22 ಸಾವಿರ ವಿದ್ಯಾರ್ಥಿಗಳು, 24 ಗಂಟೆಗಳ ಕಠಿಣ ಸವಾಲು: ಕಾಗ್ನಿಜೆಂಟ್ ಹ್ಯಾಕಥಾನ್‌ನಲ್ಲಿ ಪ್ರಥಮ ಬಹುಮಾನ ಗೆದ್ದ ಚೆನ್ನೈ ತಂಡ
ಕೋಲ್ಕತ್ತಾದ 'ಟೆಕ್ನೋ ಮೈನ್ ಸಾಲ್ಟ್ ಲೇಕ್' ಕಾಲೇಜಿನ 'ಟೀಮ್ ಆಲ್ಗೊರಿದಮ್ಸ್' ದ್ವಿತೀಯ ಸ್ಥಾನ ಪಡೆದು 2,00,000 ರೂ. ನಗದು ಬಹುಮಾನ ಪಡೆದರೆ, ಕೊಯಮತ್ತೂರಿನ 'ಕಾರುಣ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸಸ್'ನ 'ಟೀಮ್ ದೇವ್‌ಟ್ರಾನಿಕ್ಸ್' ತೃತೀಯ ಸ್ಥಾನ ದೊಂದಿಗೆ 1 ಲಕ್ಷ ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.
-
ಬೆಂಗಳೂರು: ಭವಿಷ್ಯದ ಕೃತಕ ಬುದ್ಧಿಮತ್ತೆ (ಎಐ) ತಜ್ಞರನ್ನು ಪ್ರೋತ್ಸಾಹಿಸುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಐಟಿ ದಿಗ್ಗಜ ಸಂಸ್ಥೆ ಕಾಗ್ನಿಜೆಂಟ್ 'ಟೆಕ್ನೋವರ್ಸ್ ಹ್ಯಾಕ ಥಾನ್ 2026'ನ್ನು ಆಯೋಜಿಸಿತ್ತು. ಪುಣೆಯ ಕ್ಯಾಂಪಸ್‌ನಲ್ಲಿ ನಡೆದ ಅದ್ದೂರಿ ಫೈನಲ್ಸ್ ನೊಂದಿಗೆ ಈ ಹ್ಯಾಕಥಾನ್ ಮುಕ್ತಾಯಗೊಂಡಿದೆ.
ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಚೆನ್ನೈನ 'ಚೆನ್ನೈ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ'ಯ 'ಟೀಮ್ ಏರೋಫೈಟಾ' ತಂಡವು ಪ್ರಥಮ ಸ್ಥಾನ ಪಡೆದು 3 ಲಕ್ಷ ರೂ. ನಗದು ಬಹುಮಾನವನ್ನು ಜೇಬಿಗಿಳಿಸಿಕೊಂಡಿತು.
ಕೋಲ್ಕತ್ತಾದ 'ಟೆಕ್ನೋ ಮೈನ್ ಸಾಲ್ಟ್ ಲೇಕ್' ಕಾಲೇಜಿನ 'ಟೀಮ್ ಆಲ್ಗೊರಿದಮ್ಸ್' ದ್ವಿತೀಯ ಸ್ಥಾನ ಪಡೆದು 2,00,000 ರೂ. ನಗದು ಬಹುಮಾನ ಪಡೆದರೆ, ಕೊಯಮತ್ತೂರಿನ 'ಕಾರುಣ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸಸ್'ನ 'ಟೀಮ್ ದೇವ್‌ಟ್ರಾನಿಕ್ಸ್' ತೃತೀಯ ಸ್ಥಾನದೊಂದಿಗೆ 1,00,000 ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.
ದೇಶಾದ್ಯಂತ ತಂತ್ರಜ್ಞಾನ ಕೌಶಲ್ಯ ಉತ್ತೇಜಿಸುವ ನಿಟ್ಟಿನಲ್ಲಿ ಕಾಗ್ನಿಜೆಂಟ್ ಹಮ್ಮಿ ಕೊಂಡಿದ್ದ ಈ ಹ್ಯಾಕಥಾನ್‌ನಲ್ಲಿ ಭಾರತದ 160ಕ್ಕೂ ಹೆಚ್ಚು ನಗರಗಳ ಐಐಟಿ, ಎನ್‌ಐಟಿ ಹಾಗೂ ಐಐಐಟಿ ಸೇರಿದಂತೆ 450ಕ್ಕೂ ಹೆಚ್ಚು ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳ ಬರೋಬ್ಬರಿ 22,000ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಗಮನ ಸೆಳೆದ ಮಹಿಳಾ ಸ್ಪರ್ಧಿಗಳು
ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ, ಪ್ರತಿ 4 ಸದಸ್ಯರ ತಂಡದಲ್ಲಿ ಕನಿಷ್ಠ ಇಬ್ಬರು ಮಹಿಳೆಯರು ಇರಲೇಬೇಕು ಎಂಬ ನಿಯಮ ವನ್ನು ಕಾಗ್ನಿಜೆಂಟ್ ರೂಪಿಸಿತ್ತು. ಆದರೆ ನಿರೀಕ್ಷೆ ಮೀರಿ ಒಟ್ಟು ಸ್ಪರ್ಧಿಗಳಲ್ಲಿ ಶೇ. 62ರಷ್ಟು ಮಹಿಳೆಯರೇ ಆಗಿದ್ದರು. ಅಷ್ಟೇ ಅಲ್ಲದೆ, ಭಾಗವಹಿಸಿದ್ದ 5,600 ತಂಡಗಳ ಪೈಕಿ 1,100 ಕ್ಕೂ ಹೆಚ್ಚು ತಂಡಗಳು ಸಂಪೂರ್ಣವಾಗಿ ಮಹಿಳೆಯರಿಂದಲೇ ಕೂಡಿದ್ದವು.
ಹೈದರಾಬಾದ್, ಚೆನ್ನೈ, ಬೆಂಗಳೂರು, ಕೊಯಮತ್ತೂರು ಹಾಗೂ ಪುಣೆ ನಗರಗಳಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ಈ ಹ್ಯಾಕಥಾನ್‌ನಲ್ಲಿ ಪಾಲ್ಗೊಂಡಿದ್ದರು.
ಕಾಗ್ನಿಜೆಂಟ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಗ್ಲೋಬಲ್ ಆಪರೇಷನ್ಸ್) ರಾಜೇಶ್ ವಾರಿಯರ್ ಈ ಬಗ್ಗೆ ಮಾತನಾಡಿ, “ಎಐ ಮತ್ತು ಎಂಟರ್‌ಪ್ರೈಸ್ ಮೌಲ್ಯದ ನಡುವಿನ ಅಂತರವನ್ನು ಕಡಿಮೆ ಮಾಡಲು ತಂತ್ರಜ್ಞಾನದ ಜೊತೆಗೆ ಪ್ರತಿಭೆ ಯೂ ಬೆಳೆಯಬೇಕು. ಇದನ್ನು ನಾವು ಅರಿತಿದ್ದು, ಟೆಕ್ನೋವರ್ಸ್ ಹ್ಯಾಕಥಾನ್ 2026 ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಸಾವಿರಾರು ವಿದ್ಯಾರ್ಥಿಗಳು, ಅದರಲ್ಲೂ ಶೇ. 62ರಷ್ಟು ಮಹಿಳೆಯರು ಇದರಲ್ಲಿ ಭಾಗವ ಹಿಸಿರುವುದು ಭಾರತದ ಎಂಜಿನಿಯರಿಂಗ್ ಕೌಶಲ್ಯದ ಆಳ ಮತ್ತು ವೈವಿಧ್ಯತೆಯನ್ನು ಸಾಬೀತುಪಡಿಸಿದೆ," ಎಂದು ಸಂತಸ ವ್ಯಕ್ತಪಡಿಸಿದರು.
24 ಗಂಟೆಗಳ ಕಠಿಣ ಸವಾಲು
ಏಪ್ರಿಲ್‌ನಲ್ಲಿ ಶುರುವಾದ ಈ ಹ್ಯಾಕಥಾನ್‌ನ ಅಂತಿಮ ಹಂತಕ್ಕೆ ಕೇವಲ 24 ತಂಡಗಳು ಶಾರ್ಟ್‌ಲಿಸ್ಟ್ ಆಗಿದ್ದವು. ಈ ತಂಡಗಳಿಗೆ 24 ಗಂಟೆಗಳ ಕಾಲಾವಕಾಶ ನೀಡಿ, ಕನಿಷ್ಠ ಕಾರ್ಯಸಾಧ್ಯ ಉತ್ಪನ್ನವನ್ನು (ಎಂವಿಪಿ) ಅಭಿವೃದ್ಧಿಪಡಿಸಿ ತೀರ್ಪುಗಾರರ ಮುಂದೆ ಪ್ರದರ್ಶಿಸುವ ಸವಾಲು ನೀಡಲಾಗಿತ್ತು. ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ತಂತ್ರಜ್ಞಾನದ ಪರಿಕರಗಳನ್ನು ಒದಗಿಸಲು ಕಾಗ್ನಿಜೆಂಟ್ ಸಂಸ್ಥೆಯು ಅಮೆಜಾನ್ ವೆಬ್ ಸರ್ವೀಸಸ್ (ಎಡಬ್ಲ್ಯೂಎಸ್) ನೊಂದಿಗೆ ಕೈಜೋಡಿಸಿತ್ತು.
ಗಿನಿಸ್ ದಾಖಲೆ ನಿರ್ಮಿಸಿತ್ತು ಕಾಗ್ನಿಜೆಂಟ್
ಎಐ ಬಿಲ್ಡರ್ ಆಗಿ ಕಾಗ್ನಿಜೆಂಟ್ ತನ್ನ ಸಂಸ್ಥೆಯಾದ್ಯಂತ ಕೃತಕ ಬುದ್ಧಿಮತ್ತೆ ಆಧಾರಿತ ನಾವೀನ್ಯತೆಯನ್ನು ಬೆಳೆಸುತ್ತಿದೆ. ಕಳೆದ ವರ್ಷ ಜಾಗತಿಕವಾಗಿ 'ವೈಬ್ ಕೋಡಿಂಗ್ ವೀಕ್' ಆಯೋಜಿಸುವ ಮೂಲಕ ಅತಿ ದೊಡ್ಡ ಆನ್‌ಲೈನ್ 'ಜೆನ್‌ಎಐ ಹ್ಯಾಕಥಾನ್' ನಡೆಸಿದ ಸಂಸ್ಥೆ ಎಂಬ 'ಗಿನ್ನಿಸ್ ವರ್ಲ್ಡ್ ರೆಕಾರ್ಡ್' ಅನ್ನು ಕಾಗ್ನಿಜೆಂಟ್ ಪಡೆದುಕೊಂಡಿತ್ತು. ಈ ವೇಳೆ ಉದ್ಯೋಗಿಗಳು ತಮ್ಮ ಎಐ ಕೌಶಲ್ಯಗಳನ್ನು ಬಳಸಿ 30,000ಕ್ಕೂ ಹೆಚ್ಚು ಮೂಲ ಮಾದರಿಗಳು ಅಂದರೆ ಪ್ರೊಟೋಟೈಪ್‌ಗಳನ್ನು ಸೃಷ್ಟಿಸಿದ್ದರು.