ಹೊರ್ಮುಜ್ ಜಲಸಂಧಿ ಮುಕ್ತ, ಇರಾನ್ ಅಭಿವೃದ್ಧಿಗೆ 300 ಬಿಲಿಯನ್ ಡಾಲರ್ ನಿಧಿ: ಒಪ್ಪಂದದ ಪಠ್ಯ ಬಿಡುಗಡೆ ಮಾಡಿದ ಅಮೆರಿಕ
US Releases Text of Agreement: ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದಂತೆ 14 ಅಂಶಗಳ ಒಪ್ಪಂದದ ಸಂಪೂರ್ಣ ಪಠ್ಯವನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಬಹಿರಂಗಪಡಿಸಿದೆ. ಈ ದಾಖಲೆಗೆ ಅಧಿಕೃತವಾಗಿ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನಡುವಿನ ಇಸ್ಲಾಮಾಬಾದ್ ತಿಳುವಳಿಕೆ ಒಪ್ಪಂದ ಎಂದು ಹೆಸರಿಡಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -
ವಾಷಿಂಗ್ಟನ್, ಜೂ.18: ವಾರಾಂತ್ಯದಲ್ಲಿ ಇರಾನ್‌ನೊಂದಿಗೆ ತಲುಪಿದ್ದ 14 ಅಂಶಗಳ ಒಪ್ಪಂದದ ಸಂಪೂರ್ಣ ಪಠ್ಯವನ್ನು ಅಮೆರಿಕ ಸಂಯುಕ್ತ ಸಂಸ್ಥಾನ (United States) ಬಹಿರಂಗಪಡಿಸಿದೆ. ಈ ಒಪ್ಪಂದದಲ್ಲಿ ನಿಖರವಾಗಿ ಏನೆಲ್ಲ ಅಂಶಗಳಿವೆ ಎಂಬುದರ ಬಗ್ಗೆ ಹಲವು ದಿನಗಳಿಂದ ಇದ್ದ ಊಹಾಪೋಹಗಳಿಗೆ ಇದರಿಂದ ತೆರೆ ಬಿದ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಘೋಷಿಸಿದ್ದ ಈ ಒಪ್ಪಂದದ ಬಗ್ಗೆ ಪಾರದರ್ಶಕತೆಯ ಕೊರತೆ ಇದೆ ಎಂಬ ಟೀಕೆಗಳು ಮತ್ತು ಸಾರ್ವಜನಿಕ ಒತ್ತಡ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ, ಅಮೆರಿಕದ ಅಧಿಕಾರಿಗಳು ಆಯೋಜಿಸಿದ್ದ ಕಾನ್ಫರೆನ್ಸ್ ಕರೆ ವೇಳೆ ಒಪ್ಪಂದದ ಕರಡು ಪಠ್ಯವನ್ನು ಓದಿ ವಿವರಿಸಿದರು.
ಈ ದಾಖಲೆಗೆ ಅಧಿಕೃತವಾಗಿ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನಡುವಿನ ಇಸ್ಲಾಮಾಬಾದ್ ತಿಳುವಳಿಕೆ ಒಪ್ಪಂದ ಎಂದು ಹೆಸರಿಡಲಾಗಿದೆ. ಈ ಒಪ್ಪಂದಕ್ಕೆ ಶುಕ್ರವಾರ (ಜೂ. 19) ಸಹಿ ಹಾಕುವ ನಿರೀಕ್ಷೆಯಿದ್ದು, ಅದರ ನಂತರ ಅಂತಿಮ ಒಪ್ಪಂದದ ಮಾತುಕತೆ ನಡೆಸಲು ಉಭಯ ದೇಶಗಳಿಗೆ 60 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆದರೆ, ಇರಾನ್ ಇಲ್ಲಿಯವರೆಗೆ ತನ್ನದೇ ಆದ ಯಾವುದೇ ವಿವರಗಳನ್ನು ಬಿಡುಗಡೆ ಮಾಡಿಲ್ಲ.
ಒಪ್ಪಂದದ ಪ್ರಕಾರ, ಲೆಬನಾನ್ ಸೇರಿದಂತೆ ಎಲ್ಲ ಮುಂಚೂಣಿಗಳಲ್ಲಿನ ಸೇನಾ ಕಾರ್ಯಾಚರಣೆಗಳನ್ನು ತಕ್ಷಣವೇ ಮತ್ತು ಶಾಶ್ವತವಾಗಿ ಕೊನೆಗೊಳಿಸಬೇಕು ಎಂದು ಕರೆ ನೀಡಲಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಗರಿಷ್ಠ 60 ದಿನಗಳೊಳಗೆ ಅಂತಿಮ ಒಪ್ಪಂದವನ್ನು ಮಾತುಕತೆಯ ಮೂಲಕ ಸಾಧಿಸಲು ಬದ್ಧವಾಗಿವೆ. ಪರಸ್ಪರ ಸಮ್ಮತಿಯೊಂದಿಗೆ ಈ ಅವಧಿಯನ್ನು ವಿಸ್ತರಿಸಬಹುದು ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
ಎಲ್ಲರಿಗೂ ತೆರೆಯಲಿದೆ ಹೊರ್ಮುಜ್ ಜಲಸಂಧಿ: ಕದನ ಮುಕ್ತಾಯದ ಸೂಚನೆ ಕೊಟ್ರಾ ಡೊನಾಲ್ಡ್ ಟ್ರಂಪ್
ಒಪ್ಪಂದದ ನಿಯಮಗಳ ಅಡಿಯಲ್ಲಿ, ಅಮೆರಿಕವು ಇರಾನ್ ಮೇಲಿನ ತನ್ನ ನೌಕಾ ದಿಗ್ಬಂಧನವನ್ನು 30 ದಿನಗಳಲ್ಲಿ ತೆಗೆದುಹಾಕಲು ಬದ್ಧವಾಗಿದೆ. ಆ ಅವಧಿಯಲ್ಲಿ, ಯುದ್ಧಪೂರ್ವ ಮಟ್ಟಕ್ಕೆ ಅನುಗುಣವಾಗಿ ಹಡಗು ಸಂಚಾರವನ್ನು ಪುನಃಸ್ಥಾಪಿಸಬೇಕು.
ಅಂತಿಮ ಒಪ್ಪಂದವು ಮುಕ್ತಾಯಗೊಂಡ 30 ದಿನಗಳಲ್ಲಿ ಅಮೆರಿಕವು ಇರಾನ್ ಸುತ್ತಮುತ್ತಲಿನ ಪ್ರದೇಶದಿಂದ ತನ್ನ ಮಿಲಿಟರಿ ಪಡೆಗಳನ್ನು ಹಿಂತೆಗೆದುಕೊಳ್ಳುತ್ತದೆ ಎಂದು ದಾಖಲೆಯಲ್ಲಿ ಹೇಳಲಾಗಿದೆ. ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಇರಾನ್ ತನ್ನ ಅತ್ಯುತ್ತಮ ಪ್ರಯತ್ನಗಳನ್ನು ಮಾಡಲಿದ್ದು, 60 ದಿನಗಳವರೆಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎಂದು ತಿಳಿಸಲಾಗಿದೆ.
ಪರಮಾಣು ಪ್ರಶ್ನೆಗೆ ಸಂಬಂಧಿಸಿದಂತೆ, ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಎರಡೂ ದೇಶಗಳು ಒಪ್ಪಿಕೊಂಡಿದ್ದಾರೆ. ಒಪ್ಪಂದದ ಪ್ರಕಾರ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಪುನರ್‌ನಿರ್ಮಾಣ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಕನಿಷ್ಠ 300 ಬಿಲಿಯನ್ ಡಾಲರ್ ಮೊತ್ತದ ನಿಧಿಯನ್ನು ಸ್ಥಾಪಿಸಲು ಅಮೆರಿಕ ಸಂಯುಕ್ತ ಸಂಸ್ಥಾನವು ತನ್ನ ಪ್ರಾದೇಶಿಕ ಪಾಲುದಾರರೊಂದಿಗೆ ಸೇರಿ ಬದ್ಧವಾಗಿದೆ. ಇರಾನ್ ವಿರುದ್ಧದ ಎಲ್ಲಾ ರೀತಿಯ ನಿರ್ಬಂಧಗಳನ್ನು ಅಮೆರಿಕ ಕೊನೆಗೊಳಿಸುತ್ತದೆ.