ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr. Rohith Kumar H G Column: ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದೇಕೆ?

ಕ್ಯಾನ್ಸರ್ ಹೊಸ ಕಾಯಿಲೆಯಲ್ಲ. ಪ್ರಾಚೀನ ಈಜಿಪ್ಟಿನ ಮಮ್ಮಿಗಳಲ್ಲಿ ಹಾಗೂ ಕೋಟ್ಯಂತರ ವರ್ಷಗಳ ಹಿಂದಿನ ಡೈನೋಸರ್‌ಗಳ ಪಳೆಯುಳಿಕೆಗಳಲ್ಲಿಯೂ ಮೂಳೆಯ ಕ್ಯಾನ್ಸರ್ ಇರುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಅಂದರೆ ಕ್ಯಾನ್ಸರ್ ಆಧುನಿಕ ನಾಗರಿಕತೆಯ ಸೃಷ್ಟಿಯಲ್ಲ. ಹಾಗಾದರೆ, ಈಗ ಯಾಕೆ ಇಷ್ಟೊಂದು ಹೆಚ್ಚಾಗುತ್ತಿದೆ?

ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದೇಕೆ?

-

Profile
Ashok Nayak Aug 3, 2026 7:24 AM

ಆರೋಗ್ಯ ಭಾಗ್ಯ

ಡಾ.ರೋಹಿತ್ ಕುಮಾರ್ ಎಚ್.ಜಿ.

ಕ್ಯಾನ್ಸರ್ ಎಂಬ ಪದ ಕೇಳಿದ ಕೂಡಲೇ ಅನೇಕರ ಮನಸ್ಸಿನಲ್ಲಿ ಭಯ ಮೂಡುತ್ತದೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಒಂದು ವರದಿ ಈ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ವರದಿಯ ಪ್ರಕಾರ, ಜಗತ್ತಿನಲ್ಲಿ ಪ್ರತಿವರ್ಷ ಸುಮಾರು 2 ಕೋಟಿ ಜನರಿಗೆ ಹೊಸದಾಗಿ ನಾನಾ ವಿಧಗಳ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರಿದರೆ 2050ರ ವೇಳೆಗೆ ಈ ಸಂಖ್ಯೆ ಸುಮಾರು 3.5 ಕೋಟಿಗೆ ಏರಲಿದೆ. ಅಂದರೆ ಮುಂದಿನ 25 ವರ್ಷಗಳಲ್ಲಿ ಜಗತ್ತು ಕ್ಯಾನ್ಸರ್ ಕಾಯಿಲೆ ಯ ಬೃಹತ್ ಪ್ರಮಾಣದ ಸವಾಲನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಇದರ ಹೊರೆ ದುಪ್ಪಟ್ಟಾಗಲಿದೆ ಎನ್ನುತ್ತದೆ ವರದಿ.

ಇದು ಕೇವಲ ಅಂಕಿಅಂಶಗಳ ಕಥೆಯಲ್ಲ. ಪ್ರತಿಯೊಂದು ಸಂಖ್ಯೆಯ ಹಿಂದೆ ಒಬ್ಬ ವ್ಯಕ್ತಿ, ಒಂದು ಕುಟುಂಬದ ಬದುಕಿದೆ. ಪ್ರತಿಯೊಬ್ಬ ಕ್ಯಾನ್ಸರ್ ರೋಗಿಯ ಹಿನ್ನೆಲೆ, ಅವರು ಅನುಭವಿಸಬೇಕಾಗುವ ಸಂಕಷ್ಟಗಳು ವೈವಿಧ್ಯಮಯ. ಹಾಗಾದರೆ, ನಿಜಕ್ಕೂ ಕ್ಯಾನ್ಸರ್ ಇಷ್ಟು ವೇಗವಾಗಿ ಹೆಚ್ಚಾಗುತ್ತಿರುವು ದೇಕೆ? ನಾವು ಹಿಂದೆಂದಿಗಿಂತ ಹೆಚ್ಚು ವಿಷಕಾರಿ ಜಗತ್ತಿನಲ್ಲಿ ಬದುಕುತ್ತಿದ್ದೇವೆಯೇ? ನಮ್ಮ ಆಹಾರ ಪದ್ಧತಿ ಅಥವಾ ಆಧುನಿಕ ಜೀವನಶೈಲಿ ಇದಕ್ಕೆ ಕಾರಣವೇ?

ಇದನ್ನೂ ಓದಿ: Dr Rohith Kumar H G Column: ಹಂಟಾವೈರಸ್:‌ ಸೋಂಕಿಗಿಂತ ವೇಗವಾಗಿ ಹರಡುತ್ತಿದೆ ಭಯ !

ಮೊದಲಿಗೆ, ಕ್ಯಾನ್ಸರ್ ಹೊಸ ಕಾಯಿಲೆಯಲ್ಲ. ಪ್ರಾಚೀನ ಈಜಿಪ್ಟಿನ ಮಮ್ಮಿಗಳಲ್ಲಿ ಹಾಗೂ ಕೋಟ್ಯಂತರ ವರ್ಷಗಳ ಹಿಂದಿನ ಡೈನೋಸರ್‌ಗಳ ಪಳೆಯುಳಿಕೆಗಳಲ್ಲಿಯೂ ಮೂಳೆಯ ಕ್ಯಾನ್ಸರ್ ಇರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಅಂದರೆ ಕ್ಯಾನ್ಸರ್ ಆಧುನಿಕ ನಾಗರಿಕತೆಯ ಸೃಷ್ಟಿ ಯಲ್ಲ. ಹಾಗಾದರೆ, ಈಗ ಯಾಕೆ ಇಷ್ಟೊಂದು ಹೆಚ್ಚಾಗುತ್ತಿದೆ? ಕಾರಣಗಳು ಇಲ್ಲಿವೆ:

ಜನಸಂಖ್ಯೆಯ ಪರಿಣಾಮ

ಒಂದು ಶತಮಾನದ ಹಿಂದೆ ಜಗತ್ತಿನಲ್ಲಿ ಸರಾಸರಿ ಆಯುಷ್ಯ 40-50 ವರ್ಷಗಳಷ್ಟಿತ್ತು. ಸಾಂಕ್ರಾಮಿಕ ರೋಗಗಳು, ಶಿಶು ಮರಣ ಮತ್ತು ಅಪೌಷ್ಟಿಕತೆಯಿಂದ ಜನರು ವೃದ್ಧಾಪ್ಯ ತಲುಪುವ ಮುನ್ನವೇ ಮರಣ ಹೊಂದುತ್ತಿದ್ದರು. ಇಂದು ಆಧುನಿಕ ವೈದ್ಯಕೀಯ ತಂತ್ರಜ್ಞಾನ, ಲಸಿಕೆಗಳು ಮತ್ತು ಉತ್ತಮ ಪೌಷ್ಟಿಕತೆ ಯಿಂದಾಗಿ ಜನರು ಹೆಚ್ಚು ಕಾಲ ಬದುಕುತ್ತಿದ್ದಾರೆ. ಭಾರತದಲ್ಲೂ ಸರಾಸರಿ ಆಯುಷ್ಯ ಗಣನೀಯವಾಗಿ ಹೆಚ್ಚಾಗಿದೆ. 1950ರಲ್ಲಿ ಭಾರತದಲ್ಲಿ 31ರಷ್ಟಿದ್ದ ಸರಾಸರಿ ಆಯುಷ್ಯ ಈಗ 41 ವರ್ಷಗಳಷ್ಟು ಏರಿ 72ಕ್ಕೆ ಬಂದಿದೆ. ಈ ಹೆಚ್ಚಿದ ಜೀವಿತಾವಧಿಯೇ ಕ್ಯಾನ್ಸರ್ ಪ್ರಕರಣಗಳ ಏರಿಕೆಗೆ ಪ್ರಮುಖ ಕಾರಣ.

ನಮ್ಮ ದೇಹವನ್ನು ಒಂದು ದೊಡ್ಡ ಗ್ರಂಥಾಲಯ ಎಂದು ಊಹಿಸಿ. ಅದರಲ್ಲಿರುವ ಪ್ರತಿಯೊಂದು ಪುಸ್ತಕವೇ ಡಿಎನ್‌ಎ. ಜೀವಕೋಶಗಳು ವಿಭಜನೆಯಾಗುವಾಗ ಈ ಪುಸ್ತಕದ ನಕಲುಗಳನ್ನು ಮಾಡು ತ್ತವೆ. ಲಕ್ಷಾಂತರ ಪುಟಗಳಿರುವ ಪುಸ್ತಕವನ್ನು ನಕಲು ಮಾಡುವಾಗ ಕೆಲವೊಮ್ಮೆ ಅಕ್ಷರದ ತಪ್ಪು ಗಳು ಆಗುವಂತೆ, ಡಿಎನ್‌ಎ ನಕಲು ಮಾಡುವಾಗಲೂ ಸಣ್ಣ ತಪ್ಪುಗಳು ಸಂಭವಿಸುತ್ತವೆ. ಈ ಅಸಹಜ ಬದಲಾವಣೆಗೆ ‘ಮ್ಯುಟೇಷನ್’ ಎನ್ನಲಾಗುತ್ತದೆ. ನಮ್ಮ ಪರಿಸರದಲ್ಲಿರುವ ಹಲವಾರು ಅಂಶಗಳು ಡಿಎನ್‌ಎಯಲ್ಲಿ ಈ ರೀತಿಯ ತಪ್ಪುಗಳು ಸೇರುವಂತೆ ಮಾಡುವ ಸಾಮರ್ಥ್ಯ ಹೊಂದಿರು ತ್ತವೆ.

72 ಒಕ

ನಮ್ಮ ದೇಹದಲ್ಲಿ ಇಂತಹ ಬದಲಾವಣೆಗಳು ಜೀವನಪೂರ್ತಿ ನಿರಂತರವಾಗಿ ಸಂಗ್ರಹವಾಗುತ್ತವೆ. ಸಾವಿರಾರು ಬದಲಾವಣೆಗಳು ಸಂಭವಿಸಿದರೂ ಅವುಗಳಲ್ಲಿ ಕೆಲವು ಮಾತ್ರ ಜೀವಕೋಶವನ್ನು ಕ್ಯಾನ್ಸರ್ ಆಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿರುತ್ತವೆ. ಇದಕ್ಕೆ ಹಲವಾರು ವರ್ಷಗಳೇ ಬೇಕಾಗುತ್ತವೆ. ಹಾಗಾಗಿಯೇ ಕ್ಯಾನ್ಸರ್ ಅನ್ನು ಮುಖ್ಯವಾಗಿ ವಯೋಸಹಜ ಕಾಯಿಲೆ ಎನ್ನಲಾಗು ತ್ತದೆ. ಅನೇಕ ದೇಶಗಳಲ್ಲಿ ಬಹುಪಾಲು ಪ್ರಕರಣಗಳು 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿಯೇ ಕಂಡುಬರುತ್ತವೆ. ಅಮೇರಿಕಾದ ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಪ್ರಕಾರ, ಸ್ತನ ಕ್ಯಾನ್ಸರ್ ಪತ್ತೆಯಾಗುವವರ ಸರಾಸರಿ ವಯಸ್ಸು 63 ವರ್ಷಗಳಾದರೆ, ಶ್ವಾಸಕೋಶ ಕ್ಯಾನ್ಸರ್‌ಗೆ ಇದು 71 ವರ್ಷ. ವಯಸ್ಸಾದಂತೆ ಮ್ಯುಟೇಷನ್‌ಗಳು ದೇಹದಲ್ಲಿ ಹೆಚ್ಚಿ, ರೋಗದ ಅಪಾಯ ಪ್ರಬಲ ವಾಗುತ್ತದೆ. ಇದರೊಂದಿಗೆ 2050ರ ವೇಳೆಗೆ ಜಗತ್ತಿನ ಜನಸಂಖ್ಯೆ 1000 ಕೋಟಿ (10 ಬಿಲಿಯನ್) ದಾಟಲಿದ್ದು, ಜನಸಂಖ್ಯೆ ಹೆಚ್ಚಿದಂತೆ ರೋಗಿಗಳ ಸಂಖ್ಯೆಯೂ ಸಹಜವಾಗಿಯೇ ಹೆಚ್ಚುತ್ತದೆ.

ಬದಲಾದ ಜೀವನಶೈಲಿ

ಧೂಮಪಾನದ ಅಭ್ಯಾಸವು ಇನ್ನೂ ಜಗತ್ತಿನ ಅತಿದೊಡ್ಡ ಕ್ಯಾನ್ಸರ್ ಕಾರಕವಾಗಿದೆ. ಇದು ಶ್ವಾಸಕೋಶ ಮಾತ್ರವಲ್ಲದೆ ಬಾಯಿ, ಗಂಟಲು, ಮೂತ್ರಕೋಶ ಮತ್ತು ಅನೇಕ ಇತರ ಕ್ಯಾನ್ಸರ್‌ ಗಳಿಗೂ ದಾರಿಯಾಗುತ್ತದೆ. ತಂಬಾಕು, ಮದ್ಯಪಾನ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಜಂಕ್ ಫುಡ್ ಸಂಸ್ಕೃತಿ ಇದಕ್ಕೆ ತುಪ್ಪ ಸುರಿದಿವೆ. ಇಂದು ಭಾರತದಂತಹ ದೇಶಗಳಲ್ಲಿ ಸ್ಥೂಲಕಾಯ ದೊಡ್ಡ ಸವಾಲಾಗಿದೆ. ಅತಿಯಾದ ತೂಕವು ಕೇವಲ ಮಧುಮೇಹ ಅಥವಾ ಹೃದಯ ರೋಗ ವನ್ನಷ್ಟೇ ಅಲ್ಲ, ಸ್ತನ, ಕರುಳು, ಯಕೃತ್ ಮತ್ತು ಗರ್ಭಾಶಯ ಸೇರಿದಂತೆ 13ಕ್ಕೂ ಹೆಚ್ಚು ಮಾದರಿಯ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುತ್ತದೆ.

ಕ್ಯಾನ್ಸರ್ ವಯಸ್ಸಾದವರನ್ನಷ್ಟೇ ಕಾಡುತ್ತದೆ ಎನ್ನುವ ನಂಬಿಕೆಯಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಯುವಕರಲ್ಲಿ ಈ ರೋಗ ಪತ್ತೆಯಾಗುತ್ತಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಜಾಗತಿಕ ಅಧ್ಯಯನ ಗಳ ಪ್ರಕಾರ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ, ವಿಶೇಷವಾಗಿ ಕರುಳು, ಸ್ತನ ಮತ್ತು ಜಠರದ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಅತಿಯಾದ ಸಂಸ್ಕರಿಸಿದ ಆಹಾರ ಮತ್ತು ಜಂಕ್ ಫುಡ್ ಸೇವನೆ, ಹಗಲು-ರಾತ್ರಿ ಬದಲಾಗುವ ಶಿಫ್ಟ್ ಕೆಲಸಗಳಿಂದಾಗಿ ದೇಹದ ನೈಸರ್ಗಿಕ ಜೈವಿಕ ಗಡಿಯಾರ ಏರುಪೇರಾಗುವುದು, ಅತಿಯಾದ ಮಾನಸಿಕ ಒತ್ತಡ ಮತ್ತು ಆಲ್ಕೋ ಹಾಲ್ ಸಂಸ್ಕೃತಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಕ್ಯಾನ್ಸರ್ ವಂಶಪಾರಂಪರ್ಯವೇ ಎನ್ನುವ ಪ್ರಶ್ನೆ ಹಲವರು ಕೇಳುತ್ತಾರೆ. ಶೇ. 90ಕ್ಕಿಂತ ಹೆಚ್ಚು ಕ್ಯಾನ್ಸರ್‌ಗಳು ವಂಶಪಾರಂಪರ್ಯವಾಗಿ ಬರುವುದಿಲ್ಲ. ನಮ್ಮ ಜೀವಿತಾವಧಿಯಲ್ಲಿ ಉಂಟಾಗುವ ಡಿಎನ್‌ಎ ಬದಲಾವಣೆಗಳು ಮಕ್ಕಳಿಗೂ ದಾಟುವುದಿಲ್ಲ. ಆದರೆ, ಕೇವಲ ಶೇ. 5ರಿಂದ 10ರಷ್ಟು ಪ್ರಕರಣಗಳಲ್ಲಿ ಮಾತ್ರ ನಿರ್ದಿಷ್ಟ ಜೀನ್ ಬದಲಾವಣೆಗಳು ಹೆತ್ತವರಿಂದ ಮಕ್ಕಳಿಗೆ ವರ್ಗಾವಣೆ ಯಾಗಬಹುದು. ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸ ಇದ್ದ ತಕ್ಷಣ ಮಕ್ಕಳಿಗೂ ಅದು ಬಂದೇ ಬರುತ್ತದೆ ಎಂದರ್ಥವಲ್ಲ, ಆದರೆ ಅವರು ಹೆಚ್ಚು ಜಾಗರೂಕರಾಗಿರಬೇಕು ಅಷ್ಟೆ.

ಪರಿಸರದ ವಿಷವರ್ತುಲ

ನಮ್ಮ ಪರಿಸರದಲ್ಲಿರುವ ಭೌತಿಕ (ವಿಕಿರಣಗಳು), ರಾಸಾಯನಿಕ (ಆಸ್ಬೆಸ್ಟೋಸ್, ಬೆಂಜೀನ್) ಹಾಗೂ ಜೈವಿಕ ಅಂಶಗಳು (ಹ್ಯೂಮನ್ ಪ್ಯಾಪಿಲೋಮ ವೈರಸ್, ಹೆಪಟೈಟಿಸ್ ಬಿ ಮತ್ತು ಸಿ ವೈರಸ್ ಹಾಗೂ ಹೆಲಿಕೋಬ್ಯಾಕ್ಟರ್ ಪೈಲೋರಿ ಬ್ಯಾಕ್ಟೀರಿಯಾ) ಕ್ಯಾನ್ಸರ್‌ಗೆ ಕಾರಣವಾಗಬಲ್ಲವು. ಆದರೆ ಕಳೆದ ಎರಡು ದಶಕಗಳಲ್ಲಿ ಅತಿಯಾದ ವಾಯುಮಾಲಿನ್ಯ ಕೂಡ ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರಮುಖ ಕಾರಣ ಎಂಬುದನ್ನು ವಿಜ್ಞಾನಿಗಳು ಸಾಬೀತುಪಡಿಸಿzರೆ. ಕೃಷಿಯಲ್ಲಿ ಬಳಸುವ ಕೀಟನಾಶಕಗಳು ಕೂಡ ದೀರ್ಘಕಾಲದ ಸಂಪರ್ಕದಲ್ಲಿರುವ ರೈತರು ಮತ್ತು ಕಾರ್ಮಿಕರಲ್ಲಿ ಡಿಎನ್‌ಎ ಹಾನಿ ಉಂಟು ಮಾಡುತ್ತಿವೆ. ಮೊಬೈಲ್ ಫೋನ್ ಕಿರಣಗಳು ಮತ್ತು ಮೈಕ್ರೋಪ್ಲಾಸ್ಟಿಕ್‌ಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ ಯಾದರೂ, ಅವು ಕ್ಯಾನ್ಸರ್‌ಗೆ ನೇರ ಕಾರಣ ಎಂಬುದಕ್ಕೆ ಇನ್ನು ಸ್ಪಷ್ಟ ವೈಜ್ಞಾನಿಕ ಆಧಾರಗಳು ಸಿಕ್ಕಿಲ್ಲ.

ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಕಾಣಿಸಲು ಮತ್ತೊಂದು ಕಾರಣವೆಂದರೆ ರೋಗ ಪತ್ತೆ ಹಚ್ಚುವ ತಂತ್ರeನದ ಬೆಳವಣಿಗೆ. ಹಿಂದೆ ದೇಹದೊಳಗೆ ಬೆಳೆಯುತ್ತಿದ್ದ ಕ್ಯಾನ್ಸರ್‌ನ ಪತ್ತೆಯಾಗದೆ ಸಾವು ಸಂಭವಿಸುತ್ತಿತ್ತು. ಆದರೆ ಇಂದು ಮ್ಯಾಮೊಗ್ರಫಿ, ಎಂಡೋಸ್ಕೋಪಿ, ಸಿಟಿ/ಪೆಟ್ ಸ್ಕ್ಯಾನ್‌ಗಳ ನೆರವಿನಿಂದ ಆರಂಭಿಕ ಹಂತದ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಅಂದರೆ, ರೋಗದ ಪ್ರಮಾಣ ಹೆಚ್ಚಿರುವುದರ ಜೊತೆಗೆ, ರೋಗ ಪತ್ತೆಯಾಗುವ ದರವೂ ಹೆಚ್ಚಾಗಿದೆ.

ಇದರ ಪಾಸಿಟಿವ್ ಅಂಶವೆಂದರೆ, ಆರಂಭಿಕ ಪತ್ತೆ ಮತ್ತು ಸುಧಾರಿತ ಚಿಕಿತ್ಸೆಯಿಂದಾಗಿ ಕ್ಯಾನ್ಸರ್ ಮರಣ ಪ್ರಮಾಣ ಕಡಿಮೆಯಾಗುತ್ತಿದೆ. ಉದಾಹರಣೆಗೆ, ಅಮೆರಿಕಾದಲ್ಲಿ 1991ರಿಂದ 2022ರ ಅವಧಿಯಲ್ಲಿ ಕ್ಯಾನ್ಸರ್ ಮರಣ ಪ್ರಮಾಣ ಶೇ. 34ರಷ್ಟು ಇಳಿಕೆಯಾಗಿದೆ. ಆದರೆ, ಕ್ಯಾನ್ಸರ್ ಚಿಕಿತ್ಸೆ ಇಂದಿಗೂ ದುಬಾರಿ ಎನಿಸಿಕೊಂಡಿದೆ. ಇದಕ್ಕೆ ಪರಿಣಾಮಕಾರಿ ಚಿಕಿತ್ಸೆ ಕಡಿಮೆ ದರದಲ್ಲಿ ಲಭ್ಯವಿಲ್ಲ. ಹೀಗಾಗಿ ಬಡ ರೋಗಿಗಳು ಕ್ಯಾನ್ಸರ್ ಪತ್ತೆಯಾದರೆ ಸಾವು ಎಂದೇ ಭಾವಿಸುತ್ತಾರೆ.

ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ವರದಿಯು ಭಾರತದಂತಹ ದೇಶಗಳಿಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕ್ಯಾನ್ಸರ್ ರೋಗಿಗಳು ತಡವಾಗಿ ವೈದ್ಯರ ಬಳಿ ಬರುತ್ತಾರೆ. ಶೇ. 60ಕ್ಕೂ ಹೆಚ್ಚು ಪ್ರಕರಣಗಳು ಮೂರನೇ ಅಥವಾ ನಾಲ್ಕನೇ ಹಂತದ ಪತ್ತೆಯಾಗುತ್ತಿರುವುದರಿಂದ ಚಿಕಿತ್ಸೆ ಕಷ್ಟವಾಗುತ್ತಿದೆ ಮತ್ತು ಮರಣ ಪ್ರಮಾಣ ಹೆಚ್ಚುತ್ತಿದೆ. ಇದಕ್ಕೆ ರೋಗದ ಲಕ್ಷಣಗಳ ಬಗ್ಗೆ ಇರುವ ಅeನ ಮತ್ತು ಗ್ರಾಮೀಣ ಭಾಗಗಳಲ್ಲಿ ಸುಧಾರಿತ ರೋಗ ನಿರ್ಣಯ ಕೇಂದ್ರಗಳ ಕೊರತೆಯೇ ಕಾರಣ. ತಂಬಾಕು ಮತ್ತು ಗುಟ್ಕಾ ಬಳಕೆಯಿಂದಾಗಿ ಪುರುಷ ರಲ್ಲಿ ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್, ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಅತಿ ಹೆಚ್ಚು ಕಾಡುತ್ತಿವೆ.

ಕ್ಯಾನ್ಸರ್ ಪ್ರಕರಣಗಳ ಏರಿಕೆ ಕೇವಲ ವೈದ್ಯಕೀಯ ಸಮಸ್ಯೆಯಲ್ಲ, ಅದು ನಮ್ಮ ಬದಲಾಗುತ್ತಿರುವ ಸಮಾಜ, ವಯಸ್ಸು ಮತ್ತು ಪರಿಸರದ ಪ್ರತಿಬಿಂಬ. ಈ ಅಂಕಿಅಂಶಗಳನ್ನು ನೋಡಿ ಭಯಪಡುವ ಅಗತ್ಯವಿಲ್ಲ. ಧೂಮಪಾನ- ಮದ್ಯಪಾನ ತ್ಯಜಿಸಲೇಬೇಕು. ದೇಹದ ತೂಕ ನಿಯಂತ್ರಣ ಮಾಡ ಬೇಕು. ಕುಳಿತಲ್ಲೇ ಮಾಡುವ ಕೆಲಸ ಆಗಿದ್ದರೂ ಸಾಕಷ್ಟು ದೈಹಿಕ ಶ್ರಮಪಡಬೇಕು, ಬೊಜ್ಜು ಕರಗಿಸುವ ವ್ಯಾಯಾಮ, ವಾಕಿಂಗ್ ಇತ್ಯಾದಿ ಮಾಡಬೇಕು. ಮತ್ತು ಸಮಯಕ್ಕೆ ಸರಿಯಾದ ವೈದ್ಯಕೀಯ ತಪಾಸಣೆಯಿಂದ ಶೇ. 30-50 ರಷ್ಟು ಕ್ಯಾನ್ಸರ್ ಅನ್ನು ತಡೆಗಟ್ಟಬಹುದು.

2050ರ ಸವಾಲನ್ನು ಎದುರಿಸಲು ಸರಕಾರಗಳು ಚಿಕಿತ್ಸೆಯಷ್ಟೇ ಅಲ್ಲದೆ, ತಡೆಗಟ್ಟುವಿಕೆ ಮತ್ತು ಕೈಗೆಟುಕುವ ಆರೋಗ್ಯ ಸೇವೆಗಳಿಗೆ ಹೆಚ್ಚಿನ ಹೂಡಿಕೆ ಮಾಡಬೇಕಿದೆ. ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುವು ದನ್ನು ತಡೆಯುವುದು ಸಾಧ್ಯ ವಾಗದಿರಬಹುದು. ಆದರೆ ಅದರಿಂದ ಉಂಟಾಗುವ ಸಾವು-ನೋವುಗಳನ್ನು ಕಡಿಮೆ ಮಾಡುವ ಅವಕಾಶ ನಮ್ಮ ಕೈಯಲ್ಲಿದೆ.

(ಲೇಖಕರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಗ್ರ್ಯಾಂಟ್ಸ್ ಮ್ಯಾನೇಜರ್)