ಗೃಹಲಕ್ಷ್ಮಿಯರಿಗೆ ಸಚಿವೆ ಹೆಬ್ಬಾಳ್ಕರ್ ಮೋಸ ಮಾಡಿದ್ದೇಕೆ?: ಆರ್.ಅಶೋಕ್ ಪ್ರಶ್ನೆ
Gruhalakshmi Scheme: ಗೃಹಲಕ್ಷ್ಮಿ ಹಣ ಬರುತ್ತದೆ, ಪಡಿತರ ಪಡೆಯೋಣ ಎಂದು ಬಡವರು ಕಾಯುತ್ತಾರೆ. ಅವರ ಆಸೆಯ ಹೊಟ್ಟೆಗೆ ತಣ್ಣೀರ ಬಟ್ಟೆ ಹಾಕಿದ್ದಾರೆ ಎಂದು ಟೀಕಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, 10 ಜಿಲ್ಲೆಗಳಿಗೆ ಹಣ ಕೊಟ್ಟಿಲ್ಲ. ಜಿಲ್ಲಾ ಕಚೇರಿಗಳಿಂದ ಮಾಹಿತಿ ಕೇಳಿದರೆ ಕೊಡದಂತೆ ಎಲ್ಲರಿಗೂ ಧಮ್ಕಿ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ (ಸಂಗ್ರಹ ಚಿತ್ರ) -
ಬೆಳಗಾವಿ, ಡಿ.17: ಮುಖ್ಯಮಂತ್ರಿಗಳನ್ನು ಇಳಿಸುವುದು, ಏರಿಸುವ ಜಗಳದ ನಡುವೆ ಸದನ ಯಾಕೆ ನಡೆಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಪ್ರಶ್ನಿಸಿದ್ದಾರೆ. ಮಾಧ್ಯಮಗಳ ಜತೆ ಬುಧವಾರ ಮಾತನಾಡಿದ ಅವರು, ಇಡೀ ಸರ್ಕಾರ ಒಟ್ಟಾಗಿ ಬಂದು ಸದನ ನಡೆಸಬೇಕಿತ್ತು. ಸದನದಲ್ಲಿ ಮಂತ್ರಿಗಳು ಒಟ್ಟಾಗಿಲ್ಲ, ಒಡೆದು ಹೋಗಿದ್ದಾರೆ. ಎರಡು ಗ್ಯಾಂಗ್ ಆಗಿವೆ. ಇದೇನು ಸದನವೇ ಎಂದು ಕೇಳಿದರು.
ಬಡವರಿಗೆ, ರೈತರಿಗೆ ಒಳಿತಾಗುವ ನಿರ್ಧಾರ ಮಾಡುತ್ತಾರೆ ಎಂದು ರಾಜ್ಯದ ಏಳು ಕೋಟಿ ಜನರು ಕಾಯುತ್ತಾರೆ. ಗೃಹಲಕ್ಷ್ಮಿ ಹಣ ಬರುತ್ತದೆ, ಪಡಿತರ ಪಡೆಯೋಣ ಎಂದು ಬಡವರು ಕಾಯುತ್ತಾರೆ. ಅವರ ಆಸೆಯ ಹೊಟ್ಟೆಗೆ ತಣ್ಣೀರ ಬಟ್ಟೆ ಹಾಕಿದ್ದಾರೆ ಎಂದು ಅವರು ಟೀಕಿಸಿದರು.
ಮಾನ ಮರ್ಯಾದೆ ಇಲ್ಲದ ಸರ್ಕಾರ ಇದು. ಕೂಡಲೇ ಅವರ ಖಾತೆಗೆ ಗೃಹಲಕ್ಷ್ಮಿ ಹಣ ಹಾಕಬೇಕು ಎಂದು ಆಗ್ರಹಿಸಿದರು. ಪ್ರಶ್ನಿಸದಿದ್ದರೆ 5 ಸಾವಿರ ಕೋಟಿ ನುಂಗುತ್ತಿದ್ದರು. ಅದು ಗೊತ್ತೇ ಆಗುತ್ತಿರಲಿಲ್ಲ ಎಂದು ದೂರಿದ ಅವರು, 10 ಜಿಲ್ಲೆಗೆ ಹಣ ಕೊಟ್ಟಿಲ್ಲ. ಜಿಲ್ಲಾ ಕಚೇರಿಗಳಿಂದ ಮಾಹಿತಿ ಕೇಳಿದರೆ ಕೊಡದಂತೆ ಎಲ್ಲರಿಗೂ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದರು.
ಇದೇನು ಲೂಟಿ ಸರ್ಕಾರವೇ? ಎಂದು ಅವರು ಪ್ರಶ್ನಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮಹಿಳೆಯರಿಗೆ ಮೋಸ ಮಾಡಿದ್ದೇಕೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೇಳಿದರು.
ಜಾಲಹಳ್ಳಿ ಅಂಡರ್ ಪಾಸ್ ಕಾಮಗಾರಿ; ವಿಪಕ್ಷ ನಾಯಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸುತ್ತೇವೆ ಎಂದ ಡಿ.ಕೆ. ಶಿವಕುಮಾರ್
ಸಮರ್ಪಕವಾಗಿ ಒಳಮೀಸಲಾತಿ ಜಾರಿಗೊಳಿಸಿ : ಎ. ನಾರಾಯಣಸ್ವಾಮಿ
ಬೆಳಗಾವಿ, ಡಿ.17: ಒಳಮೀಸಲಾತಿಯನ್ನು (Internal reservation) ರಾಜ್ಯದಲ್ಲಿ ಸಮರ್ಪಕವಾಗಿ ಜಾರಿ ಮಾಡದೇ ಇದ್ದಲ್ಲಿ ಈ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪವನ್ನು ರಾಜ್ಯದ ಶೋಷಿತ ಮಾದಿಗರು, ಉಪ ಜಾತಿಗಳು ಮಾಡಲಿವೆ ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ (A Narayanaswamy) ಎಚ್ಚರಿಸಿದ್ದಾರೆ. ಬೆಳಗಾವಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬಡ್ತಿ ಮೀಸಲಾತಿ ಅನುಷ್ಠಾನ ಸಂಬಂಧ ಈ ಸದನದಲ್ಲಿ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು.
ಹರಿಯಾಣ, ಪಂಜಾಬ್, ಆಂಧ್ರ ಪ್ರದೇಶದಲ್ಲಿ ಮುಂಬಡ್ತಿ ಮೀಸಲಾತಿ ಇದೆ. ತಮಿಳುನಾಡಿನಲ್ಲೂ ಇದೆ. ಕರ್ನಾಟಕದಲ್ಲಿ ಇದು ಆಗಬೇಕು ಎಂದು ತಿಳಿಸಿದ ಅವರು, ಕಳೆದ 20 ವರ್ಷಗಳಿಂದ ನಾನು ಹೋರಾಟದ ಭಾಗವಾಗಿದ್ದೇನೆ ಎಂದು ಹೇಳಿದರು
2023ರಲ್ಲಿ ಸಿದ್ದರಾಮಯ್ಯ ಅವರು ಮಾದಿಗ ಉಪ ಜಾತಿಗಳಿಗೆ ಒಳ ಮೀಸಲಾತಿ ಕೊಡುವುದಾಗಿ ಮತ್ತೊಮ್ಮೆ ಪ್ರಣಾಳಿಕೆಯಲ್ಲಿ ತಿಳಿಸಿ ಅಧಿಕಾರಕ್ಕೆ ಬಂದರು. ಬಳಿಕ ಜನತೆಯ ದಿಕ್ಕು ತಪ್ಪಿಸಿದ್ದರು ಎಂದು ಆರೋಪಿಸಿದರು.
ಒಳ ಮೀಸಲಾತಿ ಜಾರಿಯ ನಂತರ ಮೀಸಲಾತಿ ಮಿತಿಯು ಶೇ. 50 ಅನ್ನು ಮೀರಬಾರದು ಎಂದು ಸುಪ್ರೀಂ ಕೋರ್ಟಿನ ನಿರ್ದೇಶನ ಇದ್ದರೂ, ಯಾವ ರಾಜ್ಯದಲ್ಲಿ ಶೇ. 50 ಮಿತಿಯಿಂದ ಹೆಚ್ಚು ನೀಡುವ ಅವಶ್ಯಕತೆ ಇದ್ದರೆ, ಮಿತಿಯನ್ನು ಮೀರಬಹುದೆಂದು ತೀರ್ಪಿತ್ತಿದ್ದಾರೆ. ಛತ್ತೀಸಗಡದಲ್ಲಿ ಶೇ.58 ಮಾಡಿದ್ದರು. ಅಲ್ಲಿ ಹೈಕೋರ್ಟಿನ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ ಎಂದು ತಿಳಿಸಿದರು.
ಚಳಿಗಾಲದ ಅಧಿವೇಶನ ಇಲ್ಲಿ ನಡೆಯುತ್ತಿದೆ. ಒಳಮೀಸಲಾತಿಯ ಪ್ರಮುಖ ಚರ್ಚೆ ಆಗಬೇಕಿದೆ. ರಾಜ್ಯದಲ್ಲಿ 35 ವರ್ಷಗಳಿಂದ ಒಳಮೀಸಲಾತಿಯ ಹೋರಾಟ ನಡೆದಿದೆ. ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ವರದಿ, ನಾಗಮೋಹನದಾಸ್ ವರದಿ ಸೇರಿ ಅನೇಕ ಆಯೋಗದ ವರದಿಗಳು ಬಂದ ನಂತರವೂ ನ್ಯಾಯ ಸಿಕ್ಕಿಲ್ಲ ಎಂದು ದೂರಿದರು.
ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ದುರ್ಯೋಧನ ಐಹೊಳೆ, ಬಸವರಾಜ್ ಮತ್ತಿಮಡು, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್, ಮುಖಂಡರಾದ ಅನಂತ್, ಸತ್ಯಪ್ರಸಾದ್, ರಾಜೇಂದ್ರ, ಸಿದ್ದು, ರಮೇಶ್, ಅಜಿತ್, ಮೋಹನ್, ಪ್ರಶಾಂತ್ ಸೇರಿ ಹಲವು ಮುಖಂಡರು ಭಾಗವಹಿಸಿದ್ದರು.