ಬಾಡಿಗೆ ತಿದ್ದುಪಡಿ ಮಸೂದೆ 2025ಕ್ಕೆ ವಿಧಾನಸಭೆಯಲ್ಲಿ ಅನುಮೋದನೆ; ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಭಾರಿ ದಂಡ!
Rent amendment bill: ಬಾಡಿಗೆ ತಿದ್ದುಪಡಿ ವಿಧೇಯಕದಲ್ಲಿ ಬಾಡಿಗೆದಾರರು ಮತ್ತು ಮನೆ ಮಾಲೀಕರ ನಡುವಿನ ವಿವಾದಗಳನ್ನು ಬಗೆಹರಿಸಲು, ಪಾರದರ್ಶಕತೆ ತರಲು ಕೆಲ ತಿದ್ದುಪಡಿ ಮಾಡಲಾಗಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುವವರು ಮತ್ತು ಮನೆ ಮಾಲೀಕರು ಇಬ್ಬರಿಗೂ ಹೊಸ ನಿಯಮಗಳು ಅನ್ವಯಿಸುತ್ತವೆ.
ಬೆಳಗಾವಿ ಸುವರ್ಣಸೌಧ -
ಬೆಳಗಾವಿ, ಡಿ.16: ವಿಧಾನಸಭೆಯಲ್ಲಿ ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ 2025 (rent amendment bill) ಅಂಗೀಕಾರಗೊಂಡಿದೆ. ಹಳೆಯ ಬಾಡಿಗೆ ಕಾಯ್ದೆಯಲ್ಲಿ ಬಾಡಿಗೆದಾರ-ಮಾಲೀಕರ ನಡುವಿನ ವ್ಯಾಜ್ಯಗಳಲ್ಲಿ ಸಣ್ಣ ಪುಟ್ಟ ಅಪರಾಧಗಳಿಗೆ ಜೈಲು ಶಿಕ್ಷೆ ಇತ್ತು. ಈಗ ಹೊಸ ಮಸೂದೆಯಲ್ಲಿ ಜೈಲು ಶಿಕ್ಷೆ ತೆಗೆಯಲಾಗಿದ್ದು, ಹೊಸ ನಿಯಮದಂತೆ ಬಾಡಿಗೆದಾರರು, ಮಾಲೀಕರು ನಿಯಮ ಉಲ್ಲಂಘಿಸಿದರೆ ದೊಡ್ಡ ಮೊತ್ತದ ದಂಡ ವಿಧಿಸಲು ಅವಕಾಶ ಮಾಡಿಕೊಡಲಾಗಿದೆ.
ಈ ವಿಧೇಯಕದಲ್ಲಿ ಬಾಡಿಗೆದಾರರು ಮತ್ತು ಮನೆ ಮಾಲೀಕರ ನಡುವಿನ ವಿವಾದಗಳನ್ನು ಬಗೆಹರಿಸಲು, ಪಾರದರ್ಶಕತೆ ತರಲು ತಿದ್ದುಪಡಿ ತರಲಾಗಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುವವರು ಮತ್ತು ಮನೆ ಮಾಲೀಕರು ಇಬ್ಬರಿಗೂ ಹೊಸ ನಿಯಮಗಳು ಅನ್ವಯಿಸುತ್ತವೆ.
ಮುಖ್ಯವಾಗಿ, ಬಾಡಿಗೆ ಮನೆಯನ್ನು ಮಾಲೀಕರ ಅನುಮತಿ ಇಲ್ಲದೆ ಬೇರೆಯವರಿಗೆ ಬಾಡಿಗೆಗೆ ನೀಡಿದರೆ, ಈಗಿನ ದಂಡದ ಮೊತ್ತವನ್ನು 5000 ರೂ.ಗಳಿಂದ 50,000 ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇದು ಶೇ. 90ರಷ್ಟು ಹೆಚ್ಚಳವಾಗಲಿದೆ. ಅನಧಿಕೃತವಾಗಿ ಕಾರ್ಯನಿರ್ವಹಿಸುವ ಬ್ರೋಕರ್‌ಗಳಿಗೂ ಈ ಮಸೂದೆ ನಿಯಂತ್ರಣ ಹೇರಲಿದೆ. ಕಾಯ್ದೆಯ ಸೆಕ್ಷನ್ 20ರ ಅಡಿಯಲ್ಲಿ ನೋಂದಣಿ ಮಾಡಿಸದ ಬ್ರೋಕರ್‌ಗಳಿಗೆ ದಿನಕ್ಕೆ 25,000 ರೂ. ದಂಡ ವಿಧಿಸಲಾಗುವುದು. ಈ ಮೊದಲು, ಇದು 2,000 ರೂಪಾಯಿ ದಂಡ ಇತ್ತು. ಮತ್ತೆ ಮತ್ತೆ ತಪ್ಪು ಮಾಡಿದರೆ, ದಿನಕ್ಕೆ 20,000 ರೂಪಾಯಿ ಹೆಚ್ಚುವರಿ ದಂಡ ವಿಧಿಸಲಾಗುತ್ತದೆ. ಮನೆ ಮಾಲೀಕರು ಬಾಡಿಗೆದಾರರನ್ನು ಮನೆಯಿಂದ ಹೊರಹಾಕಬೇಕಾದರೆ ಅಥವಾ ಖಾಲಿ ಮಾಡಿಸಬೇಕಾದರೆ ಕನಿಷ್ಠ 3 ತಿಂಗಳು ಮುಂಚಿತವಾಗಿ ನೋಟಿಸ್ ನೀಡುವುದು ಕಡ್ಡಾಯವಾಗಿದೆ.
ಮಸೂದೆ ಬಗ್ಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, 'ಕೇಂದ್ರ ಸರ್ಕಾರದ ರೂಪಿಸಿದ ಮಾದರಿ ಮಸೂದೆಗೆ ಕೆಲವು ಸರಳ ತಿದ್ದುಪಡಿ ಮಾಡಲಾಗಿದೆ. ಮೂಲ ಮಸೂದೆಯಲ್ಲಿ ಕಾನೂನು ಉಲ್ಲಂಘಿಸಿದರೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿತ್ತು. ಅದನ್ನು ಕೈಬಿಡಲಾಗಿದೆ' ಎಂದು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ
ಇವತ್ತಿಗೂ ಸಣ್ಣ ಪುಟ್ಟ ಬಾಡಿಗೆದಾರರಿಗೆ ಶೋಷಣೆ ಆಗುತ್ತಿದೆ ಎಂಬುದು ನಿಜ. ಅಂತಹವರನ್ನು ರಕ್ಷಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ನಾವು ಈ ಕಾನೂನನ್ನು ಅನುಸರಣೆ ಮಾಡುವುದನ್ನೇ ಮರೆತಿದ್ದೇವೆ. ನಾವೆಲ್ಲರೂ ಒಟ್ಟಾಗಿ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದ್ದಾರೆ.