Anunay Sood passes away: ಖ್ಯಾತ ಯೂಟ್ಯೂಬರ್ ಅನುನಯ್ ಸೂದ್ ಅಮೆರಿಕದಲ್ಲಿ ನಿಗೂಢ ಸಾವು
Social media influencer Anunay Sood: ಜನಪ್ರಿಯ ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ ಮತ್ತು ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಅನುನಯ್ ಸೂದ್ ಅಮೆರಿಕದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕೇವಲ 32ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿದ್ದು, ಅವರ ಸಾವು ಅನೇಕ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ.
ಖ್ಯಾತ ಯೂಟ್ಯೂಬರ್ ಅನುನಯ್ ಸೂದ್ ನಿಗೂಢ ಸಾವು(ಸಂಗ್ರಹ ಚಿತ್ರ) -
ದುಬೈ: ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ ಮತ್ತು ಛಾಯಾಗ್ರಾಹಕ ಅನುನಯ್ ಸೂದ್ (Anunay Sood) ತಮ್ಮ 32ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಸಾಮಾಜಿಕ ಮಾಧ್ಯಮದಲ್ಲಿ (social media) ದೃಢಪಡಿಸಿದೆ. ದುಬೈನಲ್ಲಿ ವಾಸವಾಗಿರುವ ಅವರು, ಅಮೆರಿಕದ ಲಾಸ್ ವೇಗಸ್‍ನಲ್ಲಿ ನಿಧನರಾಗಿದ್ದಾರೆ. ಸಾವಿಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ. ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಆಗಿದ್ದ ಅನುನಯ್ ಅವರು, ಜಗತ್ತಿನ ಹಲವಾರು ದೇಶಗಳಿಗೆ ಪ್ರಯಾಣಿಸಿದ್ದರು. ನಂತರ ತಮ್ಮ ಪ್ರಯಾಣದ ಅನುಭವವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಈ ಮೂಲಕ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 1.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದರು. ಆದರೀಗ ಅವರ ನಿಧನವು, ಅನುನಯ್ ಫಾಲೋವರ್ಸ್‌ಗೆ ದಿಗ್ಭ್ರಮೆ ಮೂಡಿಸಿದೆ.
ಅನುನಯ್ ಕುಟುಂಬವು ನವೆಂಬರ್ 6, 2025 ರಂದು ಮುಂಜಾನೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ಹೃದಯವಿದ್ರಾವಕ ಸುದ್ದಿಯನ್ನು ಹಂಚಿಕೊಂಡಿತು. ಈ ಕಷ್ಟದ ಸಮಯದಲ್ಲಿ ಅವರ ಗೌಪ್ಯತೆಯನ್ನು ಗೌರವಿಸುವಂತೆ ಅನುಯಾಯಿಗಳಲ್ಲಿ ಮನವಿ ಮಾಡಿತು. ಜನರು ಅವರ ಖಾಸಗಿ ಆಸ್ತಿಯ ಬಳಿ ಸೇರದಂತೆ ಮತ್ತು ಅವರ ಕುಟುಂಬ ಮತ್ತು ಪ್ರೀತಿಪಾತ್ರರನ್ನು ಸ್ಮರಿಸಿ ಪ್ರಾರ್ಥಿಸಬೇಕು ಎಂದು ಅವರು ವಿನಂತಿಸಿದರು. ಅನುನಯ್ ಸಾವಿಗೆ ಕಾರಣ ತಿಳಿದು ಬಂದಿಲ್ಲ.
ಇದನ್ನೂ ಓದಿ: Viral Video: ನೋಡ ನೋಡುತ್ತಿದ್ದಂತೆ ಕುಸಿದು ಬಿತ್ತು ರೋಮ್‌ನ ಪ್ರಾಚೀನ ಗೋಪುರ: ವಿಡಿಯೋ ನೋಡಿ
ನಮ್ಮ ಪ್ರೀತಿಯ ಅನುನಯ್ ಸೂದ್ ಅವರ ನಿಧನದ ಸುದ್ದಿಯನ್ನು ಹಂಚಿಕೊಳ್ಳಲು ನಮಗೆ ತುಂಬಾ ದುಃಖವಾಗಿದೆ. ಈ ಕಷ್ಟದ ಸಮಯದಲ್ಲಿ ನಾವು ಗೌಪ್ಯತೆಯನ್ನು ದಯೆಯಿಂದ ಕೇಳುತ್ತೇವೆ. ವೈಯಕ್ತಿಕ ಆಸ್ತಿಯ ಬಳಿ ಯಾರೂ ಕೂಡ ಬರದಂತೆ ನಾವು ವಿನಮ್ರವಾಗಿ ವಿನಂತಿಸುತ್ತೇವೆ. ದಯವಿಟ್ಟು ಅವರ ಕುಟುಂಬ ಮತ್ತು ಪ್ರೀತಿಪಾತ್ರರನ್ನು ಪ್ರಾರ್ಥಿಸಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಎಂದು ಅನುನಯ್ ಸೂದ್ ಅವರ ಕುಟುಂಬ ಮತ್ತು ಸ್ನೇಹಿತರು ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅನುನಯ್ ಅವರ ಪೋಸ್ಟ್‌ಗಳ ಮೂಲಕ ಅಭಿಮಾನಿಗಳು ಅವರ ಪ್ರಯಾಣ ಮತ್ತು ಅವರು ಭೇಟಿ ನೀಡಿದ ಪ್ರದೇಶಗಳನ್ನು ತಾವು ಕುಳಿತಲ್ಲಿಂದಲೇ ನೋಡಲು ಸಾಧ್ಯವಾಯಿತು. ಆದರೆ, ಅವರ ಜೀವನ ಪ್ರಯಾಣವು ದುರಂತವಾಗಿ ಅಂತ್ಯಗೊಂಡಿದೆ. ಅನುನಯ್ ಸಾವಿನ ಸುದ್ದಿ ಕೇಳಿ ಅವರ ಅನುಯಾಯಿಗಳು ಮತ್ತು ನೆಟ್ಟಿಗರು ಆಘಾತಕೊಂಡಿದ್ದಾರೆ. ಈ ವಿಚಾರವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಕುಟುಂಬವು ಈ ದುಃಖ ತೋಡಿಕೊಂಡಿತು.
ವರದಿಗಳ ಪ್ರಕಾರ, 32 ವರ್ಷದ ಇನ್ಫ್ಲುಯೆನ್ಸರ್ ಅನುನಯ್ ನಿಧನರಾದಾಗ ಲಾಸ್ ವೇಗಾಸ್‌ನಲ್ಲಿದ್ದರು. ಅವರ ಇತ್ತೀಚಿನ ಪೋಸ್ಟ್‌ಗಳನ್ನು ಗಮನಿಸಿದರೆ, ಅವರು ಸ್ವಲ್ಪ ಸಮಯದವರೆಗೆ ನಗರದಲ್ಲಿದ್ದರು ಎಂದು ತಿಳಿದು ಬರುತ್ತದೆ. ಕೆಲವೇ ದಿನಗಳ ಹಿಂದೆ ಅವರ ಕೊನೆಯ ಪೋಸ್ಟ್‌ನಲ್ಲಿ, ಅವರು ನಗರದಲ್ಲಿ ಸ್ಪೋರ್ಟ್ಸ್ ಕಾರುಗಳನ್ನು ಓಡಿಸುವುದನ್ನು ಆನಂದಿಸುತ್ತಿರುವುದನ್ನು ತೋರಿಸಲಾಗಿದೆ.
ಅನುನಯ್ ಸೂದ್ ಅವರ ನಿಧನದಿಂದ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಹಾಗೂ ಅವರ ಅನುಯಾಯಿಗಳಿಗೆ ತುಂಬಲಾರದ ನಷ್ಟವಾಗಿದೆ. ಅವರ ನಿಧನಕ್ಕೆ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ ವಿಚಾರಗಳು ಮತ್ತು ಸಂತೋಷವು ಎಂದಿಗೂ ಸ್ಮರಣೀಯವಾಗಿರುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.