Madenuru Manu: ಕಿರುತೆರೆ ನಟಿ ಮೇಲೆ ಅತ್ಯಾಚಾರ ಆರೋಪ; ನಟ ಮಡೆನೂರು ಮನು ಅರೆಸ್ಟ್
Madenuru Manu: ಕಿರುತೆರೆ ನಟಿ ಮೇಲೆ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ಹಾಸನದಲ್ಲಿ ಕಿರುತೆರೆ ನಟನನ್ನು ಬಂಧಿಸಿ ಪೊಲೀಸರು ಕರೆತರುತ್ತಿದ್ದಾರೆ ಎಂದು ತಿಳಿದುಬಂದಿದೆ.


ಬೆಂಗಳೂರು: ಕಿರುತೆರೆ ನಟಿ ಮೇಲೆ ಅತ್ಯಾಚಾರ ಆರೋಪ ಪ್ರಕರಣಕ್ಕೆ (Madenuru Manu) ಸಂಬಂಧಿಸಿದಂತೆ ನಟ ಮಡೆನೂರು ಮನು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನದ ಶಾಂತಿಗ್ರಾಮದ ಮಡೆನೂರಿನಲ್ಲಿ ನಟನನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಅರೆಸ್ಟ್ ಮಾಡಿದ್ದು, ಬೆಂಗಳೂರಿಗೆ ಕರೆತರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಿರುತೆರೆ ನಟಿ ಮೇಲೆ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿತ್ತು. ಇದಾದ ಬಳಿಕ ನಟ ಊರಲ್ಲಿ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಕಿರುತೆರೆ ನಟನನ್ನು ಬಂಧಿಸಿ ಪೊಲೀಸರು ಕರೆತರುತ್ತಿದ್ದಾರೆ.
ಇದಕ್ಕೂ ಮೊದಲು ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದ ನಟ ಮಡೆನೂರು ಮನು, ಬಾಳು ಕೊಡಿ ಅಂತ ಕೆಳೋದಲ್ಲ ಇದು. ಇದರ ಹಿಂದೆ ದೊಡ್ಡ ಸ್ಕ್ರಿಪ್ಟ್ ಇದೆ. ಅವರನ್ನ ನಾನು ಮದುವೆ ಆಗಿಲ್ಲ, ತಾಳಿ ಕಟ್ಟಿಲ್ಲ. ಇದರ ಹಿಂದೆ ಇಬ್ಬರು ಹೀರೋಗಳಿದ್ದಾರೆ. ಒಬ್ಬ ಲೇಡಿ ಡಾನ್ ಇದ್ದಾರೆ. ಎಲ್ಲದಕ್ಕೂ ನನ್ನ ಬಳಿ ಸಾಕ್ಷಿ ಇವೆ. ನಾನು ಎಲ್ಲವನ್ನೂ ಹೇಳುತ್ತೇನೆ. ನನ್ನ ಸಿನಿಮಾ ನಿಲ್ಲಿಸೋಕೆ ಇದೆಲ್ಲ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಏನಿದು ಪ್ರಕರಣ?
ನಟ ಮಡೆನೂರು ಮನು (Madenuru Manu) ವಿರುದ್ಧ ಕಿರುತೆರೆ ನಟಿಯೊಬ್ಬರು ಅತ್ಯಾಚಾರ(Physical Abuse), ಬಲವಂತದ ಗರ್ಭಪಾತ (Abortion) , ಹಲ್ಲೆ (Assault) ಹಾಗೂ ಕೊಲೆ ಬೆದರಿಕೆಯ ದೂರು ಹೊರಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ದೂರು ನೀಡಿದ ಈ ಯುವತಿಗೆ ಬಾಡಿಗೆ ಮನೆಯನ್ನು ನಾಗರಭಾವಿಯಲ್ಲಿ ಮನುವೇ ಹುಡುಕಿಕೊಟ್ಟಿದ್ದ. 2018 ರಿಂದಲೂ ಮನುವಿಗೆ ಈಕೆಯ ಪರಿಚಯ ಇತ್ತು ಎಂದು ಗೊತ್ತಾಗಿದೆ. ಮನುಗೆ ಮದುವೆ ಆಗಿ ಒಂದು ಮಗು ಕೂಡ ಇದೆ.
"ನಾವು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೆವು. ಮೊದಲಿಗೆ ಪರಿಚಯ ಆಗಿ ಸ್ನೇಹ ಬೆಳೆದಿತ್ತು. 29/11/2022 ರಂದು ಶಿವಮೊಗ್ಗದ ಶಿಕಾರಿಪುರದ ಕಾರ್ಯಕ್ರಮಕ್ಕೆ ಹೋಗಿದ್ದೆವು. ಅಲ್ಲಿ ಒಂದು ಹಾಸ್ಯ ಕಾರ್ಯಕ್ರಮ ಮಾಡಿದ್ದರು. ಕಾರ್ಯಕ್ರಮದ ಬಳಿಕ ಸಂಭಾವನೆ ನೀಡುವ ನೆಪದಲ್ಲಿ ರೂಂಗೆ ಕರೆಸಿಕೊಂಡಿದ್ದರು. ಬಳಿಕ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇದಾದ ಬಳಿಕ 2022ರ ಡಿಸೆಂಬರ್ 3ರಂದು ಮನೆಗೆ ಬಂದು ಬಲವಂತವಾಗಿ ತಾಳಿ ಕಟ್ಟಿರುತ್ತಾರೆ. ಬಳಿಕ ಹಲವು ಬಾರಿ ನನ್ನನ್ನು ಅತ್ಯಾಚಾರ ಮಾಡಿರುತ್ತಾರೆ. ಬಳಿಕ ನಾನು ಗರ್ಭಿಣಿ ಕೂಡ ಆಗಿರುತ್ತೇನೆ. ಮನು ಗರ್ಭಪಾತ ಆಗುವ ಮಾತ್ರೆ ನೀಡಿದ್ದರು. ಇದಾದ ಬಳಿಕವೂ ಮತ್ತೊಮ್ಮೆ ಗರ್ಭಿಣಿ ಆಗಿದ್ದೆ. ಎರಡನೇ ಬಾರಿಯೂ ಗರ್ಭಪಾತ ಮಾಡಿಸಿದ್ದರು" ಎಂದು ದೂರಲಾಗಿದೆ.
ಈ ಸುದ್ದಿಯನ್ನೂ ಓದಿ | Madenuru Manu: ಅತ್ಯಾಚಾರ, ಗರ್ಭಪಾತ, ಹಲ್ಲೆ, ಕೊಲೆ ಬೆದರಿಕೆ: ನಟ ಮಡೆನೂರು ಮನು ಮೇಲೆ ನಟಿ ದೂರು
"ಬಾಡಿಗೆ ಮನೆಯಲ್ಲಿ ಹಲವು ಬಾರಿ ಲೈಂಗಿಕವಾಗಿ ನನ್ನನ್ನು ಬಳಸಿಕೊಂಡಿದ್ದಾರೆ. ಪೋನ್‌ನಲ್ಲಿ ಅದರ ವೀಡಿಯೋ ರೆಕಾರ್ಡ್ ಕೂಡ ಮಾಡಿಕೊಂಡಿದ್ದರು. ಈ ವಿಚಾರ ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ದಾರೆ. ಜೊತೆಗೆ ನಾನು ಲಕ್ಷಾಂತರ ರೂಪಾಯಿ ಹಣ ಕೂಡ ಅವರಿಗೆ ಕೊಟ್ಟಿರುತ್ತೇನೆ. ಈತನ ವಿರುದ್ಧ ಕಾನೂನು ಕ್ರಮ ಜರುಗಿಸಿ" ಎಂದು ದೂರಿನಲ್ಲಿ ನಟಿ ಉಲ್ಲೇಖಿಸಿದ್ದಾಳೆ.