Self Harming: ವರದಕ್ಷಿಣೆಗಾಗಿ ಗಂಡನ ಮನೆಯವರಿಂದ ಕಿರುಕುಳ; ವಿಡಿಯೋ ಮಾಡಿ ಉಪನ್ಯಾಸಕಿ ಆತ್ಮಹತ್ಯೆ
Doddaballapur News: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಬಳಿಯಿರುವ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂಗೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು, ಯುವತಿಯ ಗಂಡ, ಮಾವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

-

ದೊಡ್ಡಬಳ್ಳಾಪುರ: ಗಂಡನ ಮನೆಯವರು ವರದಕ್ಷಿಣೆಗಾಗಿ ಕಿರಕುಳ ನೀಡಿದ್ದಾರೆ ಎಂದು ಆರೋಪಿಸಿ ಗೃಹಿಣಿಯೊಬ್ಬರು ವಿಡಿಯೋ ಮಾಡಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಬಳಿಯಿರುವ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ನಡೆದಿದೆ. ಮೃತಳನ್ನು ದೊಡ್ಡಬಳ್ಳಾಪುರ ತಾಲೂಕಿನ ಸೋತೇನಹಳ್ಳಿ ಗ್ರಾಮದ ಉಪನ್ಯಾಸಕಿ ಪುಷ್ಪ (23) ಎಂದು ಗುರುತಿಸಲಾಗಿದೆ.
ಪುಷ್ಪಾಳಿಗೆ ತಪಸೀಹಳ್ಳಿಯ ವೇಣು ಎಂಬುವವರ ಜತೆ ಕಳೆದ ಒಂದೂವರೆ ವರ್ಷದ ಹಿಂದೆ ವಿವಾಹವಾಗಿತ್ತು. ಆದರೆ ವಿವಾಹವಾದ ನಂತರ ಹೆಚ್ಚಿನ ವರದಕ್ಷಿಣೆ ಹಾಗೂ ನಿವೇಶನಕ್ಕಾಗಿ ಗಂಡನ ಮನೆಯವರು ಪೀಡಿಸಿ ಕಿರಕುಳ ಕೊಡುತ್ತಿದ್ದರು ಎನ್ನಲಾಗಿದೆ. ಇನ್ನು ಗಂಡನಿಗೆ ಎರಡನೇ ಮದುವೆಯಾಗುವ ಆಸೆಯಿದ್ದು ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದರು. ಇಷ್ಟೇ ಅಲ್ಲದೆ ಊಟದಲ್ಲಿ ವಿಷ ಹಾಕಿ ಕೊಲೆ ಮಾಡಲು ಸಹ ಪ್ಲ್ಯಾನ್ ಮಾಡಿದ್ದರು ಎಂದು ವಿಡಿಯೋದಲ್ಲಿ ಮಹಿಳೆ ಆರೋಪಿಸಿದ್ದಾರೆ.
ಇದರ ನಡುವೆ ಮೈದುನನ ಜತೆ ಮಲಗುವಂತೆಯೂ ಬಲವಂತ ಮಾಡಿದ್ದಾರೆ ಎಂದು ಆರೋಪ ಮಾಡಿ ಗೃಹಿಣಿ ಪುಷ್ಪ 8 ನಿಮಿಷಗಳ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಪುಷ್ಪ ಸೋಮವಾರ (ಅ.20) ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಗಂಡ, ಮಾವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಡಿಯೋದಲ್ಲಿ ಗಂಡ ವೇಣು, ಅತ್ತೆ ಭಾರತಿ, ಮಾವ ಗೋವಿಂದಪ್ಪ ಹಾಗೂ ಮೈದುನ ನಾರಾಯಣಸ್ವಾಮಿ ಸೇರಿ ಸಂಬಂಧಿಕಾರಾದ ಮುತ್ತೇಗೌಡ ಹಾಗೂ ಪಲ್ಲವಿ ಅವರ ಕಿರುಕುಳವೇ ನನ್ನ ಸಾವಿಗೆ ಕಾರಣ, ಅವರಿಗೆ ಶಿಕ್ಷೆಯಾಗಬೇಕು, ನನ್ನ ಮೃತದೇಹವನ್ನು ಗಂಡನ ಮನೆಯೊಳಗೆ ಮಣ್ಣು ಮಾಡುವಂತೆ ಗೃಹಿಣಿ ವಿಡಿಯೋದಲ್ಲಿ ಆಗ್ರಹಿಸಿದ್ದಾಳೆ.
ಈ ಸುದ್ದಿಯನ್ನೂ ಓದಿ | Abhishek Death: ಅಭಿಷೇಕ್ ಆತ್ಮಹತ್ಯೆ: ಗೆಳತಿಯರ ಅರೆನಗ್ನ ಫೋಟೋ ಕಳಿಸುತ್ತಿದ್ದ ಹನಿಟ್ರ್ಯಾಪ್ ಯುವತಿಯ ಬಂಧನ
ಕುಟುಂಬ ಕಲಹ; ವರದಾ ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

ಹಾವೇರಿ: ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ (Self Harming) ಹಾವೇರಿ ತಾಲೂಕಿನ ವರದಾಹಳ್ಳಿಯಲ್ಲಿ ಭಾನುವಾರ ನಡೆದಿದೆ. ಗಂಡನ ಮನೆಯಲ್ಲಿ ದಿನನಿತ್ಯ ಆಗುತ್ತಿದ್ದ ಭಿನ್ನಾಭಿಪ್ರಾಯ, ಕಲಹದಿಂದ ನೊಂದ 38 ವರ್ಷದ ಸವಿತಾ ನಾಗರಾಜ ಉಳ್ಳಾಗಡ್ಡಿ, ಮಗಳು ಕಾವ್ಯಾ ಇಬ್ಬರೂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೋಣಿ ಮೂಲಕ ನದಿಯಲ್ಲಿ ಹುಡುಕಾಟ ಪ್ರಾರಂಭಿಸಿದ್ದರು. ಇದೀಗ ಕಾವ್ಯಾ ಅವರ ಮೃತದೇಹ ಪತ್ತೆಯಾಗಿದ್ದು, ಸವಿತಾ ಅವರ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸವಿತಾ ಅವರಿಗೆ ಇಬ್ಬರು ಗಂಡು, ಒಬ್ಬ ಹೆಣ್ಣು ಮಗಳಿದ್ದಾಳೆ. ಇತ್ತೀಚೆಗಷ್ಟೇ ಮಗಳು ಕಾವ್ಯಾ ನವೋದಯ ಪರೀಕ್ಷೆ ಪಾಸಾಗಿದ್ದಳು. ಪ್ರತಿಭಾವಂತೆಯಾಗಿದ್ದಳು. ಆದರೆ, ಮನೆಯಲ್ಲಿ ನಿತ್ಯ ಕಲಹ, ಭಿನ್ನಾಭಿಪ್ರಾಯವಿದ್ದ ಹಿನ್ನೆಲೆಯಲ್ಲಿ ಮನನೊಂದು ತಾಯಿ ಸವಿತಾ ಅವರು ಕಾವ್ಯಾಳನ್ನು ಕರೆದುಕೊಂಡು ಬಂದು ನದಿಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Ex-minister's Controversy: ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಶಾಸಕರನ್ನೇ ಕೊಂದು ಬಿಡಿ- ನಾಲಿಗೆ ಹರಿಬಿಟ್ಟ ಮಾಜಿ ಸಚಿವ