ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

U19 Asia Cup Final: ಸೇಡು ತೀರಿಸಿಕೊಂಡ ಪಾಕ್‌; ಅಂಡರ್‌-19 ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತಕ್ಕೆ ಸೋಲು

ಚೇಸಿಂಗ್‌ ವೇಳೆ ಸ್ಫೋಟಕ ಬ್ಯಾಟರ್‌ ವೈಭವ್‌ ಸೂರ್ಯವಂಶಿ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದರು. ಆ ಬಳಿಕವೂ ಸತತ ಸಿಕ್ಸರ್‌ ಮತ್ತು ಬೌಂಡರಿ ಮೂಲಕ ಮೊದಲ ಓವರ್‌ನಲ್ಲಿ 20 ರನ್‌ ದೋಚಿದರು. ಆದರೆ ಅವರ ಆಟ ಹೆಚ್ಚು ಹೊತ್ತು ಸಾಗಲಿಲ್ಲ. 26ರನ್‌ ಗಳಿಸಿದ ವೇಳೆ ವಿಕೆಟ್‌ ಕಳೆದುಕೊಂಡರು.

ಪಾಕ್‌ ವಿರುದ್ಧ ಅಂಡರ್‌-19 ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತಕ್ಕೆ ಸೋಲು

India U19 vs Pakistan U19 -

Abhilash BC
Abhilash BC Dec 21, 2025 5:19 PM

ದುಬೈ, ಡಿ.21: ಬದ್ಧ ಎದುರಾಳಿ ಪಾಕಿಸ್ತಾನ(India U19 vs Pakistan U19) ವಿರುದ್ಧದ ಅಂಡರ್‌-19 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌(U19 Asia Cup final)ನಲ್ಲಿ ಭಾರತ ತಂಡ 191ರನ್‌ಗಳ ಹೀನಾಯ ಸೋಲು ಕಂಡಿದೆ. ಆಯುಷ್ ಮ್ಹಾತ್ರೆ ನಾಯಕತ್ವದ ಭಾರತ ತಂಡವು ಹೋದ ಭಾನುವಾರ ಎ ಗುಂಪಿನ ಲೀಗ್‌ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತ್ತು. ಆದರೆ ಫೈನಲ್‌ನಲ್ಲಿ ಪಾಕ್‌ ಸೇಡು ತೀರಿಸಿಕೊಂಡಿತು.

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲವಾಯಿತು. ಬ್ಯಾಟಿಂಗ್ ಆಹ್ವಾನ ಪಡೆದ ಪಾಕ್‌ ಪಡೆ, ಆರಂಭಿಕ ಬ್ಯಾಟರ್‌ ಸಮೀರ್‌ ಮಿನ್ಹಾಸ್‌ ಬಾರಿಸಿದ ಅಮೋಘ ಶತಕದ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 347 ರನ್‌ ಕಲೆಹಾಕಿತು.113 ಎಸೆತಗಳನ್ನು ಎದುರಿಸಿದ ಮಿನ್ಹಾಸ್‌, 9 ಸಿಕ್ಸರ್‌ ಮತ್ತು 17 ಬೌಂಡರಿ ಸಹಿತ 172 ರನ್‌ ಬಾರಿಸಿದರು. ಅವರನ್ನು ಹೊರತುಪಡಿಸಿ, ಉಸ್ಮಾನ್‌ ಖಾನ್‌ (35), ಅಹ್ಮದ್‌ ಹುಸೈನ್‌ (56) ರನ್‌ ಗಳಿಸಿ ತಂಡದ ಬೃಹತ್‌ ಮೊತ್ತಕ್ಕೆ ನೆರವಾದರು. ಗುರಿ ಬೆನ್ನಟ್ಟಿದ ಭಾರತ, ಬ್ಯಾಟಿಂಗ್‌ ಮರೆತವರಂತೆ ಆಡಿ 26.2 ಓವರ್‌ಗಳಲ್ಲಿ 156ರನ್‌ಗೆ ಸರ್ವಪತನ ಕಂಡಿತು.

ಚೇಸಿಂಗ್‌ ವೇಳೆ ಸ್ಫೋಟಕ ಬ್ಯಾಟರ್‌ ವೈಭವ್‌ ಸೂರ್ಯವಂಶಿ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದರು. ಆ ಬಳಿಕವೂ ಸತತ ಸಿಕ್ಸರ್‌ ಮತ್ತು ಬೌಂಡರಿ ಮೂಲಕ ಮೊದಲ ಓವರ್‌ನಲ್ಲಿ 20 ರನ್‌ ದೋಚಿದರು. ಆದರೆ ಅವರ ಆಟ ಹೆಚ್ಚು ಹೊತ್ತು ಸಾಗಲಿಲ್ಲ. 26ರನ್‌ ಗಳಿಸಿದ ವೇಳೆ ವಿಕೆಟ್‌ ಕಳೆದುಕೊಂಡರು. ಅವರ ವಿಕೆಟ್‌ ಬೀಳುತ್ತಿದ್ದಂತೆ ಭಾರತದ ಪತನವೂ ಆರಂಭವಾಯಿತು.

ಇದನ್ನೂ ಓದಿ ಟಿ20 ವಿಶ್ವಕಪ್ ತಂಡದಿಂದ ಗಿಲ್ ಹೊರಗಿಟ್ಟ ಬಗ್ಗೆ ಮಾತನಾಡಲು ನಿರಾಕರಿಸಿದ ಗೌತಮ್ ಗಂಭೀರ್

ನಾಯಕ ಆಯುಷ್ ಮ್ಹಾತ್ರೆ(2), ಆರನ್ ಜಾರ್ಜ್(16), ವಿಹಾನ್ ಮಲ್ಹೋತ್ರಾ(7, ವೇದಾಂತ್ ತ್ರಿವೇದಿ(9) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ಪರೇಡ್‌ ನಡೆಸಿದರು. ಇನ್ನೇನು 100ರೊಳಗೆ ತಂಡ ಗಂಟು ಮೂಟೆ ಕಟ್ಟುತ್ತದೆ ಎನ್ನುವಷ್ಟರಲ್ಲಿ 9ನೇ ಕ್ರಮಾಂಕದಲ್ಲಿ ಆಡಲಿಳಿದ ದೀಪೇಶ್ ದೇವೇಂದ್ರನ್ 16 ಎಸೆತಗಳಿಂದ 36 ರನ್‌ ಬಾರಿಸಿ ತಂಡದ ಮೊತ್ತವನ್ನು 100 ಗಡಿ ದಾಟಿಸಿದರು. ಪಾಕ್‌ ಪರ ಘಾತಕ ಬೌಲಿಂಗ್‌ ದಾಳಿ ನಡೆಸಿದ ಅಲಿ ರಾಜಾ 4 ವಿಕೆಟ್‌ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಮೊಹಮ್ಮದ್ ಸಯ್ಯಾಮ್, ಅಬ್ದುಲ್ ಸುಭಾನ್ ಮತ್ತು ಹುಜೈಫಾ ಅಹ್ಸಾನ್ ತಲಾ ಎರಡು ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನ ತಂಡ ಆರಂಭಿಕ ಹಂತದಲ್ಲಿ ಹಮ್ಜಾ ಜಹೂರ್ ವಿಕೆಟ್ ಕಳೆದುಕೊಂಡಿತು, ನಂತರ ಮಿನ್ಹಾಸ್ ಮತ್ತು ಉಸ್ಮಾನ್ ಖಾನ್ ಜೋಡಿ ಎರಡನೇ ವಿಕೆಟ್‌ಗೆ 92 ರನ್‌ಗಳ ಜೊತೆಯಾಟವಾಡಿದರು. ಈ ಪಾಲುದಾರಿಕೆಯ ಸಮಯದಲ್ಲಿ, ಮಿನ್ಹಾಸ್ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಭಾರತೀಯ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಅವರ ಆಕ್ರಮಣದ ಬ್ಯಾಟಿಂಗ್‌ನಿಂದ ಪಾಕಿಸ್ತಾನ ತಂಡವು ಕೇವಲ 12.3 ಓವರ್‌ಗಳಲ್ಲಿ 100 ರನ್‌ ಗಳಿಸಿತು.

ಉಸ್ಮಾನ್ ಔಟಾದ ನಂತರ, ಮಿನ್ಹಾಸ್, ಅಹ್ಮದ್ ಹುಸೇನ್ ಜೊತೆಗೆ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದರು. ಈ ಜೋಡಿ ಮೂರನೇ ವಿಕೆಟ್‌ಗೆ 137 ರನ್‌ಗಳನ್ನು ಸೇರಿಸುವ ಮೂಲಕ ತಂಡಕ್ಕೆ ನೆರವಾದರು. ಮಿನ್ಹಾಸ್ ಅಂಡರ್-19 ಏಷ್ಯಾ ಕಪ್ ಫೈನಲ್‌ಗಳ ಇತಿಹಾಸದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಅನ್ನು ದಾಖಲಿಸಿದರು. 2012 ರಲ್ಲಿ ಕೌಲಾಲಂಪುರದಲ್ಲಿ ಭಾರತ ವಿರುದ್ಧ ಸಮಿ ಅಸ್ಲಾಮ್ ಅವರ 134 ರನ್‌ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.