Health Tips: ಪುಪ್ಪುಸ ಕ್ಯಾನ್ಸರ್ ಜಾಗೃತಿ ದಿನ: ಹೊಗೆಯೇ ನಮ್ಮ ಆರೋಗ್ಯದ ಹಗೆ!
ಇತ್ತೀಚಿನ ವರ್ಷಗಳಲ್ಲಿ ಪುಪ್ಪುಸದ ಕ್ಯಾನ್ಸರ್ ಪ್ರಮಾಣ ಮಿತಿಮೀರಿದ್ದು, ಆರಂಭಿಕ ಹಂತದಲ್ಲಿ ಪತ್ತೆ ಯಾಗದ ಪ್ರಕರಣಗಳೇ ಹೆಚ್ಚುತ್ತಿವೆ. ಕ್ಯಾನ್ಸರ್ ಸಂಬಂಧಿ ಸಾವುಗಳ ಪೈಕಿ ಈ ರೋಗವೂ ಮುಂಚೂಣಿ ಯಲ್ಲಿದ್ದು, ಪ್ರತಿವರ್ಷ ವಿಶ್ವದೆಲ್ಲೆಡೆ ಸುಮಾರು 16 ಲಕ್ಷ ಮಂದಿ ಇದಕ್ಕೆ ಕೊನೆಯುಸಿರೆಳೆಯುತ್ತಿದ್ದಾರೆ. ತಂಬಾಕಿನ ಚಟ ಮತ್ತು ಆನುವಂಶೀಯತೆ ಇದಕ್ಕೆ ಪ್ರಮುಖ ಕಾರಣಗಳು ಎಂಬುದು ಹೌದಾದರೂ, ಇದರ ರೋಗಿಗಳಲ್ಲಿ ಶೇ. 15ಕ್ಕಿಂತ ಹೆಚ್ಚು ಮಂದಿ ಜೀವನದಲ್ಲಿ ತಂಬಾಕನ್ನೇ ಮುಟ್ಟದವರು.


ನವದೆಹಲಿ: ವಿಶ್ವದೆಲ್ಲೆಡೆ ಆಗಸ್ಟ್ ಮೊದಲ ದಿನವನ್ನು ಶ್ವಾಸಕೋಶದ ಕ್ಯಾನ್ಸರ್ (Lung Cancer) ವಿರುದ್ಧದ ಜಾಗೃತಿ ದಿನವನ್ನಾಗಿ ಗುರುತಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪುಪ್ಪುಸದ ಕ್ಯಾನ್ಸರ್ ಪ್ರಮಾಣ ಮಿತಿಮೀರಿದ್ದು, ಆರಂಭಿಕ ಹಂತದಲ್ಲಿ ಪತ್ತೆಯಾಗದ ಪ್ರಕರಣಗಳೇ ಹೆಚ್ಚುತ್ತಿವೆ. ಕ್ಯಾನ್ಸರ್ ಸಂಬಂಧಿ ಸಾವುಗಳ ಪೈಕಿ ಈ ರೋಗವೂ ಮುಂಚೂಣಿಯಲ್ಲಿದ್ದು, ಪ್ರತಿವರ್ಷ ವಿಶ್ವ ದೆಲ್ಲೆಡೆ ಸುಮಾರು 16 ಲಕ್ಷ ಮಂದಿ ಇದಕ್ಕೆ ಕೊನೆಯುಸಿರೆಳೆಯುತ್ತಿದ್ದಾರೆ. ತಂಬಾಕಿನ ಚಟ ಮತ್ತು ಆನುವಂಶೀಯತೆ ಇದಕ್ಕೆ ಪ್ರಮುಖ ಕಾರಣಗಳು ಎಂಬುದು ಹೌದಾದರೂ, ಇದರ ರೋಗಿ ಗಳಲ್ಲಿ ಶೇ. 15ಕ್ಕಿಂತ ಹೆಚ್ಚು ಮಂದಿ ಜೀವನದಲ್ಲಿ ತಂಬಾಕನ್ನೇ ಮುಟ್ಟದವರು. ಮಹಿಳಾ ರೋಗಿಗಳಲ್ಲಿ ಶೇ. 20ಕ್ಕಿಂತ ಹೆಚ್ಚು ಮಂದಿ ಸಿಗರೇಟ್ ಹಿಡಿದವರೇ ಅಲ್ಲ. ಕ್ಯಾನ್ಸರ್ ಸಾವುಗಳ ಪೈಕಿ ಆರನೇ ಸ್ಥಾನ ದಲ್ಲಿದ್ದಾರೆ ಹೀಗೆ ತಂಬಾಕಿನ ಚಟ ಇಲ್ಲದವರು ಎನ್ನುವುದು ಇನ್ನೂ ಆತಂಕದ ಸಂಗತಿ.
ಭಾರತದಲ್ಲಿಯೂ ತಂಬಾಕಿನ ಹತ್ತಿರವೂ ಸುಳಿಯದ ಬಹಳಷ್ಟು ಮಂದಿ ಪುಪ್ಪುಸ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಜಗತ್ತಿನ ಉಳಿದೆಲ್ಲ ಕಡೆಗಳಿಗಿಂತ 10 ವರ್ಷ ಮುಂಚಿತವಾಗಿ ಪುಪ್ಪುಸದ ಕ್ಯಾನ್ಸರ್ ಭಾರತದಲ್ಲಿ ದಾಳಿ ಮಾಡುತ್ತಿದೆ. ಅಂದರೆ, ಪಶ್ಚಿಮ ದೇಶಗಳಲ್ಲಿ 55 ವರ್ಷಗಳ ನಂತರ ಈ ರೋಗ ಕಂಡುಬಂದರೆ, ನಮ್ಮಲ್ಲಿ ಇನ್ನೂ 10 ವರ್ಷ ಮೊದಲು. ಇಂಥ ಎಲ್ಲ ನತದೃಷ್ಟರನ್ನು ಬಲಿ ತೆಗೆದು ಕೊಳ್ಳುತ್ತಿರುವುದು ಮುಗಿಲು ಮುಟ್ಟಿರುವ ವಾಯು ಮಾಲಿನ್ಯ. ವಿಶ್ವ ವಾಯು ಗುಣ ಮಟ್ಟದ ವರದಿ ಯನ್ನು ಆಧರಿಸಿ ಹೇಳುವುದಾದರೆ, ವಿಶ್ವದ 40ಭಯಂಕರ ಮಲಿನ ನಗರಗಳಲ್ಲಿ 37ನಗರಗಳು ಇರುವುದು ದಕ್ಷಿಣ ಏಷ್ಯಾದಲ್ಲಿ. ಈ ಪೈಕಿ ನಾಲ್ಕು ಅತ್ಯಂತ ಮಲಿನ ನಗರಗಳು ಭಾರತದಲ್ಲೇ ಇವೆ.
ಲಕ್ಷಣಗಳೇನು?: ಈ ರೋಗ ಆರಂಭಿಕ ಹಂತದಲ್ಲಿ ಪತ್ತೆಯಾಗುವುದು ಕಡಿಮೆಯೇ. ಮೂರು ವಾರಗಳಿಂದ ವಾಸಿಯಾಗದ ಕೆಮ್ಮು, ಉಸಿರಾಟದ ತೊಂದರೆ, ಕೆಮ್ಮಿನಲ್ಲಿ ರಕ್ತ, ಎದೆನೋವು, ಕಾರಣವಿಲ್ಲದೆ ತೂಕ ಇಳಿಯುವುದು, ಮುಗಿಯದ ಸುಸ್ತು, ಆಯಾಸ, ಮೂಳೆ-ಕೀಲುಗಳಲ್ಲಿ ನೋವು, ತೀವ್ರ ಉರಿಯೂತ, ಮುಖದ ಪಾರ್ಶ್ವವಾಯು ಮುಂತಾದ ಯಾವುದೇ ಲಕ್ಷಣಗಳು ಇದ್ದರೂ ತುರ್ತಾಗಿ ವೈದ್ಯರಲ್ಲಿಗೆ ಧಾವಿಸಿ.
ಕಾರಣಗಳೇನು?: ಧೂಮಪಾನ ಮತ್ತು ತಂಬಾಕು ಇಂದಿಗೂ ಪುಪ್ಪುಸ ಕ್ಯಾನ್ಸರ್‌ನ ಕಾರಣಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಆನುವಂಶೀಯತೆಯೂ ಇದರ ಪ್ರಮುಖ ಕಾರಣಗಳಲ್ಲೊಂದು. ಇದಲ್ಲದೆ, ವ್ಯೋಮವನ್ನೆಲ್ಲ ಕವಿದಿರುವ ವಾಯು ಮಾಲಿನ್ಯ ಇದಕ್ಕೆ ದೊಡ್ಡ ಮಟ್ಟದಲ್ಲಿ ಕಾರಣ ವಾಗಿದೆ. ಆಸ್ಬೆಸ್ಟೋಸ್, ಆರ್ಸೆನಿಕ್, ಯುರೇನಿಯಂ, ವಾಹನಗಳ ಹೊಗೆ, ಸಿಲಿಕಾ, ಕಲ್ಲಿದ್ದಲ ಉತ್ಪನ್ನ ಗಳು ಮತ್ತು ಕೆಲವು ಕೈಗಾರಿಕಾ ರಾಸಾಯನಿಕಗಳು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಲ್ಲವು.
ನೇರವಾಗಿ ಧೂಮಪಾನ ಮಾಡದಿದ್ದರೂ, ಮನೆಯಲ್ಲಿ ಧೂಮಪಾನಿಗಳಿದ್ದರೆ, ಕಚೇರಿಯಲ್ಲಿ ಅಥವಾ ಸುತ್ತಮುತ್ತ ಅಂಥವರಿದ್ದರೆ, ಅದರ ಪಾರ್ಶ್ವ ಪರಿಣಾಮವಾಗಿ ಧೂಮಪಾನಿ ಗಳಲ್ಲ ದವ ರಿಗೂ ಕ್ಯಾನ್ಸರ್ ಬಂದಿರುವ ಉದಾಹರಣೆಗಳಿವೆ. ಇದೇ ಘೋರ ಪರಿಣಾಮವನ್ನು ಸರ್ವವ್ಯಾಪಿ ಯಾಗಿರುವ ವಾಯು ಮಾಲಿನ್ಯ ಉಂಟುಮಾಡುತ್ತಿದೆ. ಅದರಲ್ಲೂ ಘನ ಕಣಗಳು ಸಾಂದ್ರವಾಗಿರುವ (ಪಾರ್ಟಿಕಲ್ ಮ್ಯಾಟರ್) ಮಾಲಿನ್ಯ ಪುಪ್ಪುಸಗಳಿಗೆ ತೀವ್ರಹಾನಿಯನ್ನು ತರಬಲ್ಲದು. ಈ ಸೂಕ್ಷ್ಮ ಕಣಗಳು ಘನ ಮತ್ತು ದ್ರವ ಕಣಗಳ ಮಿಶ್ರಣ. ಯಾವುದೇ ಉರುವಲು ಮತ್ತು ಇಂಧನಗಳು ಸೂಸು ವಂಥ ಹೊಗೆಯಿಂದ ಇವು ವಾತಾವರಣ ಸೇರುತ್ತವೆ. ಅದರಲ್ಲೂ 2.5ಮೈಕ್ರಾನ್‌ಗಿಂತ (ಪಿಎಂ 2.5) ಸಣ್ಣದಾದ (ನಮ್ಮ ಕೂದಲಿನ ವ್ಯಾಸದ 1/7ರಷ್ಟು ಸೂಕ್ಷ್ಮವಾದವು!) ಕಣಗಳು ಸಿಕ್ಕಾಪಟ್ಟೆ ಅಪಾಯ ಒಡ್ಡುತ್ತವೆ. ಇವು ನಮ್ಮ ಶ್ವಾಸಕೋಶಗಳಲ್ಲಿ ಗಪ್ಪಾಗಿ ಕೂತು, ಪ್ರತಿರೋಧಕ ಶಕ್ತಿಗಳ ಹಿಡಿತಕ್ಕೂ ಸಿಗದೆ ಕ್ಯಾನ್ಸರ್ ತರುತ್ತಿವೆ.
ಇದನ್ನು ಓದಿ:Health Tips: ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ಪರಿಹಾರ ಕ್ರಮ!
ಸುರಕ್ಷಿತವಾಗಿರುವುದು ಹೇಗೆ?: ವಿಶ್ವವೆಲ್ಲ ಹೊಗೆಯಲ್ಲೇ ಮುಚ್ಚಿರುವಾಗ, ಮಾಲಿನ್ಯದಲ್ಲೇ ಹುದುಗಿರುವಾಗ ಸುರಕ್ಷಿತವಾಗಿರುವುದು ಹೇಗೆ? ನಮ್ಮ ಸುತ್ತಮುತ್ತಲಿನ ವಾಯು ಗುಣಮಟ್ಟವನ್ನು ವೃದ್ಧಿಸಿಕೊಳ್ಳುವುದು ಮಹತ್ವದ್ದು. ನಾವು ವಾಸಿಸುವ ಪ್ರದೇಶ ಆದಷ್ಟೂ ಹಸಿರಾಗಿರುವಂತೆ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ನಾವು ನೆಟ್ಟು ನೀರೆರೆಯುವ ಒಂದೊಂದು ಗಿಡವೂ ಮಹತ್ವದ ಕೆಲಸ ಮಾಡಬಲ್ಲದು. ನಿಮ್ಮ ಸ್ಥಳದ ವಾಯು ಗುಣಮಟ್ಟ ಸೂಚಿಯನ್ನು ಆಗಾಗ ಪರಿಶೀಲಿಸಿ, ಅದು ಹೆಚ್ಚಿದ್ದಲ್ಲಿ ಹೊರಗಿನ ಚಟುವಟಿಕೆಯನ್ನು ಕಡಿಮೆ ಮಾಡಿ. ಯಾವುದೇ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ಓಡುವುದು, ನಡೆಯುವುದು, ವ್ಯಾಯಾಮ ಮಾಡುವುದು ಮುಂತಾದವನ್ನು ಮಾಡದಿರಿ.
ನೆಲದಿಂದ ಮೇಲೇಳುವ ರೇಡಾನ್ ಎನ್ನುವ ರೇಡಿಯೋಆಕ್ಟಿವ್ ಅನಿಲದ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಇದು ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಆಸ್ಬೆಸ್ಟೋಸ್, ಆರ್ಸೆನಿಕ್, ಯುರೇನಿಯಂ, ವಾಹನಗಳ ಹೊಗೆ, ಸಿಲಿಕಾ, ಕಲ್ಲಿದ್ದಲ ಉತ್ಪನ್ನಗಳು ಮತ್ತು ಕೆಲವು ಕೈಗಾರಿಕಾ ರಾಸಾಯನಿಕಗಳು ಕ್ಯಾನ್ಸರ್‌ಕಾರಕಗಳ ಪಟ್ಟಿಯಲ್ಲಿವೆ. ಇವುಗಳಿಂದ ದೂರವಿರಿ. ಮನೆಯೊಳಗಿನ ಗಾಳಿಯನ್ನು ಶುದ್ಧೀಕರಿಸುವಂಥ ಗಿಡಗಳನ್ನು ಇರಿಸಿಕೊಳ್ಳಿ. ಅಗತ್ಯವಿದ್ದರೆ ಏರ್ ಪ್ಯೂರಿಫಯರ್ ಬಳಸಿ. ಸುಮ್ಮನೆ ನಿಂತು ಮಾತಾಡುವಾಗ ವಾಹನದ ಎಂಜಿನ್ ಸ್ತಬ್ಧಗೊಳಿಸಿ. ಅದರಲ್ಲೂ ಡೀಸೆಲ್ ಎಂಜಿನ್‌ಗಳು ಹೆಚ್ಚಿನ ಮಾಲಿನ್ಯವನ್ನು ಉಂಟುಮಾಡುತ್ತವೆ. ಕಸವನ್ನು ಎಂದಿಗೂ ಸುಡಬೇಡಿ, ಬದಲಿಗೆ ಬೇರ್ಪಡಿಸಿ ಕಸ ಸಂಗ್ರಹಿಸುವವರಿಗೆ ನೀಡಿ. ಆರೋಗ್ಯಪೂರ್ಣವಾದ ಜೀವನಕ್ಕಾಗಿ ಸತ್ವಯುತ ಆಹಾರ ತಿನ್ನಿ, ತಪ್ಪದೆ ವ್ಯಾಯಾಮ ಮಾಡಿ.