ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇರಾನ್ ಒಪ್ಪಂದಕ್ಕೆ ಸಹಿ ಹಾಕಿದರೆ ಪಾಕ್‌ಗೆ ಭೇಟಿ: ಟ್ರಂಪ್ ಹೇಳಿದ್ದೇನು?

US-Iran peace deal: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದವು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ. ಅದು ಅಂತಿಮಗೊಂಡರೆ ತಾನು ಪಾಕಿಸ್ತಾನಕ್ಕೆ ಭೇಟಿ ನೀಡುವ ಬಗ್ಗೆ ಯೋಚಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇರಾನ್ ಒಪ್ಪಂದಕ್ಕೆ ಸಹಿ ಹಾಕಿದರೆ ಪಾಕ್‌ಗೆ ಭೇಟಿ: ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -

Priyanka P
Priyanka P Apr 17, 2026 9:08 PM

ಇಸ್ಲಾಮಾಬಾದ್, ಏ.17: ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಮಾತುಕತೆಗಳು (US-Iran peace deal) ಈಗ ಮಹತ್ವದ ಹಂತದಲ್ಲಿವೆ. ಈ ಶಾಂತಿ ಒಪ್ಪಂದವು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ (Islamabad) ಅಂತಿಮಗೊಳ್ಳುವ ಸಾಧ್ಯತೆಯಿದೆ. ಅದೊಂದು ವೇಳೆ ಅಂತಿಮಗೊಂಡರೆ ತಾನು ಪಾಕಿಸ್ತಾನಕ್ಕೆ (Pakistan) ಭೇಟಿ ನೀಡುವ ಬಗ್ಗೆ ಯೋಚಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಹೇಳಿದ್ದಾರೆ.

ನೆವಾಡಾಗೆ ತೆರಳುವ ಮೊದಲು ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, ಇರಾನ್ ಪರಿಸ್ಥಿತಿ ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿದೆ. ಶೀಘ್ರದಲ್ಲೇ ಒಪ್ಪಂದಕ್ಕೆ ಬರಬಹುದು ಎಂದು ಹೇಳಿದರು. ಇಸ್ಲಾಮಾಬಾದ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರೆ, ನಾನು ಅಲ್ಲಿಗೆ ಹೋಗಬಹುದು ಎಂದು ಅವರು ತಿಳಿಸಿದರು.

ಇಲ್ಲಿದೆ ವಿಡಿಯೊ:



ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗೆ ಅನುಕೂಲ ಮಾಡಿಕೊಡುವಲ್ಲಿ ಪಾಕಿಸ್ತಾನದ ಪಾತ್ರವನ್ನು ಅಮೆರಿಕ ಅಧ್ಯಕ್ಷರು ಶ್ಲಾಘಿಸಿದರು. ಪಾಕಿಸ್ತಾನಿ ಮಧ್ಯವರ್ತಿಗಳು ತುಂಬಾ ಉತ್ತಮರಾಗಿದ್ದಾರೆ ಎಂದು ಹೇಳಿದರು. ಮಾತುಕತೆಗಳ ಪ್ರಗತಿಯ ಬಗ್ಗೆ ಅವರು ಮತ್ತಷ್ಟು ಆಶಾವಾದ ವ್ಯಕ್ತಪಡಿಸಿದರು. ಶೀಘ್ರದಲ್ಲೇ ಒಪ್ಪಂದವನ್ನು ಘೋಷಿಸಬಹುದು ಎಂದು ಹೇಳಿದರು.

“ನೀವು ನಾಶ ಮಾಡಿದ್ದಕ್ಕಿಂತ ವೇಗವಾಗಿ ಪುನರ್‌ನಿರ್ಮಾಣ ಮಾಡುತ್ತೇವೆ”: ಅಮೆರಿಕ-ಇಸ್ರೇಲ್‌ಗೆ ಇರಾನ್ ಸವಾಲು

ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದಿಲ್ಲ ಎಂದು ಹೇಳುವುದು ಮುಖ್ಯವಾಗಿದೆ. ಅವರು ಈ ಒಪ್ಪಂದಕ್ಕೆ ಸಹಿ ಹಾಕಬೇಕು. ಇರಾನ್ ಬಳಿ ಪರಮಾಣು ಶಸ್ತ್ರಾಸ್ತ್ರ ಇಲ್ಲದಿರುವುದು ಬಹಳ ಮುಖ್ಯ. ಅದಕ್ಕೆ ಇರಾನ್ ಒಪ್ಪಿಕೊಂಡಿದೆ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ಸಂಘರ್ಷದ ಕುರಿತು ರಾಜತಾಂತ್ರಿಕ ಪ್ರಯತ್ನಗಳು ತೀವ್ರಗೊಳ್ಳುತ್ತಿರುವ ಮಧ್ಯೆ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಇನ್ನು ಸ್ಥಗಿತಗೊಂಡಿದ್ದ ಅಮೆರಿಕ-ಇರಾನ್ ಮಾತುಕತೆಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ಮುಂದುವರಿದಿರುವಾಗ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಗುರುವಾರ (ಏ.16) ಟೆಹರಾನ್‌ನಲ್ಲಿ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರನ್ನು ಭೇಟಿಯಾದರು.

ಟೆಹರಾನ್‌ಗೆ ಆಗಮಿಸಿದ ಮುನೀರ್ ಅವರನ್ನು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಬರಮಾಡಿಕೊಂಡರು. ಹಿಂದಿನ ಚರ್ಚೆಗಳು ಪ್ರಗತಿಯನ್ನು ಸಾಧಿಸುವಲ್ಲಿ ವಿಫಲವಾದ ನಂತರ ಎರಡನೇ ಸುತ್ತಿನ ಮಾತುಕತೆಗೆ ಅಡಿಪಾಯ ಹಾಕುವುದು ಅವರ ಭೇಟಿಯ ಉದ್ದೇಶವಾಗಿದೆ.