ಅತಿಯಾದ ಕ್ಯಾಫಿನ್ ಮತ್ತು ಎನರ್ಜಿ ಡ್ರಿಂಕ್ಸ್ ಹೃದಯದ ಲಯದ ಮೇಲೆ ಪರಿಣಾಮ ಬೀರುತ್ತವೆಯೇ?
ಕ್ಯಾಫಿನ್ ಕೇಂದ್ರ ನರಮಂಡಲವನ್ನು ಉತ್ತೇಜಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರಿಂದ ಎಚ್ಚರಿಕೆ ಹೆಚ್ಚುವುದರ ಜೊತೆಗೆ ತಾತ್ಕಾಲಿಕವಾಗಿ ಶಕ್ತಿಯ ಮಟ್ಟವೂ ಹೆಚ್ಚುತ್ತದೆ. ಆದರೆ, ಇದು ಅಡ್ರಿನಲಿನ್ ಮೊದಲಾದ ಒತ್ತಡದ ಹಾರ್ಮೋನುಗಳ ಬಿಡುಗಡೆಯನ್ನೂ ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಹೃದಯ ಬಡಿತದ ವೇಗ ಮತ್ತು ರಕ್ತದೊತ್ತಡ ಹೆಚ್ಚಾಗಬಹುದು.
-
ಡಾ.ಅನುಪಮಾ ವಿ.ಹೆಗಡೆ, ಹಿರಿಯ ಸಲಹೆಗಾರರು – ಹೃದ್ರೋಗ ವಿಭಾಗ, ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್, ರಾಮಯ್ಯ ಮೆಮೋರಿಯಲ್ ಆಸ್ಪತ್ರೆ, ಬೆಂಗಳೂರು
ಅನೇಕ ಜನರು ಎಚ್ಚರವಾಗಿರಲು, ಏಕಾಗ್ರತೆ ಹೆಚ್ಚಿಸಿಕೊಳ್ಳಲು ಅಥವಾ ವ್ಯಸ್ತ ದಿನಗಳಲ್ಲಿ ಉಂಟಾಗುವ ದಣಿವನ್ನು ನಿವಾರಿಸಿಕೊಳ್ಳಲು ಕ್ಯಾಫಿನ್ನ ಮೇಲೆ ಅವಲಂಬಿತರಾಗಿರುತ್ತಾರೆ. ಒಂದು ಕಪ್ ಕಾಫಿ ಅಥವಾ ಚಹಾ ಆರೋಗ್ಯಕರ ದಿನಚರಿಯ ಭಾಗವಾಗಿರಬಹುದಾದರೂ, ಇತ್ತೀಚಿನ ದಿನಗಳಲ್ಲಿ ಎನರ್ಜಿ ಡ್ರಿಂಕ್ಸ್ ಮತ್ತು ಹೆಚ್ಚಿನ ಪ್ರಮಾಣದ ಕ್ಯಾಫಿನ್ ಹೊಂದಿರುವ ಪಾನೀಯಗಳ ಜನಪ್ರಿಯತೆ ಹೆಚ್ಚುತ್ತಿರುವುದರಿಂದ ಅವು ಹೃದಯದ ಆರೋಗ್ಯದ ಮೇಲೆ, ವಿಶೇಷವಾಗಿ ಹೃದಯದ ಲಯದ ಮೇಲೆ ಬೀರುವ ಪರಿಣಾಮಗಳ ಕುರಿತು ಚರ್ಚೆಗಳು ನಡೆಯುತ್ತಿವೆ.
ಕ್ಯಾಫಿನ್ ಹೃದಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಕ್ಯಾಫಿನ್ ಕೇಂದ್ರ ನರಮಂಡಲವನ್ನು ಉತ್ತೇಜಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರಿಂದ ಎಚ್ಚರಿಕೆ ಹೆಚ್ಚುವುದರ ಜೊತೆಗೆ ತಾತ್ಕಾಲಿಕವಾಗಿ ಶಕ್ತಿಯ ಮಟ್ಟವೂ ಹೆಚ್ಚುತ್ತದೆ. ಆದರೆ, ಇದು ಅಡ್ರಿನಲಿನ್ ಮೊದಲಾದ ಒತ್ತಡದ ಹಾರ್ಮೋನುಗಳ ಬಿಡುಗಡೆಯನ್ನೂ ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಹೃದಯ ಬಡಿತದ ವೇಗ ಮತ್ತು ರಕ್ತದೊತ್ತಡ ಹೆಚ್ಚಾಗಬಹುದು. ಕೆಲವರಲ್ಲಿ, ವಿಶೇಷವಾಗಿ ಕ್ಯಾಫಿನ್ಗೆ ಹೆಚ್ಚು ಸಂವೇದನಾಶೀಲರಾಗಿರುವವರಲ್ಲಿ, ಈ ಹೆಚ್ಚಿದ ಉತ್ತೇಜನೆಯಿಂದ ಹೃದಯ ಬಡಿತ ಅಸಹಜವಾಗಿ ಅನುಭವವಾಗುವುದು ಅಥವಾ ಹೃದಯವು ಅನಿಯಮಿತವಾಗಿ ಬಡಿದಂತ ಅನುಭವವಾಗುವುದು (ಪಾಲ್ಪಿಟೇಷನ್) ಕಂಡುಬರಬಹುದು.
ಇದನ್ನೂ ಓದಿ: Vishwavani Health: ಮಕ್ಕಳಾಗದಿರಲೂ ಬೊಜ್ಜು ಕಾರಣ; ಆಘಾತಕಾರಿ ಅಂಶ ಬಿಚ್ಚಿಟ್ಟ ತಜ್ಞರು
ಈ ಆತಂಕ ಎನರ್ಜಿ ಡ್ರಿಂಕ್ಸ್ಗಳ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಾಗುತ್ತದೆ. ಏಕೆಂದರೆ ಇವುಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದ ಕ್ಯಾಫಿನ್ ಜೊತೆಗೆ ಇತರ ಉತ್ತೇಜಕ ಪದಾರ್ಥಗಳು, ಸಕ್ಕರೆ ಹಾಗೂ ಸಸ್ಯಮೂಲದ ಸೇರ್ಪಡೆಗಳೂ ಇರುತ್ತವೆ. ಇಂತಹ ಪಾನೀಯಗಳನ್ನು ಅಲ್ಪ ಸಮಯದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಹೃದಯ ಮತ್ತು ರಕ್ತನಾಳಗಳ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಬಹುದು.
ಅಪಾಯ ಯಾವಾಗ ಹೆಚ್ಚಾಗುತ್ತದೆ?
ಹೆಚ್ಚಿನ ಆರೋಗ್ಯವಂತರು ಮಿತ ಪ್ರಮಾಣದ ಕ್ಯಾಫಿನ್ ಸೇವನೆಯನ್ನು ಯಾವುದೇ ಗಂಭೀರ ಸಮಸ್ಯೆಗಳಿಲ್ಲದೆ ಸಹಿಸಬಲ್ಲರು. ಆದರೆ, ವಿಶೇಷವಾಗಿ ಹಲವಾರು ಎನರ್ಜಿ ಡ್ರಿಂಕ್ಸ್ಗಳನ್ನು ಸೇವಿಸು ವುದು, ಕ್ಯಾಫಿನ್ ಪೂರಕಗಳನ್ನು ಬಳಸುವುದು ಅಥವಾ ವಿವಿಧ ಕ್ಯಾಫಿನ್ ಪಾನೀಯ ಗಳನ್ನು ಒಟ್ಟಿಗೆ ಸೇವಿಸುವುದು ಅಸಹಜ ಹೃದಯ ಲಯಗಳ (ಅರಿತ್ಮಿಯಾ) ಅಪಾಯವನ್ನು ಹೆಚ್ಚಿಸ ಬಹುದು. ಹೃದಯ ಸಂಬಂಧಿತ ಕಾಯಿಲೆಗಳು, ಅಧಿಕ ರಕ್ತದೊತ್ತಡ, ಆತಂಕದ ಅಸ್ವಸ್ಥತೆಗಳು ಅಥವಾ ಕುಟುಂಬದಲ್ಲಿ ಹೃದಯದ ಲಯದ ತೊಂದರೆಗಳ ಇತಿಹಾಸ ಹೊಂದಿರುವವರಲ್ಲಿ ಈ ಅಪಾಯ ಇನ್ನಷ್ಟು ಹೆಚ್ಚಿರಬಹುದು.
ಸಮತೋಲನಯುತ ದೃಷ್ಟಿಕೋನ
ಕ್ಯಾಫಿನ್ ಅನ್ನು ಸಂಪೂರ್ಣವಾಗಿ ತ್ಯಜಿಸುವ ಬದಲು, ಮಿತವಾಗಿ ಸೇವಿಸುವುದು ಮತ್ತು ತಮ್ಮ ದೇಹದ ಸಹಿಷ್ಣುತೆಯ ಬಗ್ಗೆ ಅರಿವು ಹೊಂದಿರುವುದು ಮುಖ್ಯ. ಪ್ರತಿದಿನದ ಕ್ಯಾಫಿನ್ ಸೇವನೆಯ ಪ್ರಮಾಣವನ್ನು ಗಮನಿಸುವುದು, ಉತ್ಪನ್ನಗಳ ಲೇಬಲ್ಗಳನ್ನು ಓದುವುದು ಮತ್ತು ಎನರ್ಜಿ ಡ್ರಿಂಕ್ಸ್ಗಳ ಅತಿಯಾದ ಸೇವನೆಯನ್ನು ತಪ್ಪಿಸುವುದು ಹೃದಯ ಸಂಬಂಧಿತ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ವ್ಯಕ್ತಿಗಳು ಸುರಕ್ಷಿತವಾಗಿ ಕ್ಯಾಫಿನ್ನ ಪ್ರಯೋಜನಗಳನ್ನು ಆನಂದಿಸಬಹುದು.