ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Visa-Free Entry: ಭಾರತೀಯ ಪ್ರವಾಸಿಗರಿಗೆ ಗುಡ್‌ ನ್ಯೂಸ್‌; ಇನ್ಮುಂದೆ ವೀಸಾ ಇಲ್ಲದೆ ಫಿಲಿಪ್ಪೈನ್ಸ್‌ಗೆ ತೆರಳಬಹುದು

Philippines: ಇನ್ಮುಂದೆ ಭಾರತೀಯರು ವೀಸಾ ಇಲ್ಲದೆ ಫಿಲಿಪ್ಪೈನ್ಸ್‌ಗೆ ತೆರಳಬಹುದು. ಹೌದು, ಭಾರತೀಯ ನೆಚ್ಚಿನ ಪ್ರವಾಸಿ ತಾಣ ವೀಸಾ-ಮುಕ್ತ ಪ್ರವೇಶ ನೀಡಿದೆ. ದಿಲ್ಲಿಯಲ್ಲಿರುವ ಫಿಲಿಪ್ಪೈನ್ಸ್‌ ರಾಯಭಾರ ಕಚೇರಿಯ ಪ್ರಕಾರ, ಭಾರತೀಯರು ಈಗ 2 ರೀತಿಯ ಅಲ್ಪಾವಧಿಯ ವೀಸಾ-ಮುಕ್ತ ಪ್ರವೇಶದ ಅವಕಾಶ ಪಡೆಯಲಿದ್ದಾರೆ.

ಇನ್ಮುಂದೆ ವೀಸಾ ಇಲ್ಲದೆ ಫಿಲಿಪ್ಪೈನ್ಸ್‌ಗೆ ತೆರಳಬಹುದು

ಫಿಲಿಪ್ಪೈನ್ಸ್‌.

Profile Ramesh B May 27, 2025 11:00 PM

ಹೊಸದಿಲ್ಲಿ: ಭಾರತೀಯ ಪ್ರಜೆಗಳಿಗೆ ವೀಸಾ-ಮುಕ್ತ ಪ್ರವೇಶ (Visa-Free Entry) ಪರಿಚಯಿಸಿದ ದೇಶಗಳ ಪಾಲಿಗೆ ಇತ್ತೀಚಿನ ಸೇರ್ಪಡೆಯಾಗಿ ಫಿಲಿಪ್ಪೈನ್ಸ್‌ (Philippines) ಗುರುತಿಸಿಕೊಂಡಿದೆ. ಹೌದು, ಪಾಸ್‌ಪೋರ್ಟ್‌ ಹೊಂದಿದ್ದರೆ ಸಾಕು ಇನ್ನುಮುಂದೆ ಭಾರತೀಯರು ಫಿಲಿಪ್ಪೈನ್ಸ್‌ಗೆ ತೆರಳಬಹುದು. ಆ ಮೂಲಕ ಭಾರತೀಯರಿಗೆ ವೀಸಾ-ಮುಕ್ತ ಪ್ರವೇಶ ನೀಡಿದ ನೇಪಾಳ, ಶ್ರೀಲಂಕಾ ಮುಂತಾದ 58 ದೇಶಗಳ ಸಾಲಿಗೆ ಫಿಲಿಪ್ಪೈನ್ಸ್‌ ಕೂಡ ಸೇರಿದಂತಾಗಿದೆ. ಭಾರತೀಯ ನೆಚ್ಚಿನ ವಿದೇಶಿ ಪ್ರವಾಸ ತಾಣಗಳ ಪೈಕಿ ಫಿಲಿಪ್ಪೈನ್ಸ್‌ ಕೂಡ ಒಂದು.

ಸ್ಫಟಿಕ ಶುದ್ಧ ನೀರು ಮತ್ತು ಬಿಳಿ ಮರಳಿನ ಕಡಲ ತೀರಗಳಿಂದ ಸಮೃದ್ಧವಾಗಿರುವ ಫಿಲಿಪ್ಪೈನ್ಸ್‌ಗೆ ಪ್ರತಿ ವರ್ಷ ಸಾವಿರಾರು ಸಂಖ್ಯೆಯ ಭಾರತೀಯರು ಭೇಟಿ ನೀಡುತ್ತಾರೆ. ಈ ಮೂಲಕ ಭಾರತೀಯ ಪ್ರವಾಸಿಗರ ಬೇಡಿಕೆಯ ತಾಣವಾಗಿ ಬದಲಾಗುತ್ತಿದೆ. ಇದೀಗ ವೀಸಾ-ಮುಕ್ತ ಅವಕಾಶ ನೀಡಿರುವುದರಿಂದ ಅಲ್ಲಿಗೆ ತೆರಳುವುದು ಇನ್ನಷ್ಟು ಸುಲಭವಾಗಲಿದೆ. ದಿಲ್ಲಿಯಲ್ಲಿರುವ ಫಿಲಿಪ್ಪೈನ್ಸ್‌ ರಾಯಭಾರ ಕಚೇರಿಯ ಪ್ರಕಾರ, ಭಾರತೀಯರು ಈಗ 2 ರೀತಿಯ ಅಲ್ಪಾವಧಿಯ ವೀಸಾ-ಮುಕ್ತ ಪ್ರವೇಶದ ಅವಕಾಶ ಪಡೆಯಲಿದ್ದಾರೆ.

ಹೊಸ ನಿಯಮಗಳ ಪ್ರಕಾರ ಭಾರತೀಯರಿಗೆ ಎರಡು ಪ್ರತ್ಯೇಕ ವೀಸಾ-ಮುಕ್ತ ಪ್ರವೇಶವನ್ನು ಪರಿಚಯಿಸಲಾಗಿದೆ.



ಈ ಸುದ್ದಿಯನ್ನೂ ಓದಿ: Visa Free: ವೀಸಾ ಇಲ್ಲದೆ ಭಾರತೀಯರು 58 ದೇಶಗಳಿಗೆ ಎಂಟ್ರಿ ಕೊಡಬಹುದು!

14 ದಿನಗಳ ವೀಸಾ-ಮುಕ್ತ ಪ್ರವೇಶ

ಭಾರತೀಯ ನಾಗರಿಕರು ವೀಸಾಕ್ಕೆ ಅರ್ಜಿ ಸಲ್ಲಿಸದೆ ಪ್ರವಾಸಕ್ಕಾಗಿ ಫಿಲಿಪ್ಪೈನ್ಸ್‌ಗೆ ತೆರಳಿ ಅಲ್ಲಿ 14 ದಿನಗಳವರೆಗೆ ತಂಗಬಹುದು. ಆದಾಗ್ಯೂ ಈ ಅವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ ಮತ್ತು ಇದನ್ನು ಮತ್ತೊಂದು ವೀಸಾ ಪ್ರಕಾರಕ್ಕೆ ಬದಲಾಯಿಸಲಾಗುವುದಿಲ್ಲ.

ಅರ್ಹತೆ ಮತ್ತು ವೈಶಿಷ್ಟ್ಯ

  • ಪ್ರವಾಸೋದ್ಯಮಕ್ಕಾಗಿ ಫಿಲಿಪ್ಪೈನ್ಸ್‌ಗೆ ಭೇಟಿ ನೀಡುವ ಎಲ್ಲ ಭಾರತೀಯರು ಈ ಸೌಲಭ್ಯಕ್ಕೆ ಅರ್ಹರು.
  • ದೃಢೀಕೃತ ವಸತಿಯ ಪುರಾವೆ (ಹೋಟೆಲ್ ಬುಕಿಂಗ್‌ ಇತ್ಯಾದಿ) ಅಗತ್ಯ.
  • ವಾಸ್ತವ್ಯದ ಸಮಯದಲ್ಲಿ ವೆಚ್ಚಗಳನ್ನು ಭರಿಸಲು ಅಗತ್ಯವಾದ ಸಾಕಷ್ಟು ಹಣದ ಪುರಾವೆ (ಉದಾಹರಣೆಗೆ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಅಥವಾ ಉದ್ಯೋಗ ಪ್ರಮಾಣ ಪತ್ರಗಳು) ಒದಗಿಸಬೇಕಾಗುತ್ತದೆ.
  • ದೃಢೀಕೃತ ರಿಟರ್ನ್ ಅಥವಾ ಹಿಂದಿರುಗುವ ಟಿಕೆಟ್‌ನ ಪುರಾವೆ ನೀಡಬೇಕಾಗುತ್ತದೆ.

30-ದಿನಗಳ ವೀಸಾ-ಮುಕ್ತ ಪ್ರವೇಶ

ಈ ರೀತಿಯ ಸೌಲಭ್ಯವು ಈಗಾಗಲೇ ಆಸ್ಟ್ರೇಲಿಯಾ, ಜಪಾನ್, ಶೆಂಗೆನ್‌, ಅಮೆರಿಕ, ಕೆನಡಾ, ಸಿಂಗಾಪುರ, ಇಂಗ್ಲೆಂಡ್‌ನಂತಹ ಕೆಲವು ಪ್ರಮುಖ ದೇಶಗಳ ವೀಸಾಗಳು ಅಥವಾ ಶಾಶ್ವತ ನಿವಾಸ ಪರವಾನಗಿಗಳನ್ನು ಹೊಂದಿರುವ ಭಾರತೀಯ ಪ್ರಜೆಗಳಿಗೆ ಸಿಗಲಿದೆ.

ಅರ್ಹತೆ ಮತ್ತು ವೈಶಿಷ್ಟ್ಯ

  • AJACSSUK ಎಂದು ಕರೆಯಲ್ಪಡುವ ದೇಶಗಳ ವೀಸಾ ಅಥವಾ ನಿವಾಸ ಪರವಾನಗಿ ಹೊಂದಿದವರು ಅರ್ಹರು.
  • ದೃಢೀಕೃತ ರಿಟರ್ನ್ ಅಥವಾ ಹಿಂದಿರುಗುವ ಟಿಕೆಟ್‌ನ ಪುರಾವೆ ಒದಗಿಸಬೇಕಾಗುತ್ತದೆ.

ಸೌಲಭ್ಯ ಪಡೆಯುವುದು ಹೇಗೆ?

evisa.gov.ph ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಅದಕ್ಕಾಗಿ ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕು:

  • ಪಾಸ್‌ಪೋರ್ಟ್ (ಕನಿಷ್ಠ 6 ತಿಂಗಳ ಮಾನ್ಯತೆ ಹೊಂದಿರಬೇಕು)
  • ಸರ್ಕಾರ ನೀಡಿದ ಐಡಿ
  • ಪಾಸ್‌ಪೋರ್ಟ್ ಗಾತ್ರದ ಫೋಟೊಗಳು
  • ವಸತಿ ಪುರಾವೆ
  • ಹಿಂದಿರುಗುವ ಟಿಕೆಟ್
  • ವಾಸ್ತವ್ಯಕ್ಕೆ ಅಗತ್ಯವಾದ ಹಣಕಾಸಿನ ಪುರಾವೆ