ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎತ್ತರದ ಜಾಗಕ್ಕೆ ಹೋದರೆ ನಿಮಗೂ ಹೋದಂತೆ ಕಿವಿ ಕಟ್ಟಿದಂತಾಗುತ್ತ? ಇದಕ್ಕೇನು ಕಾರಣ?

Ear Blocked at High Altitudes: ಎತ್ತರದ ಪರ್ವತದಂಥ ಜಾಗಗಳಿಗೆ ತಿರುಗುಮುರುಗಾದ ದಾರಿಯಲ್ಲಿ ಹೋಗುವಾಗ, ಯಾವುದಾದರೂ ರೋಪ್‌-ವೇದಲ್ಲಿ ಜಾರುವಾಗ, ವಿಮಾನದಲ್ಲಿ ಹಾರುವಾಗ ಕಿವಿ ಕಟ್ಟುವ ಅನುಭವ ನಿಮಗೂ ಆಗಿರಬಹುದು. ಅದಕ್ಕೇನು ಕಾರಣ ಎನ್ನುವ ವಿವರ ಇಲ್ಲಿದೆ.

ಎತ್ತರದ ಜಾಗಕ್ಕೆ ಹೋದಂತೆ ಕಿವಿ ಕಟ್ಟುವುದೇಕೆ?

ಚಾಟ್‌ಜಿಪಿಟಿ ರಚಿತ ಚಿತ್ರ -

Ramesh Ballamoole
Ramesh Ballamoole Nov 7, 2026 7:00 AM

ಬೆಂಗಳೂರು: ಎತ್ತರದ ಪರ್ವತದಂಥ ಜಾಗಗಳಿಗೆ ತಿರುಗುಮುರುಗಾದ ದಾರಿಯಲ್ಲಿ ಹೋಗುವಾಗ, ಯಾವುದಾದರೂ ರೋಪ್‌-ವೇದಲ್ಲಿ ಜಾರುವಾಗ, ವಿಮಾನದಲ್ಲಿ ಹಾರುವಾಗ ಕಿವಿ ಕಟ್ಟುವ ಅನುಭವ ಬಹಳಷ್ಟು ಮಂದಿಗೆ ಆಗಿರಬಹುದು. ಅದೇನು ನಮ್ಮ ಉತ್ಸಾಹದಿಂದ ಆಗುವಂಥದ್ದಲ್ಲ. ಅಷ್ಟೊಂದು ಉತ್ಸಾಹವಿದ್ದರೆ ಹೊಟ್ಟೆಯಲ್ಲಿ ತೌಡು ಕುಟ್ಟಿದಂತಾಗಬಹುದು, ಎದೆ ಹಕ್ಕಿಯಂತೆ ಹಾರಬಹುದು, ಆದರೆ ಕಿವಿ ಕಟ್ಟುವುದಿಲ್ಲ. ಹಾಗೇಕಾಗುತ್ತದೆ? ನಮ್ಮ ಕಿವಿಯ ದೋಷವೇ ಅದು? ಖಂಡಿತ ಅಲ್ಲ, ಇದು ಬಹಳಷ್ಟು ಮಂದಿಗೆ ಆಗಿರುವ ಅನುಭವ, ವಿಶೇಷವೇನಲ್ಲ. ಹಾಗೆ ಆಗುವುದೇಕೆ ಎನ್ನುವುದನ್ನು ಅರ್ಥ ಮಾಡಿಕೊಂಡರೆ, ಈ ಅನುಭವ ಆಗದಂತೆ ತಡೆಯಲು ಸಾಧ್ಯವಾಗಬಹುದು.

ಕಿವಿ ಕಟ್ಟುವುದೆಂದರೆ: ಕಿವಿ ತುಂಬಿದಂತೆ ಅನಿಸುವುದು, ಪಕ್ಕದವರು ಮಾತಾಡಿದರೆ ಸರಿಯಾಗಿ ಕೇಳದಿರುವುದು, ಕೆಲವರಿಗೆ ಇದ್ದಕ್ಕಿದ್ದಂತೆ ಜೋರಾಗಿ ಕಿವಿ ನೋವಾಗುವುದು, ಕೆಲವೊಮ್ಮೆ ಕಿವಿಯೊಳಗೆ ಗುಳ್ಳೆಯೊಂದು ಒಡೆದಂತಾಗಿ ಎಲ್ಲವೂ ಸರಿಯಾಗುವುದು- ಇಂಥ ಅನುಭವಗಳು ಹೊಸದೇನಲ್ಲ. ಹಾಗಾದರೆ ಎತ್ತರದ ಜಾಗಗಳಿಗೆ ಹೋದರೆ ನಮ್ಮ ಶ್ರವಣ ಸಾಮರ್ಥ್ಯ ಕುಗ್ಗುವುದೇ? ಸ್ವಲ್ಪಮಟ್ಟಿಗೆ…ತಾತ್ಕಾಲಿಕವಾಗಿ… ಹೌದು! ಹಾಗೆಂದು ಕೆಲವೇ ಹೊತ್ತಿನಲ್ಲಿ ಇದು ಸರಿಯಾಗುತ್ತದೆ. ಹಾಗೇಕೆ?

ಒತ್ತಡ ಹೆಚ್ಚು-ಕಡಿಮೆ: ವಿಮಾನದಲ್ಲಿ ಹಾರಿದಾಗ ಈ ಅನುಭವ ತೀರಾ ಸ್ಪಷ್ಟವಾಗಿ ತಿಳಿಯುತ್ತದೆ. ಮೇಲೇರಿದಂತೆ ಸುತ್ತಲಿನ ವಾತಾವರಣದಲ್ಲಿನ ಗಾಳಿಯ ಒತ್ತಡ ಕಡಿಮೆಯಾಗುತ್ತದೆ. ಆದರೆ ನಮ್ಮ ನಡುಗಿವಿಯಲ್ಲಿನ ಗಾಳಿಯ ಒತ್ತಡ ಮೊದಲಿನಂತೆಯೇ ಇರುತ್ತದೆ. ಹಾಗಾಗಿ ಕಿವಿಯ ಪೊರೆಯನ್ನಿದು ಮುಂದೂಡುತ್ತದೆ. ಈ ಹಂತದಲ್ಲಿ ಕಿವಿ ತುಂಬಿದ, ಕೆಲವೊಮ್ಮೆ ಇದ್ದಕ್ಕಿದ್ದಂತೆ ನೋವಾದ ಅನುಭವವಾಗುತ್ತದೆ. ನಡುಗಿವಿಯ ಒತ್ತಡ ಕಡಿಮೆಯಾಗಿ, ವಾತಾವರಣದ ಗಾಳಿಯ ಒತ್ತಡಕ್ಕೆ ಹೊಂದಿಕೆ ಆಗುತ್ತಿದ್ದಂತೆ ಕಿವಿ ಸರಿಯಾಗುತ್ತದೆ.

ಇದೇ ಸನ್ನಿವೇಶವು ಎತ್ತರದಿಂದ ಕೆಳಗಿಳಿಯುವಾಗಲೂ ಆಗುತ್ತದೆ. ನಮ್ಮ ನಡುಗಿವಿಯ ಒತ್ತಡ ಕಡಿಮೆಯಿದ್ದು, ವಾತಾವರಣದ ಒತ್ತಡ ಹೆಚ್ಚಿರುತ್ತದೆ. ಇವೆರಡೂ ಹೊಂದಿಕೆ ಆಗುವವರೆಗೆ ಕಿವಿಯ ಪೊರೆಯು ಒಳಗೆ ಎಳೆದಂತಾಗಿ ಕಿರಿಕಿರಿಯಾಗುತ್ತದೆ. ಒಂದು ಅಥವಾ ಎರಡೂ ಕಿವಿಗಳು ತುಂಬಿದಂತೆ, ಹೊರಗಿನ ಸದ್ದು ಕೇಳದಂತಾಗುತ್ತದೆ. ಎಂಜಲು ನುಂಗಿದಾಗೆಲ್ಲ ಕಿವಿಯೊಳಗೆ ಏನೋ ಒಡೆದಂಥ ಸದ್ದುಗಳು ಬರಬಹುದು. ತೀರಾ ಎತ್ತರದ ಸ್ಥಳಗಳಿಗೆ ಹೋದರೆ, ಅಲ್ಲಿನ ವಾತಾವರಣದಲ್ಲಿ ಆಮ್ಲಜನಕ ಕಡಿಮೆ ಇರುತ್ತದೆ. ಆಗ ತಲೆನೋವು, ತಲೆಸುತ್ತು, ಸುಸ್ತು, ಓಕರಿಕೆ ಇತ್ಯಾದಿ ಅಸ್ವಸ್ಥತೆಗಳು ಕಾಣಿಸಿಕೊಂಡು, ಕೆಲವೊಮ್ಮೆ ಇಲ್ಲದ ಹೊಸ ಸದ್ದುಗಳೂ ಕೇಳಿ, ಕಿವಿಯಲ್ಲಿ ತಾತ್ಕಾಲಿಕವಾದ ಟಿನ್ನಿಟಸ್‌ನಂತಾಗಬಹುದು. ಈ ಲಕ್ಷಣಗಳು ಸ್ವಲ್ಪ ಇದ್ದು, ಕೆಲಕಾಲದ ನಂತರ ಸರಿಯಾದರೆ ಚಿಂತಿಸಬೇಕಿಲ್ಲ. ಆದರೆ ಈ ಲಕ್ಷಣಗಳು ತೀವ್ರವಾಗಿ ಕಾಣಿಸಿಕೊಂಡು, ತಾಸುಗಟ್ಟಲೆ ಹೋಗದಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ಇಷ್ಟೊಂದು ಉಪ್ಪುಗಳ ಪೈಕಿ ಅಯೋಡಿನ್‌ಗಾಗಿ ಯಾವುದು ಉತ್ತಮ?

ತಡೆಯುವುದು ಹೇಗೆ?: ಎತ್ತರದ ಸ್ಥಳಗಳಿಗೆ ಹೋಗುವಾಗ ಅಥವಾ ಇಳಿಯುವಾಗ ಎಂಜಲು ನುಂಗುವುದು, ಆಕಳಿಸುವುದು, ಏನಾದರೂ ಅಗಿಯುತ್ತಿರುವುದು ಒಳ್ಳೆಯ ಉಪಾಯ. ಆಗೀಗ ಅಲ್ಪ ಪ್ರಮಾಣದ ನೀರನ್ನು ಗುಟುಕರಿಸುವುದು ಸಹ ಸಹಾಯ ಮಾಡುತ್ತದೆ. ಆಗಲೂ ಸರಿಯಾಗದಿದ್ದರೆ, ಉಸಿರು ಒಳಗೆ ತೆಗೆದುಕೊಳ್ಳಿ. ಮೂಗು-ಬಾಯಿ ಎರಡನ್ನೂ ಮುಚ್ಚಿಕೊಂಡು, ಲಘುವಾಗಿ ಉಸಿರು ಹೊರಗೆ ಬಿಡಲು ಯತ್ನಿಸಿ. ಆಗ ಕಿವಿಯ ಮೇಲೆ ಒತ್ತಡ ಬಿದ್ದು, ಪೊರೆಯು ಸಮಸ್ಥಿತಿಗೆ ಬರುತ್ತದೆ. ಆದರೆ ಈ ಕ್ರಮವನ್ನು ಮಾಡುವಾಗ ಪ್ರಯತ್ನ ಸೌಮ್ಯವಾಗಿರಲಿ.

ಚಿಕ್ಕಮಕ್ಕಳೊಂದಿಗೆ ವಿಮಾನದಲ್ಲಿ ಪ್ರಯಾಣಿಸುವಾಗ ಇಂಥ ಸಮಸ್ಯೆಗಳು ಮಾಮೂಲಿ. ಎಳೆಗೂಸುಗಳಾದರೆ ಅವುಗಳ ಬಾಯಿಗೆ ಪ್ಯಾಸಿಫಯರ್‌ ಇರಿಸಬಹುದು ಅಥವಾ ಹಾಲುಣಿಸಬಹುದು. ಇದರಿಂದ ಅವುಗಳ ಕಿವಿಯಲ್ಲಿನ ಒತ್ತಡ ಕಡಿಮೆಯಾಗುತ್ತದೆ. ನಿದ್ರೆ ಮಾಡುವ ಕೂಸುಗಳನ್ನು ಎಬ್ಬಿಸಿ ಈ ಕೆಲಸ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಕಿವಿನೋವಿನಿಂದ ಅವು ಚೀರುವುದನ್ನು ನೋಡಬೇಕಾಗುತ್ತದೆ. ನೆಗಡಿ-ಕೆಮ್ಮಿದ್ದರೆ, ವಿಮಾನ ಪ್ರಮಾಣ ಅಥವಾ ಎತ್ತರ ಸ್ಥಳಗಳಿಗೆ ಪ್ರಯಾಣ ಇನ್ನಷ್ಟು ತೊಂದರೆ ತರುತ್ತದೆ. ಹಾಗಾಗಿ ನೆಗಡಿ ಕಡಿಮೆಯಾಗ ಮೇಲೆ ಪ್ರಯಾಣಿಸಲು ಸಾಧ್ಯವೇ ಪರಿಶೀಲಿಸಿ.