ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಬಿಗ್‌ ರಿಲೀಫ್‌; ಎಫ್‌ಐಆರ್‌ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

Cockroach Janata Party: ಜುಲೈಯಲ್ಲಿ ದೆಹಲಿಯ ಜಂತರ್‌-ಮಂತರ್‌ನಲ್ಲಿ ಸಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಸುಪ್ರೀಂ ಕೋರ್ಟ್‌ ರಿಲೀಫ್‌ ನೀಡಿದೆ. ಅಪರಾಧ ಹಿನ್ನೆಲೆ ಹೊಂದಿದವರನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರತಿಭಟನಾಕಾರರ ಮೇಲಿನ ಎಫ್‌ಐಆರ್‌ ರದ್ದು ಪಡಿಸಿ ಆದೇಶ ಹೊರಡಿಸಿದೆ.

ಸಿಜೆಪಿ ಪ್ರತಿಭಟನಾಕಾರರ ಎಫ್‌ಐಆರ್‌ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Sep 1, 2026 3:21 PM

ದೆಹಲಿ, ಸೆ. 1: ಜುಲೈಯಲ್ಲಿ ದೆಹಲಿಯ ಜಂತರ್‌-ಮಂತರ್‌ನಲ್ಲಿ ಸಿಜೆಪಿ (Cockroach Janata Party) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಸುಪ್ರೀಂ ಕೋರ್ಟ್‌ (Supreme Court) ರಿಲೀಫ್‌ ನೀಡಿದೆ. ಅಪರಾಧ ಹಿನ್ನೆಲೆ ಹೊಂದಿದವರನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರತಿಭಟನಾಕಾರರ ಮೇಲಿನ ಎಫ್‌ಐಆರ್‌ ರದ್ದು ಪಡಿಸಿ ಆದೇಶ ಹೊರಡಿಸಿದೆ. ನೀಟ್‌ ಪರೀಕ್ಷೆಯಲ್ಲಿನ ಅಕ್ರಮ ವಿರೋಧಿಸಿ ಜುಲೈಯಲ್ಲಿ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿದ ಬಳಿಕ ಎಫ್‌ಐಆರ್‌ ದಾಖಲಿಸಲಾಗಿತ್ತು. ಎಫ್‌ಐಆರ್‌ ರದ್ದುಗೊಂಡ ಬೆನ್ನಲ್ಲೇ ಸೆಪ್ಟೆಂಬರ್‌ 5ರಂದು ದೆಹಲಿಯಲ್ಲಿ ನಡೆಸಲು ಉದ್ದೇಶಿಸಿದ್ದ ಮತ್ತೊಂದು ಹಂತದ ಪ್ರತಿಭಟನೆಯನ್ನು ಸಿಜೆಪಿ ಹಿಂಪಡೆದಿದೆ.

ಭಾರತೀಯ ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ ತನ್ನ ಅಸಾಧಾರಣ ಅಧಿಕಾರವನ್ನು ಬಳಸಿಕೊಂಡು ಎಫ್‌ಐಆರ್‌ ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರದ ವಾದವನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಜುಲೈ 20ರಿಂದ 25ರ ನಡುವೆ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲ ಎಫ್‌ಐಆರ್‌ಗಳನ್ನು ರದ್ದುಗೊಳಿಸಿದೆ. ಜತೆಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ರದ್ದುಗೊಳಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಜುಲೈ 20ರ ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯಲಾಗುವುದು ಮತ್ತು ಅದೇ ಪ್ರತಿಭಟನೆಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದ ನಂತರ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಸ್ವಾಗತಿಸಿದ ಸಿಜೆಪಿ

ಕೇಂದ್ರದ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ಸೆಪ್ಟೆಂಬರ್ 5ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ʼʼವಿದ್ಯಾರ್ಥಿಗಳ ಪ್ರತಿಭಟನೆಗಳಿಗೆ ಸಂಬಂಧಿಸಿದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಕೇಂದ್ರ ಮತ್ತು ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಸರ್ಕಾರಗಳು ಅರ್ಜಿ ಸಲ್ಲಿಸಿವೆ. ಜುಲೈ 20ರಿಂದ ಜುಲೈ 25ರವರೆಗೆ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಯಾವುದೇ ಎಫ್‌ಐಆರ್‌ ದಾಖಲಿಸಲಾಗುವುದಿಲ್ಲ ಎಂದು ಭರವಸೆ ನೀಡಿವೆʼʼ ಎಂದು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು. ʼʼಜುಲೈ 25ರಂದು ಕೇಂದ್ರ ಸರ್ಕಾರವು ಸಿಜೆಪಿ ನಾಯಕರಿಗೆ ನೀಡಿದ ಭರವಸೆಯಂತೆ ಎಫ್‌ಐಆರ್‌ ಹಿಂಪಡೆಯಲಾಗಿದೆʼʼ ಎಂದು ಅವರು ವಿವರಿಸಿದರು.

ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯದೆ ಕೇಂದ್ರವು ವಿಶ್ವಾಸ ದ್ರೋಹ ಮಾಡಿದೆ ಎಂದು ಆರೋಪಿಸಿ ಸಿಜೆಪಿ ಸೆಪ್ಟೆಂಬರ್ 5ರಂದು ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಿತ್ತು. ಇದೀಗ ಕೇಂದ್ರ ತನ್ನ ಮಾತು ಉಳಿಸಿಕೊಂಡಿದೆ.

ಕ್ರಿಮಿನಲ್‌ಗಳ ಎಫ್‌ಐಆರ್‌ ರದ್ದಾಗುವುದಿಲ್ಲ

ಅದಾಗ್ಯೂ ಅಪರಾಧ ಹಿನ್ನೆಲೆ ಹೊಂದಿದವರ ವಿರುದ್ಧದ ಕಾನೂನು ಕ್ರಮ ಮುಂದುವರಿಯಲಿದೆ. ಅವರ ಮೇಲಿನ ಎಫ್‌ಐಆರ್‌ ರದ್ದಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಗಂಭೀರ ಕ್ರಿಮಿನಲ್ ಹಿನ್ನೆಲೆ ಹೊಂದಿರುವ 2,873 ಜನರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಜತೆಗೆ ಆತ್ಮಹತ್ಯೆ ಮಾಡಿಕೊಂಡ ನೀಟ್-ಯುಜಿ ಆಕಾಂಕ್ಷಿಗಳ ಕುಟುಂಬಗಳಿಗೆ 3 ತಿಂಗಳೊಳಗೆ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ.