Russian oil trade: ರಷ್ಯಾದಿಂದ ತೈಲ ಖರೀದಿ- ಅಮೆರಿಕ ವಿರೋಧದ ನಡುವೆಯೇ ಪುಟಿನ್ ಭೇಟಿಯಾದ ಜೈಶಂಕರ್
ರಷ್ಯಾದಿಂದ ಭಾರತ ತೈಲ ಖರೀದಿಸದಂತೆ ಮಾಡಲು ಅಮೆರಿಕ ಸಾಕಷ್ಟು ಪ್ರಯತ್ನ ಮಾಡಿದರೂ ಭಾರತ ಇದಕ್ಕೆ ಕ್ಯಾರೇ ಎನ್ನುತ್ತಿಲ್ಲ. ಇತ್ತೀಚೆಗೆ ಅಮೆರಿಕ ಹೆಚ್ಚುವರಿಯಾಗಿ ವಿಧಿಸಿರುವ ಸುಂಕವನ್ನು ಸ್ವೀಕರಿಸಿರುವ ಭಾರತ ರಷ್ಯಾದೊಂದಿಗೆ ತನ್ನ ಸಂಬಂಧವನ್ನು ಮತ್ತಷ್ಟು ಬಲ ಪಡಿಸುತ್ತಲೇ ಇದೆ. ರಷ್ಯಾದ ತೈಲ ಖರೀದಿಗೆ ಅಮೆರಿಕದ ಟೀಕೆಗಳ ನಡುವೆಯೇ ಮಾಸ್ಕೋದಲ್ಲಿ ಜೈಶಂಕರ್ ಪುಟಿನ್ ಅವರನ್ನು ಭೇಟಿಯಾದರು.


ಮಾಸ್ಕೋ: ರಷ್ಯಾದೊಂದಿಗೆ ಭಾರತದ ವ್ಯಾಪಾರ ವಹಿವಾಟನ್ನು ಸಮತೋಲಿತ ಮತ್ತು ಸುಸ್ಥಿರ ರೀತಿಯಲ್ಲಿ ವಿಸ್ತರಿಸಲು ಕ್ರಮ ಕೈಗೊಳ್ಳುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಅವರಿಗೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ (External Affairs Minister S Jaishankar) ಭರವಸೆ ನೀಡಿದ್ದಾರೆ. ರಷ್ಯಾದಿಂದ (Russia) ಭಾರತ ತೈಲ ಖರೀದಿ (Russian oil trade) ಮಾಡುತ್ತಿರುವುದಕ್ಕೆ ಅಮೆರಿಕ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ಭಾರತ ಇದಕ್ಕೆ ಕ್ಯಾರೇ ಎನ್ನುತ್ತಿಲ್ಲ. ಬದಲಾಗಿ ಅಮೆರಿಕ ವಿಧಿಸಿರುವ ದಂಡನಾತ್ಮಕ ಸುಂಕವನ್ನು ಸ್ವೀಕರಿಸಿ ರಷ್ಯಾದೊಂದಿಗೆ ತನ್ನ ಸಂಬಂಧವನ್ನು ಮತ್ತಷ್ಟು ಬಲ ಪಡಿಸುತ್ತಿದೆ. ಇದಕ್ಕೂ ಮೊದಲು ಜೈಶಂಕರ್ ಅವರು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರನ್ನು ಭೇಟಿ ಮಾಡಿದ್ದರು.
ಮಾಸ್ಕೋದಲ್ಲಿ ಗುರುವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಭೇಟಿ ಮಾಡಿದರು. ರಷ್ಯಾದ ತೈಲ ಮಾರಾಟ ಮತ್ತು ಖರೀದಿಯ ಕುರಿತು ಭಾರತವನ್ನು ಪದೇ ಪದೆ ಟೀಕಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಹೆಚ್ಚುವರಿಯಾಗಿ ಶೇ. 50ರಷ್ಟು ಸುಂಕಗಳನ್ನು ವಿಧಿಸಿರುವುದರಿಂದ ಈ ಸಭೆ ಹೆಚ್ಚು ಮಹತ್ವ ಪಡೆದಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಗೆ ಮುಂಚಿತವಾಗಿ ಮಂಗಳವಾರ ವಿದೇಶಾಂಗ ಸಚಿವ ದೋವಲ್ ಮಾಸ್ಕೋದಲ್ಲಿ ಪುಟಿನ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಅವರು ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಘೋಷಿಸಿದರು. ಜೈಶಂಕರ್ ಅವರು ಗುರುವಾರ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರನ್ನು ಭೇಟಿಯಾಗಿ ಭಾರತ ಮತ್ತು ರಷ್ಯಾ ನಡುವಿನ ವ್ಯಾಪಾರಕ್ಕೆ ಇರುವ ಅಡೆತಡೆಗಳನ್ನು ತ್ವರಿತವಾಗಿ ಪರಿಹರಿಸುವ ಅಗತ್ಯವಿದೆ ಎಂದು ತಿಳಿಸಿದರು.
ಎರಡನೇ ಮಹಾಯುದ್ಧದ ಅನಂತರ ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳು ವಿಶ್ವದ ಪ್ರಮುಖ ಸಂಬಂಧಗಳಲ್ಲಿ ಅತ್ಯಂತ ಸ್ಥಿರವಾದ ಸಂಬಂಧವಾಗಿದೆ ಎಂದು ಲಾವ್ರೊವ್ ಅವರೊಂದಿಗಿನ ಜಂಟಿ ಮಾಧ್ಯಮ ಸಭೆಯಲ್ಲಿ ಜೈಶಂಕರ್ ತಿಳಿಸಿದರು. ರಷ್ಯಾದ ಕಚ್ಚಾ ತೈಲ ಖರೀದಿಗೆ ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್‌ನವರೊ ಅವರು ಟೀಕೆಗೆ ಪ್ರತಿಕ್ರಿಯಿಸಿದ ಜೈಶಂಕರ್, ಭಾರತವು ರಷ್ಯಾ ತೈಲದ ಅತಿದೊಡ್ಡ ಖರೀದಿದಾರನಲ್ಲ. 2022ರ ಅನಂತರ ಮಾಸ್ಕೋದೊಂದಿಗೆ ಅತಿದೊಡ್ಡ ವ್ಯಾಪಾರ ಏರಿಕೆಯನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Karnataka Weather: ಇಂದು ಕರಾವಳಿ ಜತೆಗೆ ಈ ಜಿಲ್ಲೆಗಳಲ್ಲೂ ಸುರಿಯಲಿದೆ ಮಳೆ
ರಷ್ಯಾ ತೈಲದ ಅತಿದೊಡ್ಡ ಖರೀದಿದಾರ ಚೀನಾ. 2022ರ ಅನಂತರ ರಷ್ಯಾದೊಂದಿಗೆ ಅತಿದೊಡ್ಡ ವ್ಯಾಪಾರವನ್ನು ಭಾರತ ನಡೆಸಿಲ್ಲ ಎಂದು ಹೇಳಿದ ಅವರು, ಇಂಧನ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಭಾರತ ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುತ್ತಿದೆ ಎಂದರು. ಕಳೆದ ಕೆಲವು ವರ್ಷಗಳಿಂದ ಅಮೆರಿಕನ್ನರು ರಷ್ಯಾದಿಂದ ತೈಲವನ್ನು ಖರೀದಿಸುವುದು ಸೇರಿದಂತೆ ವಿಶ್ವ ಇಂಧನ ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಹೇಳಿದ್ದರು. ನಾವು ಅಮೆರಿಕದಿಂದ ಕೂಡ ತೈಲವನ್ನು ಖರೀದಿಸುತ್ತೇವೆ ಮತ್ತು ಆ ಪ್ರಮಾಣವು ಹೆಚ್ಚುತ್ತಿದೆ ಎಂದು ಜೈಶಂಕರ್ ಹೇಳಿದರು.