ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಸ್‌ಟಿ ನಿಗಮದ ಹಣದ ಅಕ್ರಮ ವರ್ಗಾವಣೆ: ನಾಗೇಂದ್ರರಿಂದ ಸ್ಪಷ್ಟನೆಗೆ ಸೋನಾಲಿ ಸರ್ನೋಬತ್ ಆಗ್ರಹ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರು ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್(Dr Sonali Sarnobat) ಆಗ್ರಹಿಸಿದ್ದಾರೆ.

ಎಸ್‌ಟಿ ನಿಗಮದ ಹಣದ ಅಕ್ರಮ ವರ್ಗಾವಣೆ: ಸ್ಪಷ್ಟನೆಗೆ ಸರ್ನೋಬತ್ ಆಗ್ರಹ

-

Profile
Ashok Nayak Aug 17, 2026 8:10 PM

ಬೆಳಗಾವಿ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರು ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್(Dr Sonali Sarnobat) ಆಗ್ರಹಿಸಿದ್ದಾರೆ.

ನಿಗಮದ ಹಣ ದುರುಪಯೋಗಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳು ಹಲವು ಗಂಭೀರ ಅಂಶಗಳನ್ನು ಬಹಿರಂಗಪಡಿಸಿವೆ. ಇತ್ತೀಚೆಗೆ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ನಾಗೇಂದ್ರ ಸೇರಿದಂತೆ 30 ಮಂದಿಯನ್ನು ಆರೋಪಿಗಳಾಗಿ ಹೆಸರಿಸಲಾಗಿದೆ. ನಿಗಮಕ್ಕೆ ಸೇರಿದ ₹89.63 ಕೋಟಿ ಹಣವನ್ನು ನಕಲಿ ಚೆಕ್‌ಗಳು ಹಾಗೂ ಆರ್‌ಟಿಜಿಎಸ್‌ ವಹಿವಾಟುಗಳ ಮೂಲಕ ವರ್ಗಾಯಿಸಿ, ಸುಮಾರು 600 ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ಲೇಯರಿಂಗ್ ಮಾಡಲಾಗಿದೆ ಎಂದು ಸಿಬಿಐ ಆರೋಪಿಸಿದೆ. ಬಳಿಕ ಹಣವನ್ನು ನಗದು, ಚಿನ್ನದ ಗಟ್ಟಿ ಹಾಗೂ ಐಷಾರಾಮಿ ವಾಹನಗಳ ರೂಪಕ್ಕೆ ಪರಿವರ್ತಿಸಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಇದನ್ನೂ ಓದಿ: Dr. Sonali Sarnobat on Budget: ಕರ್ನಾಟಕ ರಾಜ್ಯ ಬಜೆಟ್ ಜನಸಾಮಾನ್ಯರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲ: ಡಾ.ಸೋನಾಲಿ ಸರ್ನೋಬತ

ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಮೀಸಲಿಟ್ಟ ಸಾರ್ವಜನಿಕ ಹಣ ಈ ರೀತಿಯ ಅಕ್ರಮಕ್ಕೆ ಒಳಗಾಗಿದೆ ಎಂಬ ಆರೋಪಗಳು ಅತ್ಯಂತ ಗಂಭೀರವಾಗಿವೆ. ಶಿಕ್ಷಣ, ಉದ್ಯೋಗ, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳಿಗೆ ಬಳಕೆಯಾಗಬೇಕಿದ್ದ ಹಣದ ದುರುಪಯೋಗದಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಸೋನಾಲಿ ಸರ್ನೋಬತ್ ಹೇಳಿದ್ದಾರೆ.

ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವೂ ಪ್ರಕರಣದಲ್ಲಿ ಆಸ್ತಿಗಳನ್ನು ಜಪ್ತಿ ಮಾಡಿದೆ. 2025ರ ಡಿಸೆಂಬರ್‌ನಲ್ಲಿ ನಾಗೇಂದ್ರ ಅವರಿಗೆ ಸೇರಿದ ಸುಮಾರು ₹8.07 ಕೋಟಿ ಮೌಲ್ಯದ ಸ್ಥಿರಾಸ್ತಿ ಗಳನ್ನು ಜಪ್ತಿ ಮಾಡಿರುವುದಾಗಿ ಇಡಿ ತಿಳಿಸಿತ್ತು.

ನಿಗಮದ ಹಣದ ಒಂದು ರೂಪಾಯಿಯೂ ದುರುಪಯೋಗವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಪ್ರಕರಣದ ತನಿಖೆ ಸಂಪೂರ್ಣ ಪಾರದರ್ಶಕವಾಗಿ ನಡೆಯಬೇಕು. ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳ ಬೇಕು. ನಿಗಮದ ಹಣವನ್ನು ಮರಳಿ ಪಡೆದು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಮ್ಮ ವಿರುದ್ಧದ ಆರೋಪಗಳನ್ನು ನಾಗೇಂದ್ರ ಅವರು ನಿರಾಕರಿಸಿರುವ ಹಿನ್ನೆಲೆಯಲ್ಲಿ, ತನಿಖೆಯ ಅಂತಿಮ ಫಲಿತಾಂಶ ಹಾಗೂ ನ್ಯಾಯಾಲಯದ ತೀರ್ಪಿಗೆ ಕಾಯಬೇಕಿದೆ. ಆದರೆ ತನಿಖಾ ಸಂಸ್ಥೆಗಳು ದಾಖಲಿಸಿರುವ ಆರೋಪಗಳ ಕುರಿತು ನಾಗೇಂದ್ರ ಅವರು ಸಾರ್ವಜನಿಕವಾಗಿ ಸ್ಪಷ್ಟನೆ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಎಸ್‌ಟಿ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಾದ ಹಣದ ರಕ್ಷಣೆಯಲ್ಲಿ ಯಾವುದೇ ರಾಜಕೀಯ ಭೇದಭಾವ ಇರಬಾರದು. ಸಾರ್ವಜನಿಕ ಹಣದ ಅಕ್ರಮ ಬಳಕೆಯ ವಿರುದ್ಧ ಬಿಜೆಪಿ ತನ್ನ ಹೋರಾಟ ಮುಂದುವರಿಸಲಿದೆ ಎಂದು ಡಾ.ಸೋನಾಲಿ ಸರ್ನೋಬತ್ ತಿಳಿಸಿದ್ದಾರೆ.