ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಉಚಿತ ವೀರ್ಯ ದಾನ ಆಫರ್ ಕೊಟ್ಟ ವ್ಯಕ್ತಿ; ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಯಿತು ಪರ-ವಿರೋಧ

ಕಳೆದ ಕೆಲವು ವರ್ಷಗಳಿಂದೀಚೆಗೆ ವೀರ್ಯ ದಾನಿಗಳ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಅನೇಕ ಜನರಿಗೆ ವಿಶೇಷವಾಗಿ ಭಾರತದಲ್ಲಿ ವೀರ್ಯದಾನದ ಬಗ್ಗೆ ಅರಿವು ಕಮ್ಮಿ ಇದೆ. ಕೆಲವು ದೇಶಗಳಲ್ಲಿ ವೀರ್ಯ ದಾನ ಅನ್ನೋದು ವೃತ್ತಿಯಾಗಿ ಹೊರಹೊಮ್ಮಿದೆ. ವೀರ್ಯದಾನದಿಂದ ಅನೇಕರು ದುಡ್ಡನ್ನೂ ಸಂಪಾದಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಉಚಿತವಾಗಿ ತನ್ನ ವೀರ್ಯ ದಾನ ಮಾಡುತ್ತಿದ್ದಾನೆ.

ಯಾರು ಕೇಳಿದ್ರೂ ವೀರ್ಯ ಕೊಡುತ್ತೇನೆ ಎಂದ ವ್ಯಕ್ತಿ

ಸಾಂದರ್ಭಿಕ ಚಿತ್ರ

Profile Sushmitha Jain Aug 19, 2025 9:58 PM

ಟೋಕಿಯೋ: ‘ಹಾಜಿಮೆ’ ಎಂಬ ಹೆಸರಿನಲ್ಲಿ ಜಪಾನಿನ (Japan) 38 ವರ್ಷದ ವ್ಯಕ್ತಿಯೊಬ್ಬ ವೀರ್ಯದಾನ (Sperm Donation) ಸೇವೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ (Social Media) ಗಮನ ಸೆಳೆದಿದ್ದಾನೆ. ಸಾಂಪ್ರದಾಯಿಕ ವೀರ್ಯ ಬ್ಯಾಂಕ್‌ಗಳಿಂದ ಭಿನ್ನವಾಗಿ, ಆತ ಕೆಲವೊಮ್ಮೆ ಮಹಿಳೆಯರೊಂದಿಗೆ ದೈಹಿಕ ಸಂಬಂಧದ ಮೂಲಕ ಗರ್ಭಧಾರಣೆಗೆ (Pregnancy) ಸಹಾಯ ಮಾಡುತ್ತಾನೆ. ಜತೆಗೆ ಲೈಂಗಿಕತೆಯಿಲ್ಲದ ಗರ್ಭಾಧಾನದ ಆಯ್ಕೆಯನ್ನೂ ನೀಡುತ್ತಾನೆ.

ವರದಿಯ ಪ್ರಕಾರ, ಐದು ವರ್ಷಗಳ ಹಿಂದೆ ಹಾಜಿಮೆಯ ವಿಶ್ವವಿದ್ಯಾಲಯದ ಸ್ನೇಹಿತನೊಬ್ಬ, ವೀರ್ಯಾಣು ಕೊರತೆಯಿಂದ ಮಕ್ಕಳನ್ನು ಪಡೆಯಲಾಗದ ಕಾರಣ ತನ್ನ ಪತ್ನಿಯ ಗರ್ಭಧಾರಣೆಗೆ ಸಹಾಯ ಮಾಡಲು ಕೇಳಿಕೊಂಡನು. “ಆರಂಭದಲ್ಲಿ ಆಘಾತವಾಯಿತು. ಆದರೆ ಬಂಜೆತನದ ಸಮಸ್ಯೆಯ ಗಂಭೀರತೆಯನ್ನು ಅರಿತು ಸಹಾಯ ಮಾಡಿದೆ” ಎಂದು ಹಾಜಿಮೆ ಹೇಳಿದ್ದಾನೆ. ಮಗು ಜನಿಸಿದ ನಂತರ ಸ್ನೇಹಿತನ ಕುಟುಂಬದ ಸಂತೋಷವನ್ನು ಕಂಡು, ಇತರರಿಗೂ ಸಹಾಯ ಮಾಡಲು ಪ್ರೇರಿತನಾದೆ ಎಂದು ಹೇಳಿಕೊಂಡಿದ್ದಾನೆ.

ಈ ಸುದ್ದಿಯನ್ನೂ ಓದಿ: Giorgia Meloni: ಭಾರತೀಯರಂತೆ ನಮಸ್ತೆ ಮಾಡಿದ ಮೆಲೋನಿ- ಇಟಲಿ ಪ್ರಧಾನಿಯ ಈ ವಿಡಿಯೊ ಎಷ್ಟು ವೈರಲ್‌ ಆಗ್ತಿದೆ ಗೊತ್ತಾ?

ಸಾಮಾಜಿಕ ಜಾಲತಾಣದ ಮೂಲಕ ಸೇವೆ

ತನ್ನ ಸೇವೆಯನ್ನು ವಿಸ್ತರಿಸಲು, ಹಾಜಿಮೆ ಸಾಮಾಜಿಕ ಜಾಲತಾಣದಲ್ಲಿ ಅನಾಮಧೇಯ ಖಾತೆ ತೆರೆದು ವೀರ್ಯ ದಾನದ ಕೊಡುಗೆಯನ್ನು ಘೋಷಿಸಿದ್ದಾನೆ. ಗ್ರಾಹಕರ ವಿಶ್ವಾಸಕ್ಕಾಗಿ, ತಿಂಗಳಿಗೊಮ್ಮೆ 11,700 ಯೆನ್ (ಸುಮಾರು 3,900 ರೂ.) ವೆಚ್ಚದಲ್ಲಿ ಸಾಂಕ್ರಾಮಿಕ ರೋಗಗಳ ಪರೀಕ್ಷೆಗೆ ಒಳಗಾಗುವುದರ ಕುರಿತು ಮಾಹಿತಿ ಹಂಚಿಕೊಂಡಿದ್ದು, ಅದಕ್ಕೆ ಪೂರಕವಾದ ಡಾಕ್ಯುಮೆಂಟ್ ಅನ್ನು ಸಲ್ಲಿಸಿದ್ದಾನೆ.

ನಿಯಮಗಳು ಮತ್ತು ಷರತ್ತುಗಳು

ಹಾಜಿಮೆ ತನ್ನ ಸೇವೆಯನ್ನು ಉಚಿತವಾಗಿ ನೀಡುತ್ತಾನೆ. ಕೇವಲ ಪ್ರಯಾಣ ವೆಚ್ಚವನ್ನು ಮಾತ್ರ ಕೇಳುತ್ತಾನೆ. ಯಾವುದೇ ಒಪ್ಪಂದಕ್ಕೆ ಸಹಿ ಹಾಕದಿರುವುದು, ತಂದೆಯ ಗುರುತು ಅಥವಾ ಆರ್ಥಿಕ ಜವಾಬ್ದಾರಿಯನ್ನು ಸ್ವೀಕರಿಸದಿರುವುದು ಆತನ ಷರತ್ತುಗಳಾಗಿವೆ.ಇದುವರೆಗೆ 20ಕ್ಕಿಂತ ಹೆಚ್ಚು ಕೋರಿಕೆಗಳನ್ನು ಸ್ವೀಕರಿಸಿರುವ ಹಾಜಿಮೆ, ಏಳು ಮಹಿಳೆಯರಿಗೆ ಗರ್ಭಧಾರಣೆಗೆ ಸಹಾಯ ಮಾಡಿದ್ದಾನೆ. ಈಗಾಗಲೇ ನಾಲ್ಕು ಮಕ್ಕಳು ಜನಿಸಿವೆ. ಆತನ ಗ್ರಾಹಕರಲ್ಲಿ ಬಂಜೆತನದ ದಂಪತಿಗಿಂತ ಹೆಚ್ಚಾಗಿ ಸಲಿಂಗ ದಂಪತಿ ಮತ್ತು ವಿವಾಹವಿಲ್ಲದೆ ಮಕ್ಕಳನ್ನು ಬಯಸುವ ಒಂಟಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ವಿವಾದಾತ್ಮಕ ಪ್ರತಿಕ್ರಿಯೆ

ಹಾಜಿಮೆಯ ಕಾರ್ಯವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. “ಔಪಚಾರಿಕ ದಾಖಲೆಗಳಿಲ್ಲದೆ, ಭವಿಷ್ಯದಲ್ಲಿ ಸಮಸ್ಯಾತ್ಮಕ ವಿವಾಹಗಳ ಅಪಾಯವಿದೆ” ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. “ಈ ಬೇಡಿಕೆಗೆ ಕಾನೂನು ಮತ್ತು ನಿಯಮಗಳು ತಕ್ಕಂತೆ ಬದಲಾಗಬೇಕಲ್ಲವೇ?” ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಜಪಾನ್‌ನಲ್ಲಿ ಖಾಸಗಿ ವೀರ್ಯದಾನ ಅಥವಾ ಅದರ ಆನ್‌ಲೈನ್ ಪ್ರಚಾರವನ್ನು ನಿಷೇಧಿಸುವ ನಿರ್ದಿಷ್ಟ ಕಾನೂನಿಲ್ಲದ ಕಾರಣ ಈ ಕಾರ್ಯವು ಕಾನೂನಿನ ಗೊಂದಲದ ಗಡಿಯಲ್ಲಿದೆ.