ಇರಾನ್ ಯುದ್ಧ ನಿಲ್ಲಿಸಲು ಚೀನಾ, ಪಾಕಿಸ್ತಾನದ 5 ಅಂಶಗಳ ಯೋಜನೆಯಲ್ಲಿ ಏನಿದೆ?
ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ನಡೆಸಿದ ಪ್ರತೀಕಾರದ ದಾಳಿಯ ಪರಿಣಾಮ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇದನ್ನು ತಡೆಯುವ ಪ್ರಯತ್ನ ನಡೆಯುತ್ತಲೇ ಇದೆ. ಈ ನಡುವೆ ಇದೀಗ ಇರಾನ್ ಯುದ್ಧ ನಿಲ್ಲಿಸಲು ಚೀನಾ, ಪಾಕಿಸ್ತಾನ 5 ಅಂಶಗಳ ಯೋಜನೆಯನ್ನು ಪ್ರಕಟಿಸಿದ್ದು, ಇದರಲ್ಲಿ ಹೊರ್ಮುಜ್ ಜಲಸಂಧಿ ವಿಚಾರವನ್ನು ಕೂಡ ಪ್ರಸ್ತಾಪಿಸಲಾಗಿದೆ.
ಸಂಗ್ರಹ ಚಿತ್ರ -
ಇಸ್ಲಾಮಾಬಾದ್: ಚೀನಾ (china) ಮತ್ತು ಪಾಕಿಸ್ತಾನವು (pakistan) ಈಗ ಇರಾನ್ ಯುದ್ಧವನ್ನು (Iran war) ನಿಲ್ಲಿಸಲು ಐದು ಅಂಶಗಳ ಯೋಜನೆಯನ್ನು (peace talks) ಪ್ರಕಟಿಸಿದ್ದು, ಇದರಲ್ಲಿ ಹೊರ್ಮುಜ್ ಜಲಸಂಧಿ (Strait of Hormuz) ವಿಚಾರವನ್ನು ಕೂಡ ಪ್ರಸ್ತಾಪಿಸಲಾಗಿದೆ. ಚೀನಾ ಮತ್ತು ಪಾಕಿಸ್ತಾನ ಮಾಡಿರುವ ಐದು ಪ್ರಸ್ತಾವನೆಗಳಲ್ಲಿ ತಕ್ಷ ಯುದ್ಧ ನಿಲ್ಲಿಸುವುದು, ಶಾಂತಿ ಮಾತುಕತೆಗಳನ್ನು ಪ್ರಾರಂಭಿಸುವುದು, ನಾಗರಿಕರು ಮತ್ತು ಮಿಲಿಟರಿಯೇತರ ಮೂಲಸೌಕರ್ಯಗಳ ರಕ್ಷಣೆ, ಹೊರ್ಮುಜ್ ಜಲಸಂಧಿಯಲ್ಲಿ ಹಡಗು ಮಾರ್ಗಗಳನ್ನು ಸುರಕ್ಷಿತಗೊಳಿಸುವುದು ಮತ್ತು ವಿಶ್ವಸಂಸ್ಥೆಯ ನಿಯಮಗಳ ಅಡಿಯಲ್ಲಿ ಶಾಂತಿ ಪಾಲನೆ ನಿಯಮಗಳು ಸೇರಿವೆ.
ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ನಡೆಸಿದ ಪ್ರತೀಕಾರದ ದಾಳಿಯ ಪರಿಣಾಮ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇದನ್ನು ತಡೆಯುವ ಪ್ರಯತ್ನದ ಭಾಗವಾಗಿ ಚೀನಾ ಮತ್ತು ಪಾಕಿಸ್ತಾನ ಜಂಟಿಯಾಗಿ ಐದು ಅಂಶಗಳ ಯೋಜನೆಯನ್ನು ಪ್ರಸ್ತಾಪಿಸಿವೆ.
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಪಾಕಿಸ್ತಾನದ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ನಡುವೆ ಬೀಜಿಂಗ್‌ನಲ್ಲಿ ನಡೆದ ಉನ್ನತ ಮಟ್ಟದ ಚರ್ಚೆಗಳ ಅನಂತರ ಐದು ಪ್ರಸ್ತಾಪಗಳನ್ನು ಇರಾನ್, ಇಸ್ರೇಲ್, ಯುಎಸ್ ಮುಂದೆ ಇಡಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು, ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ, ರಾಷ್ಟ್ರೀಯ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ರಕ್ಷಿಸಬೇಕು. ಸಂಘರ್ಷಗಳನ್ನು ಸಂವಾದ ಮತ್ತು ರಾಜತಾಂತ್ರಿಕತೆ ರೂಪದಲ್ಲಿ ಪರಿಹರಿಸಬೇಕು ಎಂದು ತಿಳಿಸಿದೆ.
ಶಾಂತಿ ಮಾತುಕತೆಯನ್ನು ಚೀನಾ ಮತ್ತು ಪಾಕಿಸ್ತಾನ ಬೆಂಬಲಿಸುತ್ತದೆ. ಈ ಸಂದರ್ಭದಲ್ಲಿ ಬಲಪ್ರಯೋಗ ಅಥವಾ ಬೆದರಿಕೆಯಿಂದ ದೂರವಿರುತ್ತದೆ. ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಬೇಕು. ಪರಮಾಣು ಸೌಲಭ್ಯಗಳು ಸೇರಿದಂತೆ ನಾಗರಿಕರು ಮತ್ತು ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ತಕ್ಷಣ ನಿಲ್ಲಿಸುವಂತೆ ಅದು ಕರೆ ನೀಡಿದೆ.
ಸದ್ಯ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ಭವವಾಗಿರುವ ಪರಿಸ್ಥಿತಿಯನ್ನು ನಿಯಂತ್ರಿಸಲು ಪಾಕಿಸ್ತಾನದೊಂದಿಗೆ ಚೀನಾ ಸಮನ್ವಯವನ್ನು ಹೆಚ್ಚಿಸುವುದಾಗಿ ತಿಳಿಸಿದೆ.
ಪಾಕಿಸ್ತಾನದ ನಡೆಯ ಕುರಿತು ಪ್ರತಿಕ್ರಿಯಿಸಿರುವ ಮುಂಬೈನಲ್ಲಿರುವ ಇರಾನ್‌ನ ಕಾನ್ಸುಲೇಟ್ ಜನರಲ್, ಅಮೆರಿಕದೊಂದಿಗೆ ನೇರ ಮಾತುಕತೆಗಳಿಲ್ಲ. ಮಧ್ಯವರ್ತಿಗಳ ಮೂಲಕ ಅತಿಯಾದ, ಅಸಮಂಜಸ ಬೇಡಿಕೆಗಳನ್ನು ಇಡಲಾಗಿದೆ. ಅಮೆರಿಕದ ರಾಜತಾಂತ್ರಿಕತೆ ನಿರಂತರ ಬದಲಾಗುತ್ತದೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಪಾಕಿಸ್ತಾನದ ಚರ್ಚೆಗಳಲ್ಲಿ ನಾವು ಭಾಗಿಯಾಗಿಲ್ಲ. ಯುದ್ಧವನ್ನು ಕೊನೆಗೊಳಿಸಲು ಪ್ರಾದೇಶಿಕ ಕರೆಗಳು ಸ್ವಾಗತಾರ್ಹ. ಆದರೆ ಅದನ್ನು ಯಾರು ಪ್ರಾರಂಭಿಸಿದರು ಎಂಬುದನ್ನು ನೆನಪಿಡಿ ಎಂದು ಹೇಳಿದ್ದಾರೆ.
ಇರಾನ್ ಜೊತೆ ಶಾಂತಿ ಒಪ್ಪಂದಕ್ಕೆ ಮುಂದಾಗಿರುವ ಅಮೆರಿಕ ಈ ಕುರಿತಾದ 15 ಅಂಶಗಳ ಕ್ರಿಯಾ ಪಟ್ಟಿಯನ್ನು ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮೂಲಕ ಪಾಕಿಸ್ತಾನಕ್ಕೆ ನೀಡಲಾಗಿದೆ. ಈ ಬಳಿಕ ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಲು ಮಧ್ಯಸ್ಥಿಕೆ ವಹಿಸಲು ಮುಂದಾಯಿತು
ಅಮೆರಿಕದ ನೆಲೆಗಳ ಮೇಲಿನ ಇರಾನ್ ದಾಳಿಗೆ ರಷ್ಯಾ ನೆರವು: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೊಸ ಬಾಂಬ್
ಸೌದಿ ಅರೇಬಿಯಾದ ವಿದೇಶಾಂಗ ಮಂತ್ರಿಗಳ ಚತುರ್ಭುಜ ಸಭೆಗಳಲ್ಲಿ, ಟರ್ಕಿ ಮತ್ತು ಈಜಿಪ್ಟ್ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗಳನ್ನು ಆಯೋಜಿಸುವ ಪಾಕಿಸ್ತಾನದ ಉಪಕ್ರಮಕ್ಕೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದವು.