ಇರಾನ್ ವಿರುದ್ಧದ ಯುದ್ಧ ಮತ್ತೊಂದು ಹಂತಕ್ಕೆ ಕೊಂಡೊಯ್ದ ಅಮೆರಿಕ-ಇಸ್ರೇಲ್; ಏರ್‌ಪೋರ್ಟ್ ಮೇಲೆ ದಾಳಿ
US-Israel-Iran War: ಸತತ 4ನೇ ದಿನವಾದ ಮಾರ್ಚ್ 3ರಂದು ಆಕ್ರಮಣ ಮುಂದುವರಿಸಿದ ಅಮೆರಿಕ-ಇಸ್ರೇಲ್ ಜಂಟಿ ಪಡೆ ಇರಾನ್‌ನ ಪಶ್ಚಿಮ ಭಾಗದಲ್ಲಿರುವ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದೆ. ಬುಶೆಹರ್ ಏರ್‌ಪೋರ್ಟ್ ಮೇಲೆ ಈ ದಾಳಿ ನಡೆದಿದ್ದು, ನಿಂತಿದ್ದ ವಿಮಾನ ಸುಟ್ಟು ಕರಕಲಾಗಿದೆ. ವಿಮಾನ ನಿಲ್ದಾಣದಿಂದ ದಟ್ಟ ಹೊಗೆ ಮೇಲೇಳುತ್ತಿರುವ ವಿಡಿಯೊ ವೈರಲ್ ಆಗಿದೆ.
ಬುಶೆಹರ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ-ಇಸ್ರೇಲ್ ದಾಳಿ -
ಟೆಹರಾನ್, ಮಾ. 3: ಫೆಬ್ರವರಿ 28ರಂದು ಇರಾನ್ ಮೇಲೆ ದಾಳಿ ನಡೆಸುವ ಮೂಲಕ ಯುದ್ಧ ಆರಂಭಿಸಿದ್ದ ಅಮೆರಿಕ-ಇಸ್ರೇಲ್ ಇದೀಗ ಸಮರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ (US-Israel-Iran War). ಈಗಾಗಲೇ ಇರಾನ್‌ನಲ್ಲಿ 700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸತತ 4ನೇ ದಿನವಾದ ಮಾರ್ಚ್ 3ರಂದು ಆಕ್ರಮಣ ಮುಂದುವರಿಸಿದ ಅಮೆರಿಕ-ಇಸ್ರೇಲ್ ಜಂಟಿ ಪಡೆ ಇರಾನ್‌ನ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದೆ. ಬುಶೆಹರ್ ವಿಮಾನ ನಿಲ್ದಾಣದ (Bushehr Airport) ಮೇಲೆ ನಡೆದ ಈ ದಾಳಿಯಲ್ಲಿ ನಿಲ್ಲಿಸಿದ್ದ ವಿಮಾನ ಧ್ವಂಸಗೊಂಡಿದೆ. ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.
ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕಮಾಂಡ್ ಕೇಂದ್ರಗಳು, ಮಿಲಿಟರಿ ನೆಲೆಗಳು ಮತ್ತು ನಾಯಕರ ತಾಣಗಳನ್ನು ಗುರಿಯಾಗಿಸಿಕೊಂಡು ಅಮೆರಿಕ-ಇಸ್ರೇಲ್ ನಡೆಸುತ್ತಿರುವ ಜಂಟಿ ಕಾರ್ಯಾಚರಣೆಯ ಭಾಗವಾಗಿ ಈ ದಾಳಿ ನಡೆದಿವೆ. ಬುಶೆಹರ್ ವಿಮಾನ ನಿಲ್ದಾಣದ ಮೇಲಿನ ದಾಳಿಯ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಬಂದಿಲ್ಲ.
ಹಾನಿಗೀಡಾದ ಬುಶೆಹರ್ ವಿಮಾನ ನಿಲ್ದಾಣ:
Today, the United States carried out a series of strikes on airports in Iran.
— -- GEROMAN -- time will tell - 👀 -- (@GeromanAT) March 3, 2026
In the first photo, shared by a local journalist, a destroyed passenger plane is reportedly shown — possibly an Iran Air Airbus A319 — at Bushehr Airport.
The video captures the aftermath of the… pic.twitter.com/vW0QKR6r6k
ಮೆಹರ್ ನ್ಯೂಸ್ ಏಜೆನ್ಸಿಯ ಪ್ರಕಾರ, ಟೆಹರಾನ್‌ನ ಮೆಹರಾಬಾದ್ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ. ರನ್‌ವೇಯಂತೆ ಕಾಣುವ ಜಾಗದ ಹಿಂದೆ ಬೂದು ಹೊಗೆಯ ಮೋಡವು ಆಕಾಶಕ್ಕೆ ಏರುತ್ತಿರುವುದನ್ನು ತೋರಿಸುವ ಫೋಟೊ, ವಿಡಿಯೊ ವೈರಲ್ ಆಗಿದೆ.
ಹೊರ್ಮುಜ್ ಜಲಸಂಧಿ ಸ್ಥಗಿತಗೊಂಡರೂ ಭಾರತಕ್ಕಿಲ್ಲ ಸಮಸ್ಯೆ; 25 ದಿನಕ್ಕಾಗುವಷ್ಟು ಕಚ್ಚಾ ತೈಲ ದಾಸ್ತಾನಿದೆ ಎಂದ ಕೇಂದ್ರ
ಬುಶೆಹರ್ ವಿಮಾನ ನಿಲ್ದಾಣ ಯಾಕೆ ಮುಖ್ಯ?
ಬುಶೆಹರ್ ಪ್ರದೇಶವು ಇರಾನ್‌ನ ಏಕೈಕ ನ್ಯೂಕ್ಲಿಯರ್ ವಿದ್ಯುತ್ ಸ್ಥಾವರವನ್ನು ಹೊಂದಿದೆ. ಇದರ ಸಮೀಪವೇ ವಿಮಾನ ನಿಲ್ದಾಣವಿದೆ. ಈ ವಿದ್ಯುತ್ ಸ್ಥಾವರ ರಷ್ಯಾದ ಸಹಾಯದಿಂದ ನಿರ್ಮಿತವಾಗಿದೆ ಮತ್ತು ರಷ್ಯಾದಿಂದ ಒದಗಿಸಲಾದ ಯುರೇನಿಯಂನಿಂದ ಚಾಲಿತವಾಗಿದೆ. ಇರಾನ್ ರಾಜಧಾನಿ ಟೆಹರಾನ್‌ನಿಂದ ಸುಮಾರು 1,000 ಕಿ.ಮೀ. ದೂರದಲ್ಲಿರುವ ದಕ್ಷಿಣ ಗಲ್ಫ್ ಕರಾವಳಿಯಲ್ಲಿರುವ ಬುಶೆಹರ್ ನಗರದ ಈ ಸ್ಥಾವರದಲ್ಲಿ ಹಲವು ರಷ್ಯಾದ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಖಾಯಂ ಕಾರ್ಮಿಕರು ಮತ್ತು ತಾತ್ಕಾಲಿಕ ನಿಯೋಜನೆಯಲ್ಲಿರುವ ಇತರರು ಸೇರಿದಂತೆ 600 ರಷ್ಯಾದ ಕಾರ್ಮಿಕರಿದ್ದಾರೆ. ಹೀಗಾಗಿ ರಷ್ಯಾ ತನ್ನ ನಾಗರಿಕರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ.