೆಯಲ್ಲಿ ಸ್ಥಳೀಯರು ಸೇರಿದ್ದು, ಇವರೊಂದಿಗೆ ಪಾಕಿಸ್ತಾನದ ಸೈನಿಕರು ಇದ್ದರು.

ತಾಹಿರ್ ಅಂತ್ಯಕ್ರಿಯೆಗೆ ಆತನ ಕುಟುಂಬವು ಭಯೋತ್ಪಾದಕ ಗುಂಪನ್ನು ನಿರ್ಬಂಧಿಸಿತ್ತು. ಆದರೂ ಸ್ಥಳೀಯ ಎಲ್‌ಇಟಿ ಕಮಾಂಡರ್ ರಿಜ್ವಾನ್ ಹನೀಫ್ ಶಸ್ತ್ರಸಜ್ಜಿತ ವ್ಯಕ್ತಿಗಳೊಂದಿಗೆ ಬಂದಾಗ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ತಾಹಿರ್ ಸೋದರಳಿಯ ಹಾಗೂ ದುಃಖತಪ್ತ ಕುಟುಂಬದವರನ್ನು ಹನೀಫ್ ಬಂದೂಕಿನಿಂದ ಬೆದರಿಸಿದಾಗ ಘರ್ಷಣೆ ಉಂಟಾಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ಕೊನೆಗೆ ಹನೀಫ್ ಮತ್ತು ಆತನ ಸಹಚರರು ಅಲ್ಲಿಂದ ಹೊರಟು ಹೋಗಿದ್ದರು.

ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಮೆಸ್ಸಿ ಭಾರತ ಪ್ರವಾಸ; ಸಚಿನ್‌, ಕೊಹ್ಲಿ, ಧೋನಿ ಜತೆ ಆಟ!

ಮೇ ತಿಂಗಳಲ್ಲಿ ಆಪರೇಷನ್ ಸಿಂದೂರ್ ಸಮಯದಲ್ಲಿ ನಡೆದ ಎಲ್‌ಇಟಿ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ಇವರ ಹೆಸರನ್ನು ಭಾರತ ಬಿಡುಗಡೆ ಮಾಡಿತು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುರಿಡ್ಕೆಯಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರ ಅಂತ್ಯಕ್ರಿಯೆಯನ್ನು ಅಮೆರಿಕ ಗುರುತಿಸಿರುವ ಜಾಗತಿಕ ಭಯೋತ್ಪಾದಕ ಎಲ್‌ಇಟಿ ಕಮಾಂಡರ್ ಅಬ್ದುಲ್ ರೌಫ್ ನೇತೃತ್ವದಲ್ಲಿ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.