ʼʼಬದನೆಕಾಯಿ ಮಾರಾಟ ಮಾಡಿ ಬಿಡದಿ ಬಳಿ ಕುಮಾರಣ್ಣ ಜಮೀನು ತಗೊಂಡ್ರಾ?ʼʼ ಪ್ರದೀಪ್ ಈಶ್ವರ್ ವ್ಯಂಗ್ಯ
Pradeep Eshwar: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ. ಅನಿತಕ್ಕ (ಅನಿತಾ ಕುಮಾರಸ್ವಾಮಿ) ಅವರಿಗೆ ಬಿಡದಿಯಲ್ಲಿ 32 ಎಕ್ರೆ ಎಲ್ಲಿಂದ ಬಂತು? ಬಿಡದಿ ಬಳಿ ನೂರಾರು ಎಕ್ರೆ ಹೇಗೆ ಬಂತು? ಇದನ್ನೆಲ್ಲ ರಾಮನಗರದಲ್ಲಿ ಬದನೆಕಾಯಿ ಮಾರಿ ಪಡೆದಿದ್ದಾ? ಎಂದು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
ಪ್ರದೀಪ್ ಈಶ್ವರ್ ಮತ್ತು ಎಚ್.ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ) -
ಬೆಂಗಳೂರು, ಜೂ. 25: ಭಾಷಣದಲ್ಲಿ ಮಾತ್ರ ಆದರ್ಶ, ಕೃತಿಯಲ್ಲಿ ಮಾತ್ರ ಕಬಳಿಕೆ ಎಂದು ಆರೋಪಿಸಿದ ಜೆಡಿಎಸ್‌ಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆದಿದ್ದಾರೆ. ಅನಿತಕ್ಕ (ಅನಿತಾ ಕುಮಾರಸ್ವಾಮಿ) ಅವರಿಗೆ ಬಿಡದಿಯಲ್ಲಿ 32 ಎಕ್ರೆ ಎಲ್ಲಿಂದ ಬಂತು? ಬಿಡದಿ ಬಳಿ ನೂರಾರು ಎಕ್ರೆ ಹೇಗೆ ಬಂತು? ಇದನ್ನೆಲ್ಲ ರಾಮನಗರದಲ್ಲಿ ಬದನೆಕಾಯಿ ಮಾರಿ ಪಡೆದಿದ್ದಾ? ಎಂದು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
ʼʼನಾನು ಅವತ್ತೇ ಬಿಜೆಪಿ ಮತ್ತು ಜೆಡಿಎಸ್‌ಗೆ ಸವಾಲು ಹಾಕಿದ್ದೆ. ನನ್ನಿಂದ ಏನಾದರೂ ಕಾನೂನು ಬಾಹಿರ ಚಟುವಟಿಕೆ ನಡೆದಿದ್ದಯಾ, ಕಾನೂನು ಬಾಹಿರವಾಗಿ ನಾನು ಏನನ್ನಾದರೂ ಹೊಂದಿದ್ದೇನ ಎನ್ನುವುದನ್ನು ಪರಿಶೀಲಿಸುವಂತೆ ಹೇಳಿದ್ದೆ. ನಿಮ್ಮ ಐಟಿಯನ್ನು ಕಳುಹಿಸಿ ಎಂದಿದ್ದೆ. ಇಡಿ ಬಂದು ಪರಿಶೀಲಿಸಲಿ ಎಂದು ತಿಳಿಸಿದ್ದೆʼʼ ಎಂಬುದಾಗಿ ಹೇಳಿದ್ದಾರೆ.
ಇದು ಸಿದ್ದರಾಮಯ್ಯ ಕಾರ್ಯಕ್ರಮ, ನಿಮ್ಮಪ್ಪನ ಪ್ರೋಗ್ರಾಂ ಅಲ್ಲ: ಪ್ರದೀಪ್ ಈಶ್ವರ್ ಕೆಂಡ
ʼʼಧಮ್ ಇದ್ರೆ ಸರ್ಕಾರ ನನ್ನ ಮನೆಗೆ ಐಟಿ, ಇಡಿಯನ್ನು ಕಳುಹಿಸಲಿ. ನಿಯಮದ ಪ್ರಕಾರ ತೆರಿಗೆ ಕಟ್ಟುತ್ತಿದ್ದೇನೆ. ಕುಮಾರಣ್ಣನ ಐಟಿಗಿಂತ ನನ್ನ ಜಿಎಸ್‌ಟಿ ಜಾಸ್ತಿ. ಕುಮಾರಣ್ಣ ಅವರದ್ದು ಅನೇಕ ಅಕ್ರಮ ಆಸ್ತಿಗಳಿವೆ. ನನ್ನ ಬಳಿ ಒಂದೇ ಬ್ಯಾಂಕ್ ಅಕೌಂಟ್ ಇರೋದು. ನಾನು ಆ ಅಕೌಂಟ್‌ನಲ್ಲೇ ಸೇವ್ ಮಾಡ್ಬೇಕು. ನಾನು ತುಂಬ ಚೆನ್ನಾಗಿ ಮಾತನಾಡುತ್ತೇನೆ ಎಂದು ಕರ್ನಾಟಕದ ಜನತೆ ಹೇಳುತ್ತಾರೆ. ನನ್ನ ಕೌಂಟರ್ ತಡೆಯಲು ಸಾಧ್ಯವಿಲ್ಲʼʼ ಎಂದು ಸವಾಲು ಹಾಕಿದ್ದಾರೆ.
ʼʼಬಿಡದಿ ಟೌನ್‌ಶಿಪ್ ವಿಚಾರವನ್ನು ಮಾತನಾಡೋಣ. ಅದೇ ರೀತಿ ನೀಟ್ ವಿಚಾರವನ್ನೂ ಚರ್ಚಿಸೋಣ. ಅದು ಬಿಟ್ಟು ಹೈಕೋರ್ಟ್‌ಗೆ ಹೋಗಿ ಚೇಲಾಗಳ ಕೈಯಲ್ಲಿ ಅರ್ಜಿ ಹಾಕ್ತಿರಲ್ಲ? ಹೈಕೋರ್ಟ್‌ಗೆ ಹೋಗಿ ಈ ಕೇಸ್‌ನಲ್ಲಿ ಗೆದ್ದು ಪತ್ರಿಕಾಗೋಷ್ಠಿ ನಡೆಸಿ ಕುಮಾರಣ್ಣಂಗೆ ಸ್ವೀಟ್ ಕೊಟ್ಟು ಬರ್ತೇನೆʼʼ ಎಂದಿದ್ದಾರೆ.
ಜೆಡಿಎಸ್ ಎಕ್ಸ್ ಪೋಸ್ಟ್:
ಭಾಷಣದಲ್ಲಿ ಮಾತ್ರ ಆದರ್ಶ, ಕೃತಿಯಲ್ಲಿ ಮಾತ್ರ ಕಬಳಿಕೆ!
— Janata Dal Secular (@JanataDal_S) June 25, 2026
ಬಡವರ ಪರ ಎಂದು ವೇದಿಕೆ ಮೇಲೆ ಅಬ್ಬರಿಸುವ ಶಾಸಕ ಪ್ರದೀಪ್ ಈಶ್ವರ್ ಅವರ ಅಸಲಿ 'ಪರಿಶ್ರಮ' ಈಗ ಬಯಲಾಗಿದೆ! ಅಧಿಕಾರದ ದರ್ಪದಿಂದ ಕಾನೂನುಬಾಹಿರವಾಗಿ ತಮ್ಮದೇ 'ಪರಿಶ್ರಮ ಟ್ರಸ್ಟ್'ಗೆ 3 ಸಿಎ ನಿವೇಶನಗಳನ್ನು ನುಂಗಲು ಹೊರಟಿದ್ದ ಶಾಸಕರಿಗೆ ಹೈಕೋರ್ಟ್ ಚಾಟಿ ಬೀಸಿದೆ.
ಬೇರೆಯವರ… pic.twitter.com/UhkuOUplG5
ʼʼಕುಮಾರಣ್ಣ ನೀನು ಒಕ್ಕಲಿಗರನ್ನೆಲ್ಲ ತುಳಿದು ಹಾಕಿದ್ದೀಯ. ಒಬಿಸಿಯವರನ್ನ ಬಿಟ್ಟುಬಿಡಣ್ಣ. ನಮ್ಮ ಪಾಡಿಗೆ ನಾವು ಜೀವನ ನಡೆಸ್ತೇವೆ. ಅದಕ್ಕೂ ಅಡ್ಡಬಂದ್ರೆ ಏನ್ ಮಾಡೋದು ಕುಮಾರಣ್ಣ? ನನ್ನ ಆಸ್ತಿ, ಹಣದ ವಹಿವಾಟು ಸೇರಿದಂತೆ ಎಲ್ಲ ದಾಖಲೆಗಳನ್ನು ನಾನು ಕುಮಾರಣ್ಣಂಗೆ ಒಪ್ಪಿಸ್ತೇನೆ. ಈ ಸವಾಲು ಸ್ವೀಕರಿಸಲು ಕುಮಾರಣ್ಣಂಗೆ ತಾಕತ್ ಇದ್ಯಾ? ನೀವು ಹೇಳಿದಲ್ಲಿಗೆ ಬರ್ತೇನೆ. ನೀವು ಏನು ಮಾಡಿದ್ರೂ ನನ್ನ ಬಾಯಿ ಮುಚ್ಚಲು ಸಾಧ್ಯವಿಲ್ಲʼʼ ಎಂದು ಹೇಳಿದ್ದಾರೆ. ʼʼಐಡಿ, ಇಡಿ ಅಧಿಕಾರಿಗಳು ಬರ್ಲಿ. ಅವರ ಮಕ್ಕಳೂ ಪರಿಶ್ರಮ ಅಕಾಡೆಮಿಗೆ ಸೇರುವಂತೆ ಮೋಟಿವೇಟ್ ಮಾಡಿ ಕಳಿಸ್ತೀನಿʼʼ ತಮಾಷೆ ಮಾಡಿದ್ದಾರೆ.
ʼಸಿಜೆ ರಾಯ್ ತಾವೇ ಗುಂಡು ಹೊಡೆದುಕೊಂಡ್ರಾ ಅಥವಾ...ʼ ಪ್ರದೀಪ್ ಈಶ್ವರ್ ಗುಮಾನಿ
ʼʼನನಗೆ ಬಂದಿರುವ ಮಾಹಿತಿ ಪ್ರಕಾರ ಕುಮಾರಣ್ಣ ಅವರಿಗೆ 700-800 ಎಕ್ರೆ ಜಮೀನಿದೆ. ಅದನ್ನು ರಾಮನಗರದ ಫಾರ್ಮ್ ಹೌಸ್‌ನಲ್ಲಿ ಬದನೆಕಾಯಿ ಬೆಳೆದು ತಗೊಂಡ್ರಾ? ಇದರ ಸೋರ್ಸ್ ಯಾವುದು? ಬಿಡದಿಯಲ್ಲಿ ಅನಿತಕ್ಕ ಅವರದ್ದು 32 ಎಕ್ರೆ ಜಮೀನು ಇದೆ. 1 ಎಕ್ರೆಗೆ 1 ಕೋಟಿ ರುಪಾಯಿ ಅಂದರೂ 32 ಕೋಟಿ ರುಪಾಯಿ ಆಯ್ತು. ಇಷ್ಟು ಹಣ ಎಲ್ಲಿಂದ ಬಂತು? ರಾಮ್‌ರಾಜ್ ಪಂಚೆ ಮಾರಿದ್ರಾ ಕುಮಾರಣ್ಣ? ರಾಮ್‌ರಾಜ್ ಷರ್ಟ್? ರಾಮ್‌ರಾಜ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ರಾ? ನಿಮ್ಮ ಫಾರ್ಮ್‌ಹೌಸ್‌ನಲ್ಲಿ ಬದನೆಕಾಯಿ ಬೆಳಿತಿರಲ್ಲ ಅದಕ್ಕೆ ಏನಾದ್ರೂ ಹೆಚ್ಚಿನ ಬೆಲೆ ಬಂತ?ʼʼ ಎಂದು ಕೇಳಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.