ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಇರಾನ್ ಕ್ಷಿಪಣಿ ದಾಳಿ: ಮೃತ ಇಬ್ಬರು ಭಾರತೀಯ ನಾವಿಕರ ಗುರುತು ಪತ್ತೆ
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ದಾಳಿಯಿಂದ ಹಡಗು ತೀವ್ರವಾಗಿ ಹಾನಿಗೊಳಗಾಗಿದ್ದು, ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಭಾರತೀಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ.
ಇರಾನ್ ಕ್ಷಿಪಣಿ ದಾಳಿಗೆ ಹೊತ್ತಿ ಉರಿದ ಹಡಗು -
ನವದೆಹಲಿ, ಮಾ. 5: ಇರಾನ್ ಕ್ಷಿಪಣಿ ದಾಳಿಗೆ ತುತ್ತಾದ 'ಸ್ಕೈಲೈಟ್' (Skylight) ಎಂಬ ತೈಲ ನೌಕೆಯಲ್ಲಿದ್ದ ಇಬ್ಬರು ಭಾರತೀಯ ನಾವಿಕರು (Indian Sailors) ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಮೆರಿಕ-ಇಸ್ರೇಲ್ (America-Israel) ಮತ್ತು ಇರಾನ್ (Iran) ನಡುವೆ ಉಲ್ಬಣಗೊಂಡಿರುವ ಉದ್ವಿಗ್ನತೆಯ ಮಧ್ಯೆ ಒಮನ್ ಕೊಲ್ಲಿಯಲ್ಲಿ (Gulf of Oman) ಈ ಭೀಕರ ದಾಳಿ ನಡೆದಿದೆ. ಈ ಘಟನೆಯಲ್ಲಿ ಮೃತಪಟ್ಟವರನ್ನು ಬಿಹಾರದ (Bihar) ಕ್ಯಾಪ್ಟನ್ ಆಶಿಶ್ ಕುಮಾರ್ (Captain Ashish Kumar) ಮತ್ತು ರಾಜಸ್ಥಾನದ (Rajasthan) ನಾವಿಕ ದಲೀಪ್ ಸಿಂಗ್ (Dalip Singh) ಎಂದು ಗುರುತಿಸಲಾಗಿದೆ ಎಂಬುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಪಲಾವ್ (Palau) ದೇಶದ ಧ್ವಜದ ಅಡಿಯಲ್ಲಿ ಚಲಿಸುತ್ತಿದ್ದ ಈ ತೈಲ ನೌಕೆಯು ಒಮನ್‌ನ ಮುಸಂದಮ್ ಪರ್ಯಾಯ ದ್ವೀಪದ ಸಮೀಪ ದಾಳಿಗೆ ಒಳಗಾಗಿದೆ. ಈ ಹಡಗಿನಲ್ಲಿ ಒಟ್ಟು 20 ಸಿಬ್ಬಂದಿ ಇದ್ದರು. ಅವರಲ್ಲಿ 15 ಮಂದಿ ಭಾರತೀಯರು ಮತ್ತು 5 ಮಂದಿ ಇರಾನಿ ಪ್ರಜೆಗಳು. ದಾಳಿಯ ನಂತರ ಒಮನ್‌ನ ಕಡಲ ಭದ್ರತಾ ಕೇಂದ್ರವು (MSC) ಎಲ್ಲ 20 ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆಯೆಂದು ಘೋಷಿಸಿತ್ತಾದರೂ, ಇಬ್ಬರು ನಾವಿಕರು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಖಮೇನಿ ಹತ್ಯೆ ಖಂಡಿಸಿ ಪ್ರತಿಭಟಿಸಿದ ಕಾಂಗ್ರೆಸ್ ಶಾಸಕನಿಗೆ ಈಗ ಸಂಕಷ್ಟ
ವರದಿಯ ಪ್ರಕಾರ, ದಾಳಿಯ ತೀವ್ರತೆಗೆ ಹಡಗಿನಲ್ಲಿದ್ದ ಇಬ್ಬರ ದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಕೇವಲ ಮೂಳೆಗಳ ಅವಶೇಷಗಳು ಮಾತ್ರ ಪತ್ತೆಯಾಗಿವೆ. ಕ್ಯಾಪ್ಟನ್ ಆಶಿಶ್ ಅವಶೇಷಗಳು ಅವರ ಕ್ಯಾಬಿನ್‌ನಲ್ಲೇ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಆಶಿಶ್ ಅವರ ಕುಟುಂಬಕ್ಕೆ ಇಮೇಲ್ ಮೂಲಕ ಅವರ ಸಾವಿನ ಸುದ್ಧಿ ತಲುಪಿದ್ದು, ಕುಟುಂಬವು ತೀವ್ರ ಆಘಾತಕ್ಕೊಳಗಾಗಿದೆ. ಇನ್ನು ರಾಜಸ್ಥಾನದ ನಾಗೌರ್ ಜಿಲ್ಲೆಯ ಖಿನ್ವತಾನ ಗ್ರಾಮದ ದಲೀಪ್ ಸಿಂಗ್ ಜನವರಿ 22ರಂದು ಹಡಗಿನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು.
ಈ ಬೆಳವಣಿಗೆಯು ಇರಾನ್ ನೀಡಿದ್ದ ಗಂಭೀರ ಎಚ್ಚರಿಕೆಯ ಬೆನ್ನಲ್ಲೇ ಸಂಭವಿಸಿದೆ. ಹೋರ್ಮುಜ್ ಜಲಸಂಧಿಯನ್ನು (Strait of Hormuz) ಮುಚ್ಚಲಾಗಿದ್ದು, ಅಲ್ಲಿ ಹಾದುಹೋಗುವ ಯಾವುದೇ ಹಡಗನ್ನು ಸುಟ್ಟು ಹಾಕುವುದಾಗಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್ಸ್ ಕಮಾಂಡರ್ ಸಲಹೆಗಾರ ಇಬ್ರಾಹಿಂ ಜಬಾರಿ ತಿಳಿಸಿದ್ದರು. ಈ ಜಲಸಂಧಿಯು ಸೌದಿ ಅರೇಬಿಯಾ, ಇರಾನ್, ಇರಾಕ್ ಮತ್ತು ಯುಎಇ ಅಂತಹ ಪ್ರಮುಖ ತೈಲ ಉತ್ಪಾದಕ ದೇಶಗಳನ್ನು ಸಂಪರ್ಕಿಸುವ ವಿಶ್ವದ ಅತ್ಯಂತ ಪ್ರಮುಖ ತೈಲ ರಫ್ತು ಮಾರ್ಗ. ಈ ಘಟನೆಯು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.