ಸೆನ್ಸಾರ್‌ನಲ್ಲಿ ಪಾಸಾದ ಕೋಮಲ್- ಸೋನಲ್ ಅಭಿನಯದ 'ರೋಲೆಕ್ಸ್'; ಈ ಕಾಮಿಡಿ-ಥ್ರಿಲ್ಲರ್ ಸಿನಿಮಾ ರಿಲೀಸ್ ಆಗೋದ್ಯಾವಾಗ?
ನಟ ಕೋಮಲ್ ಕುಮಾರ್ ಹಾಗೂ ಸೋನಲ್ ಮೊಂಥೆರೋ ಅಭಿನಯದ 'ರೋಲೆಕ್ಸ್' ಸಿನಿಮಾ ಸೆನ್ಸಾರ್ ಮಂಡಳಿಯಿಂದ 'U/A' ಪ್ರಮಾಣಪತ್ರ ಪಡೆದುಕೊಂಡು ಬಿಡುಗಡೆಗೆ ಸಿದ್ಧವಾಗಿದೆ. ಶ್ರೀನಿವಾಸ್ ಮಂಡ್ಯ ನಿರ್ದೇಶನದ ಈ ಕಾಮಿಡಿ-ಥ್ರಿಲ್ಲರ್ ಚಿತ್ರದಲ್ಲಿ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿದ್ದಾರೆ.
-
ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಕೋಮಲ್ ಕುಮಾರ್ ನಾಯಕರಾಗಿ ಅಭಿನಯಿಸಿರುವ, ಬಹುನಿರೀಕ್ಷಿತ 'ರೋಲೆಕ್ಸ್' (Rolex) ಚಲನಚಿತ್ರದ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿಯು ಚಿತ್ರಕ್ಕೆ 'U/A' ಪ್ರಮಾಣಪತ್ರ ನೀಡಿದ್ದು, ಇದೊಂದು ಸಂಪೂರ್ಣ ಮನರಂಜನಾತ್ಮಕ ಚಿತ್ರ ಎಂದು ಮುಕ್ತಕಂಠದಿಂದ ಶ್ಲಾಘಿಸಿದೆ. ಪ್ರಸಕ್ತ ಸೆನ್ಸಾರ್ ಸಜ್ಜಾಗಿರುವ 'ರೋಲೆಕ್ಸ್' ಸದ್ಯದಲ್ಲೇ ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ.
ಥ್ರಿಲ್ಲರ್, ಹ್ಯೂಮರ್ ಸಮ್ಮಿಶ್ರಣ
'ಮಧು ಫಿಲಂ ಸರ್ಕ್ಯುಯಿಟ್ಸ್' ಲಾಂಛನದಡಿಯಲ್ಲಿ ಅಂಬಟಿ ಮಧು ಮೋಹನ್ ನಿರ್ಮಿಸಿರುವ ಈ ಚಿತ್ರವನ್ನು, ಈ ಹಿಂದೆ 'ಬಿಲ್ ಗೇಟ್ಸ್' ಸಿನಿಮಾ ನಿರ್ದೇಶಿಸಿದ್ದ ಶ್ರೀನಿವಾಸ್ ಮಂಡ್ಯ ನಿರ್ದೇಶಿಸಿದ್ದಾರೆ. ಥ್ರಿಲ್ಲರ್ ಹಾಗೂ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರವು ಪ್ರತಿಯೊಬ್ಬರೂ ಕುಟುಂಬ ಸಮೇತ ಕುಳಿತು ವೀಕ್ಷಿಸುವಂತಹ ಹಾಸ್ಯಮಯ ಕಥಾವಸ್ತುವನ್ನು ಹೊಂದಿದೆಯಂತೆ. ಈ ಚಿತ್ರದಲ್ಲಿ ಕೋಮಲ್ ಕುಮಾರ್ ಅವರು ಹಿಂದೆಂದೂ ಕಾಣಿಸಿಕೊಂಡಿರದ 'ಸ್ಟೈಲಿಶ್ ಹಾಗೂ ಡಿಫರೆಂಟ್ ಲುಕ್'ನಲ್ಲಿ ಮಿಂಚಿದ್ದು, ಅವರ ಹೊಸ ಲುಕ್‌ಗೆ ಅಭಿಮಾನಿಗಳು ಈಗಾಗಲೇ ಫಿದಾ ಆಗಿದ್ದಾರೆ ಎನ್ನುತ್ತದೆ ಚಿತ್ರತಂಡ.
Komal Actor: ಅದ್ಧೂರಿಯಾಗಿ ನೆರವೇರಿತು ಕೋಮಲ್ ನಟನೆಯ ʼʼತೆನಾಲಿ ಡಿಎ LLBʼ ಮುಹೂರ್ತ
ಚಿತ್ರದ ಬಗ್ಗೆ ನಿರ್ದೇಶಕರ ಮಾತು
ʻರೋಲೆಕ್ಸ್ʼ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಶ್ರೀನಿವಾಸ್ ಮಂಡ್ಯ, "ನಮ್ಮ ಚಿತ್ರದಲ್ಲಿ ಸೋನಲ್ ಮೊಂಥೆರೋ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ʻಮರಿ ಟೈಗರ್ʼ ವಿನೋದ್ ಪ್ರಭಾಕರ್ ಅವರು ವಿಶೇಷ ಹಾಗೂ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಚಿತ್ರದಲ್ಲಿದ್ದು, ಇಡೀ ತಂಡದ ಶ್ರಮದಿಂದ ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದೆ" ಎಂದು ಸಂತಸ ಹಂಚಿಕೊಂಡಿದ್ದಾರೆ.
ಈ ಚಿತ್ರಕ್ಕಾಗಿ ಯಾರೆಲ್ಲಾ ಕೆಲಸ ಮಾಡಿದ್ದಾರೆ?
ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಖ್ಯಾತ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ರಾಗಸಂಯೋಜನೆ ಮಾಡಿದ್ದಾರೆ. ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್, ಕವಿರಾಜ್, ರಾಜೇಶ್ ವರ್ಮ ಹಾಗೂ ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದಾರೆ. ರಾಕೇಶ್ ಸಿ. ತಿಲಕ್ ಛಾಯಾಗ್ರಹಣ ಮಾಡಿದ್ದು, ಅರವಿಂದ್ ರಾಜ್ ಅವರು ಸಂಕಲನ ಮಾಡಿದ್ದಾರೆ. ನೃತ್ಯ ನಿರ್ದೇಶನವನ್ನು ಕಲೈ ಮತ್ತು ಮುರಳಿ ಮಾಡಿದ್ದಾರೆ. ಕ್ರಿಯೇಟಿವ್ ಹೆಡ್ ಆಗಿ ರಾಜೇಶ್ ವರ್ಮ ಕೆಲಸ ಮಾಡುತ್ತಿದ್ದಾರೆ. ಮುರಳಿಕೃಷ್ಣ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. 'ರೋಲೆಕ್ಸ್' ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆಯಂತೆ.