ಬಾಂಗ್ಲಾದೇಶದಲ್ಲಿ ಹಿಂಸಾಚಾರ: ಭಾರತೀಯ ಸಹಾಯಕ ಹೈಕಮಿಷನ್ ಕಚೇರಿ, ವೀಸಾ ಅರ್ಜಿ ಕೇಂದ್ರದಲ್ಲಿ ಬಿಗಿ ಭದ್ರತೆ
Violence in Bangladesh: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಭಾರತೀಯ ಸಹಾಯಕ ಹೈಕಮಿಷನ್ ಕಚೇರಿ ಹಾಗೂ ವೀಸಾ ಅರ್ಜಿ ಕೇಂದ್ರಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಅಶಾಂತಿ ಪರಿಸ್ಥಿತಿ ಉಲ್ಬಣಗೊಳ್ಳುತ್ತಿರುವುದರಿಂದ ಹೆಚ್ಚುವರಿ ಕ್ರಮಗಳನ್ನು ಜಾರಿಗೆ ತರಲಾಗಿದೆ.
ಬಾಂಗ್ಲಾದೇಶ ಉದ್ವಿಗ್ನ (ಸಂಗ್ರಹ ಚಿತ್ರ) -
ಢಾಕಾ: ಪ್ರಮುಖ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ (Sharif Osman Hadi) ಮರಣದ ನಂತರ ಬಾಂಗ್ಲಾದೇಶದಲ್ಲಿ ಹಿಂಸಾಚಾರ (Violence in Bangladesh) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್ ಕಚೇರಿ (Indian Assistant High Commission office) ಮತ್ತು ವೀಸಾ ಅರ್ಜಿ ಕೇಂದ್ರದಲ್ಲಿ (visa application centre) ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಢಾಕಾದ ಉಪಶಹರ್ ಪ್ರದೇಶದಲ್ಲಿರುವ ಸಹಾಯಕ ಹೈಕಮಿಷನ್ ಕಚೇರಿ, ಅದೇ ಪ್ರದೇಶದಲ್ಲಿರುವ ಸಹಾಯಕ ಹೈಕಮಿಷನರ್ ನಿವಾಸ ಮತ್ತು ಶೋಭಾನಿಘಾಟ್ ಪ್ರದೇಶದಲ್ಲಿರುವ ವೀಸಾ ಅರ್ಜಿ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಹತ್ಯೆ; 7 ಮಂದಿ ಶಂಕಿತರ ಬಂಧನ
ಗುಂಡಿನ ದಾಳಿಯಲ್ಲಿ ಹಾದಿ ಮೃತಪಟ್ಟ ಬಳಿಕ, ಇಂಕಿಲಾಬ್ ಮಂಚಾದ ವಕ್ತಾರ ಗೋನೊ ಓಧಿಕಾರ್, ಸಹಾಯಕ ಹೈಕಮಿಷನ್ ಕಚೇರಿಯನ್ನು ಮುತ್ತಿಗೆ ಹಾಕುವುದಾಗಿ ಘೋಷಿಸಿದ್ದರು. ಹೀಗಾಗಿ ರಾತ್ರಿಯಿಡೀ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಪರಿಸ್ಥಿತಿ ಉಲ್ಬಣಗೊಂಡಿರುವುದರಿಂದ ಯಾರೂ ಕೂಡ ಹಿಂಸಾಚಾರ ಮಾಡದಂತೆ ಕ್ರಮ ಕೈಗೊಳ್ಳುವ ಸಲುವಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಹಾದಿ ಹತ್ಯೆಯನ್ನು ಪ್ರತಿಭಟಿಸಿ ಇಂಕಿಲಾಬ್ ಮಂಚಾ ಕಾರ್ಯಕರ್ತರು, ಸಿಲ್ಹೆಟ್ ಸೆಂಟ್ರಲ್ ಶಹೀದ್ ಮಿನಾರ್ ಮುಂದೆ ಧರಣಿ ನಡೆಸಿದ್ದರು. ಭಾರತದ ವಿರುದ್ಧ ಘೋಷಣೆ ಕೂಗಿದ್ದರು.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರವನ್ನು ಪದಚ್ಯುತಗೊಳಿಸಲು ಕಾರಣರಾದ ಪ್ರಮುಖ ನಾಯಕ ಮತ್ತು ಪ್ರಮುಖ ವ್ಯಕ್ತಿ ಹಾದಿ. ಮುಂದಿನ ವರ್ಷ ಫೆಬ್ರವರಿ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಅವರು ಅಭ್ಯರ್ಥಿಯಾಗಿದ್ದರು.
ಡಿಸೆಂಬರ್ 12 ರಂದು ಕೇಂದ್ರ ಢಾಕಾದ ಬಿಜೋಯ್‌ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಮುಸುಕುಧಾರಿ ಬಂದೂಕುಧಾರಿಗಳು ಹಾದಿ ಅವರ ಮೇಲೆ ಗುಂಡು ಹಾರಿಸಿದ್ದರು. ಅವರನ್ನು ಸಿಂಗಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು. ಹೀಗಾಗಿ ಅವರ ನಿಧನದ ನಂತರ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಭುಗಿಲೆದ್ದಿತು.
ಗುರುವಾರ ಚಟ್ಟೋಗ್ರಾಮ್‌ನಲ್ಲಿರುವ ಸಹಾಯಕ ಭಾರತೀಯ ಹೈಕಮಿಷನರ್ ನಿವಾಸದ ಮೇಲೆ ಕಲ್ಲು ತೂರಾಟ ಸೇರಿದಂತೆ ಬಾಂಗ್ಲಾದೇಶದಾದ್ಯಂತ ಹಿಂಸಾತ್ಮಕ ದಾಳಿಗಳು ಮತ್ತು ವಿಧ್ವಂಸಕ ಕೃತ್ಯಗಳು ನಡೆದಿವೆ.
ಢಾಕಾ ವಿಶ್ವವಿದ್ಯಾಲಯದ ಮಸೀದಿಯ ಬಳಿಯ ರಾಷ್ಟ್ರೀಯ ಕವಿ ಕಾಜಿ ನಜ್ರುಲ್ ಇಸ್ಲಾಂ ಅವರ ಸಮಾಧಿಯ ಪಕ್ಕದಲ್ಲಿ ಶನಿವಾರ ಬಿಗಿ ಭದ್ರತೆಯ ನಡುವೆ 32 ವರ್ಷದ ಯುವ ನಾಯಕ ಹಾದಿಯ ಅಂತ್ಯಕ್ರಿಯೆ ನಡೆಸಲಾಯಿತು.
ಅಂತ್ಯಕ್ರಿಯೆಯ ಪ್ರಾರ್ಥನೆಯಲ್ಲಿ ಗೌರವ ಸಲ್ಲಿಸಲು ಸಾವಿರಾರು ಜನರು ನೆರೆದಿದ್ದರು. ಇದಕ್ಕೂ ಮುನ್ನ ಅಲ್ಲಿ ನೆರೆದಿದ್ದ ಜನರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು. ಈ ಘೋಷಣೆಗಳಲ್ಲಿ ಸಹೋದರ ಹಾದಿಯ ರಕ್ತ ವ್ಯರ್ಥವಾಗಲು ಬಿಡುವುದಿಲ್ಲ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಅಂತ್ಯಕ್ರಿಯೆಯ ನಂತರ, ಹಾದಿ ಅವರ ಪಕ್ಷವಾದ ಇಂಕಿಲಾಬ್ ಮಂಚಾ, ಮಧ್ಯಂತರ ಸರ್ಕಾರಕ್ಕೆ 24 ಗಂಟೆಗಳ ಗಡುವು ನೀಡಿ, ಅವರ ಹತ್ಯೆಗೆ ಕಾರಣರಾದವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.