ಪಾಕ್ ಪ್ರಧಾನಿ ಎದುರಲ್ಲೇ ಭಯೋತ್ಪಾದನೆ ವಿರುದ್ಧ ಖಡಕ್ ಸಂದೇಶ ನೀಡಿದ ಮೋದಿ; ಉಗ್ರ ಪೋಷಕ ದೇಶಕ್ಕೆ ಮಾತಿನಲ್ಲಿ ಚಾಟಿ
PM Modi: ಬಿಷ್ಕೆಕ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಪಾಕಿಸ್ತಾನಕ್ಕೆ ನೇರಾ ನೇರವಾಗಿ ಖಡಕ್ ಎಚ್ಚರಿಕೆ ನೀಡಿದ್ದು, ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಎದುರೇ ಭಯೋತ್ಪಾದನೆ ವಿರುದ್ಧ ಗುಡುಗಿದ್ದಾರೆ. ಶೆಹಬಾಜ್ ಶರೀಫ್ ಮತ್ತು ಇತರ ಎಸ್‌ಸಿಒ ನಾಯಕರ ಸಮ್ಮುಖದಲ್ಲಿ ಮೋದಿ ಅವರು, ಭಯೋತ್ಪಾದನೆಯ ನಿಗ್ರಹದ ಕುರಿತು ಖಡಕ ಸಂದೇಶವನ್ನು ನೀಡಿದ್ದಾರೆ. ಉಗ್ರರಿಗೆ ಆಸ್ರಯ ನೀಡುವ ದೇಶಗಳ ವಿರುದ್ಧ ದ್ವಿಮುಖ ನೀತಿಗೆ ಜಾಗವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ -
ಬಿಷ್ಕೆಕ್: ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ಆಯೋಜಿಸಲಾದ 26ನೇ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ (SCO) ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಭಯೋತ್ಪಾದನೆ ವಿರುದ್ಧ ಖಡಕ್ ಸಂದೇಶವನ್ನು ನೀಡಿದ್ದಾರೆ. ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ (Shehbaz Sharif) ಎದುರೇ ಗುಡುಗಿದ ಮೋದಿ, ‘ಭಯೋತ್ಪಾದನೆಯನ್ನು ಯಾವುದೇ ದೇಶವು ತನ್ನ ರಾಜಕೀಯ ಅಥವಾ ಮೂಲತಂತ್ರದ ಅಸ್ತ್ರವಾಗಿ ಬಳಸಿಕೊಳ್ಳಲ್ಲು ಸಾಧ್ಯವಿಲ್ಲ. ಭಯೋತ್ಪಾದನೆ ವಿಷಯದಲ್ಲಿ ದ್ವಿಮುಖ ನೀತಿವಹಿಸುವುದುನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಭಯೋತ್ಪಾದನೆ ಎಂಬ ಗಂಭೀರ ವಿಷಯದ ಕುರಿತು ಯಾವುದೇ ರೀತಿಯ ದ್ವಂದ್ವ ನೀತಿಗೆ ಅವಕಾಶವಿಲ್ಲ ಎಂಬುದನ್ನು ನಾವೆಲ್ಲರೂ ಒಂದೇ ಧ್ವನಿಯಲ್ಲಿ ಸ್ಪಷ್ಟಪಡಿಸಬೇಕು. ಭಯೋತ್ಪಾದನೆಯನ್ನು ತಮ್ಮ ಸರ್ಕಾರಿ ನೀತಿಯನ್ನಾಗಿ ಬಳಸಿಕೊಳ್ಳುವ ಹಾಗೂ ಭಯೋತ್ಪಾದಕರಿಗೆ ಆಶ್ರಯ ಮತ್ತು ಬೆಂಬಲ ನೀಡುವ ದೇಶಗಳಿಗೆ ಕಠಿಣ ಸಂದೇಶ ರವಾನಿಸಬೇಕು, ಭಯೋತ್ಪಾದನೆಯು ಯಾವುದೇ ದೇಶಕ್ಕೂ ಕಾರ್ಯತಂತ್ರದ ಆಸ್ತಿ ಆಗಲು ಸಾಧ್ಯವಿಲ್ಲ’ ಎಂದು ಹೇಳಿದರು.
ಭಾರತವು ದಶಕಗಳಿಂದ ಗಡಿದಾಟಿದ ಭಯೋತ್ಪಾದನೆಯಿಂದ ನರಳುತ್ತಾ ಬಂದಿದೆ. ಜಾಗತಿಕ ವೇದಿಕೆಗಳಲ್ಲಿ ಈ ವಿಷಯವನ್ನು ನಿರಂತರವಾಗಿ ಎತ್ತುತ್ತಲೇ ಬಂದಿದೆ. ಎಸ್‌ಸಿಒ ವೇದಿಕೆಯಲ್ಲಿ ಪಾಕಿಸ್ತಾನದ ಪ್ರಧಾನಿ ಕಣ್ಣೆದುರೇ ಮೋದಿ ಅವರು ಈ ವಿಷಯವನ್ನು ಪ್ರಸ್ತಾಪಿಸುವ ಮೂಲಕ ‘ಉಗ್ರವಾದ ಪೋಷಿಸುವುದನ್ನು ನಿಲ್ಲಿಸದ ಹೊರತು ದ್ವಿಪಕ್ಷೀಯ ಬಾಂಧವ್ಯ ಅಥವಾ ಪ್ರಾದೇಶಿಕ ಶಾಂತಿ ಸಾಧ್ಯವಿಲ್ಲ’ ಎಂದು ಸ್ಪಷ್ಟ ಸಂದೇಶವನ್ನು ತಲುಪಿಸಿದೆ.
ಜಾಗತಿಕ ಭದ್ರತೆ ಸವಾಲುಗಳ ಕುರಿತು ಮೋದಿ ಕಳವಳ
ಪ್ರಾದೇಶಿಕ ಹಾಗೂ ಜಾಗತಿಕ ಭದ್ರೆತೆಯ ಹೊಸ ಸವಾಲುಗಳ ಕುರಿತು ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ‘ಯಾವುದೇ ಒಂದು ಪ್ರದೇಶದಲ್ಲಿ ನಡೆಯುವ ಸಂಘರ್ಷವು ಆ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅದರ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳು ಇಡೀ ವಿಶ್ವದ ಇಂಧನ ಭದ್ರತೆ, ಸಾಮುದ್ರಿಕ ವ್ಯಾಪಾರ ಹಾಗೂ ಜಾಗತಿಕ ಪೂರೈಕೆ ಸರಪಳಿಗಳ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತವೆ’ ಎಂದು ಎಚ್ಚರಿಸಿದರು.
ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆಯು ಯುವಜನತೆಗೆ ಹಾಗೂ ಪ್ರಾದೇಶಿಕ ಭದ್ರತೆಗೆ ಎದುರಾಗಿರುವ ದೊಡ್ಡ ಬೆದರಿಕೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದರು. ನಾರ್ಕೋಟಿಕ್ಸ್ ಮತ್ತು ಸಂಘಟಿತ ಅಪರಾಧಗಳನ್ನು ತಡೆಯಲು ಎಸ್‌ಸಿಒ ಸದಸ್ಯ ರಾಷ್ಟ್ರಗಳ ನಡುವೆ ಬಲವಾದ ಸಹಕಾರದ ಅಗತ್ಯವಿದೆ ಎಂದು ಅವರು ಕರೆ ನೀಡಿದ್ದಾರೆ. ‘ಮಾದಕ ದ್ರವ್ಯ ಕಳ್ಳಸಾಗಣೆ ಎಂಬುದು ಕೇವಲ ಒಂದು ಅಪರಾಧವಲ್ಲ, ಅದು ನಮ್ಮ ಯುವ ಪೀಳಿಗೆ ಹಾಗೂ ಪ್ರಾದೇಶಿಕ ಭದ್ರತೆಗೆ ಎದುರಾಗಿರುವ ಗಂಭೀರ ಸವಾಲಾಗಿದೆ’ ಎಂದು ಎಚ್ಚರಿಸಿದರು.
ಮೆಲೋಡಿ ಚಾಕೊಲೇಟ್ ಬೆನ್ನಲ್ಲೇ ಮೋದಿ-ಮೆಲೋನಿಯ ಮತ್ತೊಂದು ವಿಡಿಯೊ ವೈರಲ್; ಹಿಂದಿಯಲ್ಲಿ ಮಾತನಾಡಿದ ಇಟಲಿ ಪ್ರಧಾನಿ
ಇದೇ ವೇಳೆ, ಭದ್ರತಾ ಬೆದರಿಕೆಗಳು, ಸಂಘಟಿತ ಅಪರಾಧಗಳು, ಮಾಹಿತಿ ಭದ್ರತೆ ಮತ್ತು ಮಾದಕ ದ್ರವ್ಯ ನಿಯಂತ್ರಣದಂತಹ ಸವಾಲುಗಳನ್ನು ಎದುರಿಸಲು ಎಸ್‌ಇಒ ಅಡಿಯಲ್ಲಿ ಸ್ಥಾಪಿಸಲಾಗುತ್ತಿರುವ ವಿಶೇಷ ಕೇಂದ್ರಗಳನ್ನು ಕುರಿತು ಮಾತನಾಡಿದ ಪ್ರಧಾನಿ, ‘ಈ ಕೇಂದ್ರಗಳನ್ನು ಪ್ರಾಯೋಗಿಕ ಸಮನ್ವಯತೆ ಮತ್ತು ಸೂಕ್ತ ಸಮಯದ ಕಾರ್ಯಾಚರಣೆಗೆ ಬಳಸಿಕೊಳ್ಳುವ ಕಟ್ಟುನಿಟ್ಟಿನ ವೇದಿಕೆಗಳನ್ನಾಗಿ ನಾವು ಮಾರ್ಪಡಿಸಬೇಕು" ಎಂದು ಆಶಿಸಿದರು.