Laxmi Hebbalkar: ಪಾಲಕರ ಕನಸನ್ನು ನನಸಾಗಿಸುವುದು ಮಕ್ಕಳ ಕರ್ತವ್ಯ: ಲಕ್ಷ್ಮಿ ಹೆಬ್ಬಾಳ್ಕರ್
ಮಕ್ಕಳ ವಿದ್ಯಾಭ್ಯಾಸ ಕುಂಠಿತ ಆಗಬಾರದು ಅನ್ನೋದೆ ನನ್ನ ಹಾಗೂ ಇಲಾಖೆಯ ಉದ್ದೇಶ. ಯಾವುದೇ ಮಾರ್ಗದರ್ಶನ ಬೇಕಾದರೆ ನಮ್ಮ ಇಲಾಖೆ ಸದಾ ನೀಡುತ್ತದೆ. ಬಾಲ್ಯದ ಜೀವನ ಒಳ್ಳೆಯ ಜೀವನ, ಎಲ್ಲರೂ ತಮ್ಮ ಜೀವನವನ್ನು ಹಸನಾಗಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬಾಲವಿಕಾಸ ಅಕಾಡೆಮಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ -
ಬೆಳಗಾವಿ, ಡಿ.16: ಮಕ್ಕಳಿಗೆ ಯಾವುದೇ ಒತ್ತಡ ಹಾಕದೇ ಅವರ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಹಾಗೆಯೇ ಪಾಲಕರ ಕನಸನ್ನು ನನಸು ಮಾಡುವುದು ಕೂಡ ಮಕ್ಕಳ ಕರ್ತವ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿದರು. ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಸಚಿವೆ ಮಾತನಾಡಿದರು.
ಒಂದೊಂದು ಕ್ಷಣ ಕೂಡ ಮಕ್ಕಳ ಪಾಲಿಗೆ ಮುಖ್ಯ. ಉತ್ತಮ ರೀತಿಯಲ್ಲಿ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಾನು ಇಲಾಖೆಯ ಸಚಿವೆಯಾದ ಬಳಿಕ ಹಲವು ಬದಲಾವಣೆ ಮಾಡಿರುವೆ. ಇಂದಿನ ಮಕ್ಕಳು ನಾಳೆ ದೇಶದ ಭವಿಷ್ಯ. ಪಾಲಕರ ಕನಸನ್ನು ಮಕ್ಕಳು ಈಡೇರಿಸಬೇಕು ಎಂದ ಸಚಿವರು, ಕಣ್ಣಿಗೆ ಕಾಣುವ ದೇವರು ಅಂದರೆ ಮಕ್ಕಳು, ಅವರನ್ನು ಸಂತೋಷ ಪಡಿಸಿದರೆ ನಮ್ಮ ಜೀವನ ಸಾರ್ಥಕ ಆದಂತೆ ಎಂದು ಹೇಳಿದರು.
ಅಧಿಕಾರ ಎಂಬುದು ಶಾಶ್ವತ ಅಲ್ಲ, ಇದೊಂದು ಅವಕಾಶ, ಅಧಿಕಾರ ಇದ್ದಾಗ ನಾಲ್ಕು ಜನರಿಗೆ ಅನುಕೂಲ ಮಾಡಿಕೊಡಬೇಕು. ಇಡೀ ದೇಶದಲ್ಲಿ ಭಾರತಕ್ಕೆ ಮಾದರಿಯಾಗುವಂತೆ ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ಶಾಲಾ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟದ ಯೋಜನೆ ತರಲಾಯಿತು. ಊಟದ ಸಮಸ್ಯೆಯಿಂದಾಗಿ ಶಾಲೆಯಿಂದ ದೂರ ಉಳಿಯುತ್ತಿದ್ದ ಮಕ್ಕಳಿಗೆ ಪೌಷ್ಠಿಕ ಆಹಾರದ ಜತೆ ವಿದ್ಯಾಭ್ಯಾಸ ನೀಡುವುದೇ ಈ ಯೋಜನೆಯ ಉದ್ದೇಶ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಮಹಿಳೆಯರ ಹಾಗೂ ಮಕ್ಕಳ ಪರ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಸ್ವಾರ್ಥ ಇಲ್ಲ, ಮಕ್ಕಳ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಯಾರೂ ಒಪ್ಪುವುದಿಲ್ಲ ಎಂದರು.
ನಾನು ಸಾಮಾನ್ಯ ರೈತ ಕುಟುಂಬದಿಂದ ಬಂದವಳು. ನನಗೆ ನನ್ನ ಬಗ್ಗೆ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಇದೆ. ಏಕೈಕ ಮಹಿಳಾ ಸಚಿವೆಯಾಗಿ ಮಹಿಳೆಯರ ಹಾಗೂ ಮಕ್ಕಳ ಪರ ಧ್ವನಿ ಎತ್ತುತ್ತಾ ಇರುವೆ. ನಾನು ಶಾಲೆಯಲ್ಲಿದ್ದಾಗ ಹಿರಿಯರು ಮಾಡುತ್ತಿದ್ದ ಭಾಷಣವೇ ನನಗೆ ಸ್ಫೂರ್ತಿ ಆಯಿತು ಎಂದು ಅವರು ಹೇಳಿದರು.
ಮಕ್ಕಳ ವಿದ್ಯಾಭ್ಯಾಸ ಕುಂಠಿತ ಆಗಬಾರದು ಅನ್ನೋದೆ ನನ್ನ ಹಾಗೂ ಇಲಾಖೆಯ ಉದ್ದೇಶ. ಯಾವುದೇ ಮಾರ್ಗದರ್ಶನ ಬೇಕಾದರೆ ನಮ್ಮ ಇಲಾಖೆ ಸದಾ ನೀಡುತ್ತದೆ. ಬಾಲ್ಯದ ಜೀವನ ಒಳ್ಳೆಯ ಜೀವನ, ಎಲ್ಲರೂ ತಮ್ಮ ಜೀವನವನ್ನು ಹಸನಾಗಿಸಿಕೊಳ್ಳಬೇಕು ಎಂದರು. ವಿಜಯಪುರದಲ್ಲಿ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿದೆ. ಇದಕ್ಕೆ ನಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಮಠಗಳ ಸೇವಾ ಕಾರ್ಯ ಸರ್ಕಾರಕ್ಕೆ ಸ್ಫೂರ್ತಿ: ಲಕ್ಷ್ಮಿ ಹೆಬ್ಬಾಳ್ಕರ್
ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ್ ನಾವಲಗಟ್ಟಿ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಕೆಪಿಸಿಸಿ ಸಂಚಾಲಕ ಬಸವರಾಜ್ ಶೇಗಾವಿ, ಬಾಲವಿಕಾಸ ಅಕಾಡೆಮಿಯ ನಿರ್ದೇಶಕ ಗಜಾನನ ಮನ್ನಿಕೇರಿ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್. ನಿಶ್ವಲ್, ಯೋಜನಾಧಿಕಾರಿ ಅಕ್ಕಮಹಾದೇವಿ, ಉಪ ನಿರ್ದೇಶಕ ಚೇತನ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.