ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನನ್ನನ್ನು ಜೈಲಿಗೆ ಕಳಿಸಬೇಕಾದರೆ ಇನ್ನೂ ನೂರು ಜನ್ಮ ಎತ್ತಿ ಬರಬೇಕು: ಸಿಎಂ ಡಿಕೆಶಿ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಕಿಡಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅನೇಕ ವರ್ಷಗಳಿಂದ ಈ ಭೂಮಿಯ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟ. ಅದಕ್ಕಾಗಿಯೇ ಅವರು ಹಂತಹಂತವಾಗಿ ನಿರ್ಧಾರಗಳನ್ನು ಮಾಡುತ್ತಾ ಬಂದರು. ವ್ಯವಸ್ಥಿತವಾಗಿ ಹುನ್ನಾರ ನಡೆಸಿ ರೈತರ ಭೂಮಿ ಕಸಿಯಲು ಅಧಿಕಾರವನ್ನು ದುರುಪಯೋಗ ಮಾಡಿಕೊಂಡರು ಎಂದು ಸಚಿವ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ನನ್ನನ್ನು ಜೈಲಿಗೆ ಕಳಿಸಬೇಕಾದರೆ ಇನ್ನೂ ನೂರು ಜನ್ಮ ಎತ್ತಿ ಬರಬೇಕು

-

Prabhakara R
Prabhakara R Jun 27, 2026 11:02 PM

ಭೈರಮಂಗಲ (ಬಿಡದಿ), ಜೂನ್ 24: ಬಿಡದಿ ಹೋಬಳಿಯ ಫಲವತ್ತಾದ ಕೃಷಿ ಭೂಮಿ ಲೂಟಿ ಹೊಡೆಯಲು ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನೇಕ ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾದು ಕುಳಿತು ಸಂಚು ರೂಪಿಸಿದ್ದರು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಬಿಡದಿಯ ಬೈರಮಂಗಲದಲ್ಲಿ ರೈತರ ಸಮ್ಮುಖದಲ್ಲಿ ಚರ್ಚೆಗೆ ಬರುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಕೇಂದ್ರ ಸಚಿವರು ಪತ್ರ ಬರೆದು ವಿನಂತಿ ಮಾಡಿದ್ದರು. ಆದರೆ ಮುಖ್ಯಮಂತ್ರಿಗಳು ಬಾರದ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಒಬ್ಬರೇ ನೊಂದ ರೈತರೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು ಮುಖ್ಯಮಂತ್ರಿಗಳ ವಿರುದ್ಧ ಅನೇಕ ಗುರುತರ ಆರೋಪಗಳನ್ನು ಮಾಡಿದರು.

ಬಿಡದಿ ಭೂಮಿ ಲೂಟಿಯ ಕರಾಳ ಜಾಡು ಬಿಚ್ಚಿಟ್ಟ ಎಚ್ಡಿಕೆ:

ಬಿಡದಿ ಸುತ್ತಮುತ್ತಲಿನ ಭೂಮಿಯನ್ನು ಕೊಳ್ಳೆ ಹೊಡೆಯುವ ಹಾಲಿ ಮುಖ್ಯಮಂತ್ರಿಗಳ ಸಂಚು ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ಅವರು ಈ ಭೂಮಿಯನ್ನು ಲೂಟಿ ಮಾಡುವ ಕನಸು ಹೊಂದಿದ್ದರು. ಅದಕ್ಕಾಗಿ ಜನತೆಗೆ ನೀವು ಬೆಂಗಳೂರಿನ ಜನ, ನಿಮ್ಮ ಭೂಮಿಗೆ ಚದರಡಿ ಬೆಲೆ ಬರುತ್ತದೆ, ಕೋಟ್ಯಂತರ ರೂಪಾಯಿ ಹಣವನ್ನು ಸಂಪಾದಿಸುತ್ತೀರಿ ಎಂದು ರೈತರ ಕಣ್ಣಿಗೆ ಮಂಕುಬೂದಿ ಎರಚಿದ್ದರು ಎಂದು ಕೇಂದ್ರ ಸಚಿವರು ಗಂಭೀರ ಆರೋಪ ಮಾಡಿದರು.

Bidadi township: ಬಿಡದಿಯಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಬಿಜೆಪಿ ಬಿಡಲ್ಲ; ಶೀಘ್ರದಲ್ಲೇ ಹೋರಾಟ ಎಂದ ವಿಜಯೇಂದ್ರ

ಬಿಡದಿ ಭಾಗದ ಫಲವತ್ತಾದ ಭೂಮಿಯನ್ನು ಲೂಟಿ ಮಾಡಲು ಹಾಲಿ ಮುಖ್ಯಮಂತ್ರಿಗಳು ಈ ಮೊದಲಿನಿಂದಲೇ ಯೋಜನೆ ರೂಪಿಸಿದರು. ಅಕ್ಟೋಬರ್ 24, 2023ರಂದು ವಿಜಯದಶಮಿ (ದಸರಾ) ಹಬ್ಬದ ದಿನದಂದು ಕನಕಪುರ ಕ್ಷೇತ್ರದ ಸಾತನೂರಿನಲ್ಲಿ ನಡೆದ ದೇವಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೀಗೆ ಮಾತನಾಡಿದ್ದರು.

"ಕನಕಪುರ ಭಾಗದ ರೈತರು ಯಾರೂ ನಿಮ್ಮ ಜಮೀನನ್ನು ಮಾರಾಟ ಮಾಡಬೇಡಿ. ಬೆಂಗಳೂರಿನವರು ಬಂದು ದುಪ್ಪಟ್ಟು ದುಡ್ಡು ಕೊಟ್ಟು ಕೇಳಿದರೂ ಜಮೀನು ಕೊಡಬೇಡಿ. ಮುಂದಿನ ದಿನಗಳಲ್ಲಿ ನಿಮ್ಮ ಜಮೀನಿಗೆ ಒಳ್ಳೆಯ ಬೆಲೆ ಬರುತ್ತದೆ, ನಾವೆಲ್ಲರೂ 'ಬೆಂಗಳೂರು ಜಿಲ್ಲೆ'ಯವರಾಗಲಿದ್ದೇವೆ' ಎಂದು ಹೇಳಿದ್ದರು ಡಿಕೆಶಿ.

ಈ ಹೇಳಿಕೆಯ ಮೂಲಕ ಅವರು ರಾಮನಗರ ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ' ಜಿಲ್ಲೆಯನ್ನಾಗಿ ಮರುನಾಮಕರಣ ಮಾಡುವ ಸುಳಿವನ್ನು ನೀಡಿದ್ದರು. ಡಿಕೆಶಿ ಅವರ ಈ ಮಾತುಗಳು ಆ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಹಾಗೂ ರಿಯಲ್ ಎಸ್ಟೇಟ್ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು ಎಂಬುದನ್ನು ಮರೆಯಬಾರದು. ಕ್ಷಣದಿಂದಲೇ ಈ ಭಾಗದ ಮೇಲೆ ರಿಯಲ್ ಎಸ್ಟೇಟ್ ಹುಳಗಳ ಕಾಕದೃಷ್ಟಿ ಬಿದ್ದಿತ್ತು ಎಂದು ಸಚಿವರು ಹೇಳಿದರು.

ಅದೇ ರೀತಿ ಮೇ 22, 2025ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಮನಗರ ಜಿಲ್ಲೆ ಹೆಸರು ಮರುನಾಮಕರಣಕ್ಕೆ ಅಧಿಕೃತ ಅನುಮೋದನೆ ನೀಡಲಾಯಿತು. ಅಧಿಕೃತ ಆದೇಶ ಸಂಪುಟದ ನಿರ್ಧಾರದಂತೆ ಕಂದಾಯ ಇಲಾಖೆಯು ಮರುದಿನವೇ ಅಂದರೆ ಮೇ 23, 2025ರಂದು ರಾತ್ರೋರಾತ್ರಿ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸುವ ಮೂಲಕ ಜಿಲ್ಲೆಯ ಹೆಸರನ್ನು ಬದಲಿಸಲಾಯಿತು.

ಇದಾದ ಮೇಲೆ ಜನವರಿ 18, 2024ರಂದು ಅಂದು ಡಿಸಿಎಂ ಆಗಿದ್ದ ಡಿ.ಕೆ.ಶಿವಕುಮಾರ್ ಅವರ ಪ್ರಸ್ತಾವನೆಯಂತೆ, ಹಳೆಯ 'ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ' (BMRDA -1985) ಕಾಯ್ದೆಗೆ ತಿದ್ದುಪಡಿ ತಂದು ಅದನ್ನು 'ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ' (Greater Bengaluru Development Authority - GBDA) ಎಂದು ಮರುನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಅನುಮೋದನೆ ನೀಡಲಾಯಿತು.

ಜೂನ್ 11, 2026ರಂದು ಅಂತಿಮ ಗೆಜೆಟ್ ಅಧಿಸೂಚನೆ (Final Notification) ಹೊರಡಿಸಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (GBDA) ರಚನೆ ಮಾಡುವ ಅಂತಿಮ ನಿರ್ಧಾರ ಕೈಗೊಳ್ಳಲಾಯಿತು.

ಮಾರ್ಚ್ 12, 2025ರಂದು ರಾಮನಗರ ಮತ್ತು ಹಾರೋಹಳ್ಳಿ ತಾಲೂಕುಗಳ ವ್ಯಾಪ್ತಿಯ 9 ಹಳ್ಳಿಗಳಲ್ಲಿ ಒಟ್ಟು ಸುಮಾರು 7,481 ಎಕರೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (GBDA) ಮೂಲಕ ಮೊದಲ ಅಧಿಕೃತ ಪ್ರಾಥಮಿಕ ಸುತ್ತೋಲೆ ಹೊರಡಿಸಲಾಯಿತು.

ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅನೇಕ ವರ್ಷಗಳಿಂದ ಈ ಭೂಮಿಯ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟ. ಅದಕ್ಕಾಗಿಯೇ ಅವರು ಹಂತಹಂತವಾಗಿ ನಿರ್ಧಾರಗಳನ್ನು ಮಾಡುತ್ತಾ ಬಂದರು. ವ್ಯವಸ್ಥಿತವಾಗಿ ಹುನ್ನಾರ ನಡೆಸಿ ರೈತರ ಭೂಮಿ ಕಸಿಯಲು ಅಧಿಕಾರವನ್ನು ದುರುಪಯೋಗ ಮಾಡಿಕೊಂಡರು ಎಂದು ಸಚಿವ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಇದು ರಾಮನಗರ ಜಿಲ್ಲೆ, ಬೆಂಗಳೂರು ದಕ್ಷಿಣ ಅಲ್ಲ:

ಇದು ರಾಮನಗರ ಜಿಲ್ಲೆ. ನಾನು ಕೂತಿರುವ ಜಾಗ ರಾಮನಗರ ಜಿಲ್ಲೆಗೆ ಸೇರಿದ್ದು. ಬೆಂಗಳೂರು ದಕ್ಷಿಣ ಎಂದು ನಾನು ಯಾವ ಕಾರಣಕ್ಕೂ ಹೇಳಲ್ಲ. ಯಾವ ಜನ್ಮದಲ್ಲಿ ಈ ನೆಲದಲ್ಲಿ ಹುಟ್ಟಿದ್ದೆನೋ ಗೊತ್ತಿಲ್ಲ. ನಾನು ಹುಟ್ಟಿದ್ದು ಹಾಸನದಲ್ಲಿ, ಇಲ್ಲಿನ ತಾಯಂದಿರು, ಸಹೋದರಿಯರು ನನಗೆ ರಾಜಕೀಯ ಜನ್ಮ ಕೊಟ್ಟಿದ್ದೀರಿ. ಆದರೆ, ಕೆಲವರು ಈ ಬಿಡದಿ ಟೌನ್ ಶಿಪ್ ಕುಮಾರಸ್ವಾಮಿ ಕನಸಿನ ಕೂಸು ಎನ್ನುತ್ತಾರೆ. ಆದರೆ, ಅಂದು ನಾನು ಜಾರಿ ಮಾಡಲು ಉದ್ದೇಶಿಸಿದ್ದ ಯೋಜನೆಯನ್ನು ಕೈಬಿಟ್ಟು ವಿಧಾನಸಭೆಯ ಕಲಾಪದಲ್ಲಿಯೇ ಘೋಷಣೆ ಮಾಡಿದ್ದೆ. ಅಂದು ನಾನು ಬೇಡ ಎಂದು ಕೈಬಿಟ್ಟಿದ್ದ ಟೌನ್ ಶಿಪ್ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ, ಅದರಲ್ಲಿಯೂ ಹಾಲಿ ಮುಖ್ಯಮಂತ್ರಿ ಜಾರಿ ಮಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ರೆಡ್ ಜೋನ್ ಅಂತ ಇದೇ ಗ್ರಾಮದ ಇನ್ನೊಂದು ಭಾಗದಲ್ಲಿ ನನ್ನ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಇಲ್ಲಿ ರೆಡ್, ಗ್ರೀನ್, ಬ್ಲೂ, ಯೆಲ್ಲೋ ಎಂಬುದು ನನಗಿಂತ ಅವರ ನಾಯಕರಿಗೆ ಚೆನ್ನಾಗಿ ಗೊತ್ತಿದೆ. ರೆಡ್ ಜೋನ್ ಎಂದು ಹೇಳುತ್ತಾ ಜನರ ತಲೆ ಕೆಡಿಸಿದ್ದಾರೆ. ನನ್ನ ಹಳೆಯ ಸ್ನೇಹಿತ ಮಾತಾಡಿದ್ದಾರೆ. ಅವರು ಈ ಭಾಗದ ಹಾಲಿ ಶಾಸಕರು. ಅವರ ಬಗ್ಗೆ ಮಾತಾಡೋಕೆ ನನಗೆ ಅಸಹ್ಯ ಆಗುತ್ತದೆ ಎಂದು ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದರು.

ನಾನು ಇದೇ ಭಾಗದಲ್ಲಿ ಕೃಷಿ ಭೂಮಿ ಹೊಂದಿದ್ದೇನೆ. ಹಿಂದೆ ಕಷ್ಟಪಟ್ಟು ದುಡಿದ ಹಣದಲ್ಲಿ ಸಂಪಾದನೆ ಮಾಡಿದ್ದು. ಆಗ ನಾನು ಮನಸ್ಸು ಮಾಡಿದ್ದಿದ್ದರೆ 150 ಎಕರೆ ಖರೀದಿ ಮಾಡಬಹುದಾಗಿತ್ತು. ಆಗ ಭೂಮಿ ತೆಗೆದುಕೊಂಡು ರಿಯಲ್ ಎಸ್ಟೇಟ್ ಮಾಡಿದ್ದಿದ್ದರೆ ಇವರಷ್ಟೇ ಶ್ರೀಮಂತ ಆಗುತ್ತಿದ್ದೆ. ಆದರೆ ನಾನು ಆ ರೀತಿ ಮಾಡಲಿಲ್ಲ. ಆ ಭೂಮಿಯಲ್ಲಿ ರಾಗಿ, ತೆಂಗು, ಅಡಿಕೆ ಬೆಳೆಯುತ್ತಿದ್ದೇನೆ. ಆದರೆ, ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರುವ ಮಹಾನುಭಾವ ಹಾಕುತ್ತಿದ್ದಾರೆ, ಕನಕಪುರದವರು ಯಾರೂ ಕೂಡ ಒಂದು ಇಂಚೂ ಭೂಮಿ ಕೊಡಬೇಡಿ ಎಂದು. ಹಾಗಾದರೆ ಬಿಡದಿ ಜನರು ಯಾಕೆ ಭೂಮಿ ಕೊಡಬೇಕು ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ಇವತ್ತು ಕೆಂಪೇಗೌಡರ ಜಯಂತಿ ಮಾಡ್ತಿದ್ದೇವೆ. ಬೆಂಗಳೂರು ವಿಶ್ವಕ್ಕೆ ಸರಿಸಾಟಿಯಾಗಿ ಬೆಳೆದ ನಗರ. ಆದರೆ ಈಗ ಈ ನಗರದ ಪರಿಸ್ಥಿತಿ ಏನಾಗಿದೆ? ಒಂದೇ ಒಂದು ರಸ್ತೆ ಗುಂಡಿ ಮುಚ್ಚಿಲ್ಲ ಈ ಸರ್ಕಾರ. ಗುಂಡಿ ಮುಚ್ತೀವಿ ಅಂತಾ ₹1200 ಕೋಟಿ ಲೂಟಿ ಮಾಡಿದ್ದಾರೆ. ಈಗ ನೋಡಿದರೆ ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಹೊಸ ಹೆಸರು ಇಟ್ಟು ಮತ್ತಷ್ಟು ಲೂಟಿ ಹೊಡೆಯಲು ಹೊರಟಿದ್ದಾರೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಮಗನ ಐದು ಎಕರೆ ಬಗ್ಗೆ ಮಾತಾಡ್ತೀರಲ್ಲ, ನೀವು ಎಲ್ಲಿ ಎಷ್ಟು ಭೂಮಿ ಲೂಟಿ ಮಾಡಿದ್ದೀರಿ ಎಂಬುದು ನನಗೆ ಗೊತ್ತಿದೆ. ಎಷ್ಟೋ ಜನರನ್ನು ಹೆದರಿಸಿ ಬೆದರಿಸಿ ಭೂಮಿ ಲಪಾಟಿಯಿಸಿದ್ಸೀರಿ ಡಿ.ಕೆ. ಶಿವಕುಮಾರ್ ಅವರೇ, ಇಲ್ಲಿನ ಜನರ ಭೂಮಿಯನ್ನು ಕಸಿಯಲು ನಾನು ಬಿಡ್ತೀನಾ? 50% ಭೂಮಿ, ಹಣ ಕೊಡ್ತೀನಿ ಅಂತಾರಲ್ಲ. ನಿಮಗೆ ನಾಚಿಕೆ ಆಗಬೇಕು ಎಂದು ಅವರು ಕಿಡಿಕಾರಿದರು.

ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನ ಮಾಡಬಾರದು ಎಂದು 2006-07ರಲ್ಲಿ ಕಾಂಗ್ರೆಸ್ ನವರು ಹೋರಾಟ ಮಾಡಿದ್ದರು. ಅಂದು ಕಲಾಪದಲ್ಲಿ ದೊಡ್ಡ ದನಿಯಲ್ಲಿ ಭಾಷಣ ಮಾಡಿದ್ದರು. ಅವರ ಮಾತುಗಳನ್ನು ನಾನು ಕೇಳಿಸಿಕೊಂಡಿದ್ದೆ. ಆಮೇಲೆ ಇಲ್ಲಿನ ಜನರನ್ನು ಕೃಷ್ಣಾ ಕಚೇರಿಗೆ ಕರೆಸಿ ಚರ್ಚೆ ನಡೆಸಿದ್ದೆ. ಜನ ಆ ಯೋಜನೆ ಬೇಡವೆಂದು ಪಟ್ಟು ಹಿಡಿದರು. ಜನಾಭಿಪ್ರಾಯಕ್ಕೆ ಮನ್ನಣೆ ಕೊಟ್ಟು ಆ ಯೋಜನೆಯನ್ನು ಅಲ್ಲಿಗೆ ಬಿಟ್ಟೆ. ಆದಾದ ಮೇಲೆ ನನ್ನ ಸರ್ಕಾರ ಹೋಯಿತು. ಆದರೆ, ಕಾಂಗ್ರೆಸ್ ನವರು ನನ್ನ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ನನ್ನಿಂದ ರೈತರಿಗೆ ಕಿಂಚಿತ್ತೂ ನಿಮಗೆ ಅಪಮಾನ ಆಗಿದ್ದರೆ ನನಗೊಬ್ಬನಿಗೇ ಅಲ್ಲ, ನನ್ನ ಮಗನಿಗೂ ಶ್ರೇಯಸ್ಸು ತರಲ್ಲ ಎಂದು ಭಾವಿಸಿರೋನು ನಾನು. ಬಿಡದಿ ಅಲ್ಲದೇ ಬೇರೆ ಎಲ್ಲೇ ಆಗಲಿ ಈ ರೀತಿ ರೈತರಿಗೆ ಅನ್ಯಾಯ ಮಾಡಲು ಹೋದರೂ ನಾನು ಹೋರಾಟ ಮಾಡುತ್ತೇನೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು ಕೇಂದ್ರ ಸಚಿವರು.

ವಿಧಾನಸೌಧಕ್ಕೆ ಬಂದು ಚರ್ಚೆ ಮಾಡಿ ಎಂದು ಮುಖ್ಯಮಂತ್ರಿಗಳು ನನಗೆ ಪತ್ರ ಬರೆದರು. ನಿಮ್ಮನ್ನು ಬಿಟ್ಟು ನಾನೇನು ವಿಧಾನಸೌಧಕ್ಕೆ ಹೋಗಿ ಏನು ಚರ್ಚೆ ನಡೆಸಲಿ? ನಾನು ವಿಧಾನಸೌಧಕ್ಕೆ ಬರಲ್ಲ, ರೈತರ ಸನ್ನಿದಾನದಲ್ಲಿ ಚರ್ಚೆ ಆಗಬೇಕೆಂದು ಅವರಿಗೆ ಪತ್ರ ಬರೆದೆ. ಆದರೆ ಅವರು ಬರೆದ ಪತ್ರದ ಬಗ್ಗೆ ನನಗೆ ನೋವಿದೆ. ನಿಮ್ಮ ತಂಡದೊಂದಿಗೆ ಬನ್ನಿ ಎಂದರೆ ಏನರ್ಥ? ನಾನು ನಾಲ್ಕು ಜನರ ತಂಡ ಇಟ್ಟುಕೊಂಡಿದ್ದೀನಾ? ಇಡೀ ರಾಜ್ಯದ ಜನರು ನನ್ನ ತಂಡ. ಅವರಂತೆ ನನಗೆ ಗ್ಯಾಂಗುಗಳು ಇಲ್ಲ. ತಾವರೆಕೆರೆಯಲ್ಲಿ ಭೂಮಿ ಹೊಡೆಯಲು ಒಂದು ತಂಡ ಇಟ್ಕುಕೊಳ್ತೀರಾ, ಇನ್ನೊಂದು ಕಡೆ ಜಮೀನು ಕಸಿಯಬೇಕಾದರೆ ಮತ್ತೊಂದು ತಂಡ ಇಟ್ಟುಕೊಳ್ಳುತ್ತೀರಾ! ಸತ್ತವರ ಹೆಬ್ಬೆಟ್ಟು ಒತ್ತಿಸಿಕೊಂಡು ಭೂಮಿ ಹೊಡೆದವರು ನೀವು. ಕುಮಾರಸ್ವಾಮಿಯನ್ನು ಜೈಲಿಗೆ ಕಳುಹಿಸ್ತೀನಿ ಅನ್ನುತ್ತಿದ್ದಾರೆ. ನನ್ನನ್ನು ಜೈಲಿಗೆ ಕಳಿಸಬೇಕಾದರೆ ಇನ್ನೂ ನೂರು ಜನ್ಮ ಹುಟ್ಟಿ ಬರಬೇಕು. ಇವರೇನು ಸ್ವಾತಂತ್ರ್ಯ ಹೋರಾಟ ಮಾಡಿ ತಿಹಾರ್ ಜೈಲಿಗೆ ಹೋಗಿದ್ರಾ? ಎಲ್ಲೋ ನನ್ನ ಮಗನ ಪೋಸ್ಟರ್ ಹಾಕೊಂಡಿದ್ದಾರಲ್ಲ, ಅದೇ ಜಾಗದಲ್ಲಿ ಶಿವಕುಮಾರ್ ಜಮೀನು ಇದ್ದಿದ್ದರೆ, ಅಕ್ಕಪಕ್ಕದ ಜಮೀನು ಮಾಲೀಕರ ಕೈ ಕಾಲು ಮುರಿದು ಅವರೆಲ್ಲರ ಭೂಮಿ ಬರೆಸಿಕೊಳ್ತಿದ್ದರು. ನಾನು ನಿಮ್ಮ ಜೊತೆ ಇದ್ದೇನೆ, ಯಾರು ಕೂಡ ಹೆದರಬೇಡಿ. ಕಾನೂನಿನ ಹೋರಾಟಕ್ಕೆ ನೀವು ಒಂದು ರೂಪಾಯಿ ಕೊಡುವುದು ಬೇಡ ಎಂದು ಕೇಂದ್ರ ಸಚಿವರು ಗುಡುಗಿದರು.

ಈಗಲ್ಟನ್ ಬಳಿ ಸರ್ಕಾರಿ ಜಮೀನು ಒತ್ತುವರಿ ಎಂದು ಆ ಜಮೀನಿಗೆ ₹12 ಕೋಟಿ ರೇಟು ನಿಗದಿ ಮಾಡಿದ್ದೀರಿ, ಇಲ್ಲಿ ನನ್ನ ರೈತರಿಗೆ ಮಾತ್ರ 2 ಕೋಟಿ ಭಿಕ್ಷೆ ಕೊಡಲು ಹೊರಟಿದ್ದೀರಿ ಎಂದು ಸಚಿವರು ಕಿಡಿಕಾರಿದರು.

ʼʼಬದನೆಕಾಯಿ ಮಾರಾಟ ಮಾಡಿ ಬಿಡದಿ ಬಳಿ ಕುಮಾರಣ್ಣ ಜಮೀನು ತಗೊಂಡ್ರಾ?ʼʼ ಪ್ರದೀಪ್‌ ಈಶ್ವರ್‌ ವ್ಯಂಗ್ಯ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಗಡಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಎ. ಮಂಜುನಾಥ್ ಅವರು, ಶಾಸಕರಾದ ಹೆಚ್.ಟಿ.ಮಂಜುನಾಥ್, ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಪಕ್ಷದ ರಾಮನಗರ ಜಿಲ್ಲಾಧ್ಯಕ್ಷ ಜಯಮುತ್ತು ಅವರು ಸೇರಿದಂತೆ ಅನೇಕ ಮುಖಂಡರು, ಅಸಂಖ್ಯಾತ ನೊಂದ ರೈತರು ಈ ಸಭೆಯಲ್ಲಿ ಭಾಗಿಯಾಗಿದ್ದರು.