ಬೆಂಗಳೂರಿಗರೇ ಗಮನಿಸಿ; ಲೋಕಭವನದಲ್ಲಿ ಸಚಿವರ ಪ್ರಮಾಣವಚನ, ಹಲವೆಡೆ ಸಂಚಾರ ನಿರ್ಬಂಧ
Bengaluru Traffic Police : ಬಾರೀ ಕುತೂಹಲ ಮೂಡಿಸಿದ್ದ ಸಿಎಂ ಡಿಕೆ ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆ ಕಸರತ್ತು ಕುತೂಹಲಕ್ಕೆ ತೆರೆ ಬಿದ್ದಿದ್ದು, ನೂತನ ಸಚಿವರ ಪಟ್ಟಿ ಹೊರ ಬಿದ್ದಿದೆ. ಲೋಕಭವನದಲ್ಲಿ ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಬಾರೀ ಕುತೂಹಲ ಮೂಡಿಸಿದ್ದ ಸಿಎಂ ಡಿಕೆ ಶಿವಕುಮಾರ್ (DK Shivakumar) ಸಚಿವ ಸಂಪುಟ ವಿಸ್ತರಣೆ ಕಸರತ್ತು ಕುತೂಹಲಕ್ಕೆ ತೆರೆ ಬಿದ್ದಿದ್ದು, ನೂತನ ಸಚಿವರ ಪಟ್ಟಿ ಹೊರ ಬಿದ್ದಿದೆ. ಲೋಕಭವನದಲ್ಲಿ ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ (Bengaluru) ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕೆಲ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಮಧ್ಯಾಹ್ನ 2ರಿಂದ ರಾತ್ರಿ 10ರವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೂ ನಿಷೇಧ ಹೇರಲಾಗಿದೆ.
ಎಲ್ಲೆಲ್ಲಿ ನಿರ್ಬಂಧ?
ಕಾರ್ಯಕ್ರಮಕ್ಕೆ ಅನುಮತಿ ಹೊಂದಿರುವ ವಾಹನಗಳನ್ನು ಹೊರತುಪಡಿಸಿ, ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‌ನಿಂದ ಸಿ.ಟಿ.ಒ ಜಂಕ್ಷನ್ ಹಾಗೂ ಅಲ್ಲಿಂದ ಲೋಕಭವನದವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಅದೇ ರೀತಿ ಬಾಳೇಕುಂದ್ರಿ ಜಂಕ್ಷನ್‌ನಿಂದ ಅಂಬೇಡ್ಕರ್ ರಸ್ತೆ ಕಡೆಗೆ ಬರುವ ವಾಹನಗಳು, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿ ಕೆ.ಆರ್. ಸರ್ಕಲ್‌ನಿಂದ ಕಾಫಿ ಬೋರ್ಡ್ ಜಂಕ್ಷನ್‌ವರೆಗೆ ಸಂಚರಿಸುವ ವಾಹನಗಳಿಗೂ ನಿರ್ಬಂಧ ಅನ್ವಯಿಸಲಿದೆ. ಕ್ವೀನ್ಸ್ ಜಂಕ್ಷನ್‌ನಿಂದ ಸಿ.ಟಿ.ಒ ಕಡೆಗೆ ಹಾಗೂ ಸೇಂಟ್ ಮಾರ್ಕ್ಸ್ ರಸ್ತೆಯಿಂದ ಸಿ.ಟಿ.ಒ ಜಂಕ್ಷನ್ ಕಡೆಗೆ ಬರುವ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ.
"ಸಂಚಾರ ಸಲಹೆ" pic.twitter.com/fpu1ScMRJ9
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) August 3, 2026
ಇದಕ್ಕೆ ಪರ್ಯಾಯವಾಗಿ ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‌ನಿಂದ ಸಿ.ಟಿ.ಒ ಮತ್ತು ಲೋಕಭವನದ ಕಡೆಗೆ ತೆರಳುವವರು ಶಿವಾಜಿನಗರದ ಕಡೆ ತಿರುಗಿ ಅನಿಲ್ ಕುಂಬ್ಳೆ ಜಂಕ್ಷನ್ ಮೂಲಕ ಸಂಚರಿಸಬಹುದಾಗಿದೆ. ಕ್ವೀನ್ಸ್ ರಸ್ತೆ ಮತ್ತು ಶಿವಾಜಿನಗರ ಕಡೆಯಿಂದ ಬರುವ ವಾಹನಗಳು ಬಾಳೇಕುಂದ್ರಿ ಜಂಕ್ಷನ್‌ನಲ್ಲಿ ಕನ್ನಿಂಗ್‌ಹ್ಯಾಮ್ ರಸ್ತೆ ಮೂಲಕ ತೆರಳಬಹುದು.
Jewargi MLA Dr. Ajay Singh: ಪಕ್ಷ ನಿಷ್ಠೆಗೆ ಫಲವಾಗಿ ಡಾ.ಅಜಯಸಿಂಗ್‌ಗೆ ಸಚಿವ ಸಂಪುಟ ಪ್ರವೇಶ
ಕೆ.ಆರ್. ಸರ್ಕಲ್‌ನಿಂದ ಕಾಫಿ ಬೋರ್ಡ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ನೃಪತುಂಗ ರಸ್ತೆ ಬಳಸುವಂತೆ ಸೂಚಿಸಲಾಗಿದೆ. ಕ್ವೀನ್ಸ್ ಜಂಕ್ಷನ್‌ನಿಂದ ಲೋಕಭವನದ ಕಡೆಗೆ ತೆರಳುವ ವಾಹನಗಳು ಅನಿಲ್ ಕುಂಬ್ಳೆ ಹಾಗೂ ಬಿ.ಆರ್.ವಿ ಜಂಕ್ಷನ್ ಮಾರ್ಗವಾಗಿ ಸಂಚರಿಸಬಹುದು.