Physical Abuse: ಪಾಕ್‌ನಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯದ ಭೀಕರತೆಯನ್ನು ವಿಶ್ವಸಂಸ್ಥೆ ಎದುರು ಬಿಚ್ಚಿಟ್ಟ ಭಾರತ!
India V/S Pakistan: ಹಲವಾರು ದಶಕಗಳಿಂದ ಪಾಕಿಸ್ತಾನವು ಸಂಘರ್ಷದ ವೇಳೆಯಲ್ಲಿ ಮಕ್ಕಳು, ಮಹಿಳೆಯರನ್ನು ಗುರಿಯಾಗಿಸಿಕೊಂಡಿದೆ. ಪಾಕಿಸ್ತಾನ ಸೇನೆಯು ಲೈಂಗಿಕ ದೌರ್ಜನ್ಯದಲ್ಲಿ (Sexual Violence) ಪ್ರಮುಖ ಪಾತ್ರ ವಹಿಸಿರುವುದು ದೃಢಪಟ್ಟಿದೆ ಎಂದು ವಿಶ್ವಸಂಸ್ಥೆ ಮುಂದೆ ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಭಾರತದ ರಾಯಭಾರಿ ಎಲ್ಡೋಸ್ ಮ್ಯಾಥ್ಯೂ ಪುನ್ನೂಸ್ ಇದಕ್ಕೆ ಕಾರಣರಾದವರನ್ನು ನ್ಯಾಯಲಯದ ಮುಂದೆ ತಂದು ನಿಲ್ಲಿಸಬೇಕು ಎಂದು ಹೇಳಿದ್ದಾರೆ.


ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನದ (India v/s Pakistan) ನಡುವೆ 1947ರಿಂದಲೂ ಸಂಘರ್ಷ ನಡೆಯುತ್ತಲೇ ಇದೆ. ಈ ವೇಳೆ ಭಾರತದ ಹೆಚ್ಚಿನ ಅಲ್ಪಸಂಖ್ಯಾತ ಮಹಿಳೆಯರು ಬಲಿಯಾಗುತ್ತಿದ್ದಾರೆ. ಎರಡು ದೇಶಗಳ ನಡುವಿನ ಸಂಘರ್ಷದಲ್ಲಿ ಅಪಹರಣ, ಬಲವಂತದ ಮತಾಂತರ, ಬಾಲ್ಯ ವಿವಾಹ, ಕಳ್ಳಸಾಗಣೆ ಮೂಲಕ ಪಾಕಿಸ್ತಾನವು ಭಾರತೀಯ ಅಲ್ಪಸಂಖ್ಯಾತ ಮಹಿಳೆಯರ ಮೇಲೆ ದೌರ್ಜನ್ಯ (Sexual Violence) ನಡೆಸುತ್ತಿದೆ. 1971ರಿಂದ ಸಂಘರ್ಷದ ಸಂದರ್ಭಗಳಲ್ಲಿ ಪಾಕಿಸ್ತಾನ ಸೇನೆಯು ಅಲ್ಪಸಂಖ್ಯಾತ ಮಹಿಳೆಯರ ಮೇಲೆ ಲೈಂಗಿಕ ಹಿಂಸೆ (Conflict- Related Sexual Violence) ನೀಡುತ್ತಿದೆ ಎಂದು ಭಾರತ ಮಂಗಳವಾರ ವಿಶ್ವಸಂಸ್ಥೆ (United Nations) ಮಂಡಳಿಗೆ ಮತ್ತೆ ತಿಳಿಸಿದೆ.
ಸಂಘರ್ಷ ಸಂಬಂಧಿತ ಲೈಂಗಿಕ ದೌರ್ಜನ್ಯದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಚರ್ಚೆಯಲ್ಲಿ ಮಾತನಾಡಿದ ಭಾರತದ ರಾಯಭಾರಿ ಎಲ್ಡೋಸ್ ಮ್ಯಾಥ್ಯೂ ಪುನ್ನೂಸ್, ಇಸ್ಲಾಮಾಬಾದ್ 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಿಂದ ಇದನ್ನು ನಡೆಸುತ್ತಿದ್ದು, ಇಂದಿಗೂ ಮುಂದುವರೆದಿದೆ. ಇದು ನಾಚಿಗೇಡಿನ ಸಂಗತಿ ಎಂದು ಹೇಳಿದರು. ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಲಕ್ಷಾಂತರ ಮಹಿಳೆಯರ ಮೇಲೆ ಪಾಕಿಸ್ತಾನ ಸೇನೆ ಲೈಂಗಿಕ ದೌರ್ಜನ್ಯ ನಡೆಸಿತ್ತು. ಇದು ಇಂದಿಗೂ ನಿರ್ಭಯದಿಂದ ಮುಂದುವರೆದಿದೆ ಎಂದು ಅವರು ಹೇಳಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಪಡೆಯದ ಪಾಕಿಸ್ತಾನ ಅಪಹರಣ, ಬಲವಂತದ ಮತಾಂತರ, ಬಾಲ್ಯ ವಿವಾಹ, ಕಳ್ಳಸಾಗಣೆ ಮೂಲಕ ಅಲ್ಪಸಂಖ್ಯಾತ ಮಹಿಳೆಯರಿಗೆ ಕಿರುಕುಳ ನೀಡುವುದನ್ನು ಮುಂದುವರಿಸಿದೆ ಎಂದ ಪುನ್ನೂಸ್ ಈ ಕುರಿತು ಇತ್ತೀಚಿನ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವರದಿಗಳ ಮಾಹಿತಿಯನ್ನು ನೀಡಿದರು. ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳು, ಮಹಿಳೆಯರ ಅಪಹರಣ, ಕಳ್ಳಸಾಗಣೆ, ಬಲವಂತದ ವಿವಾಹ, ಗೃಹ ಜೀತದಾಳುತನ, ಲೈಂಗಿಕ ಹಿಂಸೆ, ಬಲವಂತದ ಧಾರ್ಮಿಕ ಮತಾಂತರಗಳು ನಡೆದಿರುವುದು ದಾಖಲಿಸಲ್ಪಟ್ಟಿದೆ. ಪಾಕಿಸ್ತಾನದ ನ್ಯಾಯಾಂಗವು ಕೂಡ ಇಂತಹ ಅಪರಾಧಗಳನ್ನು ದೃಢೀಕರಿಸಿದೆ ಎಂದು ಹೇಳಿದರು.
ಇಂತಹ ನೀಚ ಕೃತ್ಯಗಳನ್ನು ನಡೆಸುವವರು ಈಗ ನ್ಯಾಯದ ಪ್ರತಿಪಾದಕರಂತೆ ವೇಷ ಧರಿಸುತ್ತಿರುವುದು ವಿಪರ್ಯಾಸ ಎಂದ ಎಲ್ಡೋಸ್ ಮ್ಯಾಥ್ಯೂ ಪುನ್ನೂಸ್, ಇವರನ್ನು ಜವಾಬ್ದಾರರನ್ನಾಗಿ ಮಾಡಿ ಹಿಂಸೆಗೆ ಒಳಗಾದವರಿಗೆ ನ್ಯಾಯ ನೀಡಬೇಕು ಎಂದರು. ಸಂಘರ್ಷ ಸಂಬಂಧಿತ ಲೈಂಗಿಕ ಹಿಂಸಾಚಾರದ ಘೋರ ಕೃತ್ಯಗಳ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಇವರನ್ನು ನ್ಯಾಯದ ಕಟಕಟೆಗೆ ತರಬೇಕು. ಸಂಘರ್ಷ ವಲಯಗಳಲ್ಲಿನ ಲೈಂಗಿಕ ಹಿಂಸಾಚಾರವು ವೈಯಕ್ತಿಕ ಜೀವನವನ್ನು ನಾಶಪಡಿಸುವುದಲ್ಲದೆ ಸಮಾಜಗಳ ರಚನೆಯನ್ನೇ ಹರಿದು ಹಾಕುತ್ತದೆ. ಹಲವು ತಲೆಮಾರುಗಳವರೆಗೆ ಸಮುದಾಯಗಳ ಮೇಲೆ ಶಾಶ್ವತವಾದ ಗಾಯಗಳನ್ನು ಮಾಡುತ್ತವೆ ಎಂದು ಹೇಳಿದರು.
ಸಂಘರ್ಷದಲ್ಲಿ ಲೈಂಗಿಕ ಹಿಂಸಾಚಾರವನ್ನು ತಡೆಯಲು ವಿವಿಧ ಮಾರ್ಗಗಳನ್ನೂ ಎಲ್ಡೋಸ್ ಮ್ಯಾಥ್ಯೂ ಪುನ್ನೂಸ್ ವಿವರಿಸಿದರು. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರಾದವರಿಗೆ ಪರಿಹಾರ, ವೈದ್ಯಕೀಯ, ಮಾನಸಿಕ ಮತ್ತು ಸಾಮಾಜಿಕ ಬೆಂಬಲ, ಕಾನೂನು ನೆರವು ನೀಡಲು ಸಹಾಯ ಮಾಡುವ ಯುಎನ್ ಎಸ್ ಸಿ ನಿರ್ಣಯ 2467 (2019) ರ ಮಹತ್ವವನ್ನು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಲೈಂಗಿಕ ಶೋಷಣೆಯನ್ನು ತಡೆಗಟ್ಟುವ ಕುರಿತು ವಿಶ್ವಸಂಸ್ಥೆಯ ಉಪಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಪಾತ್ರವನ್ನು ಉಲ್ಲೇಖಿಸಿದ ಅವರು ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ಬಲಿಪಶುಗಳಿಗಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಟ್ರಸ್ಟ್ ನಿಧಿಗೆ ಕೊಡುಗೆ ನೀಡಿದ ಮೊದಲ ದೇಶಗಳಲ್ಲಿ ನವದೆಹಲಿಯೂ ಒಂದು ಎಂದು ನೆನಪಿಸಿದರು.
ಈ ಸುದ್ದಿಯನ್ನೂ ಓದಿ: ಭಾರತ-ಪಾಕ್ ಪಂದ್ಯದ ಬಗ್ಗೆ ಸರ್ಕಾರದ ನಿರ್ಧಾರ ಅಂತಿಮ; ಸುನಿಲ್ ಗವಾಸ್ಕರ್
ಭಾರತವು ಮಹಿಳೆಯರಿಗೆ ವ್ಯಾಪಕ ಶ್ರೇಣಿಯ ಸುರಕ್ಷತೆ ಮತ್ತು ನ್ಯಾಯ ಕಾರ್ಯವಿಧಾನಗಳನ್ನು ಜಾರಿಗೆ ತಂದಿದೆ. ಇದರಲ್ಲಿ 1.2 ಬಿಲಿಯನ್ ಡಾಲರ್ ನಿರ್ಭಯಾ ನಿಧಿ, 112 ಮೂಲಕ ರಾಷ್ಟ್ರವ್ಯಾಪಿ ತುರ್ತು ಪ್ರತಿಕ್ರಿಯೆ ವ್ಯವಸ್ಥೆ, ಜಿಲ್ಲಾ ಕೇಂದ್ರಗಳಲ್ಲಿ ಆಶ್ರಯ, ಕಾನೂನು ನೆರವು ಮತ್ತು ವೈದ್ಯಕೀಯ ನೆರವು ನೀಡುವ ಸಖಿ ಒನ್ ಸ್ಟಾಪ್ ಕೇಂದ್ರಗಳು ಸೇರಿವೆ ಎಂದರು.