ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಖಾಲಿ ಹೊಟ್ಟೆಯಲ್ಲಿ ಅತಿಯಾಗಿ ವ್ಯಾಯಾಮ ಮಾಡುವುದು ಹೃದಯಾಘಾತಕ್ಕೆ ದಾರಿ ಮಾಡಿಕೊಟ್ಟಂತೆ! ವೈದ್ಯರ ಎಚ್ಚರಿಕೆ ಏನು?

Running On An Empty Stomach: ಫಿಟ್‌ನೆಸ್‌ ಕಾಯ್ದುಕೊಳ್ಳುವ ಉತ್ಸಾಹದಲ್ಲಿ ಅನೇಕರು ಖಾಲಿ ಹೊಟ್ಟೆಯಲ್ಲಿ ಓಡುವುದು, ಅತಿಯಾದ ವರ್ಕೌಟ್ ಮಾಡುವುದು ಮತ್ತು ಸಾಕಷ್ಟು ನೀರು ಕುಡಿಯದೆ ಇರುವುದು ಮುಂತಾದ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ವೈದ್ಯಕೀಯ ವರದಿಗಳ ಪ್ರಕಾರ ಈ ಮೂರು ಅಭ್ಯಾಸಗಳು ಹೃದಯದ ಮೇಲೆ ತೀವ್ರ ಒತ್ತಡ ಹೇರಿ, ಹೃದಯಾಘಾತದಂತಹ ಗಂಭೀರ ಅಪಾಯಗಳಿಗೆ ನೇರವಾಗಿ ದಾರಿಮಾಡಿಕೊಡುತ್ತವೆ. ಆದ್ದರಿಂದ ಪ್ರತಿದಿನ ವ್ಯಾಯಾಮ ಮಾಡುವವರು ಆರೋಗ್ಯ ಸುಧಾರಿಸುವ ಭರದಲ್ಲಿ ಹೃದಯದ ಸುರಕ್ಷತೆಯ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸುವುದು ಅನಿವಾರ್ಯ.

ಖಾಲಿ ಹೊಟ್ಟೆಯಲ್ಲಿ ಅತಿಯಾಗಿ ವ್ಯಾಯಾಮ ಮಾಡಲೇಬೇಡಿ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 12, 2026 10:18 PM

ಬೆಂಗಳೂರು: ಫಿಟ್‌ನೆಸ್‌ ಕಾಪಾಡಿಕೊಳ್ಳಲು ಮತ್ತು ತೂಕ ಇಳಿಸಿಕೊಳ್ಳಲು ಇತ್ತೀಚಿನ ದಿನಗಳಲ್ಲಿ ಅನೇಕರು ಓಟ ಮತ್ತು ಕಠಿಣ ವ್ಯಾಯಾಮದ ಮೊರೆ ಹೋಗುತ್ತಿದ್ದಾರೆ. ಆದರೆ, ಸರಿಯಾದ ತಿಳುವಳಿಕೆಯಿಲ್ಲದೆ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಆರೋಗ್ಯ ಸುಧಾರಿಸುವ ಬದಲು ಹೃದಯದ ಮೇಲೆ ತೀವ್ರ ಒತ್ತಡ ಹೇರಬಹುದು ಎಂದು ಹೃದ್ರೋಗ ತಜ್ಞರು ಎಚ್ಚರಿಸಿದ್ದಾರೆ. ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ಓಡುವುದು (Running on an Empty Stomach), ಅತಿಯಾದ ವ್ಯಾಯಾಮ ಮತ್ತು ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು-ಇವು ಮೂರು ನೇರವಾಗಿ ಹೃದಯದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ವೈದ್ಯಕೀಯ ಅಧ್ಯಯನಗಳು ಎಚ್ಚರಿಸಿವೆ. ವ್ಯಾಯಾಮ ಮಾಡುವಾಗ ಪ್ರತಿಯೊಬ್ಬರೂ ಕಡ್ಡಾಯವಾಗಿ ತಿಳಿದಿರಲೇಬೇಕಾದ ಪ್ರಮುಖ ಮಾಹಿತಿಗಳು ಇಲ್ಲಿವೆ.

ಖಾಲಿ ಹೊಟ್ಟೆಯಲ್ಲಿ ಓಡುವುದು ಏಕೆ ಅಪಾಯಕಾರಿ?

ಅನೇಕ ಜನರು ಪ್ರತಿದಿನ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ರನ್ನಿಂಗ್ ಮತ್ತು ಜಾಗಿಂಗ್‌ ಹೋಗುವುದು ಉತ್ತಮ ಅಭ್ಯಾಸವೆಂದು ಭಾವಿಸಿರುತ್ತಾರೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ ಎಂಬ ತಪ್ಪು ಕಲ್ಪನೆ ಅವರಲ್ಲಿರುತ್ತದೆ. ಆದರೆ ಮುಂಜಾನೆ ಏನನ್ನೂ ತಿನ್ನದೆ ಓಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ತೀವ್ರವಾಗಿ ಕುಸಿಯುತ್ತದೆ. ಇದರಿಂದ ದೇಹವು ಆತಂಕ ಅಥವಾ ಒತ್ತಡದ ಹಾರ್ಮೋನುಗಳಾದ 'ಕಾರ್ಟಿಸೋಲ್' ಮತ್ತು 'ಅಡ್ರಿನಾಲಿನ್' ಅನ್ನು ಅತಿಯಾಗಿ ಬಿಡುಗಡೆ ಮಾಡುತ್ತದೆ. ಇದು ಹಠಾತ್ತನೆ ಹೃದಯ ಬಡಿತವನ್ನು ಹೆಚ್ಚಿಸಿ, ರಕ್ತದೊತ್ತಡದಲ್ಲಿ ಏರುಪೇರು ಉಂಟುಮಾಡುತ್ತದೆ. ಪರಿಣಾಮವಾಗಿ ತಲೆತಿರುಗುವಿಕೆ, ಎದೆಬಡಿತ ಹೆಚ್ಚಾಗುವುದು ಹಾಗೂ ಕೆಲವೊಮ್ಮೆ ಗಂಭೀರ ಹೃದಯಾಘಾತಕ್ಕೂ ಇದು ದಾರಿ ಮಾಡಿಕೊಡುತ್ತದೆ. ಓಡಲು ಹೋಗುವ ಕನಿಷ್ಠ 30 ರಿಂದ 45 ನಿಮಿಷಗಳ ಮೊದಲು ಒಂದು ಬಾಳೆಹಣ್ಣು, ಕೆಲವು ನೆನೆಸಿದ ಬಾದಾಮಿ ಅಥವಾ ಸ್ವಲ್ಪ ಓಟ್ಸ್‌ನಂತಹ ಹಗುರವಾದ ಲಘು ಆಹಾರವನ್ನು ಸೇವಿಸುವುದು ಅತ್ಯಗತ್ಯ.

ಅತಿಯಾದ ವ್ಯಾಯಾಮ ಹೃದಯದ ಸ್ನಾಯುಗಳಿಗೆ ಹಾನಿ

"ಹೆಚ್ಚು ವರ್ಕೌಟ್ ಮಾಡಿದರೆ ಬೇಗ ಫಿಟ್ ಆಗಬಹುದು" ಎಂಬ ಅತಿಯಾದ ಉತ್ಸಾಹ ಹಲವರಲ್ಲಿರುತ್ತದೆ. ಆದರೆ ಇದು ದೇಹಕ್ಕೆ ಮುಳುವಾಗಬಹುದು. ದೇಹಕ್ಕೆ ಪ್ರತಿದಿನವೂ ಕಠಿಣ ಶ್ರಮದ ನಂತರ ತಕ್ಕಷ್ಟು ವಿಶ್ರಾಂತಿ ಬೇಕಾಗುತ್ತದೆ. ಯಾವುದೇ ವಿರಾಮವಿಲ್ಲದೆ ದಿನಗಟ್ಟಲೆ ಅತಿಯಾದ ವ್ಯಾಯಾಮ ಮಾಡುವುದರಿಂದ ಹೃದಯದ ಸ್ನಾಯುಗಳ ಮೇಲೆ ವಿಪರೀತ ಒತ್ತಡ ಬೀಳುತ್ತದೆ. ಅತಿಭಾರವಾದ ವ್ಯಾಯಾಮದಿಂದ ಹೃದಯದ ಬಡಿತದ ಲಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಇದು ದೀರ್ಘಕಾಲದವರೆಗೆ ಮುಂದುವರಿದರೆ ಹೃದಯದ ಸ್ನಾಯುಗಳು ದಪ್ಪವಾಗಿ, ರಕ್ತ ಪಂಪ್ ಮಾಡುವ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ.

ಮಹಿಳೆಯರಿಗೆ ಫ್ರೊಟೀನ್ ಆಹಾರ ಏಕೆ ಅಗತ್ಯ!

ನಿರ್ಜಲೀಕರಣ ಸಮಸ್ಯೆ

ವ್ಯಾಯಾಮ ಮಾಡುವಾಗ ಅಥವಾ ಬಿಸಿಲಿನಲ್ಲಿ ಓಡುವಾಗ ಬೆವರಿನ ಮೂಲಕ ದೇಹದಿಂದ ನೀರು ಮತ್ತು ಪ್ರಮುಖ ಲವಣಗಳು ಹೊರಹೋಗುತ್ತವೆ. ಸಾಕಷ್ಟು ನೀರು ಕುಡಿಯದೆ ವ್ಯಾಯಾಮ ಮುಂದುವರಿಸಿದರೆ ದೇಹವು ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಇದರಿಂದ ರಕ್ತವು ಗಟ್ಟಿಯಾಗುತ್ತದೆ. ದಪ್ಪವಾಗಿರುವ ರಕ್ತವನ್ನು ದೇಹದ ಎಲ್ಲಾ ಅಂಗಗಳಿಗೆ ಪಂಪ್ ಮಾಡಲು ಹೃದಯವು ಸಾಮಾನ್ಯಕ್ಕಿಂತ ಹತ್ತು ಪಟ್ಟು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಇದು ಹಠಾತ್ ರಕ್ತದೊತ್ತಡ ಕುಸಿತಕ್ಕೆ ಅಥವಾ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.

ವೈದ್ಯರ ನೀಡುವ ಸಲಹೆಗಳು

ಖಾಲಿ ಹೊಟ್ಟೆಯಲ್ಲಿ ಎಂದಿಗೂ ಭಾರಿ ವ್ಯಾಯಾಮ ಅಥವಾ ಓಟಕ್ಕೆ ಹೋಗಬೇಡಿ. ಶಕ್ತಿ ನೀಡುವ ಕಾರ್ಬೋಹೈಡ್ರೇಟ್ಸ್ ಇರುವ ಸಣ್ಣ ಆಹಾರ ಸೇವಿಸಿ. ವರ್ಕೌಟ್ ಮಾಡುವ ಮುನ್ನ, ಮಾಡುವ ಮಧ್ಯೆ ಹಾಗೂ ನಂತರ ಮರೆಯದೆ ಸಾಕಷ್ಟು ನೀರು ಅಥವಾ ಎಲೆಕ್ಟ್ರೋಲೈಟ್ಯುಕ್ತ ಪಾನೀಯಗಳನ್ನು ಕುಡಿಯಿರಿ. ಓಡುವಾಗ ಅಥವಾ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಎದೆ ನೋವು, ಅತಿಯಾದ ಉಸಿರಾಟ, ಕಣ್ಣು ಕತ್ತಲು ಕಟ್ಟುವುದು ಅಥವಾ ತಲೆತಿರುಗುವಿಕೆ ಕಂಡುಬಂದ ಕೂಡಲೇ ವ್ಯಾಯಾಮವನ್ನು ತಕ್ಷಣ ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸಿ.